|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ಬೋಳಾರ ಸುಬ್ಬಯ್ಯ ಶೆಟ್ಟಿ ಆಯ್ಕೆ

ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ಬೋಳಾರ ಸುಬ್ಬಯ್ಯ ಶೆಟ್ಟಿ ಆಯ್ಕೆ

 

ಮಂಗಳೂರು: ಹಿರಿಯ ಲೇಖಕ ಮತ್ತು ಉದ್ಯಮಿ ಡಾ. ಡಿ.ಕೆ. ಚೌಟ ದತ್ತಿನಿಧಿಯಿಂದ ಹಿರಿಯ ಯಕ್ಷಗಾನ ಕಲಾವಿದರಿಗೆ ನೀಡುವ 'ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿ'ಗೆ 2020 - 21ನೇ ಸಾಲಿನಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಇದಿರು ವೇಷಧಾರಿ ಬೋಳಾರ ಸುಬ್ಬಯ್ಯ ಶೆಟ್ಟಿ ಆಯ್ಕೆಯಾಗಿದ್ದಾರೆ. ಮಣಿಪಾಲ ಇಂಜಿನಿಯರಿಂಗ್ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ. ಜಿ. ಆರ್. ರೈ, ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಸದಸ್ಯ, ಪಂಚ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಅವರನ್ನೊಳಗೊಂಡ ಆಯ್ಕೆ ಸಮಿತಿಯ ಶಿಫಾರಸಿನಂತೆ ಜಾಗತಿಕ ಬಂಟ ಪ್ರತಿಷ್ಠಾನವು ಸುಬ್ಬಯ್ಯ ಶೆಟ್ಟರನ್ನು ಪ್ರಶಸ್ತಿಗೆ ಪರಿಗಣಿಸಿದೆ.


ಬೋಳಾರ ಸುಬ್ಬಯ್ಯ ಶೆಟ್ಟಿ:


ಕಾಸರಗೋಡು ದಡ್ಡಂಗಡಿಯಲ್ಲಿ 1943 ರಲ್ಲಿ ಜನಿಸಿದ ಸುಬ್ಬಯ್ಯ ಶೆಟ್ಟರು ಮಂಗಳೂರಿನ ಬೋಳಾರದಲ್ಲಿ ಹೋಟೆಲ್ ನಡೆಸಿ ಬೋಳಾರ ಸುಬ್ಬಯ್ಯ ಶೆಟ್ಟರೆಂದೇ ಖ್ಯಾತರಾದರು. ತೆಂಕುತಿಟ್ಟು ಯಕ್ಷರಂಗದ 'ಅಭಿನವ ಕೋಟಿ' ಬಿರುದಾಂಕಿತ ದಿ. ಬೋಳಾರ ನಾರಾಯಣ ಶೆಟ್ಟರ ಮಾರ್ಗದರ್ಶನದಲ್ಲಿ ಮೇಳದ ತಿರುಗಾಟಕ್ಕೆ ತೊಡಗಿದ ಸುಬ್ಬಯ್ಯ ಶೆಟ್ಟರು ಸುಂಕದಕಟ್ಟೆ ಮಧೂರು, ಕದ್ರಿ, ಕರ್ನಾಟಕ, ಪುತ್ತೂರು, ಕುಂಟಾರು, ಕಳವಾರು ಮೇಳಗಳಲ್ಲಿ 55 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.


ಭೀಮ, ಕಂಸ, ಮಧು, ಶುಂಭ, ಇಂದ್ರಜಿತು, ಅರ್ಜುನ, ಕಿರಾತ, ವೀರವರ್ಮ, ಪೂತನಿ, ಶೂರ್ಪನಖಿ, ಲಂಕಿಣಿ, ತಾಟಕಿ, ಹಿಡಿಂಬೆ ಮುಂತಾದ ಪೌರಾಣಿಕ ಪಾತ್ರಗಳಲ್ಲದೆ, ತುಳು ಪ್ರಸಂಗಗಳ ಪೆರುಮಳ, ಬುದ್ಯಂತ, ಚಂದುಗಿಡಿ, ದುಗ್ಗಣ ಕೊಂಡೆ, ಕಾಂತಣ್ಣ ಅತಿಕಾರಿ,ಬಿರ್ಮಾಳ್ವ - ಮೊದಲಾದ ಪಾತ್ರಗಳಲ್ಲಿ ಪ್ರಸಿದ್ಧರು. ಪ್ರಸ್ತುತ 79ರ ಇಳಿವಯಸ್ಸಿನಲ್ಲೂ ಕಳವಾರು ಶ್ರೀ ಬೆಂಕಿನಾಥೇಶ್ವರ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ.


ಪ್ರಶಸ್ತಿಯು ರೂಪಾಯಿ 20,000 ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು 2022 ಜನವರಿ 8 ರಂದು ನಗರದ ಮೋತಿಮಹಲ್ ನಲ್ಲಿ ನಡೆಯುವ ಜಾಗತಿಕ ಬಂಟ ಪ್ರತಿಷ್ಠಾನದ ವಾರ್ಷಿಕ ಸಮಾವೇಶದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡುವರೆಂದು ಕಾರ್ಯದರ್ಶಿ ಸಿಎ ಸುಧೀರ್ ಕುಮಾರ್ ಶೆಟ್ಟಿ ವೈ. ಮತ್ತು ಆಯ್ಕೆ ಸಮಿತಿ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post