||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಪ್ಪಳಿಗೆಯ ಅಂಬಿಕಾ ಪದವಿ ಕಾಲೇಜಿನಲ್ಲಿ ಗೀತಾಜಯಂತಿ ಕಾರ್ಯಕ್ರಮ

ಬಪ್ಪಳಿಗೆಯ ಅಂಬಿಕಾ ಪದವಿ ಕಾಲೇಜಿನಲ್ಲಿ ಗೀತಾಜಯಂತಿ ಕಾರ್ಯಕ್ರಮ

 

ಭಗವಂತನನ್ನು ಉದ್ದೀಪನಗೊಳಿಸುವ ಮನಃಸ್ಥಿತಿ ನಮ್ಮಲ್ಲಿರಬೇಕು : ಲಕ್ಷ್ಮೀಶ ತೋಳ್ಪಾಡಿ


ಪುತ್ತೂರು: ಭಗವದ್ಗೀತೆ ಮೂಡಿದ್ದು ಅತ್ಯಂತ ಗಾಢವಾದ ವಿಷಾದವೊಂದರ ನೆಲೆಯಲ್ಲಿ. ತನ್ನವರನ್ನೆಲ್ಲ ಹೇಗೆ ಕೊಲ್ಲಲಿ ಎಂಬ ಭಾವತೀವ್ರತೆಯಲ್ಲಿ ಅರ್ಜುನನಿದ್ದಾಗ ಶ್ರೀಕೃಷ್ಣನಿಂದ ಭಗವದ್ಗೀತೆ ಉಕ್ತವಾಯಿತು. ಹಾಗಾಗಿ ಭಗವಂತ ನಮಗೆ ಸ್ಪಂದಿಸಬೇಕಾದರೆ ಆತನನ್ನು ಉದ್ದೀಪನಗೊಳಿಸುವಂತಹ ತೀವ್ರತರವಾದ ಮನಸ್ಥಿತಿಯ ನಿರ್ಮಾಣ ನಮ್ಮೊಳಗೆ ಆಗಬೇಕಾದದ್ದು ಅತ್ಯಂತ ಅಗತ್ಯ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದ ಸಂಸ್ಕೃತ ಮತ್ತು ತತ್ತ್ವಶಾಸ್ತ್ರ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಲಾದ ಗೀತಾ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಮನಸ್ಸು ಸಜ್ಜುಗೊಳ್ಳದೆ ಭಗವಂತನನ್ನು ಸೆಳೆಯುವುದಕ್ಕೆ ಸಾಧ್ಯವಿಲ್ಲ. ಗೀತೆಯನ್ನು ಕೇಳುವುದಕ್ಕೂ ಉತ್ಕೃಷ್ಟ ಮನಃಸ್ಥಿತಿ ನಿರ್ಮಾಣಗೊಂಡಿರಬೇಕು. ಮನುಷ್ಯ ಜೀವನ್ಮರಣ ಸಂಕಟದಲ್ಲಿದ್ದಾಗಲಷ್ಟೇ ಭಗವಂತ ಒಲಿಯುತ್ತಾನೆ. ಆದರೆ ನಾವಿಂದು ಸುಖದ ಬದುಕಿಗೆ ನಮ್ಮನ್ನು ನಾವು ಒಡ್ಡಿಕೊಳ್ಳುತ್ತಿದ್ದೇವೆ. ಕಷ್ಟವೇ ಬರದಂತೆ ಬದುಕನ್ನು ರೂಪಿಸಿಕೊಳ್ಳುತ್ತಿದ್ದೇವೆ. ಇದರಿಂದಾಗಿ ನಾವು ಭಗವಂತನಿಂದ ದೂರವಾಗುತ್ತಿದ್ದೇವೆ. ಆಧುನಿಕ ಬದುಕು ನಮ್ಮ ಮನಃಸ್ಥಿತಿಯನ್ನೂ ಕಳೆದುಕೊಳ್ಳುವಂತೆ ಮಾಡುತ್ತಿದೆ ಎಂದು ವಿಷಾದಿಸಿದರು.


ಗೀತಾಜಯಂತಿಯ ನೆಲೆಯಲ್ಲಿ ವಿಶೇಷ ಉಪನ್ಯಾಸ ನೀಡಿದ ವೇದಮೂರ್ತಿ ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿ ಕೃಷ್ಣನ ವ್ಯಕ್ತಿತ್ವವನ್ನು ಅರಿಯದಿದ್ದರೆ ಆತನ ಮಾತುಗಳು ಅರ್ಥವಾಗಲಿಕ್ಕಿಲ್ಲ. ವ್ಯಕ್ತಿತ್ವದ ಅರಿವಾದಾಗ ಮಾತ್ರ ಚಿಂತನೆಯ ಉತ್ಕೃಷ್ಟತೆಯನ್ನು ತಿಳಿಯುವುದಕ್ಕೆ ಸಾಧ್ಯವಾದೀತು. ಭಗವದ್ಗೀತೆಯಲ್ಲಿ ಭಾವನಾತ್ಮಕ ವಿಚಾರಗಳಿಗೆ ಆದ್ಯತೆಯಿದೆ. ಗೀತೆಯನ್ನು ವಾಚಿಸುವಾಗ ಅದಮ್ಯವಾದ ಭಗವತ್ ಪ್ರೀತಿ ಇರಬೇಕಾದ್ದು ಅತ್ಯಂತ ಅಗತ್ಯ ಎಂದು ನುಡಿದರು.


ಯಾರು ಎಲ್ಲರಲ್ಲಿ ಭಗವಂತನನ್ನೂ, ದೇವರಲ್ಲಿ ಎಲ್ಲರನ್ನೂ ಕಾಣುತ್ತಾರೆಯೋ ಅಂತಹವರು ಭಗವಂತನಿಗೆ ಪ್ರಿಯರಾಗುತ್ತಾರೆ. ಅವರಿಗೆ ಭಗವಂತ ಗೋಚರಿಸುತ್ತಾನೆ. ಕೃಷ್ಣನನ್ನು ತಿಳಿಯಬೇಕಾದರೆ ಆತನ ಸ್ಥಾನದಲ್ಲಿ ನಮ್ಮನ್ನು ನಾವು ಕಲ್ಪಿಸಿ ಯೋಚಿಸಬೇಕು ಎಂದರಲ್ಲದೆ ವ್ಯಕ್ತಿತ್ವವೊಂದರ ಶ್ರೇಷ್ಟತೆ ಮೌಲ್ಯದಲ್ಲಡಗಿದೆ. ಸಂಪ್ರದಾಯದ ಕವಚದೊಳಗೆ ಮೌಲ್ಯಗಳು ಬೆಳೆದಾಗ ಅದು ಗೌರವಾರ್ಹವೆನಿಸುತ್ತದೆ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಿಂದೂ ಸಂಸ್ಕೃತಿಯ ಆಚಾರ ವಿಚಾರಗಳನ್ನು ನಾವು ಮಾಡಿ ತೋರಿಸಬೇಕಾದ್ದು ಇಂದಿನ ಅಗತ್ಯ. ಆಚರಣೆಯಲ್ಲಿ ತೋರಿಸಿದಾಗ ಕೆಲವು ಸಂಗತಿಗಳಾದರೂ ಮಕ್ಕಳ ಅಂತರಂಗಕ್ಕೆ ಇಳಿಯಬಹುದು. ನಾಳಿನ ಭವಿಷ್ಯವಾದ ಎಳೆಯರಿಗೆ ಸರಿಯಾದ ದಿಕ್ಕನ್ನು ತೋರುವ ಜವಾಬ್ದಾರಿ ಹಿರಿಯರಿಗಿದೆ ಎಂದು ನುಡಿದರು.


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಸದಸ್ಯ ಸುರೇಶ ಶೆಟ್ಟಿ, ಅಂಬಿಕಾ ಪದವಿ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜಗನ್ನಿವಾಸ ರಾವ್, ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ.ಕಾರಂತ ಪೆರಾಜೆ, ಧಾರ್ಮಿಕ ಚಿಂತಕ ವೇದಮೂರ್ತಿ ಕೇಶವ ಭಟ್ಟ ಕೇಕಣಾಜೆ, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯ ಪ್ರಾಂಶುಪಾಲೆ ಮಾಲತಿ ಡಿ ಮತ್ತಿತರರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಅಂಬಿಕಾ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ತಯಾರಿಸಿರುವ 'ಶ್ರೀ ಭಗವಾನ್ ಉವಾಚ' ಎಂಬ ಕೃತಿಯ ಮುಖಪುಟವನ್ನು ಬಿಡುಗಡೆಗೊಳಿಸಲಾಯಿತು. ಹಾಗೆಯೇ ಭಗವದ್ಗೀತೆಯ ಬಗೆಗೆ ಡಾ.ವಿನಾಯಕ ಭಟ್ಟರ ನಿರ್ದೇಶನ ಹಾಗೂ ಕಾಲೇಜಿನ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿಯವರ ಸಂಯೋಜಕತ್ವದಲ್ಲಿ ಪ್ರತಿದಿನ ವಿದ್ಯಾರ್ಥಿ ಮೋಹನ್ ಆಚಾರ್ಯ ಸಿದ್ಧಪಡಿಸುತ್ತಿರುವ 'ಸಾರ್ಥ-ಗೀತಾ-ದೃಶ್ಯ-ಮುದ್ರಿಕೆ' ಯ ಸಂಗ್ರಹವನ್ನು ಲೋಕಾರ್ಪಣೆಗೊಳಿಸಲಾಯಿತು. ಹಾಗೆಯೇ ಗೀತಾ ಜಯಂತಿ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.


ವಿದ್ಯಾರ್ಥಿನಿ ಪಂಚಮಿ ಹಾಗೂ ತಂಡ ಪ್ರಾರ್ಥಿಸಿದರು. ವಿದ್ವಾನ್ ತೇಜಶಂಕರ ಸೋಮಯಾಜಿ ಸ್ವಾಗತಿಸಿದರು. ಡಾ.ವಿನಾಯಕ ಭಟ್ಟ ಗಾಳಿಮನೆ ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ಸಾಯಿಶ್ವೇತ ವಂದಿಸಿ, ವಿದ್ಯಾರ್ಥಿ ಕಾರ್ತಿಕ್ ಕೆದಿಮಾರು ಕಾರ್ಯಕ್ರಮ ನಿರ್ವಹಿಸಿದರು.


'ಗೀತೋಪದೇಶ' ಯಕ್ಷಗಾನ ತಾಳಮದ್ದಳೆ:


ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಗೀತಾಜಯಂತಿ ಪ್ರಯುಕ್ತ ‘ಗೀತೋಪದೇಶ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಅಂಬಿಕಾ ವಿದ್ಯಾಲಯದ ಶಿಕ್ಷಕ ಸತೀಶ್ ಇರ್ದೆ, ಮದ್ದಳೆವಾದನದಲ್ಲಿ ಪಿ.ಜಿ.ಜಗನ್ನಿವಾಸ ರಾವ್ ಹಾಗೂ ಚೆಂಡೆವಾದನದಲ್ಲಿ ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಇಂದ್ರನಾಗಿ ವಿ.ತೇಜಶಂಕರ ಸೋಮಯಾಜಿ, ಕುರುರಾಜನಾಗಿ ರಾಕೇಶ್ ಕುಮಾರ್ ಕಮ್ಮಜೆ, ವಿಷ್ಣುವಾಗಿ ಕೇಶವ ಭಟ್ಟ ಕೇಕಣಾಜೆ, ಕೃಷ್ಣನಾಗಿ ಡಾ.ವಿನಾಯಕ ಭಟ್ಟ ಗಾಳಿಮನೆ, ಅರ್ಜುನನಾಗಿ ನಾ.ಕಾರಂತ ಪೆರಾಜೆ ನಡೆಸಿಕೊಟ್ಟರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post