|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿವೇಕಾನಂದ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಛಾಯಚಿತ್ರ ಪ್ರದರ್ಶನಕ್ಕೆ ಚಾಲನೆ

ವಿವೇಕಾನಂದ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಛಾಯಚಿತ್ರ ಪ್ರದರ್ಶನಕ್ಕೆ ಚಾಲನೆ

ಪುತ್ತೂರು, ಜ.13: ಸ್ವಾತಂತ್ರ್ಯ ಹೋರಾಟಗಾರರು ನಮಗಾಗಿ ಸ್ವಾತಂತ್ರ್ಯ ತಂದುಕೊಡುವಲ್ಲಿ ಸಾಕಷ್ಟು ಪರಿಶ್ರಮವನ್ನು ಪಟ್ಟಿದ್ದಾರೆ. ಅದನ್ನು ನಾವು ನೆನಪಿಟ್ಟುಕೊಳ್ಳಬೇಕಾಗಿದೆ. ಪ್ರತಿದಿನವು ಸ್ಮರಿಸಬೇಕಾಗಿದೆ. ಜಾತಿ, ಧರ್ಮ ಯಾವುದನ್ನು ಲೆಕ್ಕಿಸದೆ ನಾವೆಲ್ಲ ಭಾರತೀಯರೆಂಬ ಭಾವನೆ ನಮ್ಮದಾಗಬೇಕು ಎಂದು ಪುತ್ತೂರು ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಹೇಳಿದರು.


ಅವರು ಕೇಂದ್ರ ಮತ್ತು ಪ್ರಸಾರ ಸಚಿವಾಲಯ, ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ ಮಂಗಳೂರು ಹಾಗೂ ವಿವೇಕಾನಂದ ಕಾಲೇಜು ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಆಯೋಜಿಸಿದ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.


ಭಾರತ ಸರ್ಕಾರ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸ್ವಾತಂತ್ರ್ಯ ಸಂಭ್ರಮವು ಒಂದು ದಿನಕ್ಕೆ ಸೀಮಿತವಾಗಿರದೆ, ವರ್ಷಪೂರ್ತಿ ಆಚರಿಸುವಂತೆ ಪ್ರಧಾನಿ ಮೋದಿಯವರು ಕರೆ ಕೊಟ್ಟಿದ್ದಾರೆ. ದೇಶಕ್ಕಾಗಿ ಬಲಿದಾನ ನೀಡಿದವರ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ತ್ರಿವರ್ಣಧ್ವಜವನ್ನು ಹಾರಿಸಿ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ನಾವೆಲ್ಲ ಒಂದೇ ಎಂದು ಸಾರೋಣ ಎಂದು ತಿಳಿಸಿದರು.


ಪುತ್ತೂರು ನಗರಸಭೆ ಪೌರಾಯುಕ್ತ ಮಧು. ಎಸ್. ಮನೋಹರ್ ಮಾತನಾಡಿ, 75 ನೇ ಸ್ವಾತಂತ್ರೋತ್ಸವವನ್ನು ಸಂಭ್ರಮಿಸುವ ಸಲುವಾಗಿ ಪ್ರತಿಯೊಂದು ಇಲಾಖೆಗಳು ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸ್ವಾತಂತ್ರ್ಯದ ವಿಚಾರಗಳನ್ನು ತಿಳಿಸಬೇಕು. ಮುಂದಿನ ಜನಾಂಗಕ್ಕೂ ತಿಳಿಯಪಡಿಸಬೇಕು. ಪ್ರತಿ ಮನೆ ಮನೆಯಲ್ಲೂ ಸ್ವಾತಂತ್ರೋತ್ಸವವನ್ನು ಆಚರಿಸಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.


ಕಾಲೇಜು ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಮಾತನಾಡಿ, ಸ್ವಾತಂತ್ರ್ಯ ದೊರೆತು ನಮಗೆ ಸಂವಿಧಾನ ದೊರಕಿತು. ನಂತರದಲ್ಲಿ ದೇಶದ ಭವಿಷ್ಯ ಬದಲಾಯಿತು. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹಾಗೆಯೇ ದೇಶದ ಇತಿಹಾಸದ ಬಗ್ಗೆಯೂ ನಾವು ಅರಿಯಬೇಕಿದೆ. ಅದರ ಅಂಗವಾಗಿ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮುಂದೆಯೂ ಇಂತಹ ಕಾರ್ಯಕ್ರಮಗಳು ಮೂಡಿಬರಲಿ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.


ಈ ಸಂದರ್ಭದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದಂತೆ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಂಗಳೂರು ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಸದಸ್ಯರು, ಕಾಲೇಜಿನ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ವಿಭಾಶ್ರೀ ಎಂ.ಎಸ್ ಪ್ರಾರ್ಥಿಸಿದರು. ಮಂಗಳೂರು ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಸದಸ್ಯ ರೋಹಿತ್ ಜಿ.ಎಸ್ ಸ್ವಾಗತಿಸಿ, ಕ್ಷೇತ್ರ ಪ್ರಚಾರ ಅಧಿಕಾರಿ ಜಿ ತುಕಾರಾಮ ಗೌಡ ಐಐಎಸ್ ಪ್ರಸ್ತಾವನೆಗೈದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ವಂದಿಸಿ, ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕಿ ವಿದ್ಯಾ.ಎಸ್ ಕಾರ್ಯಕ್ರಮ ನಿರೂಪಿಸಿದರು.


ಕಾರ್ಯಕ್ರಮದ ಬಳಿಕ ರಾಜಾರಾಮ್ ಮತ್ತು ತಂಡದಿಂದ ತೊಗಲು ಬೊಂಬೆಯಾಟ ಪ್ರದರ್ಶನ ನಡೆಯಿತು. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಆಗಮಿಸಿ, ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿದರು.


ಶಾಸಕರ ಭೇಟಿ:


ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಪ್ರಯುಕ್ತ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಮಾತನಾಡಿ, 'ಸ್ವಾತಂತ್ರ್ಯ ಲಭಿಸಿ 75 ವರ್ಷಗಳ ನಂತರ ಮತ್ತೊಮ್ಮೆ ಸ್ವಾತಂತ್ರ್ಯ ಸಂಗ್ರಾಮವನ್ನು ನೆನಪಿಸುವಂತಹ ಕೆಲಸವನ್ನು ಇವತ್ತು ಈ ದೇಶದ ಪ್ರಧಾನಿ ಮೋದಿ ಅವರು ಮಾಡ್ತಾ ಇದ್ದಾರೆ. ಈ ದೇಶಕ್ಕೆ ಯರ‍್ಯಾರು ಬಲಿದಾನ ಮಾಡಿದ್ದಾರೋ ನಮ್ಮ ಸರ್ವಸ್ವವನ್ನೂ ದೇಶಕ್ಕೆ ಸಮರ್ಪಣೆ ಮಾಡಿದ್ದಾರೋ ಅಂತಹ ಮಹಾನುಭಾವರನ್ನು ಸ್ಮರಣೆ ಮಾಡುವಂತಹದ್ದು ಇವತ್ತಿನ ಯುವ ಪೀಳಿಗೆಯ ಕರ್ತವ್ಯ. ಅದರ ಜೊತೆಯಲ್ಲಿ ಅವರು ಅವತ್ತು ಏನು ಕನಸು ಕಂಡಿದ್ದರೋ ಈ ದೇಶ ಜಗದ್ಗುರು ಭಾರತ ಆಗ್ಬೇಕು, ರಾಷ್ಟ್ರೋತ್ಥಾನ ಆಗ್ಬೇಕು. ಈ ದೇಶದ ಅಷ್ಟೂ ಜನರಿಗೂ ಮೂಲಭೂತ ಸೌಕರ್ಯಗಳು ಸಿಗ್ಬೇಕು. ಸ್ವಾತಂತ್ರ್ಯ ಸಿಕ್ಕಿದ ಮೇಲೆ ಸಮಾಜದ ಆ ಕಟ್ಟಕಡೆಯ ವ್ಯಕ್ತಿ ಕೂಡ ಸ್ವಾಭಿಮಾನಿ, ಸ್ವಾವಲಂಬಿಯಾಗಿ ಬದುಕಬೇಕು ಅನ್ನುವಂತಹ ಉದ್ದೇಶವನ್ನು ಇಟ್ಟುಕೊಂಡಿದ್ದರು. ಈ ದೇಶದ ಸಂವಿಧಾನದ ಆಶಯಗಳೇನಿತ್ತೋ ಈ ಎಲ್ಲವನ್ನೂ ಈಡೇರಿಸುಂತಹ ಕೆಲಸವನ್ನು ಇವತ್ತಿನ ಯುವಪೀಳಿಗೆ, ಇವತ್ತಿನ ಸರಕಾರಗಳು ಮಾಡಿದಾಗ ಈ ದೇಶಕ್ಕೆ ಸಿಕ್ಕಿದಂತಹ ಸ್ವಾತಂತ್ರ್ಯ ಸಾರ್ಥಕತೆಯನ್ನು ಪಡೆದುಕೊಳ್ಳಬಹುದು. ಆ ದಿಶೆಯಿಂದ ಇಂದು ವಿವೇಕಾನಂದ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವಂತಹ ಆಜಾದಿ ಕಾ ಅಮೃತಮಹೋತ್ಸವ ಆ ಒಂದು ಕಾರ್ಯಕ್ರಮ ಒಂದು ಯಶಸ್ವೀ ಕಾರ್ಯಕ್ರಮ' ಎಂದು ಶುಭಹಾರೈಸುವುದರೊಂದಿಗೆ ಸಮಸ್ತ ಜನತೆಗೆ ಸಂಕ್ರಾಂತಿಯ ಶುಭಕಾಮನೆಗಳನ್ನು ತಿಳಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post