||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಬಪ್ಪಳಿಗೆಯಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮ

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಬಪ್ಪಳಿಗೆಯಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮ

 

ಉದಾತ್ತವಾದ ವಿಷಯಗಳನ್ನು ಸಮಾಜಕ್ಕೆ ನೀಡಿದವರು ರಾಮ ಭಟ್: ಡಾ.ಮಾಧವ ಭಟ್


ಪುತ್ತೂರು: ವಿಶಾಲವಾಗಿ ಬೆಳೆದ ವೃಕ್ಷ ತನ್ನ ರೆಂಬೆ ಕೊಂಬೆಗಳನ್ನು ಬಾಗಿಸಿ ನಿಲ್ಲುತ್ತದೆ. ಸಜ್ಜನರೂ ಕೂಡ ತಾವು ಬಾಗಿಯೇ ಬೆಳೆಯುತ್ತಾರೆ. ಕೇವಲ ಮೂರ್ಖರು ಹಾಗೂ ದುರ್ಜನರು ಮಾತ್ರ ಒಣಗಿದ ಕಟ್ಟಿಗೆಯಂತೆ ಬಾಗದೆ ಉಳಿಯುತ್ತಾರೆ. ನೇರವಾಗಿ ನಿಂತಿದ್ದೇವೆ ಅನ್ನುವುದೇ ಬದುಕಿನ ಸಾರ್ಥಕ್ಯವಲ್ಲ. ಉರಿಮಜಲು ರಾಮ ಭಟ್ಟರು ಸೌಜನ್ಯಸಹಿತರಾಗಿ, ಜನರ ವಿಶ್ವಾಸದ ಕೇಂದ್ರವಾಗಿ, ಅಸಂಖ್ಯ ಜನರಿಗೆ ನೆರಳಾಗಿ ಬದುಕಿದ ಮಹಾನ್ ವ್ಯಕ್ತಿ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಡಾ.ಎಚ್.ಮಾಧವ ಭಟ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಮಂಗಳವಾರ ನಡೆದ ಉರಿಮಜಲು ರಾಮ ಭಟ್ಟರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.


ಸರ್ವರಿಗೂ ಸಮಬಾಳು - ಸಮಪಾಲು ಅನ್ನುವುದು ಅನೇಕ ಸಂದರ್ಭಗಳಲ್ಲಿ ಕೇವಲ ಬಾಯುಪಚಾರಕ್ಕಷ್ಟೇ ಸೀಮಿತವಾಗುತ್ತಿದೆ. ಆದರೆ ಅದನ್ನು ಅನುಷ್ಟಾನಕ್ಕೆ ತಂದವರು ರಾಮ ಭಟ್ಟರು. ಉದಾತ್ತವಾದ ವಿಷಯಗಳನ್ನು ಸಮಾಜಕ್ಕೆ ನೀಡಿದ ಮಹಾನ್ ಚೇತನ ಅವರು. ಪಕ್ಷ ಶ್ರಮ ಹಾಗೂ ತ್ಯಾಗದ ನೆಲೆಯಲ್ಲಿದ್ದಾಗ ಪಕ್ಷವನ್ನು ಬೆಳೆಸಿದವರು. ಅಧಿಕಾರ ಬರುವ ಹೊತ್ತಿಗೆ ದೂರ ಉಳಿದು ಇತರರಿಗೆ ಅವಕಾಶ ನೀಡಿದವರು. ಇಂತಹ ವ್ಯಕ್ತಿತ್ವಗಳು ದೊರಕುವುದು ಬಹು ಅಪರೂಪ. ತಾನು ಚುನಾವಣೆಗೆ ಸ್ಪರ್ಧಿಸಿದಾಗ ಚುನಾವಣೆ ನಡೆಯುವವವರೆಗೆ ತಾನೇ ಕಟ್ಟಿದ ಸಂಸ್ಥೆಗೆ ಬರುವುದನ್ನು ನಿಲ್ಲಿಸಿದ್ದರು. ಕಾರಣ ಕೇಳಿದಾಗ ತಾನು ಬರುವುದರಿಂದ ಸಂಸ್ಥೆಯಲ್ಲಿರುವವರ ಮೇಲೆ ಮತದಾನದ ಪ್ರಭಾವ ಬೀರಿದಂತಾಗುತ್ತದೆ ಎಂದು ನುಡಿದ ಉತ್ಕೃಷ್ಟ ವ್ಯಕ್ತಿ ಎಂದು ಹೇಳಿದರು.


ರಾಮ ಭಟ್ಟರಲ್ಲಿ ನ್ಯಾಯದ ಮನಃಸ್ಥಿತಿಯಿತ್ತು. ಕಾರುಣ್ಯದ ಅಂತರಂಗವಿತ್ತು. ಆ ಕಾರಣದಿಂದಲೇ ಅವರ ಮನೆಯಲ್ಲೇ ಅನೇಕಾನೇಕ ನ್ಯಾಯತೀರ್ಮಾನಗಳು ಜರಗುತ್ತಿದ್ದವು. ಔಚಿತ್ಯಪ್ರಜ್ಞೆ ಹೊಂದಿದ್ದ ಅವರು ರಾಜಕೀಯದ ಜತೆ ಪಕ್ಷಾತೀತವಾಗಿ ಹಾಗೂ ಧರ್ಮಾತೀತವಾಗಿ ಬೆಳೆದವರು. ಎಷ್ಟು ಸಣ್ಣ ವಿಷಯಗಳು ನಮ್ಮನ್ನು ಚಿಂತಾಕ್ರಾಂತರನ್ನಾಗಿಸುತ್ತವೆಯೋ ಅಷ್ಟರಮಟ್ಟಿಗೆ ನಾವು ಸಣ್ಣವರೆಂದರ್ಥ. ರಾಮ ಭಟ್ಟರು ಸಣ್ಣ ವಿಚಾರಗಳಿಗೆ, ನೋವುಗಳಿಗೆ ಪ್ರತಿಕ್ರಿಯಿಸಿದವರೇ ಅಲ್ಲ. ಅಧಿಕಾರ ಇದ್ದಾಗಲೂ ವಿನಯವಂತಿಕೆಯೊಂದಿಗೆ ಬದುಕಿದ ವ್ಯಕ್ತಿತ್ವ ಅವರದ್ದು ಎಂದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಮತ್ತೋರ್ವ ಸದಸ್ಯ ಕೆ.ಸುರೇಶ ಶೆಟ್ಟಿ ಮಾತನಾಡಿ ರಾಮ ಭಟ್ಟರು ಶ್ರೀರಾಮನಂತೆ ಆದರ್ಶಪುರುಷರಾಗಿ ಬದುಕಿದವರು. ಸತ್ಯ ಹೇಳುವುದಕ್ಕೆ ಹಿಂದು ಮುಂದೆ ನೋಡದ ಮಹಾನ್ ಪುರುಷ. ಯಾರೋ ಮಾಡಿದ ಕಾರ್ಯದ ಆಧಾರದ ಮೇಲೆ ಹೆಸರು ಮಾಡುವ ಪ್ರವೃತ್ತಿ ಅವರಲ್ಲಿರಲಿಲ್ಲ. ಇಂತಹ ರಾಮ ಭಟ್ಟರನ್ನು ಕಳೆದುಕೊಂಡು ಪುತ್ತೂರು ಅನಾಥವಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ರಾಮ ಭಟ್ಟರು ವಿಶಾಲವಾಗಿ ಬೆಳೆದ ಆಲದಮರ. ಆ ಮರದಲ್ಲಿ ಎಷ್ಟೋ ಪಕ್ಷಿಗಳು ಸಂಸಾರ ಕಟ್ಟಿಕೊಂಡಿವೆ. ದುರಂತವೆಂದರೆ ತಮ್ಮ ಜೀವನ ಈ ಆಲದ ಮರದಿಂದಲೇ ಮುಂದುವರಿಯುತ್ತಿದೆ ಎಂಬ ಕಲ್ಪನೆಯೇ ಆ ಪಕ್ಷಿಗಳಿಗಿರುವುದಿಲ್ಲ. ಆದರೆ ಮರ ಧರಾಶಾಯಿಯಾದಾಗ ಅದರ ಪ್ರಾಮುಖ್ಯತೆ ಅನುಭವಕ್ಕೆ ಬರುತ್ತದೆ. ರಾಮ ಭಟ್ಟರು ಎಷ್ಟೋ ಮಂದಿ ಬಡವರ ಪರವಾಗಿ ಫಲಾಪೇಕ್ಷೆಯಿಲ್ಲದೆ ನ್ಯಾಯಾಲಯದಲ್ಲಿ ಹೋರಾಡಿದ ಘಟನೆಗಳಿವೆ. ಅಡ್ಡಹಾದಿಯಲ್ಲಿ ಮತವೇ ಬೇಡ ಎಂದು ಸಾರ್ವಜನಿಕವಾಗಿ ಸಾರಿದ ಅದ್ಭುತ ರಾಜಕಾರಣಿ ಅವರು ಎಂದರು.


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ, ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಶಂಕರನಾರಾಯಣ ಭಟ್, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ ಮತ್ತಿತರರು ಉಪಸ್ಥಿತರಿದ್ದರು. ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕಿ ಸುಚಿತ್ರಾ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. ಅತಿಥಿಗಳು ಹಾಗೂ ವಿದ್ಯಾರ್ಥಿಗಳಿಂದ ರಾಮ ಭಟ್ಟರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು ಹಾಗೂ ಅವರ ಆತ್ಮಕ್ಕೆ ಸದ್ಗತಿ ಕೋರಿ ಮೌನಪ್ರಾರ್ಥನೆ ನಡೆಸಲಾಯಿತು.


ಅಂಬಿಕಾ ಸಂಸ್ಥೆಗಳಿಗೆ ರಜೆ : ಉರಿಮಜಲು ಕೆ.ರಾಮ ಭಟ್ಟ ಅವರ ನಿಧನದ ಪ್ರಯುಕ್ತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಮಂಗಳವಾರ ರಜೆ ಸಾರಲಾಯಿತು.


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post