|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹವಿ- ಸವಿ ಕೋಶ (ಹವ್ಯಕ- ಕನ್ನಡ ನಿಘಂಟು): ವಿ.ಬಿ. ಕುಳಮರ್ವರ ಸಾರ್ಥಕ ಪ್ರಯತ್ನ

ಹವಿ- ಸವಿ ಕೋಶ (ಹವ್ಯಕ- ಕನ್ನಡ ನಿಘಂಟು): ವಿ.ಬಿ. ಕುಳಮರ್ವರ ಸಾರ್ಥಕ ಪ್ರಯತ್ನ

ನಡೆದಾಡುವ ನಿಘಂಟು, ನಿಘಂಟು ತಜ್ಞ ಇತ್ಯಾದಿ ಬಿರುದಾಂಕಿತರಾದ ಮಹಾನ್ ಸಾಧಕ, ತಪಸ್ವಿ, ಶತಾಯುಷಿ ಸನ್ಮಾನ್ಯ ಪ್ರೊ|ಜಿ.ವೆಂಕಟಸುಬ್ಬಯ್ಯ ಅವರ ಸುಪುತ್ರ ಶ್ರೀ ಜಿ.ವಿ.ಅರುಣ ಅವರು ಶ್ರೀ ವಿ.ಬಿ ಕುಳಮರ್ವ ಅವರ 'ಹವಿ-ಸವಿ ಕೋಶ'ದ (ಹವ್ಯಕ-ಕನ್ನಡ ನಿಘಂಟು) ಕುರಿತು ಮಂಡಿಸಿದ ವಿಶೇಷ ಲೇಖನ.



ಜಿ. ವಿ. ಅರುಣ

ನಮ್ಮ ಪ್ರಿಯ ಭಾಷೆ ಕನ್ನಡವು ಅನೇಕ ಪ್ರಾಂತೀಯ ಪ್ರಭೇದಗಳನ್ನು ಒಳಗೊಂಡಿದೆ. ಮಂಗಳೂರು ಕನ್ನಡ, ಬೆಂಗಳೂರು ಕನ್ನಡ, ಧಾರವಾಡದ ಕನ್ನಡ, ಬಳ್ಳಾರಿ ಕನ್ನಡ ಹೀಗೆ. ನಮ್ಮ ರಾಜ್ಯದೊಡನೆ ಗಡಿಯನ್ನು ಹಂಚಿಕೊಂಡಿರುವ ಇತರ ರಾಜ್ಯಗಳ ಭಾಷೆಗಳ ಪ್ರಭಾವವು ಗಡಿನಾಡಿನ ಕನ್ನಡದ ಮೇಲೆ ಆಗಿರುತ್ತದೆ. ಹಾಗೆಯೇ ಆ ಉಭಯ ಭಾಷಾ ವಲಯಗಳಲ್ಲಿ ಕನ್ನಡದ ಭಾಷೆಯ ಪ್ರಭಾವವು ಅಲ್ಲಿಯ ನೆರೆಯ ಭಾಷೆಗಳ ಮೇಲೂ ಆಗಿರುತ್ತದೆ. ಮಲೆಯಾಳಂ, ತಮಿಳು, ತೆಲುಗು, ಉರ್ದು, ಮರಾಠಿಗಳ ಜೊತೆಗೆ ನಮ್ಮ ರಾಜ್ಯದಲ್ಲೇ ಇರುವ, ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ, ತುಳು ಭಾಷೆಯ ಜೊತೆಗೆ ಕನ್ನಡದ ಕೊಡು- ಕೊಳ್ಳುವಿಕೆ ಇದ್ದೇ ಇದೆ. ಕೊಂಕಣಿ, ಕೊಡವ ಭಾಷೆಗಳು ಸೀಮಿತ ವಲಯದಲ್ಲಿ ಬಳಕೆಯಲ್ಲಿವೆ.


ಈ ಪ್ರಭೇದಗಳಲ್ಲದೆ ಕನ್ನಡ ನಾಡಿನಲ್ಲಿ ಇನ್ನೂ ಹಲವು ಪ್ರಾದೇಶಿಕ ಉಪಭಾಷೆಗಳು ಬಳಕೆಯಲ್ಲಿವೆ. ಇವುಗಳನ್ನು ಬಳಸುವ ಪರಿಮಿತ ಜನರ ಪರಿಸರದಿಂದ ಅವು ಒಂದು ಬಗೆಯ ಸಾಮಾಜಿಕ ಉಪಭಾಷೆಗಳಾಗಿರುತ್ತವೆ. ಹವ್ಯಕ ಕನ್ನಡ, ಕೋಟ ಕನ್ನಡ, ಕೋಟೆ ಕನ್ನಡ, ಭೈರ ಕನ್ನಡ, ಗೌಡ ಕನ್ನಡ ಮುಂತಾದವು ಅವುಗಳಲ್ಲಿ ಹಲವು. ಶ್ರೀವಿಜಯನು ತನ್ನ ಕವಿರಾಜಮಾರ್ಗದಲ್ಲಿ ಹೇಳಿರುವ "ಕನ್ನಡಂಗಳ್" ಎಂಬುದು ಇವೆಲ್ಲವನ್ನು ಒಳಗೊಳ್ಳುತ್ತದೆ.

ಒಮ್ಮೆ ಖ್ಯಾತ ಲೇಖಕರಾದ ಶ್ರೀ ಕೆ. ವಿ. ತಿರುಮಲೇಶ್ ಅವರ “ತರತರದ ತರಕಾರಿ” ಎಂಬ ಪ್ರಬಂಧವನ್ನು ಓದುತ್ತಿದ್ದೆ. ಅಲ್ಲಿ ಬಡಮಸ್ಥ, ಕುಂಞಕುಟ್ಟಿ ಸಂಸಾರ, ಬೆಟ್ಟುಗದ್ದೆ, ಮೇಲಾರ, ಸೌಳಿ, ದಾರಳೆ, ಪಟಗಲ, ಅಳತ್ತೊಂಡೆ,  ಕೆಮ್ಮುಂಡೆ ಮುಂತಾದ ಅನೇಕ ಶಬ್ದಗಳನ್ನು ಉಪಯೋಗಿಸಿದ್ದು, ವಿಶೇಷವಾಗಿ ನನ್ನ ಗಮನವನ್ನು ಸೆಳೆದಿತ್ತು. ಕನ್ನಡದ ಜಾಯಮಾನಕ್ಕೆ ಹೊಂದುವ ಶಬ್ದಗಳಾದರೂ ನಾನು ಕೇಳದೇ ಇದ್ದ ಈ ಹಲವು ಶಬ್ದಗಳು ನನ್ನ ಕುತೂಹಲವನ್ನು ಕೆರಳಿಸಿದ್ದವು. ನನ್ನಂಥ ಓದುಗರಿಗೆ ತಿಳಿಯಲಿ ಎಂದೇ ಶ್ರೀ ತಿರುಮಲೇಶ್ ಅವರು ಆ ಹವ್ಯಕ ಶಬ್ದಗಳನ್ನು ಕಂಸದಲ್ಲಿ ನೀಡಿದ್ದರು. ಆ ಲೇಖನದ ಪ್ರಾರಂಭದ ವಾಕ್ಯ ಹೀಗಿದೆ: ‘ತರಕಾರಿ, ನೆಟ್ಟಿಕಾಯಿ (ಹವ್ಯಕ) ಕಾಯಿಪಲ್ಲೆ (ಉ ಕನ್ನಡ) ಕಾಯಿಕರೆಪ್ಪು (ತುಳು)… ಆಹಾ, ಅವುಗಳದೇ ಒಂದು ಅದ್ಭುತ ಲೋಕ.’ ಆಗ ನನಗೆ ಆ ಶಬ್ದಗಳದ್ದೇ ಒಂದು ಅದ್ಭುತ ಲೋಕವಾಗಿ ಕಂಡಿತ್ತು!

ಇದು ಇದ್ದಕ್ಕಿದ್ದಂತೆ ನೆನಪಿಗೆ ಬರಲು ಒಂದು ನಿರ್ದಿಷ್ಟ ಕಾರಣವಿದೆ. ಅದು ಈಚೆಗೆ ನಾನು ನೋಡಿದ “ಹವಿ - ಸವಿ ಕೋಶ” ಎಂಬ ಹವ್ಯಕ- ಕನ್ನಡ ನಿಘಂಟು. ಇದರ ರಚನಕಾರರು ಕಾಸರಗೋಡಿನ ಶ್ರೀ ವಿ. ಬಿ. ಕುಳಮರ್ವ ಅವರು. ನಾಲ್ಕು ದಶಕಗಳಿಗೂ ಹೆಚ್ಚಿನ ಕಾಲ, ಅವರು ತತ್ಪರತೆಯಿಂದ, ಏಕಾಂಗಿಯಾಗಿ ಮಾಡಿದ ಸ್ತುತ್ಯ ಕಾರ್ಯದ ಫಲ ಕಳೆದ ವರ್ಷದ ಕೊನೆಗೆ ಪ್ರಕಟಗೊಂಡ ಈ ಹವ್ಯಕ - ಕನ್ನಡ ನಿಘಂಟು.


ಇದಕ್ಕೆ ಮೊದಲು ನಾನು ಮೂರು ಬೇರೆ ಬೇರೆ ರೀತಿಯ ಹವಿಗನ್ನಡ ಪುಸ್ತಕಗಳನ್ನು ನೋಡಿದ್ದೆ. ಮೊದಲನೆಯದು ಪ್ರೊ|| ಎಂ. ಮರಿಯಪ್ಪ ಭಟ್ಟರು ಸಿದ್ಧಪಡಿಸಿದ್ದ ಹವ್ಯಕ ಇಂಗ್ಲಿಷ್ ನಿಘಂಟು. ಮತ್ತೊಂದು ಡಾ।। ಶ್ರೀಕೃಷ್ಣಭಟ್ ಅರ್ತಿಕಜೆ ಅವರ ಹವ್ಯಕ ಗಾದೆಗಳು. ಮೂರನೆಯದು ಡಾ।। ಉಪ್ಪಂಗಳ ರಾಮ ಭಟ್ಟ ಅವರು ರಚಿಸಿದ ಹವ್ಯಕ ಭಾಷೆಯ ಸಾಹಿತ್ಯ, ಸಂಸ್ಕೃತಿ, ನುಡಿರೂಪಗಳನ್ನು ಕುರಿತ ಸಂಶೋಧನಾ ಲೇಖನಗಳನ್ನು ಒಳಗೊಂಡ ಪುಸ್ತಕ “ಹವಿಕ”. ಇದನ್ನು ಓದಿದಾಗ ನನ್ನ ಗಮನಕ್ಕೆ ಬಂದದ್ದು ಇದು: ಹವಿಗನ್ನಡದಲ್ಲಿ ಸ್ತ್ರೀ ಸೂಚಕ ಪ್ರತ್ಯಯಕ್ಕೆ ಹತ್ತುವ ಕ್ರಿಯಾಪದವು ನಪುಂಸಕಲಿಂಗವಾಗಿ ಇರುತ್ತದಂತೆ. “ಮಗಳು ಹಾಡಿತ್ತು; ಓಡಿತ್ತು” ಎನ್ನುವ ರೀತಿ. ಅದೇ ರೀತಿ ಕೆಲವು ವರ್ಗದ ಗಂಡಸರನ್ನು ಬಿಟ್ಟು ಉಳಿದವರ ಎಲ್ಲ ಕ್ರಿಯೆಗಳೂ ನಪುಂಸಕಲಿಂಗದಲ್ಲಿ ಇರುತ್ತದಂತೆ. ಇದು ಆ ಭಾಷೆಯ ವೈಶಿಷ್ಟ್ಯ. ಇವುಗಳ ಬಗ್ಗೆ ವಿವರಗಳಿಗೆ “ಹವಿಕ” ಪುಸ್ತಕವನ್ನು ನೋಡಿ. ಈಗ ಶ್ರೀ ಕುಳಮರ್ವರ “ಹವಿ - ಸವಿ ಕೋಶ”.


ಶ್ರೀ ಕುಳಮರ್ವ ಅವರ ಕಾರ್ಯಸ್ಥಾನ ಕಾಸರಗೋಡು. ಅದು ಅಚ್ಚ ಕನ್ನಡದ ನೆಲ. ಕನ್ನಡದ ಮೊದಲ ರಾಷ್ಟ್ರಕವಿಗಳಾದ ಮಂಜೇಶ್ವರ ಗೋವಿಂದ ಪೈ ಅವರ ಜನ್ಮಸ್ಥಳ. ಅದರೆ ಅದು ಕರ್ನಾಟಕಕ್ಕೆ ಸೇರುವುದರಿಂದ ವಂಚಿತವಾದ ಪ್ರದೇಶ. ಈಗ ಕೇರಳಕ್ಕೆ ಸೇರಿದ್ದರೂ ಅಲ್ಲಿ ಕನ್ನಡವು ಇನ್ನೂ ನೆಲೆ ನಿಂತಿರುವುದಕ್ಕೆ ಶ್ರೀ ಕುಳಮರ್ವ ಅವರಂಥವರು ಕಾರಣ. ಅವರು ಕೇರಳದ ವಿದ್ಯಾಭ್ಯಾಸ ಇಲಾಖೆಯಲ್ಲಿ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿದ್ದರು.  ಅವರು ಅಧ್ಯಾಪನದ ಜೊತೆಗೆ ಅಲ್ಲಿಯ ಮಾಧ್ಯಮಿಕ ಹಾಗೂ ಪ್ರೌಢ ಶಾಲಾ ತರಗತಿಗಳ ಕನ್ನಡ ಪಠ್ಯಪುಸ್ತಕಗಳ ಹಾಗೂ ಶಿಕ್ಷಕರ ಕೈಪಿಡಿಗಳ  ರಚನೆಯಲ್ಲಿ ತೊಡಗಿಸಿಕೊಂಡಿದ್ದರು. ಮೂರು ದಶಕಗಳಿಗೂ ಸುದೀರ್ಘಕಾಲ ಆ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅನಂತರ ಈ ಕಾರ್ಯಕ್ಕೆ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಈ ಕೆಲಸದ ವೇಳೆ ಆ ಪಠ್ಯಪುಸ್ತಕಗಳಿಗೆ ಪೂರಕವಾಗಿ, ಸಮಗ್ರ ಪುಸ್ತಕಕ್ಕೆ ಸಂಬಂಧಿಸಿದ ಎಲ್ಲಾ ಹೊಸ ಶಬ್ದಗಳನ್ನು ಹೆಕ್ಕಿ ತೆಗೆದು ಅವುಗಳಿಗೆ ಅರ್ಥ ನೀಡಿ ಶಬ್ದಕೋಶವನ್ನು ತಯಾರಿಸಿ ಕೊಡುತ್ತಿದ್ದರು.

ಅವರು ಕಾಲೇಜಿನ ದಿನಗಳಿಂದ ಹವ್ಯಕ - ಕನ್ನಡ ನಿಘಂಟನ್ನು ಮಾಡಬೇಕೆಂಬ ಉತ್ಕಟ ಅಭಿಲಾಷೆಯನ್ನು ಹೊಂದಿದ್ದರು.  ಇದಕ್ಕಾಗಿ  ಅವರು ಹವಿಗನ್ನಡ ಎಂದು ಕರೆಯುವ ಹವ್ಯಕ ಕನ್ನಡದ ಶಬ್ದಗಳ ಸಂಗ್ರಹದಲ್ಲಿ ತೊಡಗಿಕೊಂಡಿದ್ದರು. ಅನೇಕ ಹಿರಿಯರನ್ನು ಸಂಪರ್ಕಿಸಿ ಅವರಿಂದ ಶಬ್ದ ಸಂಗ್ರಹ ಮಾಡಿದ್ದರು. ಕೆಲವು ಸಮಯದಲ್ಲಿ ಈ ಕೆಲಸವು ಮುಂದೆ ಸಾಗದೆ ಕೈಚೆಲ್ಲುವಂತಾದರೂ ಮತ್ತೆ ಅದರಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಹೀಗೆ ಸಂಗ್ರಹ ಮಾಡಿದ ಶಬ್ದಗಳಿಗೆ ಅರ್ಥ ನಿರ್ಧಾರ ಮಾಡಿ, ನಿಘಂಟಿನಲ್ಲಿ ಅನೇಕ ಶಬ್ದಗಳಿಗೆ ಅವು ಪ್ರಯೋಗವಾಗುವ ವಾಕ್ಯದ ಉದಾಹರಣೆಗಳನ್ನು ನೀಡಿದ್ದಾರೆ.


ಇತ್ತೀಚಿನ ದಿನಗಳಲ್ಲಿ ಹವ್ಯಕ ಯುವಕ ಯುವತಿಯರು ತಮ್ಮ ಭಾಷೆಯಲ್ಲಿ ಮಾತನಾಡುವುದನ್ನು ಕಡಿಮೆ ಮಾಡುತ್ತಿದ್ದಾರೆ ಎಂಬ ಮಾತು ಆಗಾಗ ಕೇಳಿ ಬರುತ್ತಿರುತ್ತದೆ. ಇಂಥ ಸಮಯದಲ್ಲಿ ವಿಶಿಷ್ಟ ಹವಿಗನ್ನಡ ಶಬ್ದಗಳು ಮರೆತು ಹೋಗುವುದಕ್ಕೆ ಮುಂಚೆ, ಅವನ್ನು ಅರ್ಥ ಸಹಿತ ದಾಖಲಿಸಿರುವುದು ಅವುಗಳಿಗೆ ಅಮರತ್ವವನ್ನು ತಂದುಕೊಟ್ಟಂತೇ ಸರಿ. ಹವ್ಯಕ ಯುವಜನತೆ ಕೀಳರಿಮೆಯನ್ನು ಬಿಟ್ಟು ತಮ್ಮ ವಿಶಿಷ್ಟ ಹವಿ ನುಡಿಯನ್ನು ಮನೆಗಳಲ್ಲಿ, ಬಂಧು ಮಿತ್ರರೊಡನೆ ಆಡಿ, ನುಡಿದು, ಉಳಿಸಿ ಬೆಳೆಸಬೇಕು. ಅದರ ಹಿರಿಮೆ ಎಂದೂ ಹಿರಿದಾಗಿರುವಂತೆ ಎತ್ತಿ ಹಿಡಿಯಬೇಕು. ಈ ಎಲ್ಲ ಕಾರ್ಯಗಳಿಗೂ ಒಳ್ಳೆಯ ತಳಹದಿಯನ್ನು ನೀಡಲು ಈ ಹವ್ಯಕ - ಕನ್ನಡ ನಿಘಂಟು ಒಳ್ಳೆಯ ಸಾಧನವಾಗುತ್ತದೆ.


ಶ್ರೀ ತಿರುಮಲೇಶ್ ಅವರಂತೆ ಇನ್ನೂ ಅನೇಕರ ಕನ್ನಡದ ಕೃತಿಗಳಲ್ಲಿ ಹವಿಗನ್ನಡ ಶಬ್ದಗಳು ಇಣುಕಿವೆ. ಮುಂದೆ ಆ ಭಾಷೆಯ ಬಗ್ಗೆ ಒಲವಿರುವ ಲೇಖಕರು ಕನ್ನಡದಲ್ಲಿ ಬರೆಯುವಾಗ ಸೂಕ್ತ ಹವಿಗನ್ನಡ ಶಬ್ದಗಳನ್ನು ಉಪಯೋಗಿಸಿ (ಕಂಸಗಳಲ್ಲಿ ಅವುಗಳ ಅರ್ಥವನ್ನು ನೀಡಿ) ಬರೆದರೆ, ಕಾಲಕ್ರಮೇಣ ಅವು ಸರ್ವಮಾನ್ಯ ಕನ್ನಡದ ಶಬ್ದಗಳಾಗಿಬಿಡುತ್ತವೆ. ಇದರಿಂದ ಕನ್ನಡ ಭಾಷೆಯು ಅಷ್ಟು ಬೆಳೆಯುತ್ತದೆ; ಅಷ್ಟು ಶ್ರೀಮಂತವಾಗುತ್ತದೆ. ಈ ಬಗ್ಗೆ ಯುವ ಹವಿಗನ್ನಡ ಬರಹಗಾರರು ದೃಷ್ಟಿ ಹರಿಸಬೇಕು.

ಉದಾಹರಣೆಗೆ ‘ಪದಂಕು / ಪದಂಗು’ ಎಂಬ ಶಬ್ದವನ್ನು ನೋಡಿ. ಇದಕ್ಕೆ ಕೆಲಸವಿಲ್ಲದೆ ಅಡ್ಡಾಡುವುದು, ಪರದಾಡುವುದು ಎಂಬ ಅರ್ಥವನ್ನು ನೀಡಿದ್ದಾರೆ. ‘ಪದಂಕಟೆ’ ಎಂದರೆ ನಿಧಾನವಾಗಿ ಕೆಲಸ ಮಾಡುವ ವ್ಯಕ್ತಿ. ಇವನು ‘ಪದಂಕಟಯ್ಯ’/ ‘ಪದಂಕಟಮ್ಮ’ ಆಗಿ ಕನ್ನಡದಲ್ಲಿ ವಿರಾಜಮಾನನಾಗಬಹುದು.


ಮತ್ತೊಂದು ಶಬ್ದವನ್ನು ನೋಡಿ, ‘ಆಡಕ್ಕಾಡ’. ಇದರರ್ಥ ‘ಅಧಿಕೃತವಲ್ಲದ; ಗಾಳಿ ಸುದ್ದಿ’ ಎಂದು. ಅದನ್ನು ನಾವು ಬಳಸಿಕೊಂಡು  ‘ಇಂದು ವಾಟ್ಸಪ್ಪಿನಲ್ಲಿ ಆಡಕ್ಕಾಡದ್ದೇ ಆಟವಾಗಿ ಹೋಗಿದೆ!’ ಎಂದು ಉಪಯೋಗಿಸಬಹುದಲ್ಲವೇ? ಹೀಗೆ ಕನ್ನಡದ ಜಾಯಮಾನಕ್ಕೆ ಚೆನ್ನಾಗಿ ಹೊಂದುವ ಅನೇಕ ಹವಿಗನ್ನಡ ಶಬ್ದಗಳನ್ನು ಕನ್ನಡದಲ್ಲಿ ಬಳಸಿ ಜನಪ್ರಿಯ ಮಾಡುವ ಹೊಣೆ ಯುವ ಹವಿಗನ್ನಡ ಬರಹಗಾರರ ಮೇಲಿದೆ.

ಈ ಶಬ್ದಕೋಶದಲ್ಲಿ ಸುಮಾರು ಎಂಟುವರೆ ಸಾವಿರ ಹವ್ಯಕ ಶಬ್ದಗಳಿಗೆ ಅರ್ಥವನ್ನು ನೀಡಿದ್ದಾರೆ. ಹವ್ಯಕರು ಪರಸ್ಪರ ಹವಿಗನ್ನಡದಲ್ಲಿ ಮಾತನಾಡುವಾಗ ಕೆಲವು ಶಬ್ದಗಳನ್ನು- ಸಾನುನಾಸಿಕ ಪುಲ್ಲಿಂಗ ಶಬ್ದಗಳನ್ನು, ಅರೆ ಅನುಸ್ವಾರದಿಂದ  ಕೊನೆಗೊಳಿಸಿ ಉಚ್ಚರಿಸುವುದನ್ನು ನಾವು ಗಮನಿಸಬಹುದು. ಈ ನಿಘಂಟಿನಲ್ಲಿ ಅಂಥ ಶಬ್ದಗಳ ಕೊನೆಯ ಅಕ್ಷರದ ಮೇಲೆ ‘°’ ರೀತಿಯ ಸಣ್ಣ ಬಿಂದುವಿನ ಚಿಹ್ನೆಯನ್ನು ನೀಡಿ ಆ ಉಚ್ಚಾರವನ್ನು ಸೂಚಿಸಿದ್ದಾರೆ. ನನ್ನ ಗಮನಕ್ಕೆ ಬಂದ ಇನ್ನೊಂದು ವಿಶೇಷ ಎಂದರೆ ಚ ವರ್ಗದ ಅನುನಾಸಿಕ 'ಞ' ಅಕ್ಷರದಿಂದ ಮೊದಲಾಗುವ ಶಬ್ದಗಳು. ಕನ್ನಡದಲ್ಲಿ ಇಂಥ ಶಬ್ದಗಳು ಇಲ್ಲ. ಇದರ ಜೊತೆಗೆ 'ಞ್ಞ' ಎಂಬ ಒತ್ತಕ್ಷರವು ಹಲವು ಹವಿಗನ್ನಡ ಶಬ್ದಗಳಲ್ಲಿ ಪ್ರಯೋಗವಾಗಿದೆ.


ಹವಿ - ಸವಿ ಕೋಶದ ಮತ್ತೊಂದು ವಿಶೇಷತೆ ಎಂದರೆ ಅದರಲ್ಲಿ ಅನೇಕ ಹವ್ಯಕ ನುಡಿಗಟ್ಟುಗಳನ್ನು ನೀಡಿ ಅದಕ್ಕೆ ಅರ್ಥವನ್ನು ಕೊಟ್ಟಿರುವುದು. ಉದಾಹರಣೆಗೆ ೧) ಅಂತರ್ಲಾಗಹಾಕು;  ೨) ಕರಟಕೆರಸು. ಇವುಗಳ ಅಧ್ಯಯನ ಬಹಳ ಉಪಯೋಗಿ ಎಂದು ನನ್ನ ಭಾವನೆ. ಚರ್ವಿತಚರ್ವಣ, ತೌಡು ಕುಟ್ಟುವುದು ಇವುಗಳಿಗೆ ಸಂವಾದಿಯಾದ ನುಡಿಕಟ್ಟು ಕರಟಕೆರಸು. ತೆಂಗನ್ನು ತುರಿದು ಬರಿದಾಗಿರುವ ಕರಟವನ್ನು ಕೆರೆದರೆ ಏನು ತಾನೆ ಸಿಕ್ಕೀತು? ಇದನ್ನು ಪರಿಣಾಮಕಾರಿಯಾಗಿ ನಾವು ಕನ್ನಡದಲ್ಲಿ ಬಳಸಬಹುದು.

ಈ ಹವಿ - ಸವಿ ನಿಘಂಟಿನಲ್ಲಿ ದಪ್ಪ ಮೊಳೆಯ ಅಕ್ಷರಗಳನ್ನು ಬಳಸಿರುವುದರಿಂದ ಹಿರಿಯರೂ ಸುಲಭವಾಗಿ ಬಳಸಬಹುದು. 510 ಪುಟಗಳ ಈ ಗ್ರಂಥವನ್ನು ಶ್ರೀ ಕುಳಮರ್ವರೇ ಪ್ರಕಟಿಸಿದ್ದಾರೆ. ಹವಿಗನ್ನಡದಲ್ಲಿ ಆಸಕ್ತಿಯಿರುವ ಎಲ್ಲರೂ ಈ ಹವಿ - ಸವಿ ಕೋಶವನ್ನು ತಮ್ಮ ಮನೆಗಳಲ್ಲಿ ಇಟ್ಟುಕೊಂಡು ಉಪಯೋಗಿಸಬೇಕು. 

ಕಾಸರಗೋಡಿನಲ್ಲಿ ನೆಲೆ ನಿಂತು, ಈ ಕಾರ್ಯವನ್ನು ಮಾಡಿರುವ ಶ್ರೀ ವಿ.ಬಿ. ಕುಳಮರ್ವ ಅವರನ್ನು ನಾವೆಲ್ಲರು ಮನಸಾರೆ ಅಭಿನಂದಿಸೋಣವೇ?

ಹವಿ - ಸವಿ ಕೋಶ (ಹವ್ಯಕ - ಕನ್ನಡ ನಿಘಂಟು), 

ಲೇಖಕರು: ಶ್ರೀ ವಿ. ಬಿ. ಕುಳಮರ್ವ 

ಮೊದಲ ಮುದ್ರಣ 2021; ಪುಟಗಳು 510; ಬೆಲೆ: ₹500/-

ಸೌಮ್ಯ ಪ್ರಕಾಶನ, ಕುಳಮರ್ವ “ಶ್ರೀನಿಧಿ' ಭಟ್ ಕಂಪೌಂಡ್ ನಾರಾಯಣಮಂಗಲ,

ಅಂಚೆ: ಕುಂಬ್ಳೆ, ಮಂಜೇಶ್ವರ ತಾಲೂಕು,

ಕಾಸರಗೋಡು ಜಿಲ್ಲೆ. ಕೇರಳ ರಾಜ್ಯ – 671321 

ಮೊಬೈಲ್: 9446088515


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم