ಸಂಶೋಧನಾತ್ಮಕ ಹೆಜ್ಜೆಗಳಿಂದ ಬೋಧಕ ವೃತ್ತಿಗೆ ಹೊಸ ಆಯಾಮ: ಡಾ.ಸತೀಶ್ಚಂದ್ರ ಎಸ್

Upayuktha
0

 

ಉಜಿರೆ ಡಿ.18: ಸಂಶೋಧನೆಯ ವಿನೂತನ ಹೆಜ್ಜೆಗಳೊಂದಿಗೆ ಗುರುತಿಸಿಕೊಂಡು ಕಲಿಕೆಯ ಸಾಧ್ಯತೆಗಳನ್ನು ವಿಸ್ತರಿಸುವ ಪ್ರಾಧ್ಯಾಪಕರ ವೃತ್ತಿಪರತೆಯಿಂದ ಶೈಕ್ಷಣಿಕ ಮುನ್ನಡೆಗೆ ಅರ್ಥಪೂರ್ಣ ಆಯಾಮ ದೊರಕುತ್ತದೆ ಎಂದು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಸತೀಶ್ಚಂದ್ರ ಎಸ್ ಅಭಿಪ್ರಾಯಪಟ್ಟರು.


ಎಸ್.ಡಿ.ಎಂ ಕಾಲೇಜಿನ ಅಧ್ಯಾಪಕರ ಸಂಘವು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ಸರ್ಕಾರದ ಪೇಟೆಂಟ್ ಮಾನ್ಯತೆ ಪಡೆದ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಾರಾಯಣ ಹೆಬ್ಬಾರ್ ಮತು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್‌ನ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಡಾ.ಎಂ.ಪಿ.ಶ್ರೀನಾಥ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.


ಪಠ್ಯ ಬೋಧನೆಯ ಜೊತೆಗೆ ಸಂಶೋಧನೆಯಲ್ಲಿ ತೊಡಗಿಸಿಕೊಂಡು ಮಹತ್ತರ ಸಾಧನೆಗೈದಾಗ ಅಂಥ ವೃತ್ತಿಪರ ಬದ್ಧತೆಯ ಪ್ರಾಧ್ಯಾಪಕರು ತಾವು ಕಾರ್ಯನಿರ್ವಹಿಸುತ್ತಿರುವ ಶೈಕ್ಷಣಿಕ ಸಂಸ್ಥೆಗೆ ಮಾತ್ರವಲ್ಲದೇ ಸಾಮಾಜಿಕವಾಗಿಯೂ ಕೊಡುಗೆ ನೀಡಿದಂತಾಗುತ್ತದೆ. ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸುವ ಮನೋಭಾವದಿಂದಲೂ ಅಧ್ಯಾಪನ ವೃತ್ತಿಯನ್ನು ಗಟ್ಟಿಗೊಳಿಸುತ್ತವೆ. ಈ ಬಗೆಯ ವೃತ್ತಿಪರ ಮಾದರಿಗಳು ಶಿಕ್ಷಣ ಕ್ಷೇತ್ರವನ್ನೂ ಬಲಪಡಿಸುತ್ತವೆ ಎಂದು ಹೇಳಿದರು.


ಎಸ್.ಡಿ.ಎಂ ಕಾಲೇಜಿನ ಅಧ್ಯಾಪಕ ಡಾ.ನಾರಾಯಣ ಹೆಬ್ಬಾರ್ ಅವರು ರಸಾಯನಶಾಸ್ತçದಲ್ಲಿ ಕೈಗೊಂಡ ಸಂಶೋಧನೆಗೆ ಆಸ್ಟ್ರೇಲಿಯಾ ಸರ್ಕಾರದ ಪೇಟೆಂಟ್ ಮಾನ್ಯತೆ ದೊರಕಿರುವುದು ಸಂತಸದ ಸಂಗತಿ. ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯುವ ಈ ಬಗೆಯ ಸಂಶೋಧನಾ ಹೆಜ್ಜೆಗಳು ಶೈಕ್ಷಣಿಕ ವಲಯದ ಹಿರಿಮೆಯನ್ನು ಹೆಚ್ಚಿಸುತ್ತವೆ. ಕನ್ನಡ ಸಾಹಿತ್ಯ ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತರಾಗುವ ಮೂಲಕ ಡಾ.ಎಂ.ಪಿ.ಶ್ರೀನಾಥ್ ವಿಶೇಷ ಮನ್ನಣೆ ಪಡೆದಿದ್ದಾರೆ. ಇಬ್ಬರ ಸಾಧನೆ ಪ್ರಶಂಸನೀಯ ಎಂದರು. ಡಾ.ನಾರಾಯಣ ಹೆಬ್ಬಾರ್ ಮತ್ತು ಡಾ.ಎಂ.ಪಿ.ಶ್ರೀನಾಥ್ ಅವರ ಸಾಧನೆಯ ಕುರಿತು ಎಸ್.ಡಿ.ಎಂ ಸಂಸ್ಥೆಯ ಅಧ್ಯಕ್ಷರೂ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳೂ ಆದ ಡಾ.ವೀರೇಂದ್ರ ಹೆಗ್ಗಡೆ ಅವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.


ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಮೊದಲಿನಿಂದಲೂ ವಿಭಿನ್ನವಾದ ಹೆಜ್ಜೆಗುರುತುಗಳನ್ನು ಮೂಡಿಸಿದೆ. ಇದೀಗ ಕಾಲೇಜಿನಲ್ಲಿ ನ್ಯಾಕ್ ಮಾನ್ಯತೆ ಪಡೆಯುವುದಕ್ಕೆ ಬೇಕಾಗುವ ಪೂರಕ ದಾಖಲಾತಿ ಒದಗಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ನ್ಯಾಕ್‌ನ ಎಲ್ಲ ಬಗೆಯ ನಿಯಮಾವಳಿಗಳಿಗೆ ಅನುಗುಣವಾಗಿ ಎಸ್.ಡಿ.ಎಂ ಕಾಲೇಜು ವಿನೂತನ ಪ್ರಯೋಗಗಳನ್ನು ನಡೆಸಿದೆ. ಎಲ್ಲಾ ಅಧ್ಯಾಪಕರು ಈ ವಿನೂತನ ಪ್ರಯೋಗಗಳ ಸಮಗ್ರ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ನ್ಯಾಕ್ ಪರಿಶೀಲನೆಯ ನಂತರ ನಿರೀಕ್ಷಿತ ಮನ್ನಣೆ ಲಭ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅವರು ಜಿಲ್ಲಾದ್ಯಂತ ತಾವು ಹಮ್ಮಿಕೊಳ್ಳಲಿರುವ ಸಾಹಿತ್ಯಕ-ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯಯೋಜನೆಯ ವಿವರ ನೀಡಿದರು. ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಶಾಲಾ-ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಕಾಳಜಿ ಮೂಡಿಸುವ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಕನ್ನಡ-ಸಂಸ್ಕೃತಿಯ ಕುರಿತ ವಿಚಾರಗಳನ್ನು ಹೊಸ ಪೀಳಿಗೆಗೆ ತಲುಪಿಸಲಾಗುವುದು ಎಂದರು.


ಇದೇ ಸಂದರ್ಭದಲ್ಲಿ ಪಿ.ಎಚ್.ಡಿ ಪದವಿ ಪಡೆದ ಅಧ್ಯಾಪಕರು, ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಂಶೋಧನಾ ಮಾರ್ಗದರ್ಶನದ ಮಾನ್ಯತೆ ಪಡೆದ ಹಿರಿಯ ಪ್ರಾಧ್ಯಾಪಕರು ಮತ್ತು ಕಾಲೇಜಿಗೆ ಹೊಸದಾಗಿ ಸೇರ್ಪಡೆಯಾದ ಸಹಾಯಕ ಪ್ರಾಧ್ಯಾಪಕರನ್ನು ಗೌರವಿಸಲಾಯಿತು. ಅಧ್ಯಾಪಕರ ಸಂಘದ ಕಾರ್ಯದರ್ಶಿ ಜಿ.ಆರ್.ಭಟ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ದೀಪಾ ಕಾರ್ಯಕ್ರಮ ನಿರೂಪಿಸಿದರು. ಮಾಲತಿ ವಂದಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top