|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಂಕ್ರಾಂತಿ ಹಬ್ಬ: ಬದಲಾದ ಸೌರ ಪಥ, ಪ್ರಕೃತಿಯಲ್ಲಿ ಸಂಭ್ರಮದ ರಥ

ಸಂಕ್ರಾಂತಿ ಹಬ್ಬ: ಬದಲಾದ ಸೌರ ಪಥ, ಪ್ರಕೃತಿಯಲ್ಲಿ ಸಂಭ್ರಮದ ರಥ



ಹಬ್ಬ.. ಅಬ್ಬಾ ಎಷ್ಟೊಂದು ಸಡಗರ ಈ ಶಬ್ದ ನುಡಿಯುವುದರಲ್ಲೇ ಸಂತಸ ಸಂಭ್ರಮ ತುಂಬಿದೆ. ಹಬ್ಬ ಎನ್ನೋದು ಆಯಾ ಸಮುದಾಯದ ಯಾವುದೋ ಒಂದು ಅದ್ವಿತೀಯ ಅಂಶದ ಮೇಲೆ ಕೇಂದ್ರೀಕರಿಸುವ ಹಾಗೂ ಅದನ್ನು ಆಚರಿಸುವ ಸಂದರ್ಭ. ಹಬ್ಬಗಳು ಸಂಬಂಧಗಳ ಬೆಸೆಯಲು ಹಾಗೂ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿಕೊಂಡು ಹೋಗಲು ತುಂಬಾ ಸಹಕಾರಿಯಾಗಿದೆ. ಹಿಂದೂ ಸಂಪ್ರದಾಯದ ಹಬ್ಬಗಳಲ್ಲಿ ಸಂಕ್ರಾಂತಿ ಹಬ್ಬವು ಬಹಳ ಶ್ರೇಷ್ಠವಾಗಿದೆ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸುವ ಈ ಹಬ್ಬ ಸಮೃದ್ಧಿಯ ಸಂಕೇತವಾಗಿದೆ. ಈ ಹಬ್ಬವು ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ.


ಜಗಚ್ಚಕ್ಷುವಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೆಸರು. ಸೌರಮಾನದ ಪ್ರಕಾರ ಸೂರ್ಯನು ಮೇಷಾದಿ ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಅವುಗಳಲ್ಲಿ ಕರ್ಕಾಟಕ ಸಂಕ್ರಾಂತಿ ಹಾಗೂ ಮಕರ ಸಂಕ್ರಾಂತಿಗಳು ದಕ್ಷಿಣಾಯನ, ಉತ್ತರಾಯಣಗಳ ಪ್ರಾರಂಭದ ದಿನಗಳಾದ್ದರಿಂದ ವಿಶೇಷ ಮಹತ್ವವುಳ್ಳವುಗಳಾಗಿವೆ.


ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಎಂದು ಕರೆಯಲ್ಪಡುತ್ತದೆ. ಆಯನವೆಂದರೆ ಸೂರ್ಯನು ಚಲಿಸುವ ಮಾರ್ಗ. ಸೂರ್ಯನು ಕಟಕ ಸಂಕ್ರಾಂತಿಯಿಂದ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದು ಮಕರ ಸಂಕ್ರಾಂತಿಯಿಂದ ತನ್ನ ಮಾರ್ಗವನ್ನು ಬದಲಾಯಿಸಿ ಉತ್ತರದ ಕಡೆ ವಾಲಿ ಚಲಿಸುತ್ತಾನೆ. ಹಗಲು ಜಾಸ್ತಿಯಾಗಿ, ಕತ್ತಲು ಕಡಿಮೆಯಾಗುತ್ತದೆ. ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಪ್ರಾರಂಭವೆಂದು ಪುರಾಣದಲ್ಲಿದೆ. ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು, ಈ ಉತ್ತರಾಯಣದಲ್ಲಿ ತೆರೆಯುತ್ತದೆ.

ಈ ದಿನ ಶ್ರೀರಾಮ ರಾವಣನನ್ನು ಸಂಹರಿಸಿ ಸೀತೆಯನ್ನು ತಂದ ದಿನವೆಂದು ಹೇಳುತ್ತಾರೆ. ಅಲ್ಲದೆ ಸ್ವರ್ಗಸ್ಥರಾದ ಪಿತೃಗಳು ಅದೃಶ್ಯರಾಗಿ ಈ ದಿನ ತಮ್ಮ-ತಮ್ಮ ಮನೆಯಂಗಳಕ್ಕೆ ಬರುತ್ತಾರೆಂದು ಹೇಳಲಾಗುತ್ತದೆ. ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಮಾತ್ರವಲ್ಲ ಸಾಯುವುದಕ್ಕೂ ಉತ್ತರಾಯಣ ಪುಣ್ಯಕಾಲ ಶ್ರೇಷ್ಠವೆಂದು ಹೇಳಲಾಗಿದೆ. ಮಹಾಭಾರತದ ಕಥೆಯಲ್ಲಿ ಇಚ್ಚಾ ಮರಣಿ ಭೀಷ್ಮಾಚಾರ್ಯರು ಕಾಯವ ತೊರೆಯಲು ಉತ್ತರಾಯಣ ಕಾಲದವರೆಗೂ ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು ಎನ್ನುವ ಉಲ್ಲೇಖವಿದೆ. ಉತ್ತರಾಯಣ ದೇವತೆಗಳ ಕಾಲ ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ.


ಸಂಕ್ರಾಂತಿಯ ಸೂರ್ಯ ಆರಾಧನೆಯ ಹಬ್ಬವಾಗಿದೆ.ಸುಗ್ಗಿಯ ಕಾಲದ ಹಬ್ಬವು ಇದಾಗಿದೆ. ಈ ಹಬ್ಬವನ್ನು ಪೊಂಗಲ್ ಎಂದೂ ಕರೆಯುತ್ತಾರೆ. ಪೊಂಗಲ್ ಎಂದರೆ ಅಕ್ಕಿ, ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲಗಳಿಂದ ಮಾಡಿದ ಸಿಹಿ ಖಾದ್ಯ. ಸುಗ್ಗಿಯ ಉತ್ಪನ್ನಗಳಿಂದ ಮಾಡಿದ ಇದನ್ನು ಸೂರ್ಯದೇವನಿಗೆ ನೈವೇದ್ಯ ಮಾಡುವ ಆಚರವು ಪ್ರತೀತಿಯಲ್ಲಿದೆ.


ಸಂಕ್ರಾಂತಿ ಹಬ್ಬದಂದು ಹಗಲು ಪೂರ್ತಿ ಅಂದರೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪುಣ್ಯ ಕಾಲವಿರುತ್ತದೆ. ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ ಎಳ್ಳು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು. ಮಾಡಿದ ದಾನದ ಪುಣ್ಯವನ್ನು ಜನ್ಮಜನ್ಮದಲೂ ಸದಾ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. 


ಮನೆಯಲ್ಲಿ ಸಂಪ್ರದಾಯದ ಎಳ್ಳು ಬೆಲ್ಲವನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ ಎಳ್ಳುಹಂಚುವುದು ಸಂಕ್ರಾಂತಿಯ ಸಂಪ್ರದಾಯ. (ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ ಎಳ್ಳು ಬೆಲ್ಲತಯಾರಿಸಲಾಗುತ್ತದೆ). ರೈತಾಪಿ ಜನರಿಗೆ ಇದು ಸುಗ್ಗಿಯ ಹಬ್ಬ ಈ ಮಂಗಳಕರವಾದ ದಿನದಂದು ಯುವ ಹೆಣ್ಣುಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿ ಮನೆಯಂಗಳದಲ್ಲಿ ಅಂದವಾದ ರಂಗೋಲಿ ಹಾಕಿ ತಟ್ಟೆಯಲ್ಲಿ ಎಳ್ಳು ಬೆಲ್ಲ ಹಿಡಿದುಕೊಂಡು ಸುತ್ತ ಮುತ್ತಲಿನ ಜನರನ್ನು ಹಾಗೂ ಸಂಬಂಧಿಕರನ್ನು ಭೇಟಿಯಾಗಿ ಪರಸ್ಪರ ಹಂಚಿಕೊಂಡು ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತುಗಳನ್ನಾಡೋಣ ಎಂದು ಹೇಳಿಕೊಳ್ಳುತ್ತಾರೆ. ಕೆಲವು ಕಡೆ ಮಕ್ಕಳು ಕಿರಿಯರು ಹಿರಿಯರು ಸೇರಿ ಗಾಳಿಪಟವನ್ನೂ ಹಾರಿಸಿ ಸಂತೋಷ ಪಡುತ್ತಾರೆ. ಸಂಕ್ರಾಂತಿಯ ಶುಭ ಸಂಧರ್ಭದಲ್ಲಿ ದನಕರುಗಳನ್ನು ಸಿಂಗರಿಸಿ ಮೆರವಣಿಗೆ ಮಾಡುವುದು ಇನ್ನೊಂದು ಧಾರ್ಮಿಕ ಪದ್ಧತಿಯಾಗಿದೆ.


ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಮಕರ ಜ್ಯೋತಿಯ ದರ್ಶನ ವಾಗುತ್ತದೆ. ಅಯ್ಯಪ್ಪ ವೃತಾಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನವನ್ನು ಪಡೆದರೆ ಜನ್ಮ ಸಾರ್ಥಕವಾಗುವುದೆಂಬ ನಂಬಿಕೆಯಿದೆ. ಹಾಗಾಗಿ ಲಕ್ಷೋಪಲಕ್ಷ ಜನರು ಈ ಜ್ಯೋತಿಯ ದರ್ಶನಕ್ಕಾಗಿ ವರ್ಷಂಪ್ರತಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಸನ್ನಿಧಾನಕ್ಕಾಗಮಿಸುತ್ತಾರೆ. ಮಕರ ವಿಳಕ್ಕು ಎಂದು ಕರೆಯಲ್ಪಡುವ ಈ ಜ್ಯೋತಿಯು ಶಬರಿಮಲೆಯ ಬೆಟ್ಟದಿಂದ ಮೂರು ಬಾರಿ ಗೋಚರವಾಗುತ್ತದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲವಾದರೂ, ಪ್ರಸ್ತುತ ಕಾಲದಲ್ಲಿಯೂ ಆಧ್ಯಾತ್ಮಿಕತೆಯ ಕುರುಹನ್ನು ತೋರಿಸುತ್ತದೆ ಎನ್ನುತ್ತಾರೆ ಭಕ್ತರು. ಒಟ್ಟಿನಲ್ಲಿ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿ ಲೋಕದ ಕಾರಿರುಳನ್ನು ಹೋಗಲಾಡಿಸುವಂತೆ ಜನರು ಈ ಕಾಲದಲ್ಲಿ ಪುಣ್ಯ ಕಾರ್ಯಗಳಲ್ಲಿಯೂ ಆಧ್ಯಾತ್ಮಿಕ ಚಿಂತೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಮುಕ್ತಿ ಮಾರ್ಗದಲ್ಲಿ ಸಾಗುವಂತೆ ಈ ಆಚರಣೆಯು ಪ್ರೇರಣೆಯನ್ನು ನೀಡುತ್ತದೆ.


ತಮಿಳುನಾಡಿನಲ್ಲಿ ಪೊಂಗಲ್ ಎಂದು ಕರೆಲ್ಪಡುವ ಈ ಹಬ್ಬವನ್ನು ಪಂಜಾಬ್ ಹಾಗೂ ಹರಿಯಾಣಗಳಲ್ಲಿ ಲೋಹರಿ ಎಂದು ಸಂಭೋದಿಸುತ್ತಾರೆ. ಮಹಾರಾಷ್ಟ್ರದಲ್ಲಿಯೂ ಎಳ್ಳು ಮತ್ತು ಸಕ್ಕರೆಯನ್ನು ಉಂಡೆ ತರ ಮಾಡಿ ಹಂಚಿ ಒಳ್ಳೆಯ ಮಾತುಗಳನ್ನಾಡಿ ಎಂದು ಹೇಳಿಕೊಳ್ಳುತ್ತಾರೆ.


ಸಂಕ್ರಾಂತಿಯ ಎಳ್ಳು ಬೀಸಿ ಬೆಲ್ಲ ಹಾಕಿ ಮಾಡಿದ ಎಳ್ಳು ನೀರು ಎಂಬ ಪಾನೀಯ ಅಪ್ಯಾಯಮಾನವಾಗಿರು ತ್ತದೆ. ಎಳ್ಳು ಬೆಲ್ಲ ಶೀತ- ವಾತದಿಂದ ಉಂಟಾಗುವ ಜಡ್ಡು ಆಲಸ್ಯಗಳನ್ನು ದೂರಮಾಡುವ ಸ್ನೇಹ ದ್ರವ್ಯಗಳ ಹಂಚಿಕೆ, ಸೇವನೆ, ದಾನ ಈ ಸಂಕ್ರಾಂತಿಯ ವೈಶಿಷ್ಟ. ಎಳ್ಳು- ಬೆಲ್ಲ ತಿಂದು ಒಳ್ಳೆ ಮಾತಾಡಿಸಿ ಎನ್ನುವುದೇ ಮಕರ ಸಂಕ್ರಾಂತಿಯ ಸಂದೇಶವಾಗಿದೆ.


ಎಲ್ಲರೊಂದಿಗೆ ಸಮನಾಗಿ ಬಾಳಿ ಬದುಕೋಣ. ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ಬೆಳೆಸೋಣ. ನಮ್ಮ ಮುಂದಿನ ಪೀಳಿಗೆಗೆ ಹಬ್ಬ-  ಹರಿದಿನಗಳ ಸೊಬಗು, ಸೊಗಡು, ಮಹತ್ವ ತಿಳಿಯಹೇಳೋಣ. ಸಮರಸದಿಂದ ಭೇದ ಬಾವ,  ದ್ವೇಷ ಅಸೂಯೆ, ಮೋಸ ವಂಚನೆ ಮರೆತು ಸುಖದಿಂದ ಬಾಳೋಣ.

"ಸರ್ವೇ ಜನಃ ಸುಖಿನೋ ಭವಂತು" 




ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post