ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಶ್ರೀಕೃಷ್ಣ ಮಠದಿಂದ ಉತ್ತಮ ಬೆಂಬಲ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Upayuktha
0

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣ ಕಾರ್ಯಕ್ರಮಗಳಿಗೆ ಶ್ರೀಕೃಷ್ಣ ಮಠ ಜಿಲ್ಲಾಡಳಿತಕ್ಕೆ ನೀಡುತ್ತಿರುವ ಬೆಂಬಲ ಹಾಗೂ ಸಹಕಾರದಿಂದ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಹಾಯವಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.


ಅವರು ಇಂದು ಶ್ರೀಕೃಷ್ಣ ಮಠದ ಮಧ್ವ ಮಂಟಪದಲ್ಲಿ ಜಿಲ್ಲೆಯ ವಸಿಗರು ಮತ್ತು ವಲಸಿಗರಿಗೆ ರಾಜಾಂಗಣದಲ್ಲಿ ಅಯೋಜಿಸಿದ್ದ ವಿಶೇಷ ಕೋವಿಡ್ 19 ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.


ಮಠದ ವತಿಯಿಂದ ಕೋವಿಡ್ ಲಾಕ್ಡೌನ್ ಅವಧಿಯಲ್ಲಿ ಜಿಲ್ಲೆಯಲ್ಲಿದ್ದ ವಲಸೆ ಕಾರ್ಮಿರಿಗೆ ಹಾಗೂ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಇದ್ದವರಿಗೆ ಉಚಿತ ಆಹಾರ ಒದಗಿಸಿರುವುದಲ್ಲದೇ, ಜಿಲ್ಲಾಡಳಿತಕ್ಕೆ ಸುಸಜ್ಜಿತ ಆಂಬುಲೆನ್ಸ್ ನೀಡುವ ಮೂಲಕ ಶ್ರೀಕೃಷ್ಣ ಮಠ ಜಿಲ್ಲಾಡಳಿತಕ್ಕೆ ಕೋವಿಡ್ ನಿಯಂತ್ರಣದಲ್ಲಿ ಅತ್ಯುತ್ತಮ ಬೆಂಬಲ ನೀಡಿದ್ದು, ಜಿಲ್ಲೆಯ ಕೋವಿಡ್ ಪೀಡಿತರಿಗೆ ಶ್ರೀಕೃಷ್ಣನ ಪ್ರಸಾದ ಹಾಗೂ ಸ್ವಾಮೀಜಿಗಳ ಆಶೀರ್ವಾದ ಒಟ್ಟಿಗೆ ದೊರೆತಿದೆ. ಅಲ್ಲದೇ ಕೋವಿಡ್ ಸಮುಚಿತ ವರ್ತನೆಗಳ ಪಾಲನೆ ಕುರಿತು ಪೂಜ್ಯ ಶ್ರೀಗಳು ನೀಡಿದ ವೀಡಿಯೋ ಸಂದೇಶ , ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಜಿಲ್ಲೆಯ ಪ್ರತಿ ಮನೆ ಮನೆಗಳಿಗೆ ತಲುಪಿದ್ದು ನಾಗರೀಕರು ಅವುಗಳನ್ನು ಪಾಲನೆ ಮಾಡಿದ್ದು, ಇದರಿಂದ ಜಿಲ್ಲೆಯಲ್ಲಿ ಕೋವಿಡ್ ಹರಡುವಿಕೆಯ ಹೆಚ್ಚಳ ತಡೆಯಲು ಸಾಧ್ಯವಾಗಿದೆ ಎಂದರು.


ಜಿಲ್ಲೆಯಲ್ಲಿ ಪ್ರಸ್ತುತ 94.5% ಪ್ರಥಮ ಡೋಸ್ ಹಾಗೂ 74% ಎರಡನೇ ಡೋಸ್ ಲಸಿಕೆ ನೀಡುವ ಸಾಧನೆ ಆಗಿದ್ದು, ಇಂದು ಜಿಲ್ಲೆಯ ವಲಸಿಗರು ಮತ್ತು ಕೂಲಿ ಕಾರ್ಮಿಕರಿಗಾಗಿ ವಿಶೇಷ ಲಸಿಕಾ ಅಭಿಯಾನ ವನ್ನು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆರಂಭಿಸಲಾಗಿದೆ. ಶ್ರೀಕೃಷ್ಣನ ಆಶೀರ್ವಾದದಿಂದ ಶೀಘ್ರದಲ್ಲಿ ಜಿಲ್ಲೆಯಲ್ಲಿ 100% ಲಸಿಕೆ ಗುರಿ ಸಾಧಿಸಲು ಸಾಧ್ಯವಾಗಲಿದೆ. ಜಿಲ್ಲೆಯ ಪ್ರತಿಯೊಬ್ಬ ನಾಗರೀಕರು 2 ಡೋಸ್ ಲಸಿಕೆ ಪಡೆಯುವುದರ ಮೂಲಕ ಜಿಲ್ಲೆಯನ್ನು ಕೋವಿಡ್19 ಮುಕ್ತವಾಗಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಹೇಳಿದರು.


ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪರ್ಯಾಯ ಅದಮಾರು ಮಠಾಧೀಶರಾದ ವಿಶ್ವಪ್ರಿಯತೀರ್ಥರು ಮಾತನಾಡಿ, ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಭಗವಂತನ ಸೇವೆಯನ್ನು ಪ್ರತಿಮೆ ಮೂಲಕ ಮತ್ತು ಸಮಾಜಸೇವೆಯ ಮೂಲಕ ಮಾಡಬಹುದು. ಸಮಾಜಸೇವೆ ಮೂಲಕ ಭಗವಂತನಿಗೆ ನಾವು ತೆರಿಗೆ ನೀಡಬೇಕು. ಕೋವಿಡ್ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲನೆಯನ್ನು ತಪ್ಪದೇ ಪಾಲಿಸಬೇಕು. ಯಾವುದೇ ರೂಪಾಂತರಿ ವೈರಸ್ ಬಂದರೂ ಸಹ ಕೋವಿಡ್ ಸಮುಚಿತ ವರ್ತನೆಗಳನ್ನು ಪಾಲಿಸುವುದರಿಂದ, ರೋಗ ಮುಕ್ತರಾಗಬಹುದು. ಕೋವಿಡ್ ಲಸಿಕೆ ಪಡೆಯದವರು ತಪ್ಪದೇ 2 ಡೋಸ್ ಲಸಿಕೆ ಪಡೆಯುವುದರ ಮೂಲಕ ಜಿಲ್ಲೆಯನ್ನು ಕೋವಿಡ್ ಮುಕ್ತಗೊಳಿಸಬೇಕು ಎಂದರು.


ಅದಮಾರು ಮಠದ ಕಿರಿಯ ಶ್ರೀಗಳಾದ ಈಶಪ್ರಿಯ ತೀರ್ಥ ಸ್ವಾಮೀಜಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ.ಪ್ರಶಾಂತ ಭಟ್, ಕೋವಿಡ್ ಲಸಿಕಾ ಅಧಿಕಾರಿ ಡಾ.ಎಂ.ಜಿ.ರಾಮ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ಉಡುಪಿ ತಾಲೂಕು ಆರೋಗ್ಯಾಧಿಕಾರಿ ವಾಸುದೇವ ಉಪಾಧ್ಯಾಯ, ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಹೇಮಂತ್, ಕಿರುತೆರೆ ನಟ ಎಂ.ಎಸ್. ಸೇತುರಾಂ ಮತ್ತಿತರರು ಉಪಸ್ಥಿತರಿದ್ದರು.


ಅದಮಾರು ಮಠದ ಮೆನೇಜರ್ ಗೋವಿಂದರಾಜು ಸ್ವಾಗತಿಸಿದರು,ಕೃಷ್ಣರಾಜ ಭಟ್ ನಿರೂಪಿಸಿ, ವಂದಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top