ಕಾನೂನನ್ನು ಪಾಲಿಸುವುದೇ ದೇಶಭಕ್ತಿ

Upayuktha
0


ಪುತ್ತೂರು: ದೇಶದ ಕಾನೂನನ್ನು ಗೌರವಿಸುವುದು ಮತ್ತು ಆ ಕಾನೂನುಗಳಂತೆ ನಡೆದುಕೊಳ್ಳುವುದೇ ನಿಜವಾದ ದೇಶಭಕ್ತಿ ಎಂದು ಪುತ್ತೂರು ಉಪವಿಭಾಗದ ವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ಹೇಳಿದರು.


ಅವರು ಬುಧವಾರ ಪುತ್ತೂರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪುತ್ತೂರಿನ ಎನ್.ಎಸ್.ಕಿಲ್ಲೆ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು.


ವಿಶ್ವದಲ್ಲಿ ಅತೀ ದೊಡ್ಡ ಲಿಖಿತ ಸಂವಿಧಾನ ನಮ್ಮದು. ಸಂವಿಧಾನವನ್ನು ನಾವೆಲ್ಲಾ ಗೌರವಿಸುವ ಜೊತೆಗೆ ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಮರೆಯದಿರೋಣ. ನಮ್ಮ ಗಡಿ ಕಾಯುವ ಯೋಧರಿಂದಾಗಿ ಇಂದು ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ ಎಂದು ಹೇಳಿದರು.    


ಪುತ್ತೂರು ಪುರಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವು ನಮ್ಮದಾಗಿದ್ದು, ಸಂವಿಧಾನ ಉಳಿದಲ್ಲಿ ದೇಶದ ಉಳಿವಿನ ಜೊತೆಗೆ ದೇಶದ ಸಂಸ್ಕೃತಿಯ ಉಳಿವು ಆಗಲಿದೆ. ದೇಶದ ಉನ್ನತಿಗಾಗಿ ನಾವೆಲ್ಲರೂ ಪಣ ತೊಡಬೇಕು.ನ್ಯಾಯಾಂಗ, ಕಾರ್ಯಂಗ, ಶಾಸಕಾಂಗಗಳು ದಾರಿ ತಪ್ಪಿದಲ್ಲಿ ಸಂವಿಧಾನಕ್ಕೆ ಅಪರಾಧವಾಗಲಿದೆ. ಅಧಿಕಾರಿಗಳು ಭ್ರಷ್ಟಾಚಾರ ಮುಕ್ತರಾಗಿ ಎಲ್ಲರಿಗೂ ಮಾದರಿಯಾಗಬೇಕು ಎಂದರು.


ಪುತ್ತೂರು ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್, ಡಿವೈಎಸ್ಪಿ ಗಾನ ಪಿ. ಕುಮಾರ್ ಮಾತನಾಡಿದರು. ತಹಶೀಲ್ದಾರ್ ರಮೇಶ್ ಬಾಬು, ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್, ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪೊಲೀಸ್ ಘಟಕ, ಅಗ್ನಿಶಾಮಕ ದಳ, ಗೃಹರಕ್ಷಕ ದಳದ ಸಿಬ್ಬಂದಿ ಗೌರವ ವಂದನೆಯಲ್ಲಿ ಪಾಲ್ಗೊಂಡರು.  ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೋರ್ದಲ್ ಕಾರ್ಯಕ್ರಮ ನಿರ್ವಹಿಸಿದರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




إرسال تعليق

0 تعليقات
إرسال تعليق (0)
Advt Slider:
To Top