ಮೂಡುಬಿದಿರೆ: ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಮಂಗಳೂರು ಹಾಗೂ ಆಳ್ವಾಸ್ ಕಾಲೇಜಿನ ಮಾನವಿಕ ವಿಭಾಗದ ವತಿಯಿಂದ ಮುಲ್ಕಿ ಮೂಡುಬಿದಿರೆ ವಲಯ ಮಟ್ಟದ ಭಾಷಣ ಸ್ಪರ್ಧೆಯು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು.
ರಾಷ್ಟ್ರಭಕ್ತಿಯ ಕುರಿತು ಭಾಷಣ, ಬರಹ, ಘೋಷಣೆಗಳನ್ನು ನಾವು ಕೇಳುತ್ತೇವೆ. ಆದರೆ ರಾಷ್ಟ್ರಪ್ರೇಮವು ಸಣ್ಣ ಪುಟ್ಟ ಚಟುವಟಿಕೆಗಳ ಮೂಲಕ ಪ್ರಾರಂಭ ಆಗಬೇಕು. ರಾಷ್ಟ್ರಭಕ್ತಿಯನ್ನು ಕಟ್ಟಲು ಚಟುವಟಿಕೆಗಳೇ ಆಧಾರ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ರಘುವೀರ್ ಸೂಟರ್‌ಪೇಟೆ, ಹೊಸ ಹೊಸ ಚಿಂತನೆಗಳು ಯುವಕರಲ್ಲಿ ಮೂಡಲು ಸಾಧ್ಯ. ಇಂತಹ ಸ್ಪರ್ಧೆ, ಕಾರ್ಯಕ್ರಮಗಳನ್ನು ನಡೆಸಿದಾಗ ಯುವಕರಿಗೆ ತಮ್ಮ ಯೋಚನೆಗಳನ್ನು ಪ್ರಸ್ತುತಪಡಿಸಲು ಸಾಧ್ಯವಾಗುತ್ತದೆ. ಸ್ಪರ್ಧೆಗಳನ್ನು ಕೇವಲ ಗೆಲ್ಲುವ ಉದ್ದೇಶದಿಂದ ಭಾಗವಹಿಸದೇ, ವಿವಿಧ ವಿಚಾರಗಳನ್ನು ಕಲೆಹಾಕಲು, ರಾಷ್ಟ್ರಕಾರ್ಯಕ್ಕೆ ಉತ್ತಮ ಅಡಿಪಾಯಗಳನ್ನು ಹಾಕಲು ಬಳಕೆಯಾಗಬೇಕು ಎಂದರು.
ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಎಲ್ಲರೂ ರಾಷ್ಟ್ರಭಕ್ತರಾದಾಗ ಹಲವು ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗುತ್ತದೆ. ರಾಷ್ಟ್ರಪ್ರೇಮ ಇಲ್ಲದಿದ್ದಾಗ ಮಾತ್ರ ದೇಶ ವಿರೋಧಿ ಚಟುವಟಿಕೆಗಳು, ಭಯೋತ್ಪಾದನೆ ಹೆಚ್ಚಾಗುತ್ತದೆ ಎಂದರು.
ಸಬ್ಕಾ ಸಾತ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್ ವಿಚಾರದ ಕುರಿತು ನಡೆದ ಭಾಷಣ ಸ್ಪರ್ಧೆಯಲ್ಲಿ 12 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಲ್ಕಿ ಹಾಗೂ ಮೂಡುಬಿದಿರೆ ವಲಯದಿಂದ ತಲಾ 3 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸಂದರ್ಭ ಆಳ್ವಾಸ್ ಕಾಲೇಜಿನ ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ. ಎಸ್. ಉಪಸ್ಥಿತರಿದ್ದರು. ವಿದ್ಯಾರ್ಥಿ ಇಬ್ರಾಹಿಂ ಖಲೀಲ್ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಪ್ರಿಯಾಂಕ ಸ್ವಾಗತಿಸಿ, ರಸಿಯಾ ವಂದಿಸಿದರು. ವಿದ್ಯಾರ್ಥಿನಿ ರೆಶೆಲ್ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.
ಫಲಿತಾಂಶ
ಮುಲ್ಕಿ ವಲಯ
ಪ್ರಥಮ್ ಶೆಟ್ಟಿ, ಪೊಂಪೈ ಕಾಲೇಜು, ಕಿನ್ನಿಗೋಳಿ
ಸಿಂಚನಾ, ಎಸ್‌ಡಿಪಿಟಿ ಪ್ರಥಮ ದರ್ಜೆ ಕಾಲೇಜು, ಕಟೀಲು
ಚೋಂದಮ್ಮಾ, ಎಸ್‌ಡಿಪಿಟಿ ಪ್ರಥಮ ದರ್ಜೆ ಕಾಲೇಜು, ಕಟೀಲು
ಮೂಡುಬಿದಿರೆ ವಲಯ
ತಪಸ್ವಿನಿ, ಆಳ್ವಾಸ್ ಫಿಸಿಯೋಥೆರಪಿ ಕಾಲೇಜು
ಧರ್ಮಿತಾ, ಆಳ್ವಾಸ್ ಫಿಸಿಯೋಥೆರಪಿ ಕಾಲೇಜು
ರೆಶೆಲ್ ಫೆರ್ನಾಂಡೀಸ್, ಆಳ್ವಾಸ್ ಪದವಿ ಕಾಲೇಜು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ