ಆಕಾಶದಲ್ಲಿ ಕಾರ್ತಿಕ ದೀಪೋತ್ಸವ; ಅಗಣಿತ ತಾರೆಗಳ ನಡುವೆ ಶೋಭಾಯಮಾನ ಗುರು, ಶುಕ್ರ, ಶನಿ ಗ್ರಹಗಳು

Upayuktha
0

ಸಂಜೆಯ ಪಶ್ಚಿಮ ಆಕಾಶ ನೋಡಿದಿರಾ… 

ಶುಕ್ರ, ಶನಿ ಹಾಗೂ ಗುರು ಗ್ರಹಗಳು ಆಕಾಶದಲ್ಲಿ ಕಾರ್ತೀಕ ದೀಪೋತ್ಸವ ಆಚರಿಸುತ್ತಿವೆ.


ಈಗ ಮುಸ್ಸಂಜೆ ಪಶ್ಚಿಮ ಆಕಾಶದಲ್ಲಿ ಶುಕ್ರಗ್ರಹ ವಜ್ರದಂತೆ ಹೊಳೆಯುತ್ತಾ ಎಲ್ಲರನ್ನೂ ಆಕರ್ಷಿಸುತ್ತಿದೆ. ಡಿಸೆಂಬರ್ 4, 5, 6 ಹಾಗೂ 7 ರಂದು ಅತೀ ವಿಶೇಷ. ಈ ಹೊಳೆವ ಶುಕ್ರನಿಂದ ಸ್ವಲ್ಪಮೇಲಿನ ಆಕಾಶದಲ್ಲಿ ಶನಿ ಹಾಗೂ ಗುರು ಗ್ರಹಗಳೂ ಕೂಡಿಕೊಂಡಿವೆ. ಈ ವಿದ್ಯಮಾನ ಕೆಲವೇ ದಿನ ಮಾತ್ರ. ಈ ತಿಂಗಳು ಪ್ರತೀ ದಿನ ಪಶ್ಚಿಮ ಆಕಾಶದಲ್ಲಿ ಶುಕ್ರ ಕೆಳ ಕೆಳಗೆ ದಿಗಂತದೆಡೆಗೆ ಬರುತ್ತಾ ಕೊನೇಯ ವಾರದಲ್ಲಿ ಕಂತುತ್ತದೆ. 19 ತಿಂಗಳಿಗೊಮ್ಮೆ ಕಂಡು ಬರುವ ಈ ವಿದ್ಯಮಾನ, ಪುನ: ಪಶ್ಚಿಮ ಆಕಾಶದಲ್ಲಿ ನೋಡಬೇಕಿದ್ದರೆ 19 ತಿಂಗಳು ಕಾಯಬೇಕು. ಸುಮಾರು 584 ದಿನಗಳಲ್ಲಿ ಈ ವಾರ ಮಾತ್ರ ಸಂಜೆ ಶುಕ್ರ ಗ್ರಹ ‘ಬೆಳ್ಳಿ ಚುಕ್ಕಿ’ ನಾನೇ ಎನ್ನುವಂತೆ ಅದ್ಭುತವಾಗಿ ಮಿಂಚುತ್ತದೆ.


ಇದೇನು ಹೀಗೆ?

ಸುಮಾರು 11 ಕೋಟಿ ಕಿಮೀ ದೂರದಲ್ಲಿ ದೀರ್ಘವೃತ್ತಾಕಾರದಲ್ಲಿ ಸೂರ್ಯನ ಸುತ್ತುವ ಈಗ್ರಹ ಸೂರ್ಯನಿಗೆ ಭೂಮಿಗಿಂತ ಹತ್ತಿರ. ಭೂಮಿ ಸೂರ್ಯನಿಂದ ಸುಮಾರು 15 ಕೋಟಿ ಕಿಮೀ ದೂರ. ಎರಡೂ ಗ್ರಹಗಳು ಸೂರ್ಯನಿಗೆ ಈ ದೂರಗಳಲ್ಲಿ ಸುತ್ತವಾಗ ಭೂಮಿಯಿಂದ ಶುಕ್ರ ಗ್ರಹ ಯಾವಾಲೂ ಒಂದೇ ದೂರದಲ್ಲಿರುವುದಿಲ್ಲ. 584 ದಿನಗಳಿಗೊಮ್ಮೆ ಭೂಮಿಗೆ ಅತೀ ಸಮೀಪ ಅಂದರೆ ಸುಮಾರು 4 ಕೋಟಿ ಕಿಮೀ ಬಂದರೆ ಅದೇ ಮತ್ತೆ 9 ತಿಂಗಳ ನಂತರ ಅತೀ ದೂರ ಸುಮಾರು 26 ಕೋಟಿ ಕಿಮೀ ದೂರವಿರುತ್ತದೆ. ಇವುಗಳಿಗೆ ‘ಸುಪೀರಿಯರ್ ಕನ್ಜಂಕ್ಷನ್ ಹಾಗೂ ಇನ್ಫೀರಿಯರ್ ಕನ್ಜಂಕ್ಷನ್‘ ಎನ್ನುತ್ತಾರೆ. ಜನವರಿ 8 ರಂದು ಶುಕ್ರನ ಇನ್ಫೀರಿಯರ್ ಕನ್ಜಂಕ್ಷನ್.


ಇನ್ನೂ ಒಂದು ವಿಶೇಷವೆಂದರೆ ಶುಕ್ರನಿಗೆ ಸ್ವಯಂ ಪ್ರಭೆ ಇಲ್ಲ. ಅದು ನಮಗೆ ಕಾಣುವುದು ಸೂರ್ಯನ ಪ್ರತಿಫಲಿಸಿದ ಬೆಳಕಿನಿಂದ. ಹಾಗಾಗಿ ದೂರವಿದ್ದಾಗ ಚಿಕ್ಕದಾಗಿ ಪೂರ್ತಿ ಹೊಳೆದರೆ ಹತ್ತಿರಬಂದಾಗ ದೊಡ್ಡದಾಗಿ ಕಂಡರೂ ಬರೇ ಕೆಲವಂಶ ಮಾತ್ರ ಹೊಳೆಯುತ್ತದೆ. ಈಗ ಈ ವಾರ ಶುಕ್ರ ಭೂಮಿಯಿಂದ ಸುಮಾರು 6 ಕೋಟಿ ಕಿಮೀ ಇದ್ದರೂ ಅಲ್ಲಿಂದ ಪ್ರತಿಫಲಿಸಿದ ಭಾಗ ನಮಗೆ ಕಾಣುವುದು ಬರೇ 25 ಅಂಶ. ಅಂದರೆ  ತದಿಗೆಯ ಚಂದ್ರನಂತೆ. ಇಷ್ಟೆಲ್ಲ ಇದ್ದರೂ ಈಗ ಹತ್ತರ ವಿರುವುದರಿಂದ ಇಡೀ 584 ದಿನಗಳ ತಿರುಗಾಟದಲ್ಲೇ ಅತ್ಯಂತ ಪ್ರಭೆಯಿಂದ ಫಳ ಫಳ ಹೊಳೆಯುತ್ತ ಎಲ್ಲರನ್ನೂ ಆಕರ್ಷಿಸುವುದು. ಅದೇ ಈ ವಾರದ  ವಿಶೇಷ.


ಶುಕ್ರ ಗ್ರಹ ರಾತ್ರಿ ಇಡೀ ಕಾಣೋದಿಲ್ಲ, ನೆತ್ತಿಯ ಮೇಲೂ ಕಾಣೋದಿಲ್ಲ. ಕೆಲ ಸಮಯ ಸಂಜೆ ಪಶ್ಚಿಮ ಆಕಾಶದಲ್ಲಿ ಹೆಚ್ಚೆಂದರೆ ಎರಡೂವರೆ ಗಂಟೆಗಳ ಕಾಲ. ಹಾಗೆ ಕೆಲ ಸಮಯ ಪೂರ್ವ ಆಕಾಶದಲ್ಲಿ ಬೆಳಗಿನ ಸೂರ್ಯೋದಯಕ್ಕೆ ಮೊದಲು ಕಾಣುತ್ತದೆ.


ಈಗ ಪಶ್ಚಿಮ ಆಕಾಶದಲ್ಲಿ ಸಂಜೆ ಕಾಣುವ ಶುಕ್ರ 2022 ಪೆಬ್ರವರಿಯಿಂದ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಕಾಣುತ್ತದೆ. ದೂರದರ್ಶಕದಲ್ಲಿ ಶುಕ್ರನನ್ನು ನೊಡಲು ಈ ಸಮಯ ಬಹಳ ಪ್ರಶಸ್ತ.

-ಡಾ. ಎ. ಪಿ ಭಟ್ ಉಡುಪಿ. 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top