ಮನುಷ್ಯ ಎಂದ ಮೇಲೆ ಅನೇಕ ವಿಚಾರಗಳಲ್ಲಿ ಆಸಕ್ತಿ, ಅಭಿರುಚಿ ಇಟ್ಟುಕೊಂಡಿರುತ್ತಾನೆ. ಬದಲಾವಣೆ ಬಯಸುತ್ತಿರುತ್ತಾನೆ. ಆದರೆ ವಯಸ್ಸಿಗೆ ಸಹಜವಾದ ಬದಲಾವಣೆಯನ್ನು ಎಲ್ಲರೂ ಸ್ವೀಕರಿಸುತ್ತಾರೆ. ಇಲ್ಲವಾದಲ್ಲಿ ಅದು ಕ್ಲೀಷೆ ಎನಿಸುತ್ತದೆ.
ನಾವು ಚಿಕ್ಕವರಿರುವಾಗ ಇನ್ನೊಬ್ಬನ ಬಳಿ ಇರುವ ಆಟದ ಸಾಮಾನಿನ ಬಗ್ಗೆ ಮಾತಾಡ್ತೇವೆ, ದಾರಿಯಲ್ಲಿ ಹೋಗುವಾಗ ಸಿಕ್ಕ ಅಂಗಡಿಗಳಲ್ಲಿ ಇದ್ದ ತಿಂಡಿ ತಿನಿಸುಗಳ ಬಗ್ಗೆ ಮಾತಾಡ್ತಿದ್ದೆವು. ಸಿಕ್ಕ ಸಣ್ಣ ಪುಟ್ಟ ಬಹುಮಾನಗಳ ಬಗ್ಗೆ ಸಂಭ್ರಮಿಸುತ್ತಿದ್ದೆವು.
ಕಾಲ ಬದಲಾಯಿತು ನೋಡಿ, ಕಾಣದ ರೋಗದ ಪರಿಚಯ ಆಯಿತು ನೋಡಿ, ಸಂಬಂಧವೇ ಹಾಳಾದವು ನೋಡಿ. ಸಣ್ಣದ್ರಲ್ಲೇ ಸಂಭ್ರಮಿಸುತ್ತಿದ್ದ ಜಗತ್ತು ಆಸೆಗಳ ಮಹಲನ್ನೇ ಕಟ್ಟಿ ಬಿಟ್ಟಿತು. ಎಲ್ಲವೂ ಒತ್ತಟ್ಟಿಗಿರಲಿ ಆನ್ಲೈನ್ ಕ್ಲಾಸ್ ಎಂಬ ನೆವನಕ್ಕೆ ಮಕ್ಕಳ ಕೈಗೆ ಮೊಬೈಲ್ ಬಂತು ನೋಡಿ ಅವರಲ್ಲಿದ್ದ ಮುಗ್ಧತೆಯೇ ಹೊರಟು ಹೋಯಿತು.
ಸಂಜೆಯಾದರೆ ಸಾಕು ಮೈದಾನದ ಮಣ್ಣಲ್ಲಿ ಜಗವನ್ನೇ ಮರೆಯುತ್ತಿದ್ದ ಮಕ್ಕಳು ಇಂದು ಅದೇ ಮೈದಾನದಲ್ಲಿ ದೊಡ್ಡವರಂತೆ ವಾಕಿಂಗ್ ಮಾತ್ರ ಮಾಡುವುದ್ರಲ್ಲಿ ಬ್ಯುಸಿಯಾಗಿದ್ದಾರೆ. ಮೊಬೈಲ್ ಎಂಬ ಮಾಯಾಪ್ರಪಂಚದ ದಾಸರಾಗಿ ತಮ್ಮ ಮುಗ್ಧತೆಯನ್ನು ಕಳೆದುಕೊಂಡಿದ್ದಾರೆ. ಚಿಕ್ಕ ಮಕ್ಕಳಲ್ಲೇ ಈಗ ನಾವು ಮೆಚೂರ್ಡ್ ಬಿಹೇವಿಯರ್ ನ್ನು ಗಮನಿಸಬಹುದು.
ಇವೆಲ್ಲ ಬದಲಾವಣೆಯನ್ನು ನೋಡುವಾಗ ನಮ್ಮ ಬಾಲ್ಯವೇ ಒಳ್ಳೆದಿತ್ತು ಅನಿಸೋದು, ಬಡತನವಿದ್ದರೂ , ಅದೇನೇ ಕಷ್ಟವಿದ್ದರೂ ಬಾಲ್ಯವನ್ನು ಖುಷಿಯಾಗಿ ಸಂಭ್ರಮಿಸಿದ ಶ್ರೀಮಂತರ ಪಟ್ಟಿಯಲ್ಲಿ ನಮಗೂ ಸ್ಥಾನವಿದೆ ಎಂದರೆ ಅದೂ ಖುಷಿ ತಾನೇ.....?
- ಅರ್ಪಿತಾ ಕುಂದರ್