ಬಾನುಲಿ ಹಾಗೂ ರಂಗಭೂಮಿಗಳ ನಟ ಹಾಗೂ ನಿರ್ದೇಶಕ ಎನ್.ಎಸ್.ವಾಮನ್ ಸಾಧನೆ ಬಗ್ಗೆ ಸಾಂಸ್ಕೃತಿಕ ವಲಯ ನಿರ್ಲಕ್ಷ್ಯ - ಹಿರಿಯ ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಬೇಸರ
ಮೈಸೂರು: ಇಲ್ಲಿನ ಅನುಭವಗಳ ಹಂಚಿಕೆಯ ವೇದಿಕೆಯಾದ 'ಅಭಿರುಚಿ ಬಳಗ' ಹಾಗೂ 'ಆಸಕ್ತಿ ಪ್ರಕಾಶನ'ಗಳ ಸಂಯುಕ್ತ ಆಶ್ರಯದಲ್ಲಿ ಬಾನುಲಿ ಹಾಗೂ ರಂಗಭೂಮಿಗಳ ನಟ ಹಾಗೂ ನಿರ್ದೇಶಕ ಎನ್.ಎಸ್.ವಾಮನ್ ಅವರ ಶತಮಾನೋತ್ಸವ ಆಚರಿಸಲಾಯಿತು. ಮೈಸೂರಿನ ಕಿರು ರಂಗಮಂದಿರ, ಕರ್ನಾಟಕ ಕಲಾಮಂದಿರದ ಆವರಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಅಭಿರುಚಿ ಬಳಗ - ಆಸಕ್ತಿ ಪ್ರಕಾಶನ ಮೈಸೂರು ಹಾಗೂ ಚೈತ್ರ ಫೌಂಡೇಶನ್ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಎನ್.ಎಸ್.ವಾಮನ್ ಅವರ ಬಗ್ಗೆ ವಿಚಾರ ಸಂಕಿರಣ, ವಸ್ತುಪ್ರದರ್ಶನ ಹಾಗೂ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಡ್ಡೀಕರೆ ಗೋಪಾಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ದಿಲ್ಲಿಯಲ್ಲಿ ಕನ್ನಡ ಬಾವುಟ ಮೆರೆಸಿದ ಮೈಸೂರಿನ ಮಹನೀಯ ಎನ್.ಎಸ್.ವಾಮನ್ ಎಂದು ಸ್ಮರಿಸಿದರು.
ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ 'ತ್ರಿವಿಕ್ರಮನಾದ ವಾಮನ' ಪುಸ್ತಕ ಲೋಕಾರ್ಪಣೆ ಮಾಡಿ ವೃತ್ತಿ ರಂಗಭೂಮಿಯ ನೂರಾರು ನಾಟಕಗಳನ್ನು ಬಾನುಲಿಗೆ ಅಳವಡಿಸಿ, ಜನಪ್ರಿಯತೆ ಗಳಿಸಿದರಲ್ಲದೆ, ವೃತ್ತಿ ರಂಗಭೂಮಿಯ ನಾಟಕಗಳಿಗೆ, ಕಲಾವಿದರಿಗೆ, ಜನಪ್ರಿಯ ಬೇಡಿಕೆ ತಂದುಕೊಟ್ಟ ವಾಮನ್ ತೆರೆಮರೆಯಲ್ಲೆ ಉಳಿದು ಬಿಟ್ಟರು. ಈ ನಾಡು ಕಂಡ ಅಪರೂಪ ಪ್ರತಿಭೆ ವಾಮನ್ ರವರ ಅಪೂರ್ವ ಸೇವೆಗೆ ಸಲ್ಲಬೇಕಾದ ಮಾನ್ಯತೆ ಸಿಗದಿರುವ ಈ ಕುರಿತು ಸಾಂಸ್ಕೃತಿಕ ವಲಯ ನಿರ್ಲಕ್ಷ್ಯವಹಿಸಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಕಾದಂಬರಿಕಾರ್ತಿ ಉಷಾ ನರಸಿಂಹನ್, ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಮಾರಂಭದಲ್ಲಿ ಕರ್ನಾಟಕ ನಾಟಕ ಅಧ್ಯಕ್ಷ ಪ್ರೋ.ಆರ್.ಭೀಮಸೇನ ಅಧ್ಯಕ್ಷತೆ ವಹಿಸಿದ್ದರು.ಎನ್.ಎಸ್.ವಾಮನ್ ಜೀವನ ಹಾಗೂ ಸಾಧನೆಗೆ ಸಂಬಂಧಿಸಿದ ಛಾಯಾಚಿತ್ರ ಪ್ರರ್ದಶನವನ್ನು ಖ್ಯಾತ ಗಮಕಿ ಡಾ.ಎನ್.ಕೆ ರಾಮಶೇಷನ್ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಎನ್.ಎಸ್.ವಾಮನ್ ಶತಮಾನೋತ್ಸವ ಪುಸ್ತಕ ಪ್ರಶಸ್ತಿಗಳನ್ನು ವಿತರಿಸಲಾಯಿತು. ಮೊದಲ ಬಹುಮಾನ ವಿಜೇತರು: ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನ ಪ್ರಕಟಿಸಿರುವ ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಮಹತ್ವ ಸಾರುವ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರ 'ವಂದೇ ಗುರು ಪರಂಪರಾಮ್' ಲೇಖನಗಳ ಸಂಕಲನಕ್ಕೆ, ಕಾರವಾರ ಜಿಲ್ಲೆ ಕೈಗಾದ ಎ.ಎನ್.ರಮೇಶ್ ಗುಬ್ಬಿ ಅವರ 'ಕಾಡುವ ಕವಿತೆಗಳು' ಎಂಬ ಕವನ ಸಂಕಲನ, ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವ್‌ನ ಲಕ್ಷ್ಮಿಕಾಂತ್ ಮಿರಜಕರ್ ಅವರ 'ಗಝಲ್‌ಗಳು' ಗಝಲ್‌ಗಳ ಸಂಕಲನಕ್ಕೆ ನೀಡಿ ಗೌರವಿಸಿಲಾಯಿತು ಎಂದು ಆಯೋಜಕರಾದ ಅಭಿರುಚಿ ಬಳಗ ಹಾಗೂ 'ಆಸಕ್ತಿ ಪ್ರಕಾಶನ'ದ ಅಧ್ಯಕ್ಷ ಎನ್.ವಿ.ರಮೇಶ್ ತಿಳಿಸಿರುತ್ತಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ