|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಾಡಿನ ಮಂಗಳ ಮಹೋತ್ಸವ: ಮಕರ ಸಂಕ್ರಾಂತಿ

ನಾಡಿನ ಮಂಗಳ ಮಹೋತ್ಸವ: ಮಕರ ಸಂಕ್ರಾಂತಿ

 



ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆ ಯಾದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿ ಹಬ್ಬವೂ ಒಂದು.


ಪರ್ಯಾಯ ಹೆಸರು:- ಮಘಿ (ಸಿಖ್ ಧರ್ಮ), ಮಾಘೆ ಸಂಕ್ರಾಂತಿ, ಮಾಘ್ ಬಿಹು, ಶಕ್ರೈನ್, ಪೊಂಗಲ್ .

ಮಹತ್ವ:- ಕೊಯ್ಲು ಉತ್ಸವ, ಮುಂದೆ ದಿನಗಳ ಸ್ವಾಗತ, ಸೂರ್ಯನ ಪೂಜೆ.

ಆಚರಣೆಗಳು:- ದೀಪೋತ್ಸವಗಳು, ಮೇಳಗಳು, ನದಿ ಹಬ್ಬ, ಕಲೆ, ನೃತ್ಯ, ಸಮಾಜೀಕರಣದ ಸೂರ್ಯ ಪೂಜೆ.


ಭೂಲೋಕದ ಪ್ರತ್ಯಕ್ಷ ದೇವರು ಎಂದರೆ ಸೂರ್ಯ ಭಗವಾನ್. ಈತನನ್ನು ಜಾತಿ, ಮತ ಭೇದವಿಲ್ಲದೆ ಪ್ರಪಂಚದ ಎಲ್ಲ ಜನರು ಆರಾಧಿಸುತ್ತಾರೆ. ಈ ಸೂರ್ಯ ನಮಗೆ ಬೆಳಕು ನೀಡುವುದಲ್ಲದೆ ಬದುಕನ್ನು ನೀಡುವನು ಹಾಗೂ ಈ ಜಗತ್ತಿನ ಅಂಧಕಾರವನ್ನು ಹೋಗಲಾಡಿಸುವನು. ಈತನು ಜ್ಞಾನದ ಸಂಕೇತವಾಗಿದ್ದಾನೆ. ಭಾಸ್ಕರ ಇಲ್ಲದೆ ಇದ್ದರೆ ಜಗತ್ತಿನ ಸಕಲ ಚಟುವಟಿಕೆಗಳು ನಿಂತು ಹೋಗುತ್ತದೆ.


ಒಂದು ವರ್ಷದಲ್ಲಿ (ಸಂವತ್ಸರ) 12 ಮಾಸಗಳು. ಅವುಗಳನ್ನು ಎರಡು ಭಾಗ ಮಾಡಿರುವರು, ಉತ್ತರಾಯಣ ಹಾಗೂ ದಕ್ಷಿಣಾಯನ. ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಸೂರ್ಯ, ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ.


ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಸೂರ್ಯ ಪ್ರವೇಶ ಮಾಡುತ್ತಾನೆ ಹಾಗೂ ಆನಂತರ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ. 6 ತಿಂಗಳು ಕಾಲ ಉತ್ತರಾಯಣ ನಂತರ ಅಂದರೆ ಜೂನ್ 15ರ ನಂತರ ದಕ್ಷಿಣಾಯನ ಪ್ರಾರಂಭ ಆಗುತ್ತದೆ.


ದೈನಂದಿನ ಸಾಮಾಜಿಕ ಧಾರ್ಮಿಕ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವಂತಹದ್ದೆ "ಹಬ್ಬಗಳು". ಇಡೀ ಮನುಷ್ಯ ಸಮೂಹಕ್ಕೆ ಸಂತೋಷ, ಸಡಗರ ಸಹಜ ಪ್ರೀತಿಯ ವಿಷಯವಾಗಿರುವುದೇ ಹಬ್ಬಗಳು. ಇಂದಿನ ಆಧುನಿಕ ಒತ್ತಡಯುಕ್ತ ಜೀವನದಲ್ಲಿ ತೊಡಗಿದ್ದಾಗಲೂ, ಹಬ್ಬಹರಿದಿನಗಳ ಬಗೆಗಿನ ಆಸಕ್ತಿಯು ಕಳೆದುಕೊಂಡಿಲ್ಲದ್ದನ್ನು ಕಾಣಬಹುದು. ಹಬ್ಬವೆಂಬುದು ಕೆಲವೇ ಧರ್ಮ ಸಂಪ್ರದಾಯಕ್ಕೆ ಸೀಮಿತವಾದುದಲ್ಲ. ಎಲ್ಲಾ ಧರ್ಮಗಳಲ್ಲೂ ಅವರ ಆಚರಣೆಗೆ ತಕ್ಕಂತೆ ಹಬ್ಬಗಳಿರುವುದನ್ನು ಗಮನಿಸಬಹುದು.ಜಾತ್ಯಾತೀತ ರಾಷ್ಟ್ರವಾದ ನಮ್ಮ ಭಾರತದಲ್ಲಂತು ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ವೈವಿಧ್ಯಮಯವಾದ ಹಬ್ಬಹರಿದಿನಗಳನ್ನು ಕಾಣಬಹುದು. ಕೆಲವು ಹಬ್ಬಹರಿದಿನಗಳಂತೂ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು, ರೀತಿ ನೀತಿಯಿಂದ ಆಚರಿಸುತ್ತಿರುವುದನ್ನು ಕಾಣಬಹುದು. ಹಬ್ಬ ಒಂದೇ ಆದರೂ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಆಚರಿಸುವಂತಹ ಬಹಳಷ್ಟು ಹಬ್ಬಗಳಿದ್ದು "ಸಂಕ್ರಾಂತಿ" ಹಬ್ಬವು ಆ ರೀತಿ ಆಚರಣೆಗೆ ಒಳಪಡುವ ಹಬ್ಬಗಳಲ್ಲಿ ಒಂದು.


ಪೌರಾಣಿಕ ಮತ್ತು ವೈಜ್ಞಾನಿಕ ಹಿನ್ನೆಲೆ

ಎಲ್ಲಾ ಚಟುವಟಿಕೆಗಳಿಗೂ ಆಧಾರಪ್ರಾಯವಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲವನ್ನು "ಸಂಕ್ರಮಣ ಅಥವಾ ಸಂಕ್ರಾಂತಿ" ಎಂದು ಜ್ಯೋತಿಷ್ಯಾಧಾರದ ಮೇಲೆ ಪರಿಗಣಿಸಲಾಗುವುದು. ಸಂಕ್ರಾಂತಿಯು ಒಂದು ವಿಧದಲ್ಲಿ ಸೂರ್ಯನ ಆರಾಧನೆಯಾಗಿದ್ದು, ಉತ್ತರಾಯಣ ದಕ್ಷಿಯಾಣಗಳ ಪ್ರಾರಂಭದ ದಿನವಾದ್ದರಿಂದ ಹೆಚ್ಚಿನ ಮಹತ್ವವನ್ನು ಪಡೆದಿದೆ. ಸಾಮಾನ್ಯವಾಗಿ ಸುಗ್ಗಿಯ ಸಂದರ್ಭದಲ್ಲಿ ಆಚರಿಸುವ ಸಂಕ್ರಾಂತಿ ಹಬ್ಬವು ಭಾರತೀಯ ಕಾಲಮಾನ ’ಪುಷ್ಯಮಾಸದಲ್ಲಿ’ ಬರುವುದು. ಉತ್ತರಾಯಣದ ಪುಣ್ಯಕಾಲವೆಂದೂ(ದೇವತೆಗಳ ಕಾಲವೆಂದೂ) ಸಹ ಕರೆಯಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಭಕ್ತರು ಪುಣ್ಯ ನದಿಗಳೆಂದು ಹೆಸರುವಾಸಿಯಾದ ಗಂಗಾ, ಕಾವೇರಿ ಮೊದಲಾದವುಗಳಲ್ಲಿ ಸ್ನಾನ ಮಾಡುವುದು ಉಂಟು. ಸೂರ್ಯನು ಈವರೆಗೆ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದದ್ದು, ಸಂಕ್ರಾಂತಿಯ ದಿನದಿಂದ ಉತ್ತರದ ಕಡೆ ಪಥ ಬದಲಾಯಿಸುತ್ತಾನೆ. ಈ ರೀತಿ ಸೂರ್ಯನ ಪಥ ಬದಲಾವಣೆಯಿಂದ ಭಾರತದಲ್ಲಿ ಕೊರೆಯುವ ಚಳಿ ಕಡಿಮೆಯಾಗಿ ಹಗಲು ಹೆಚ್ಚು ಸಂಭವಿಸುತ್ತದೆ ಎಂಬ ಪ್ರತೀತಿ ಇದೆ.


ಶಾಸ್ತ್ರದೃಷ್ಟಿಯಿಂದ ಈ ಹಬ್ಬದಂದು ಕಪ್ಪು ಎಳ್ಳಿನಿಂದ ಸ್ನಾನ ಮಾಡಿ ಬ್ರಾಹ್ಮಣರಿಗೆ ಎಳ್ಳುದಾನವನ್ನು ಮಾಡುತ್ತಾರೆ. ಈ ದಿನ ಮಾಡಿದ ದಾನದಿಂದ ಸೂರ್ಯನು ಆಜನ್ಮ ಪರ್ಯಂತ ಅನುಗ್ರಹಿಸುತ್ತಾನೆಂಬ ನಂಬಿಕೆಯು ಇದೆ. ಆಂಧ್ರ, ತಮಿಳುನಾಡುಗಳಲ್ಲಿ ಸಂಕ್ರಾಂತಿ, ಕನು, ಭೋಗಿ ಎಂದು ಆಚರಿಸಲ್ಪಡುತ್ತದೆ. ಅಲಹಾಬಾದಿನಲ್ಲಿ ಈ ಸಂದರ್ಭದಲ್ಲಿ ಕುಂಭ ಮೇಳ ನಡೆಯುವುದನ್ನು ಕಾಣಬಹುದು. ಉತ್ತರ ಭಾರತದಲ್ಲಿಯೂ ಸಂಕ್ರಾಂತಿಯನ್ನು ಆಚರಿಸುವುದುಂಟು.


ಆಚರಣೆ:-

ಸಂಕ್ರಾಂತಿ ಹಬ್ಬದ ದಿನದಂದು ಎಳ್ಳು ಬೆಲ್ಲ (ಸಕ್ಕರೆ), ನೆಲಗಡಲೆ, ಸಕ್ಕರೆ ಅಚ್ಚು, ಕೊಬ್ಬರಿ, ಕಬ್ಬು ಬೆರೆಸಿದ ವಿಶೇಷ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡಿ ನಂತರ ವಿವಾಹಿತ ಹಾಗೂ ಅವಿವಾಹಿತ ಹೆಣ್ಣು ಮಕ್ಕಳು ತಮ್ಮ ಆಪ್ತರೇಷ್ಟರಿಗೆ ಹಂಚಿ ಸಂತೋಷವನ್ನು ಪಡುತ್ತಾರೆ. ಈ ದಿನ ಶ್ರೀರಾಮನ ಪೂಜೆಯನ್ನು ಆಂಧ್ರದಲ್ಲಿ ಮಾಡುತ್ತಾರೆ. ತಮಿಳುನಾಡಿನಲ್ಲಿ ಬೆಲ್ಲ, ಅಕ್ಕಿ, ತುಪ್ಪದಿಂದ ತಯಾರಿಸಿದ ಪೊಂಗಲನ್ನು ಸುತ್ತಲೂ ಕಬ್ಬನ್ನು ಕಟ್ಟಿ ಸಿಂಗರಿದ ಒಲೆಯಲ್ಲಿ ಮಾಡಿ ಹಬ್ಬವನ್ನು ಆಚರಿಸುತ್ತಾರೆ. ರೈತರು ಈ ದಿನದಂದು ಜಾನುವಾರುಗಳಿಗೆ ಮೈತೊಳೆದು, ಸಿಂಗರಿಸಿ ಮೆರವಣಿಗೆ ಮಾಡಿ, ಸಂಜೆ ಊರ ಒಂದು ಬೀದಿಯ ದಾರಿಯಲ್ಲಿ ಕಿಚ್ಚು ಹಾಯಿಸುತ್ತಾರೆ. ಎಳ್ಳಿನ ಹಬ್ಬವೆಂದು ಪ್ರಸಿದ್ಧವಾದ ಈ ದಿನದಂದು, ನಾನಾ ರೂಪಗಳಲ್ಲಿ ಎಳ್ಳನ್ನು ಬಳಸುವುದಲ್ಲದೆ, ಪೀಡಾ ಪರಿಹಾರಾರ್ಥವಾಗಿ ಎಳ್ಳನ್ನು ಹಾಗೂ ಎಳಚಿ ಹಣ್ಣನ್ನು ಸುರಿಯುತ್ತಾರೆ. ಪುರಾಣಗಳ ಹೇಳಿಕೆಯಂತೆ ಈ ದಿನದಿಂದ ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿಯಾಗುವುದರಿಂದ ಆನಂದಕ್ಕಾಗಿ ಎಳ್ಳು ಬೆಲ್ಲ ತಿಂದು ಒಳ್ಳೆಯ ಹಿತ ನುಡಿಯುವ ಉದ್ದೇಶದಿಂದಾಗಿ ಎಳ್ಳು ಬೆಲ್ಲ ಹಂಚುವರು.


ವೈಜ್ಞಾನಿಕ ರೀತಿಯಲ್ಲಿ ನೋಡಿದಾಗ ಸಂಕ್ರಾಂತಿಯ ಸಮಯದಲ್ಲಿ ಚಳಿ ಹೆಚ್ಚು ಇರುತ್ತದೆ. ಎಳ್ಳು ಸೇವನೆಯಿಂದ ದೇಹದ ಉಷ್ಣತೆ ಹೆಚ್ಚು ಆಗುತ್ತದೆ ಹಾಗೂ ಚರ್ಮದ ಕಾಂತಿಯೂ ಹೆಚ್ಚುತ್ತದೆ. ಈ ಹಬ್ಬವು ಅತ್ಯಂತ ಪ್ರಾಚೀನ ಕಾಲದಿಂದಲೂ ಆಚರಣೆಗೆ ಬಂದಿದೆ. ಜನಪದ ಗೀತೆಯಲ್ಲೂ ಸಂಕ್ರಾಂತಿಯ ಬಗ್ಗೆ ಹೇಳಿದೆ. ಶಿವ ಮತ್ತು ಪಾರ್ವತಿಯರು ಲೋಕ ಸಂಚಾರ ಪ್ರಾರಂಭಿಸುತ್ತಾರಂತೆ. ಈ ಸಂಕ್ರಮಣದ ಕಾಲದ ಗೋಧೂಳಿ ಲಗ್ನಕ್ಕಿಂತ ಹೆಚ್ಚು ಸಮಯ ಈ ಭೂಲೋಕದಲ್ಲಿರುತ್ತಾರೆ ಎಂದು ಪುರಾಣದಲ್ಲಿ ಇದೆ. ಈ ಪುಣ್ಯ ದಿನದಲ್ಲಿ ಹಲವಾರು ದೇವತೆಗಳಿಗೆ ಶಾಪ ವಿಮೋಚನೆ ಉಂಟಾಗಿದೆ. ಉದಾಹರಣೆಗೆ ಇಂದ್ರ ಮತ್ತು  ಚಿತ್ರಸೇನ.

ಪ್ರತಿ ವರ್ಷ ಸಂಕ್ರಾಂತಿಯ ಹಬ್ಬದ ದಿನ ಸಂಜೆ ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯು ಜ್ಯೋತಿ ರೂಪದಲ್ಲಿ ದರ್ಶನ ನೀಡುತ್ತಾನೆ ಎಂಬ ನಂಬಿಕೆ ಇದೆ.


ಈ ರೀತಿ ನಮ್ಮ ಭಾರತದಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಧರ್ಮದ ಹಬ್ಬಕ್ಕೂ ತನ್ನದೇ ಆದ ಐತಿಹಾಸಿಕ, ಪೌರಾಣಿಕ, ವೈಜ್ಞಾನಿಕ ಮಹತ್ವಗಳಿವೆ. ಆದರೆ ಇತ್ತೀಚಿನ ಒತ್ತಡಯುಕ್ತ ಜೀವನದಲ್ಲಿ ಹಬ್ಬಗಳ ಆಚರಣೆಯೇ ಕಣ್ಮರೆಯಾಗುತ್ತಿರುವುದು ವಿಪರ್ಯಾಸ. ನಮ್ಮ ಇಂದಿನ ಪೀಳಿಗೆಯವರಿಗೆ ಪಾಶ್ಚಾತ್ಯೀಕರಣದ ಪ್ರಭಾವದಿಂದ ನಮ್ಮ ಸಾಂಸ್ಕೃತಿಕ ದ್ಯೋತಕವಾದ ಹಬ್ಬಗಳಾವುವಿದೆ ಎಂಬುದೇ ತಿಳಿಯದಂತಾಗಿದೆ. ಹೀಗಾಗಿ ಅನುಕರಣೆಯ ಜಾಡ್ಯವನ್ನು ತೊರೆದು ಪರಂಪರಾಗತವಾಗಿ ಆಚರಣೆಗೆ ಒಳಪಟ್ಟ ಹಬ್ಬ ಹರಿದಿನಗಳನ್ನು ಹಿರಿಯರು ಆಚರಿಸುವತ್ತ ಗಮನ ಹರಿಸಿ, ತಮ್ಮ ಮಕ್ಕಳಿಗೂ ಅದರ ಮಹತ್ವ, ಹಿನ್ನೆಲೆ ಬಗ್ಗೆ ತಿಳಿಸಿ,  ಅದು ಮುಂದಿನ ಪೀಳಿಗೆಯವರೆಗೆ ಮುಂದುವರಿಯುವಂತೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು.

-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8150075651


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم