ಸ್ವಾಭಿಮಾನದ ಊಟ; ಇರಲಿ ಮನೆಗೊಂದು ತರಕಾರಿ ತೋಟ

Upayuktha
0

ನನ್ನ ಸ್ನೇಹಿತರೊಬ್ಬರು ವಾಟ್ಸಪ್ ಗುಂಪಲ್ಲಿ ತನ್ನ ಮನೆಯಲ್ಲಿ ತನ್ನಷ್ಟಕ್ಕೆ ಹುಟ್ಟಿ ಬೆಳೆದ ಬಳ್ಳಿಯೊಂದರಲ್ಲಿ ಬಿಟ್ಟ  ಕುಂಬಳಕಾಯಿಗಳನ್ನು ತುಂಬು ಪ್ರೀತಿಯಿಂದ ಮತ್ತು ಅಭಿಮಾನದಿಂದ ಚಿತ್ರಸಹಿತ ತೋರಿಸಿದರು. ಅವರ ಬರಹದಲ್ಲಿ ಸ್ವಾವಲಂಬನೆ ಮತ್ತು ಸ್ವಾಭಿಮಾನ ತುಳುಕಾಡುತ್ತಿತ್ತು.


ಇದನ್ನು ನೋಡಿದ ನನಗೆ ಹಳೆಯ ಕೆಲವೊಂದು ಘಟನೆಗಳು ನೆನಪಾದವು. ನಮ್ಮ ಮನೆಯಲ್ಲಿ ಮಳೆಗಾಲದಲ್ಲಿ ಮಾತ್ರ ಕೆಲವೊಂದು ತರಕಾರಿಗಳನ್ನು ಬೆಳೆಯುತ್ತಿದ್ದೆವು. ಬೇಸಿಗೆಯಲ್ಲಿ ತೊಂಡೆ, ಬದನೆ ಮತ್ತು ಕೆಲವೊಂದು ಮೆಣಸಿನ ಗಿಡ ಇವನ್ನು ಬಿಟ್ಟರೆ ಬೇರೆ ತರಕಾರಿಗಳು ಕಡಿಮೆ. ಊಟಕ್ಕೆ ಕೆಲಸದವರು ದೊಡ್ಡ ಸಂಖ್ಯೆಯಲ್ಲಿದ್ದುದರಿಂದ ತರಕಾರಿಗಳ ಅಗತ್ಯವೂ ಬಹಳ ಹೆಚ್ಚು. ಪ್ರತಿ ಸೋಮವಾರದ ಪುತ್ತೂರು ಸಂತೆಯೇ ತರಕಾರಿಯ ಅಗತ್ಯವನ್ನು ಪೂರೈಸುತ್ತಿತ್ತು. ಒಂದು ದಿನ ವ್ಯಾಪಾರ ನಡೆಸುತ್ತಿರುವಾಗ ಸಂತೆಯ ವ್ಯಾಪಾರಿ ಎಲೆ ಅಡಿಕೆ ತಿಂದು ತರಕಾರಿ ರಾಶಿಯ ಮೇಲಿಂದ ಪುರ್ರನೇ ಉಗುಳಿ ಬಿಟ್ಟ. ಎಲೆ ಅಡಿಕೆಯ ಕೆಂಬಣ್ಣ ತರಕಾರಿಯ ಮೇಲೆ ಸಣ್ಣಸಣ್ಣ ಚುಕ್ಕೆಗಳ ರೂಪದಲ್ಲಿ ತನ್ನ ಇರುವನ್ನು ತೋರಿಸಿಕೊಟ್ಟಿತು. ಮೈ ರೋಮಗಳೆಲ್ಲ ಒಮ್ಮೆ ನೆಟ್ಟಗಾಗಿ ಮೆಲ್ಲನೆ ಅಲ್ಲಿಂದ ಜಾಗ ಖಾಲಿ ಮಾಡಿದೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಇನ್ನೊಮ್ಮೆ ತರಕಾರಿ ಅಂಗಡಿಯೊಂದಕ್ಕೆ ಹೋಗಿದ್ದೆ. ಅಂಗಡಿಯಾತ ಬಾಟಲಿಯಿಂದ ನೀರು ತೆಗೆದು ಬಾಯಿಗೆ ತುಂಬಿಸಿ ಕುಳು ಕುಳನೆ ಮುಕ್ಕಳಿಸಿ ಪಿಚಕಾರಿಯೊಂದನ್ನು ತರಕಾರಿ ರಾಶಿಯ ಮೇಲಿಂದ ಹಾರಿಸಿಬಿಟ್ಟ. ಮುಂದಿನ ಸ್ಥಿತಿಯನ್ನು ನೀವೇ ಊಹಿಸಿಕೊಳ್ಳಿ.


ಇವು ಎರಡು ಸಂಗತಿಗಳನ್ನು ಮಾತ್ರ ಹಂಚಿಕೊಂಡೆ. ಇಂತಹ ನೂರಾರು ಸಂಗತಿಗಳನ್ನು ಪ್ರತಿಯೊಬ್ಬರು ನೋಡಿರಬಹುದು. ಇವುಗಳನ್ನು ನೋಡಿದ ಮೇಲೆ ನನ್ನ ಮನದೊಳಗೆ ಯೋಚನೆಗಳು ಮಥಿಸಲ್ಪಟ್ಟವು. ಆವಾಗಲೇ ಆರಂಭವಾಗಿದ್ದ ಸಾವಯವ ಚಿಂತನೆಗಳಿಗೆ ಈ ಘಟನೆಗಳು ಮತ್ತಷ್ಟು ಪೂರಕವಾಯಿತು. ರಾಸಾಯನಿಕ ರಹಿತದೊಂದಿಗೆ ಸ್ವಾಭಿಮಾನ ಮತ್ತು ಸ್ವಾವಲಂಬನೆಯೇ ಸಾವಯವದ ಮೂಲತತ್ವಗಳು ಎಂಬ ಅರಿವು ಮತ್ತಷ್ಟು ಜಾಗ್ರತಗೊಂಡಿತು. ಅವರಿವರನ್ನು ದೂಷಿಸಿಕೊಂಡು ತರಕಾರಿ ತರುವುದಕ್ಕಿಂತ ಮನೆಬಳಕೆಗೆ ಬೇಕಾದುದನ್ನು ಬೆಳೆಸುವುದು ದೊಡ್ಡ ಸಾಧನೆ ಎಂಬ ಅರಿವಿನೊಂದಿಗೆ ತರಕಾರಿ ಬೆಳೆಸುವ ಬಗ್ಗೆ ಮುಖಮಾಡಿದೆ. ಸಾವಿರದ ಒಂಬೈನೂರ ತೊಂಬತ್ತನೇ ಇಸವಿಯಿಂದ ನಂತರ ಮನೆಬಳಕೆಗೆ (ನೀರುಳ್ಳಿ ಬೆಳ್ಳುಳ್ಳಿ ಹೊರತುಪಡಿಸಿ) ನಾನು ತರಕಾರಿ ತಂದಿಲ್ಲ.


ಮನೆಯೊಡತಿಯ ಸಹಕಾರ ಇದ್ದರೆ ಇದನ್ನು ಸಾಧಿಸುವಲ್ಲಿ ಅಷ್ಟು ಕಷ್ಟವೇನೂ ಆಗಲಾರದು ಎಂದು ನನ್ನ ಭಾವನೆ. ಬೆಳೆಯುವ ಸುಖ ಮಾತ್ರ ನನಗೆ. ಕುಯ್ಲಿನ ಸಂತೋಷವೆಲ್ಲ ನನ್ನಾಕೆಗೆ. ಸ್ವಾಭಿಮಾನದ ಊಟದ ಸವಿ ಮನೆಯವರಿಗೆಲ್ಲ.


ಮಿತ್ರರೊಬ್ಬರು ಹಂಚಿದ ಕುಂಬಳಕಾಯಿ ಒಂದರಲ್ಲಿಯೇ ಅಷ್ಟೊಂದು ಸಂತೋಷ ಪಡುವಾಗ ಮನೆಬಳಕೆ ಪೂರ್ತಿ ಸ್ವಾವಲಂಬಿಯಾದರೆ ಅದೆಂತ ಸಂತೋಷ ಎಂಬುದನ್ನು ಊಹಿಸಿಕೊಳ್ಳಿ. ಹಂತಹಂತವಾಗಿ ಸ್ವಾವಲಂಬನೆ ಸ್ವಾಭಿಮಾನದ ಕಡೆಗೆ ಮುನ್ನಡೆಯೋಣ.

-ಎ.ಪಿ. ಸದಾಶಿವ ಮರಿಕೆ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top