ಗೋಕರ್ಣ: ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುವ ದಾನ ಸಾತ್ವಿಕ ದಾನ. ಇದು ಎಲ್ಲ ದಾನಗಳಲ್ಲಿ ಶ್ರೇಷ್ಠ. ಸಮಾಜೋದ್ಧಾರದ ಮಹತ್ಕಾರ್ಯಗಳಿಗೆ ಕೈಲಾದ ನೆರವು ನೀಡುವ ಮೂಲಕ ಪ್ರತಿಯೊಬ್ಬರೂ ದೇಶ ಬೆಳಗುವ ಕಾರ್ಯಕ್ಕೆ ಮುಂದಾಗಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ನಡೆದ ದಾನ-ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು. "ಎಷ್ಟೋ ಮಂದಿ ಸಿರಿವಂತರಿಗೆ ದಾನ ಮಾಡುವ ಮನಸ್ಸು ಇರುವುದಿಲ್ಲ; ದಾನ ಮಾಡುವ ಮನಸ್ಸಿರುವ ಸಾತ್ವಿಕರಿಗೆ ಸಂಪತ್ತು ಇರುವುದಿಲ್ಲ. ಸಂಪತ್ತು ಮತ್ತು ದಾನ ಮಾಡುವ ಮನಸ್ಸು ಇರುವವರು ವಿರಳ. ಇವರು ನಿಜವಾಗಿ ಸಮಾಜದ, ದೇಶದ ಸಂಪತ್ತು. ಮಹತ್ಕಾರ್ಯಗಳಿಗೆ ಸಾಧನವಾಗುವವರನ್ನು ದೇವರೇ ಆರಿಸಿರುತ್ತಾನೆ. ಇಂಥವರು ಸಮಾಜದ ಒಳಿತಿಗೆ ಒದಗಿ ಬರುತ್ತಾರೆ" ಎಂದು ಹೇಳಿದರು.
ದೇಶಕ್ಕೆ ಒಳಿತಾಗುವುದೇ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಧ್ಯೇಯ. ಭಾರತಕ್ಕೆ ವಿಶ್ವಗುರುವಾಗುವ ನಿಟ್ಟಿನಲ್ಲಿ ಇಡೀ ದೇಶವನ್ನೇ ಬದಲಿಸಬಲ್ಲ ಯುವ ಸಂಪತ್ತಿನ ಸೃಷ್ಟಿ ನಮ್ಮ ಗುರಿ. ಚಾಣಕ್ಯ, ಆಚಾರ್ಯ ಶಂಕರರಂಥ ಮಹಾನ್ ವ್ಯಕ್ತಿಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ವಿವಿವಿ ಕಾರ್ಯೋನ್ಮುಖವಾಗಿದ್ದು, ಮುಂದಿನ ದಿನಗಳಲ್ಲಿ ಚಾಣಕ್ಯ- ಚಂದ್ರಗುಪ್ತರಂಥ ಮಹಾನುಭಾವರು ಇಲ್ಲಿ ಆರ್ವೀಭವಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಸಂಪತ್ತು ನಮ್ಮದಲ್ಲ; ಅದು ಸಮಾಜದ ಸತ್ಕಾರ್ಯಗಳಿಗೆ ಮೀಸಲು ಎಂಬ ಭಾವನೆಯಿಂದ ಮಾಡುವ ಸಾತ್ವಿಕ ದಾನ ಸರ್ವಶ್ರೇಷ್ಠವಾದದ್ದು; ದಾನಿಗಳೇ ಇಂಥ ಮಹಾನ್ ಸಂಸ್ಥೆಯ ಮಾಲೀಕರು. ಇಡೀ ಯೋಜನೆಯ ಬೆನ್ನೆಲುಬು, ಮೆದುಳು ಎಲ್ಲವೂ ದಾನಿಗಳೇ. ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವನ್ನು ಸೃಷ್ಟಿಸುವುದು ನಿಜ ಶಿಕ್ಷಣದ ಉದ್ದೇಶ. ಅಲ್ಪ ಅವಧಿಯಲ್ಲೇ ವಿವಿವಿ ಗುರುಕುಲಗಳು ಈ ನಿಟ್ಟಿನಲ್ಲಿ ಭರವಸೆಯ ಹೆಜ್ಜೆ ಇಟ್ಟಿವೆ. ಮುಂದಿನ ವರ್ಷ ಆಧುನಿಕ ಶಿಕ್ಷಣಕ್ಕಿಂತ ಪರಂಪರೆಯ ಶಿಕ್ಷಣವೇ ಮುಖ್ಯವಾದ ಮತ್ತೊಂದು ವಿಶಿಷ್ಟ ಗುರುಕುಲವನ್ನು ಸಮಾಜಕ್ಕೆ ಸಮರ್ಪಿಸಲು ಉದ್ದೇಶಿಸಲಾಗಿದೆ. ಈ ಗುರುಕುಲದಲ್ಲಿ ಸಜ್ಜಾಗುವ ವಿದ್ಯಾರ್ಥಿಗಳು ಭಾರತದ ಯಾವುದಾದರೊಂದು ಪ್ರಾಚೀನ ವಿದ್ಯೆ, ಕಲೆಯ ರಾಯಭಾರಿಗಳಾಗಿ ರೂಪುಗೊಳಿಸಲಾಗುವುದು ಎಂದು ಬಣ್ಣಿಸಿದರು.
ವಿವಿವಿ ವ್ಯವಸ್ಥಾ ಪರಿಷತ್‍ನ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ಕಾರ್ಯದರ್ಶಿ ಗಣೇಶ್ ಜೋಶಿ, ಪದಾಧಿಕಾರಿಗಳಾದ ಶ್ರೀಕಾಂತ್ ಹೆಗಡೆ, ಸತೀಶ್ ಭಟ್ ಕರ್ಕಿ ಉಪಸ್ಥಿತರಿದ್ದರು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಡಿ.ವಿಶ್ವೇಶ್ವರ ಭಟ್, ಸಮಾಜದ ಗಣ್ಯರಾದ ರಾಮಚಂದ್ರ ಭಟ್ ಉಳುವಾನ, ಶಂಕರ ಭಟ್ ಕೊಣಾಜೆ, ಡಾ.ಸುರೇಶ್ ಕೂಡೂರು, ಕೃಷ್ಣ ನಾರಾಯಣ ಮುಳಿಯ ಮತ್ತಿತರರು ಮಾತನಾಡಿದರು.
ಲೋಕವನ್ನೇ ಉಜ್ಜೀವನಗೊಳಿಸುವ ಮಹತ್ತರ ಸಂಕಲ್ಪದೊಂದಿಗೆ ಭಾರತೀಯ ವಿದ್ಯೆ- ಕಲೆಗಳ ಸಂರಕ್ಷಣೆ ಸಂವರ್ಧನೆಗಾಗಿ ಸ್ಥಾಪಿತವಾಗಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿ ಮಹತ್ತರ ಕೊಡುಗೆ ನೀಡಿದ ದಾನಿಗಳನ್ನು ಈ ಸಂದರ್ಭದಲ್ಲಿ ಸ್ವಾಮೀಜಿಯವರು ಸನ್ಮಾನಿಸಿ ಆಶೀರ್ವದಿಸಿದರು.
ದಾನ ಮಾನ ಕಾರ್ಯಕ್ರಮಕ್ಕೆ ಖ್ಯಾತ ಬಾನ್ಸುರಿ ಕಲಾವಿದ ಸುಧೀರ್ ಕಾನಮೂಲೆ ಅವರ ಬಾನ್ಸುರಿ ವಾದನ ವಿಶೇಷ ಮೆರುಗು ನೀಡಿತು. ಶೇಷಾದ್ರಿ ಅಯ್ಯಂಗಾರ್ ಅವರು ತಬಲಾದಲ್ಲಿ ಸಾಥ್ ನೀಡಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ






