ಅಗಲಿದ ಸಾಹಿತಿ ಚಂಪಾ ಅವರಿಗೆ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ನುಡಿನಮನ

Upayuktha
0

 


ಮಂಗಳೂರು: ಸೋಮವಾರ ಮುಂಜಾನೆ ಅಗಲಿದ ಹಿರಿಯ ಕವಿ, ನಾಟಕಕಾರ ಪ್ರೊ. ಚಂದ್ರಶೇಖರ ಪಾಟೀಲ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಎಸ್. ಡಿ. ಎಂ. ಕಾಲೇಜ್ ಸಭಾಭವನದಲ್ಲಿ ಪುಷ್ಪಾರ್ಚನೆಯೊಂದಿಗೆ ನುಡಿನಮನ ಸಲ್ಲಿಸಲಾಯಿತು.


ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಅಗಲಿದ ದಿವ್ಯಾತ್ಮಕ್ಕೆ ಗೌರವ ಸಮರ್ಪಿಸಲಾಯಿತು. ಬಳಿಕ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಎಂ.ಪಿ. ಶ್ರೀನಾಥ್ ಪುಷ್ಪನಮನ ಸಲ್ಲಿಸಿ ಮಾತಾಡಿ, ಕನ್ನಡದ ಕಟ್ಟಾಳು ಆಗಿದ್ದ ಚಂದ್ರಶೇಖರ ಪಾಟೀಲ್ ಅವರು ಚಂಪಾ ಎಂದೇ ಪ್ರಸಿದ್ಧರು. ಇಂಗ್ಲಿಷ್ ಸಾಹಿತ್ಯದ ಪ್ರೊಫೆಸರ್ ಆಗಿದ್ದರೂ ಕನ್ನಡದಲ್ಲಿ ಸಾಹಿತ್ಯ ಬರೆದರು. ಕನ್ನಡದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದುಕೊಂಡು ತುಂಬ ಚೆನ್ನಾಗಿ ಕನ್ನಡದ ಕೆಲಸ ಮಾಡಿದರು ಎಂದರು.  


ವಿಮರ್ಶಕ ಮತ್ತು ಯಕ್ಷಗಾನ ಕಲಾವಿದ ಎಂ. ಪ್ರಭಾಕರ ಜೋಷಿ ಮಾತಾಡಿ ಚಂಪಾ ಅವರು ಪ್ರತಿಭಾವಂತ ಸಾಹಿತಿಯಾಗಿದ್ದರು. ಹೋರಾಟಗಳಲ್ಲಿ ಮುಳುಗದೆ ಸಾಹಿತ್ಯ ಬರೆದಿರುತ್ತಿದ್ದರೆ ಇನ್ನೂ ಉತ್ತಮವಾದ ಸಾಹಿತ್ಯಕೃತಿಗಳನ್ನು ಅವರಿಂದ ನಿರೀಕ್ಷಿಸಬಹುದಾಗಿತ್ತು ಎಂದರು.


ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ಮಾತಾಡಿ ಚಂಪಾ ಅವರು ಕವಿಯಾಗಿ, ನಾಟಕಕಾರರಾಗಿ, ಕನ್ನಡದ ಹೋರಾಟಗಾರರಾಗಿ, ಅಂಕಣಕಾರರಾಗಿ ಕನ್ನಡಕ್ಕಾಗಿ ಬಹುಮುಖೀ ಕೆಲಸ ಮಾಡಿದ್ದಾರೆ. ಸುಮಾರು ಐದು ದಶಕಗಳ ಕಾಲ ನಡೆದ ಅವರ ಸಂಕ್ರಮಣ ಎಂಬ ಸಾಹಿತ್ಯ ಮಾಸಿಕವು ಸಾವಿರಾರು ಹೊಸ ಬರಹಗಾರರನ್ನು ಸೃಷ್ಟಿಸಿದೆ. ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೆನಪಿಸಬಹುದಾದಂತಹ ಸೇವೆ ಸಲ್ಲಿಸಿದ್ದಾರೆ. ವ್ಯಂಗ್ಯ ಮತ್ತು ಕಟಕಿ ಅವರ ಸಾಹಿತ್ಯದ ಪ್ರಮುಖ ಅಂಶ ಎಂದು ಹೇಳಿದರು.  


ಲೇಖಕಿ ಅರುಣಾ ನಾಗರಾಜ್, ನಮ್ಮಭೂಮಿಯ ರಾಮಾಂಜಿ ಉಡುಪಿ ಮೊದಲಾದವರು ಈ ಸಂದರ್ಭದಲ್ಲಿ ಮಾತಾಡಿದರು. ಸಿ. ಎಂ. ಗೋಖಲೆ ಬೆಳ್ತಂಗಡಿ, ಶ್ರೀಮತಿ ಮಂಜುಳಾ ಶೆಟ್ಟಿ, ವಿಜಯಲಕ್ಷ್ಮಿ ಬಿ. ಶೆಟ್ಟಿ, ಚುಟುಕು ಸಾಹಿತ್ಯ ಪರಿಷತ್ತಿನ ಕಾ. ವಿ. ಕೃಷ್ಣದಾಸ್ ಮೊದಲಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top