||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಗರ ಭಜನೆಯ ಮೆರುಗು...

ನಗರ ಭಜನೆಯ ಮೆರುಗು...


ಭೋರ್ಗರೆವ ಕಡಲ ಸಾಲುಗಳು ಒಂದೆಡೆಯಾದರೆ, ಇನ್ನೊಂದೆಡೆ ಹಚ್ಚ ಹಸುರಿನಿಂದ ಕೂಡಿದ ಘಟ್ಟದ ಸಾಲು..! ಈ ಪ್ರಕೃತಿ ರಮಣೀಯತೆಯ ಮಧ್ಯೆ ಇರುವುದೇ ನಮ್ಮ ತುಳುನಾಡು. ವಿಭಿನ್ನ ಸಂಸ್ಕೃತಿ, ಆಚಾರ ವಿಚಾರಗಳಿಂದ ನಾಡಿನೆಲ್ಲೆಡೆ ತುಳುನಾಡು ಪ್ರಸಿದ್ಧ. ಇಂತಿಪ್ಪ ತುಳುನಾಡಿನ ಪ್ರಸಿದ್ಧ ನಾಗಕ್ಷೇತ್ರವಾದ ಸುಬ್ರಹ್ಮಣ್ಯದ ಸುತ್ತಮುತ್ತಲ ಹಳ್ಳಿಗಳಲ್ಲಿ ಕೊಣಾಜೆ ಗ್ರಾಮವೂ ಒಂದು. ಇತಿಹಾಸದ ಕುರುಹನ್ನು ಕಾಪಾಡಿಕೊಂಡು ಬಂದಿರುವ ಸುಬ್ರಹ್ಮಣ್ಯ ಒಂದೆಡೆಯಾದರೆ, ಪರಂಪರೆ, ಸಂಸ್ಕೃತಿ ಆಚಾರ-ವಿಚಾರಗಳನ್ನು ಉಳಿಸಿಕೊಂಡು ಬರುತ್ತಿರುವುದು ಕೊಣಾಜೆ ಎಂಬ ಪುಟ್ಟ ಹಳ್ಳಿ.


ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಹಬ್ಬ-ಹರಿದಿನಗಳ ಆಚರಣೆ, ಪದ್ಧತಿಗಳನ್ನು ಕೊಣಾಜೆಯ ಜನರು ಇಂದಿಗೂ ಕೂಡಾ ಹೊಸತನದ ಛಾಯೆಯೊಂದಿಗೆ ಆಚರಿಸುತ್ತಾರೆ. ಮೂಲ ಸ್ವರೂಪದಲ್ಲೇ ಕಾಪಾಡಿಕೊಂಡು ಬಂದಿದ್ದರೂ ಸಹ ಆಧುನಿಕತೆಯ ಹೊಸತನ ಸೇರಿಕೊಂಡಿರುವುದು ಸುಳ್ಳಲ್ಲ..! ಇಂತಹ ಪರಂಪರಾಗತ ಆಚರಣೆಗಳಲ್ಲಿ ಏಕಾಹ ಭಜನೆ ಮತ್ತು ನಗರ ಭಜನೆಯೂ ಒಂದು. ಸನಾತನ ಹಿಂದೂ ಧರ್ಮದಲ್ಲಿ ಭಜನೆಗೆ ತನ್ನದೇ ಆದ ಮಹತ್ವವಿದೆ. ಆರಾಧನಾ ಕಲೆಯಾದ ಭಜನೆ ಸಂಪ್ರದಾಯಕ್ಕೆ ಸಾಹಿತ್ಯದ ಪರಂಪರೆಯಿದೆ, ಮಧ್ಯಕಾಲಿನ ಭಕ್ತಿಪಂಥದ ಪರಂಪರೆಯೇ ಭಜನೆಗೆ ಹಿನ್ನೆಲೆಯಾಗಿದೆ. ಅಂತಹ ಭಜನೆಯ ಬಗೆಗೆ ಹಿರಿಯರು "ಭಜನೆಯಿದ್ದಲ್ಲಿ ವಿಭಜನೆಯಿಲ್ಲ" ಎನ್ನುವ ವ್ಯಾಖ್ಯಾನವನ್ನೂ ನೀಡಿದ್ದಾರೆ.   


ಭಜನೆಗಳೆಂದರೆ ಜಾತಿ, ಮತಗಳನ್ನು ಮೀರಿದ ದೇಶಿಯ ಆರಾಧನಾ ಗೀತೆಗಳ ಸಂಪ್ರದಾಯ, ಅದರಲ್ಲೂ ಗ್ರಾಮ ದೇವತೆಗಳ ಸ್ತುತಿಯೇ ಭಜನೆಯಲ್ಲಿ ಮುಖ್ಯವಾಗಿರುತ್ತದೆ. ದಕ್ಷಿಣ ಕನ್ನಡದ ಆಚಾರ-ವಿಚಾರಗಳಲ್ಲಿ ನಗರ ಭಜನೆಯೂ ಕೂಡಾ ಒಂದಾಗಿದೆ. ನಗರ ಭಜನೆ ಎಂದರೆ ಊರಿನ ಪ್ರತೀ ಮನೆಗೂ ತೆರಳಿ ಭಜನೆಯ ಮೂಲಕ ದೇವರನ್ನು ಸ್ತುತಿಸುತ್ತಾ ಭಕ್ತಿಯಲ್ಲಿ ಪರವಶವಾಗುವುದು. ಭಕ್ತಿಯೇ ಇಲ್ಲಿ ಪ್ರಾಮುಖ್ಯತೆಯನ್ನು ವಹಿಸಿದರೆ ಸಮಾಜದ ವಿಭಜನೆಯನ್ನು ಭಜನೆಯ ಮೂಲಕ ಹೋಗಲಾಡಿಸುವುದು ಕೂಡಾ ಈ ನಗರ ಭಜನೆಯ ಉದ್ದೇಶ. 


ಭಜನೆ ಸಂಸ್ಕೃತಿಯನ್ನು ಕೊಣಾಜೆಯ ಗ್ರಾಮಸ್ಥರು ಇಂದಿಗೂ ಕೂಡಾ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಜಾತಿಯೆಂಬ ಗೋಡೆಯನ್ನು ಮೆಟ್ಟಿ ಧರ್ಮವೆಂಬ ದೀಪವನ್ನು ಪ್ರಜ್ವಲಿಸಲು ನಗರ ಭಜನೆಯ ಮೂಲಕ ಪ್ರಯತ್ನಿಸುತ್ತಿದ್ದಾರೆ. ನಗರ ಭಜನೆಯ ದಿನಗಳು ಹತ್ತಿರ ಬಂತೆಂದರೆ ಸಾಕು ಕೊಣಾಜೆ ಗ್ರಾಮದಲ್ಲಿ ಉತ್ಸವದ ವಾತಾವರಣ ನಿರ್ಮಾಣವಾಗುತ್ತದೆ. ಸೂರ್ಯ ತನ್ನ ಕರ್ತವ್ಯ ಮುಗಿಸಿ ತೆರಳುತ್ತಿದ್ದಂತೆ ಸಂಜೆಯ ಸವಿಗತ್ತಲೆಯಲ್ಲಿ ಊರಿನ ಹಿರಿಯರು, ಯುವಕರು, ಮಹಿಳೆಯರು, ಯುವತಿಯರು ಹಾಗೂ ಪುಟ್ಟ ಪುಟ್ಟ ಮಕ್ಕಳು ಭಜನಾ ಮಂದಿರದಲ್ಲಿ ಒಟ್ಟಿಗೆ ಸೇರಿ ಅಲ್ಲಿಂದ ತಮ್ಮ ನಗರ ಭಜನೆಯ ಪ್ರಯಾಣ ಆರಂಭಿಸುತ್ತಾರೆ.  


ಭಜನೆಯ ಸಂದರ್ಭದಲ್ಲಿ ಎಲ್ಲರೂ ಕೇಸರಿ ಶಲ್ಯವನ್ನು ಹೆಗಲ ಮೇಲೆ ಹಾಕಿಕೊಂಡು ಭಕ್ತಿಯಲ್ಲಿ ಬಂಧಿಯಾಗಿ, ಭಜನೆಯ ರಾಗ-ತಾಳಗಳಿಗೆ ಹೆಜ್ಜೆ ಹಾಕುತ್ತಾರೆ. ಸನಾತನ ಹಿಂದೂ ಧರ್ಮದ ಮನೆಗಳ ಅಂಗಳದಲ್ಲಿ ತುಳಸಿಕಟ್ಟೆ ತನ್ನದೇ ಆದಂತಹ ಪಾವಿತ್ರ್ಯತೆಯನ್ನು ಬಿಂಬಿಸುತ್ತದೆ. ಇಂತಹ ತುಳಸಿಕಟ್ಟೆಯನ್ನು ತಳಿರು ತೋರಣ, ರಂಗೋಲಿಗಳ ಮೂಲಕ ಶೃಂಗರಿಸಿ ನಗರ ಭಜನೆಯನ್ನು ಆಮಂತ್ರಿಸುವುದು ವಾಡಿಕೆ. ಕಣ್ಮನ ಸೆಳೆಯುವ ಶೃಂಗಾರ ಮಾತೆ ತುಳಸಿಗಾದರೆ, ಭಕ್ತನ ಮನಸ್ಸಿನಲ್ಲಿ ದೇವರೇ ಒಲಿದು ಬರಲಿ ಎಂಬ ಆಶಯ ! ಮನೆ ಮನೆಗೆ ತೆರಳಿ ಭಜನೆಯ ಮೂಲಕ ಧರ್ಮದ ತಿರುಳನ್ನು ಪಸರಿಸುತ್ತಾ, ದೇವರನ್ನು ಆರಾಧಿಸುವವರು ನಮ್ಮೂರಿನ ಜನರು.  ಸಂಜೆಗತ್ತಲೆ ಆರಂಭವಾಗುವ ನಗರ ಭಜನೆ ಮಧ್ಯರಾತ್ರಿವರೆಗೂ ಮುಂದುವರಿಯುವುದಿದೆ! ಮನೆಗೆ ಬರುವ ಭಜಕರಿಗೆ ಶರಬತ್ತು, ದೇವರಿಗೆ ಸಮರ್ಪಿತವಾದ ಪಂಚಕಜ್ಜಾಯ ನೀಡಿ ಸತ್ಕರಿಸುವುದು ವಾಡಿಕೆ.  

 

ನಗರ ಭಜನೆಯೆಂಬ ಉತ್ಸವ ಮುಗಿದ ಬಳಿಕ ಕೊಣಾಜೆಯಲ್ಲಿ ಒಂದು ದಿನದ ಏಕಾಹ ಭಜನೆ ನಡೆಯುತ್ತದೆ. ಏಕಾಹ ಭಜನೆ ಎಂದರೆ ಕೊಣಾಜೆಯ ಜಾತ್ರೆಯೆಂದೇ ಹೇಳಬಹುದು. ತ್ಯಾಗದ ಸಂಕೇತ, ಧರ್ಮದ ಸೂಚಕವಾಗಿರುವ ಕೇಸರಿ ಬಣ್ಣಗಳ ಧ್ವಜ, ಬಂಟಿಂಗ್ಸ್ ಗಳ ಮೂಲಕ ಶೃಂಗಾರಗೊಳ್ಳುವ ಪರಿಸರ! ಬೆಳಗ್ಗಿನಿಂದಲೇ ಗ್ರಾಮದ ಹಿಂದೂ ಬಾಂಧವರೆಲ್ಲರೂ ಕೂಡಿ ಮಾಡುವ ಭಜನೆಯದು. ಏಕಾಹ ಭಜನೆಯಲ್ಲಿ ವಿರಾಮವಿಲ್ಲ. ಒಂದು ದಿನವಿಡೀ ನಿರಂತರವಾಗಿ ಬೇರೆ ಬೇರೆ ಭಜಕರಿಂದ ನಡೆಯುವ ಭಜನಾ ವಿಧಿಯೇ ಏಕಾಹ ಭಜನೆ. 


ಹಲವಾರು ದಿನಗಳ ಏಕಾಹ ಭಜನೆಗಳೂ ನಡೆಯುತ್ತವೆ. ಆದರೆ, ನಮ್ಮೂರಿನಲ್ಲಿ ನಡೆಯುವುದು ಒಂದು ದಿನದ ಏಕಾಹ ಭಜನೆ. ಊರಿನ ಭಜಕರು ಮಾತ್ರವಲ್ಲದೆ, ಪರವೂರಿನ ಭಜನಾ ತಂಡಗಳೂ ಬಂದು ನಮ್ಮೂರಿನಲ್ಲಿ ಭಜನಾ ಸೇವೆಯನ್ನು ನೀಡುತ್ತವೆ. ನಮ್ಮೂರಿನಲ್ಲಿ ಪ್ರತೀ ವರ್ಷ ಮಾರ್ಚ್ ತಿಂಗಳಿನಲ್ಲಿ ಏಕಾಹ ಭಜನೆ ನಡೆಯುತ್ತದೆ.  


ಭಜನೆಯೇ ಮಾನವನ ಮುಕ್ತಿಗೆ ಹೆದ್ದಾರಿ ಎಂಬ ನಂಬಿಕೆಯಲ್ಲಿ ಕೊಣಾಜೆ ಗ್ರಾಮಸ್ಥರು ಇಂದಿಗೂ ಹೊಸತನದೊಂದಿಗೆ ಹಳೆಯ ಪದ್ಧತಿಯನ್ನು ಮುಂದುವರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ.

- ರಚನಾ. ಕೆ

ತೃತೀಯ ಬಿ. ಎ, (ಪತ್ರಿಕೋದ್ಯಮ)

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post