ಪ್ರತಿ ವರ್ಷ ಅಕ್ಟೋಬರ್ 20 ರಂದು 'ವಿಶ್ವ ಅಸ್ಥಿರಂಧ್ರತೆ ದಿನ' ಎಂದು ಆಚರಣೆ ಮಾಡಿ ಅಸ್ತಿರಂಧ್ರತೆ ರೋಗದ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತದೆ. ಅಸ್ಥಿರಂಧ್ರತೆಯನ್ನು 'ಟೊಳ್ಳು ಮೂಳೆರೋಗ' ಅಥವಾ 'ಮೌನ ರೋಗ' ಎಂದೂ ಕರೆಯುತ್ತಾರೆ. ಯಾವುದೇ ಮುನ್ಸೂಚನೆ ಇಲ್ಲದೆ ಬರುವ ರೋಗವಾಗಿರುವುದರಿಂದ ಮೌನ ರೋಗ ಎಂಬ ಅನ್ವರ್ಥ ಹೆಸರೂ ಅಸ್ಥಿರಂಧ್ರತೆ ರೋಗದ ಜೊತೆಗೆ ತಳಕು ಹಾಕಿಕೊಂಡಿದೆ. ಆಂಗ್ಲಭಾಷೆಯಲ್ಲಿ ಆಸ್ಟಿಯೋ ಪೋರೋಸಿಸ್ ಎಂದು ಕರೆಯಲಾಗುತ್ತದೆ. 2016, 2017 ಮತ್ತು 2018 ರಲ್ಲಿ 'ನಿಮ್ಮ ಎಲುಬು ಪ್ರೀತಿಸಿ, ನಿಮ್ಮ ಭವಿಷ್ಯ ರಕ್ಷಿಸಿ' ಎಂಬ ಘೋಷ ವಾಕ್ಯದೊಂದಿಗೆ, ಈ ಆಚರಣೆ ಮಾಡಲಾಗಿತ್ತು.
2019ರಲ್ಲಿ ಅದುವೇ 'ಅಸ್ಥಿರಂಧ್ರತೆ' ಎಂಬ ಘೋಷವಾಕ್ಯದೊಂದಿಗೆ, ಈ ಆಚರಣೆ ಮಾಡಲಾಗುತ್ತಿದೆ. ಈ ರೋಗದ ಕಾರಣಗಳ ಬಗ್ಗೆ, ತಡೆಯುವ ಬಗ್ಗೆ ಮತ್ತು ರೋಗದಿಂದ ಉಂಟಾಗುವ ತೊಂದರೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. 1996ರಲ್ಲಿ ಇಂಗ್ಲೆಂಡ್ ದೇಶದಲ್ಲಿ ಈ ಆಚರಣೆ ಆರಂಭವಾಗಿತ್ತು. ಸಾಮಾನ್ಯವಾಗಿ ಮಹಿಳೆಯರಲ್ಲಿ ಹೆಚ್ಚು ಕಂಡು ಬರುವ ಈ ರೋಗ, 50 ವರ್ಷ ದಾಟಿದ ಬಳಿಕವೇ ಹೆಚ್ಚಾಗಿ ಕಂಡು ಬರುತ್ತದೆ.
ಏನಿದು ಅಸ್ಥಿರಂಧ್ರತೆ?
ಎಲುಬು ಎನ್ನುವುದು ನಮ್ಮ ದೇಹದ ಅತ್ಯಂತ ಬಲಿಷ್ಟವಾದ ಅಂಗವಾಗಿದ್ದು, ದೇಹಕ್ಕೆ ಶಕ್ತಿ ಮತ್ತು ಸ್ಥಿರತೆಯನ್ನು ನೀಡುತ್ತದೆ. ಈ ಎಲುಬಿನ ಒಳಗೆ ಅಸ್ಥಿಮಜ್ಜೆ ಇರುತ್ತದೆ. ವಯಸ್ಸಾದಂತೆ ಮೂಳೆಯ ಒಳಗಿನ ಕೊಲಾಜೆನ್ ಮತ್ತು ಖನಿಜಾಂಶಗಳ ಸಾಂದ್ರತೆ ಕಡಿಮೆಯಾಗಿ ಮೂಳೆ ತನ್ನ ಗಡಸುತನ ಮತ್ತು ಶಕ್ತಿಯನ್ನು ಕಳೆದುಕೊಳ್ಳುತ್ತದೆ. ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ, ಎಲುಬಿನಿಂದ ಕರಗಿ ಹೋಗಿ ಎಲುಬು ಟೊಳ್ಳಾಗುತ್ತದೆ. ಸಣ್ಣಪುಟ್ಟ ಏಟಿಗೂ ಎಲುಬು ಮುರಿಯುವ ಸಾಧ್ಯತೆ ಇರುತ್ತದೆ. ಇದನ್ನೆ ಟೊಳ್ಳು ಮೂಳೆ ರೋಗ ಎನ್ನುತ್ತಾರೆ. ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ, ರಸದೂತಗಳ ಏರುಪೇರಿನಿಂದಾಗಿ ವೃದ್ಧಾಪ್ಯದಲ್ಲಿ ಎಲುಬು ಸವೆದು ಮುರಿಯುತ್ತದೆ. ಸೊಂಟ, ಮುಂಗೈ, ಬೆನ್ನುಹುರಿಗಳಲ್ಲಿ ಈ ಮುರಿತ ಹೆಚ್ಚು ಕಂಡು ಬರುತ್ತದೆ. ಮುಟ್ಟು ನಿಂತ ಹೆಂಗಸರಲ್ಲಿ ಈ ತೊಂದರೆ ಹೆಚ್ಚು ಕಂಡು ಬರುತ್ತದೆ.
ಕಾರಣಗಳೇನು?
1) ಅತಿಯಾದ ಗರ್ಭನಿರೋಧಕ ಔಷಧಿಗಳ ಬಳಕೆ.
2) ಅತಿಯಾದ ಸ್ಥಿರಾಯ್ಡ್ ಔಷಧಿಗಳ ಬಳಕೆ.
3) ಧೂಮಪಾನ ಮತ್ತು ಮದ್ಯಪಾನ ಮತ್ತು ವ್ಯಾಯಾಮ ರಹಿತ ಜೀವನಶೈಲಿಯಿಂದಲೂ ಅಸ್ಥಿರಂಧ್ರತೆ ಉಂಟಾಗುತ್ತದೆ.
4) ಥೈರಾಯ್ಡ್ ಸಮಸ್ಯೆ ಮತ್ತು ರಸದೂತಗಳ ವೈಪರೀತ್ಯ.
5) ಸಮತೋಲಿತ ಆಹಾರ ತಿನ್ನದಿರುವುದು, ಕಡಿಮೆ ಲವಣಯುಕ್ತ ಆಹಾರ ಸೇವನೆ, ಕ್ಯಾಲ್ಸಿಯಂಯುಕ್ತ ಆಹಾರ ಸೇವಿಸದಿರುವುದು.
6) ಜಾಸ್ತಿ ಹೊತ್ತು ಒಳಾಂಗಣದಲ್ಲಿಯೇ ಜೀವನ ನಡೆಸುವುದು, ಬಿಸಿಲಿಗೆ ಹೋದರೆ ಮೈಬಣ್ಣ ಕಪ್ಪಾಗುತ್ತದೆ ಎಂದು ಹೆದರಿ ಮನೆಯಲ್ಲಿಯೇ ಉಳಿಯುವುದರಿಂದಲೂ ಅಸ್ಥಿರಂಧ್ರತೆ ಉಂಟಾಗಬಹುದಾಗಿದೆ ಸೂರ್ಯನ ಕಿರಣ, 'ವಿಟಮಿನ್ ಡಿ' ಉತ್ಪಾದನೆಗೆ ಅವಶ್ಯಕ. ವಿಟಮಿನ್ 'ಡಿ' ದೇಹದಲ್ಲಿ ಕ್ಯಾಲ್ಸಿಯಂ ಸೆಳೆದುಕೊಳ್ಳಲು ಅತೀ ಅಗತ್ಯ.
ರೋಗದ ಲಕ್ಷಣಗಳು:
ಮೂಳೆಗಳಲ್ಲಿ ನೋವು, ಮಾಂಸಖಂಡಗಳಲ್ಲಿ ನೋವು, ಸ್ನಾಯುಗಳಲ್ಲಿ ಸೆಳೆತ, ಮೂಳೆ ಮುರಿತ, ಬೆನ್ನು ನೋವು, ಸೊಂಟನೋವು ಚಲನವಲನಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ.
ಪತ್ತೆ ಹಚ್ಚುವುದು ಹೇಗೆ?
ಎಲುಬಿನ ಖನಿಜ ಸಾಂದ್ರತೆ ಪರೀಕ್ಷೆ ಅಥವಾ ಬೋನ್ ಡೆನ್ಸಿಸೋಮೆಟ್ರಿ ಪರೀಕ್ಷೆ ಮುಖಾಂತರ ಎಲುಬಿನ ಗಡಸುತನ ಮತ್ತು ಖನಿಜದ ಸಾಂದ್ರತೆಯನ್ನು ತಿಳಿಯಲಾಗುತ್ತದೆ. ಇದೊಂದು ಸರಳ ಪರೀಕ್ಷೆಯಾಗಿದ್ದು, ಯಾವುದೇ ವಿಶೇಷ ತಯಾರಿ ಅಗತ್ಯವಿಲ್ಲ. ಪರೀಕ್ಷೆ ನಡೆಸುವ 24 ಘಂಟೆಗಳ ಮೊದಲು ಕ್ಯಾಲ್ಸಿಯಂ ಮಾತ್ರೆ ಸೇವಿಸಬಾರದು. ಗರ್ಭಿಣಿಯರಲ್ಲಿ ಈ ಪರೀಕ್ಷೆ ಮಾಡಿಸಬಾರದು. ಅದೇ ರೀತಿ 'ಡೆಕ್ಸಾ ಸ್ಕ್ಯಾನ್' ಪರೀಕ್ಷೆ ಮುಖಾಂತರ ಎಲುಬಿನ ಸಾಂದ್ರತೆಯನ್ನು ಅತ್ಯಂತ ನಿಖರವಾಗಿ ಪತ್ತೆ ಹಚ್ಚಲಾಗುತ್ತದೆ.
ತಡೆಗಟ್ಟುವುದು ಹೇಗೆ?
1) ನಿಯಮಿತವಾಗಿ ದೈಹಿಕ ವ್ಯಾಯಾಮ ಮಾಡಬೇಕು, ಬಿರುಸು ನಡಿಗೆ, ಸೈಕ್ಲಿಂಗ್, ಸ್ವಿಮ್ಮಿಂಗ್ ಮಾಡತಕ್ಕದು.
2) ವೈದ್ಯರ ಸಲಹೆ ಇಲ್ಲದೆ ಗರ್ಭನಿರೋಧಕ ಔಷಧಿ, ನೋವು ನಿವಾರಕ ಔಷಧಿ ಮತ್ತು ಸ್ಥಿರಾಯ್ಡ್ ಬಳಕೆ ಮಾಡಲೇ ಬಾರದು.
3) ಧೂಮಪಾನ, ಮದ್ಯಪಾನ ಸಂಪೂರ್ಣವಾಗಿ ವರ್ಜಿಸಬೇಕು.
4) 50 ವರ್ಷದ ಬಳಿಕ ಋತುಚಕ್ರ ನಿಂತ ಮಹಿಳೆಯರು ಮತ್ತು ಪುರುಷರು ವೈದ್ಯರ ಸಲಹೆಯಂತೆ ಕ್ಯಾಲ್ಸಿಯಂ ಸೇವನೆ ಮಾಡತಕ್ಕದು.
5) ದಿನದಲ್ಲಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಸೂರ್ಯನ ತಿಳಿ ಬಿಸಿಲಿಗೆ ಮೈಯೊಡ್ಡತಕ್ಕದ್ದು.
6) ಕ್ಯಾಲ್ಸಿಯಂ ಹೇರಳವಾಗಿರುವ ಆಹಾರವನ್ನು ಹೆಚ್ಚು ಸೇವಿಸಬೇಕು. ಸಮತೋಲಿತ ಆಹಾರ ಯಾವತ್ತೂ ಸೇವಿಸಬೇಕು.
ಕೊನೆ ಮಾತು:
ಅಸ್ಥಿರಂಧ್ರತೆ ನಮಗರಿವಿಲ್ಲದಂತೆಯೇ ಬರುವ ರೋಗವಾಗಿದ್ದು, ಮೂಳೆ ಕ್ಷಯ, ಮೂಳೆ ರೋಗ, ಅಸ್ಥಿರಂಧ್ರತೆ, ಮೌನ ರೋಗ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುವ ಬಹಳ ಸುಲಭವಾಗಿ ತಡೆಗಟ್ಟಬಹುದಾದ ರೋಗ ಇದಾಗಿರುತ್ತದೆ. ನಿಯಮಿತ ವ್ಯಾಯಾಮ, ಪೋಷಕಾಂಶಯುಕ್ತ ಆಹಾರ ಸೇವನೆ, ಧೂಮಪಾನ ತ್ಯಜಿಸುವಿಕೆ ಮತ್ತು ಆರೋಗ್ಯಪೂರ್ಣ ಜೀವನ ಶೈಲಿಯಿಂದ ಈ ರೋಗ ನಮ್ಮ ಬಳಿ ಸುಳಿಯದಂತೆ ಮಾಡಬಹುದಾಗಿದೆ. ಅದರಲ್ಲಿಯೇ ಸಮಾಜದ ಹಿತ ಅಡಗಿದೆ.
✍ಡಾ. ಮುರಲೀ ಮೋಹನ ಚೂಂತಾರು
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ