|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಿಲ್ಲೆಯವರದ್ದು ಸರ್ವೋದಯ, ಸಮತೋಲನದ ಹಾದಿ: ಪ್ರೊ.ಬಿ.ಎ.ವಿವೇಕ್ ರೈ

ಕಿಲ್ಲೆಯವರದ್ದು ಸರ್ವೋದಯ, ಸಮತೋಲನದ ಹಾದಿ: ಪ್ರೊ.ಬಿ.ಎ.ವಿವೇಕ್ ರೈ

ದೇಶಭಕ್ತ ಎನ್.ಎಸ್. ಕಿಲ್ಲೆ 120: ಬದುಕು, ಬರಹ-ಅರ್ಥಗಾರಿಕೆ ವಿಚಾರಗೋಷ್ಠಿ


ಪುತ್ತೂರು: 'ದೇಶಭಕ್ತ ನಾರಾಯಣ ಕಿಲ್ಲೆಯವರು ಅಪ್ಪಟ ಗಾಂಧಿವಾದಿಯಾಗಿ, ಗಾಂಧಿ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪರಿಣಾಮಕಾರಿಯಾದ ಕೆಲಸ ನಿರ್ವಹಿಸಿದ್ದಾರೆ. ಅವರದು ಸರ್ವೋದಯ, ಸಮನ್ವಯ ಮತ್ತು ಸಮತೋಲನದ ಹಾದಿ' ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಹೇಳಿದ್ದಾರೆ.


ನಗರಸಭೆ ಕಾರ್ಯಾಲಯ ಪುತ್ತೂರು ಮತ್ತು ದೇಶಭಕ್ತ ಎನ್.ಎಸ್.ಕಿಲ್ಲೆ ಪ್ರತಿಷ್ಠಾನದ ವತಿಯಿಂದ ಪುತ್ತೂರು ಪುರಭವನದಲ್ಲಿ ಜರಗಿದ 'ಸ್ವಾತಂತ್ರ್ಯ ಹೋರಾಟಗಾರ ದೇಶಭಕ್ತ ಎನ್.ಎಸ್.ಕಿಲ್ಲೆ ಮೈದಾನ ಮಹಾದ್ವಾರ ಲೋಕಾರ್ಪಣೆ- ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಕಿಲ್ಲೆ 120ನೇ ವರ್ಷಾಚರಣೆ' ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ 'ಕಿಲ್ಲೆ ಬದುಕು, ಬರಹ- ಅರ್ಥಗಾರಿಕೆ' ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


'ಗಾಂಧಿವಾದಿಯಾಗಿ ಗಾಂಧಿ ತತ್ವವನ್ನು ತುಳು ಭಾಷೆಯಲ್ಲಿ ಬರೆದು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಗಾಂಧಿ ತತ್ವವನ್ನು ಅನುಸರಿಸಬೇಕೆಂಬ ಆಶಯ ಕಿಲ್ಲೆಯವರಲ್ಲಿತ್ತು. ಸರ್ವೋದಯ ಪತ್ರಿಕೆಯನ್ನು ನಡೆಸಿ ಜನರ ಮಧ್ಯೆ ಮಾಧ್ಯಮವಾಗಿ ಪತ್ರಿಕೋದ್ಯಮವನ್ನು ಬೆಳೆಸಿದರು. ತಾನೊಂದು ನಿರ್ಧಿಷ್ಟ ಜಾತಿಯಲ್ಲಿ ಹುಟ್ಟಿದರೂ ಸರ್ವ ಸಮಾಜಕ್ಕೆ ಬೇಕಾದ ವ್ಯಕ್ತಿಯಾಗಿ ಕಿಲ್ಲೆ ಪರಿವರ್ತನೆ ಹೊಂದಿದವರು' ಎಂದವರು ನುಡಿದರು.


ಆತ್ಮ ಸಂತೃಪ್ತಿ, ಉತ್ಕ್ರಾಂತಿ - ತೌಳವ ಸಾಹಿತ್ಯ:

'ಕಿಲ್ಲೆ ಕನ್ನಡ ಬರಹ' ವಿಷಯದಲ್ಲಿ ಮಾತನಾಡಿದ ಹಿರಿಯ ಸಾಹಿತಿ, ಪತ್ರಕರ್ತ,ವಿಶ್ರಾಂತ ಪ್ರಾಧ್ಯಾಪಕ ಪ್ರೊ.ವಿ.ಬಿ.ಅರ್ತಿಕಜೆಯವರು 'ಸಹಜ ಪ್ರಾಸಗಳಿಂದ ಕವಿತೆಗಳನ್ನು ರಚಿಸಿ ಸಮಾಜಕ್ಕೆ ಅರ್ಥವಾಗುವ ರೀತಿಯಲ್ಲಿ ನೀಡಿದ ಕಿಲ್ಲೆಯವರು ಆತ್ಮ ಸಂತೃಪ್ತಿ ಮತ್ತು ಅಧ್ಯಾತ್ಮದ ಕಡೆಗೆ ಗಮನಹರಿಸಿದರು. ಮುರಳಿ, ಭಾರತದ ಕರ್ಣ ಮುಂತಾದ ಮೌಲ್ಯಯುತ ಕೃತಿಗಳ ಮೂಲಕ ಕರಾವಳಿ ಭಾಗದ ಶ್ರೇಷ್ಠ ಸಾಹಿತಿಗಳ ಸಾಲಿನಲ್ಲಿ ಅವರು ಎದ್ದು ತೋರುತ್ತಾರೆ' ಎಂದರು.


'ಕಿಲ್ಲೆ ಬದುಕು' ವಿಷಯವಾಗಿ ಮಾತನಾಡಿದ ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಮಾತನಾಡಿ 'ಕಿಲ್ಲೆಯವರನ್ನು ನಮ್ಮವರನ್ನಾಗಿ ಮಾಡಿಕೊಳ್ಳಲು ಅವರ ಒಟ್ಟು ಬದುಕಿನ ನಾಲ್ಕು ಸಿದ್ಧಾಂತಗಳು ಅತ್ಯಂತ ಪ್ರಸ್ತುತವೆನಿಸುತ್ತವೆ. ಕಿಲ್ಲೆಯವರು ಕ್ರಾಂತಿಯ ಬದಲು ಉತ್ಕ್ರಾಂತಿ ಅಥವಾ ವಿಕಾಸವನ್ನು ಬಲವಾಗಿ ನಂಬಿದ್ದರು. ಎರಡನೆಯದಾಗಿ ಶ್ರೀಮಂತರಾಗುವ ಎಲ್ಲ ಅವಕಾಶಗಳನ್ನು ನಿರಾಕರಿಸಿ ಅವರು ಸರಳ ಜೀವನವನ್ನು ನಡೆಸಿದರು. ಆದರೆ ಸಮಾಜಕ್ಕೆ ದಾನ ನೀಡುವ ವಿಚಾರದಲ್ಲಿ ಜಿಪುಣತನ ತೋರಿದವರಲ್ಲ. ಮೂರನೆಯದಾಗಿ ಅವರು ಸಾರ್ವಜನಿಕ ಬದುಕಿನ ಜೊತೆಗೆ ಸಾಹಿತ್ಯ ಬದುಕನ್ನು ಜೊತೆಜೊತೆಯಾಗಿ ಕೊಂಡುಹೋದ ರೀತಿ ಅತ್ಯಂತ ಪ್ರಸ್ತುತ. ನಾಲ್ಕನೆಯ ಅಂಶವೆಂದರೆ ನೈತಿಕತೆ; ತನಗೆ ಬಂದ ರಾಜ್ಯಸಭಾ ಸದಸ್ಯತ್ವವನ್ನು ತ್ಯಾಗ ಮಾಡಿದ ಅವರ ಸ್ವಚ್ಛ ಬದುಕು ಇಂದಿನ ಬಹುತೇಕ ಜನಪ್ರತಿನಿಧಿಗಳಿಗೆ ಮಾದರಿ' ಎಂದು ಹೇಳಿದರು. 


'ಕಿಲ್ಲೆ ತುಳು ಬರಹ' ವಿಷಯದಲ್ಲಿ ವಿಚಾರ ಮಂಡಿಸಿದ ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ 'ಕಿಲ್ಲೆಯವರ ತುಳು ಸಾಹಿತ್ಯಗಳು ಒಮ್ಮೆ ತುಳುನಾಡನ್ನು ಸುತ್ತಿ ಬಂದಷ್ಟು ಅನುಭವ ಧಾರೆ ಎರೆಯುತ್ತವೆ. ಕಾನಿಗೆ ಕವಿತಾ ಸಂಕಲನದಲ್ಲಿ ಸಮಗ್ರ ತುಳು ಬದುಕಿನ ಸರಳ ನಿರೂಪಣೆ ಇದೆ. ತಮ್ಮ ಎಲ್ಲಾ ಸಾಹಿತ್ಯದಲ್ಲಿಯೂ ತುಳುನಾಡಿನ ನಾಗ ಮತ್ತು ನಾಗಬ್ರಹ್ಮನ ಬಗ್ಗೆ ಅತ್ಯಂತ ಭಕ್ತಿಯಿಂದ ಬರೆದಿದ್ದಾರೆ. ತುಳುವರ ಕೃಷಿ ಸಂಸ್ಕೃತಿಯನ್ನು ಮಾರ್ಮಿಕವಾಗಿ ಬಣ್ಣಿಸಿದ್ದಾರೆ' ಎಂದರು.


ಯಕ್ಷಗಾನದ ಕರ್ಣ:

ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ 'ಕಿಲ್ಲೆ ಅರ್ಥಗಾರಿಕೆ' ವಿಷಯದಲ್ಲಿ ಮಾತನಾಡಿದರು. 'ಯಕ್ಷಗಾನ ರಂಗದಲ್ಲಿ ನಾರಾಯಣ ಕಿಲ್ಲೆಯವರ ಅರ್ಥಗಾರಿಕೆ ಬಗ್ಗೆ ಅತಿರಂಜಿತ ಕಥೆಗಳಿವೆ. ಕವಿಭೂಷಣ ಕೆ.ಪಿ.ವೆಂಕಪ್ಪ ಶೆಟ್ಟಿ, ಅರ್ಕುಳ ಸುಬ್ರಾಯಾಚಾರ್ಯ, ಪೊಳಲಿ ಶಾಸ್ತ್ರಿ ಮೊದಲಾದ ದಿಗ್ಗಜರ ಸಮಕಾಲೀನರಾಗಿ ತಮ್ಮ ಸುಂದರ ವಾಗ್ವೈಖರಿ, ಭಾಷಾ ಜ್ಞಾನ ಮತ್ತು ಪೌರಾಣಿಕ ಆಶಯಗಳನ್ನು ಪ್ರಚಲಿತ ವಿದ್ಯಮಾನಗಳಿಗೆ ಸಮೀಕರಿಸಿ ಪ್ರಸ್ತುತಪಡಿಸುವ ಜಾಣ್ಮೆಯಿಂದ ತಾಳಮದ್ದಳೆ ಕೂಟಗಳಲ್ಲಿ ಅವರು ತಾರಾಮೌಲ್ಯ ಹೊಂದಿದ್ದರು' ಎಂದರು.


'ಯಕ್ಷಗಾನ ಪ್ರಸಂಗಗಳಲ್ಲಿ ನಾಯಕ ಮತ್ತು ಪ್ರತಿನಾಯಕ ಎರಡು ಪಾತ್ರಗಳನ್ನೂ ಅವರು ಸಮರ್ಥವಾಗಿ ನಿರ್ವಹಿಸಿದರು. ಶೇಣಿ, ಶಾಸ್ತ್ರಿಗಳಂತಹ ವಿದ್ವಾಂಸ ಕಲಾವಿದರೇ ಕಿಲ್ಲೆಯವರ ಅರ್ಥಗಾರಿಕೆಯನ್ನು ಬಹುವಾಗಿ ಮೆಚ್ಚಿದ್ದರು. ಕರುಣ, ವೀರರಸಗಳು ಕಿಲ್ಲೆಯವರಿಗೆ ಪ್ರಿಯವಾಗಿತ್ತು. ರಾಜಕೀಯ, ಸಾಮಾಜಿಕ ಬದುಕಿನಲ್ಲಿ ಎಷ್ಟೇ ಒತ್ತಡವಿದ್ದರೂ ಅರ್ಥಗಾರಿಕೆಯನ್ನು ಅಷ್ಟೇ ಸೊಗಸಾಗಿ ನಿರ್ವಹಿಸುತ್ತಿದ್ದರು. ಆರಂಭದಲ್ಲಿ ಅತಿ ವಕ್ತೃವಾಗಿದ್ದ ಕಿಲ್ಲೆಯವರು ಸಂಸ್ಕೃತ ಸಾಹಿತ್ಯವನ್ನು ತಿಳಿದುಕೊಂಡ ಮೇಲಂತೂ ಅರ್ಥಗಾರಿಕೆಯಲ್ಲಿ ಅಸಾಧಾರಣ ಯಶಸ್ಸು ಸಾಧಿಸಿದರು. ಅವರ ಕರ್ಣನ ಪಾತ್ರವನ್ನು ಕೇಳಿ ಪ್ರೇಕ್ಷಕರು ಕಣ್ಣೀರು ಸುರಿಸುತ್ತಿದ್ದ ಸನ್ನಿವೇಶಗಳು ಅನೇಕವಾಗಿ ನಡೆದಿವೆ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳು ಉದ್ಗರಿಸಿದಂತೆ ಕರ್ಣ ಯಾರು ಕಿಲ್ಲೆ ಯಾರು ಎಂದು ತಿಳಿಯದಷ್ಟು ಹೃದಯಂಗಮವಾಗಿ ಕಿಲ್ಲೆಯವರ ಕರ್ಣನ ಅರ್ಥಗಾರಿಕೆ ನಡೆಯುತ್ತಿತ್ತು. ಅವರ ಜೀವನವೂ ದಾನಶೂರ ಕರ್ಣನಂತೆ ಸಾಕು ತಾಯ ಮಡಿಲಲ್ಲಿ ಬೆಳೆದು ಸಮಾಜಕ್ಕೆ ಅರ್ಪಿತವಾದದ್ದು ಇದಕ್ಕೆ ಕಾರಣವಿರಬಹುದು' ಎಂದು ಭಾಸ್ಕರ ರೈ ಕುಕ್ಕುವಳ್ಳಿ ವಿಶ್ಲೇಷಿಸಿದರು.


ದಿ.ಎನ್.ಎಸ್. ಕಿಲ್ಲೆಯವರ ಸೋದರಳಿಯ, ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಷ್ ರೈ ಸ್ವಾಗತಿಸಿದರು. ಉಪಾಧ್ಯಕ್ಷ ಬೆದ್ರುಮಾರು ಜಯಶಂಕರ ರೈ ಶಾಲು, ಸ್ಮರಣಿಕೆ ನೀಡಿ ವಿದ್ವಾಂಸರನ್ನು ಗೌರವಿಸಿದರು. ಪ್ರತಿಷ್ಠಾನದ ಸದಸ್ಯ ಮುಂಡಾಳ ಗುತ್ತು ಮೋಹನ ಆಳ್ವ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಮುಂಡಾಳಗುತ್ತು ಪ್ರಶಾಂತ ರೈ ವಂದಿಸಿದರು.


'ಮಹಾರಥಿ ಕರ್ಣ' ತಾಳಮದ್ದಳೆ:

ಸಮಾರಂಭದ ಕೊನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಕಿಲ್ಲೆಯವರಿಗೆ ಪ್ರಿಯವಾಗಿದ್ದ 'ಮಹಾರಥಿ ಕರ್ಣ' ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಮುಂಡಾಳಗುತ್ತು ಪ್ರಶಾಂತ್ ರೈ, ಜನಾರ್ದನ ತೋಳ್ಪಾಡಿತ್ತಾಯ, ರೋಹಿತ್ ಉಚ್ಚಿಲ್, ರಾಜೇಂದ್ರ ಕೃಷ್ಣ ಹಾಗೂ ಅರ್ಥಧಾರಿಗಳಾಗಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಜಬ್ಬಾರ್ ಸಮೋ, ಸಂಪಾಜೆ, ವಾಸುದೇವ ರಂಗ ಭಟ್,ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದುರ್ಗಾಪ್ರಸಾದ್ ಮೇಂಡ ಎಂ. ಭಾಗವಹಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post