ಕಥೆ: ಕೆಸರಲ್ಲಿ ಅರಳಿದ ಕುಸುಮ

Arpitha
0
"ಕುಸುಮ" ಎಂಬ ಹುಡುಗಿ ತುಂಬಾ ಮುಗ್ಧೆ. ಹೆಸರೇ ಹೇಳುವಂತೆ ಹೂವಿನ ಹಾಗೆ ಅರಳುತ್ತಿರುವ ಬಾಲೆ. ತಾನು ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲ. ಆದರೆ ತಾನು ಬೆಂಕಿಯಲ್ಲಿ ಅರಳುತ್ತಿರುವ ಸುಂದರ ಹೂವು. ಬದುಕಿನ ಏರುಪೇರುಗಳ ಪಯಣವನ್ನು ಭಾವನಮುಕ್ತಳಾಗಿ ಹಂಚಿಕೊಳ್ಳುವ ಪರಿಯೇ ವಿಭಿನ್ನ.

ಹೌದು. ಕುಸುಮ ತಾಯಿಯನ್ನು ಕಳೆದುಕೊಂಡ ಹೈಸ್ಕೂಲು ಹುಡುಗಿ. ತಂದೆ ಕುಡುಕ. ಹಗಲು ರಾತ್ರಿಯ ಪರಿವೇ ಇಲ್ಲದೆ ಇಪ್ಪತ್ನಾಲ್ಕು ಗಂಟೆ ಕುಡಿಯುತ್ತಾ ಮಗಳು ಮಾಡಿಟ್ಟ ಅಡಿಗೆಯನ್ನು ಉಣ್ಣುತ್ತಾ ಜೀವಿಸುತ್ತಿರುವ ಮನುಷ್ಯ. ಪ್ರತಿ ದಿನ ಮನೆಯ ಎಲ್ಲಾ ಕೆಲಸವನ್ನು ನಿಭಾಯಿಸಿ ತಂದೆ ನೀಡುವ ಶಿಕ್ಷೆಯನ್ನೂ ಅನುಭವಿಸುತ್ತಾ ಕೊರತೆಯನ್ನೇ ಸವಾಲಾಗಿ ಸ್ವೀಕರಿಸುವ ಈ ಹುಡುಗಿಗೆ ಅಂದು ಮತ್ತೊಂದು ಸೋಲು ಕಾದಿತ್ತು. ಸಂಜೆ ಶಾಲೆ ಮುಗಿಸಿ ಮನೆಗೆ ಬಂದು ತಿಳಿದ ಮಟ್ಟಿಗೆ ಅಡುಗೆ ಮಾಡುತ್ತಾ ಕುಡುಕ ತಂದೆಯ ಆಗಮನಕ್ಕಾಗಿ ಕಾಯುತ್ತಾ ಬರೆಯುತ್ತಾ ಕೂತಿದ್ದಳು.


ರಾತ್ರಿ ಹನ್ನೊಂದರ ಸುಮಾರಿಗೆ ಸಂಪೂರ್ಣ ಅಮಲಲ್ಲಿದ್ದ ಈತ ಮನೆಯ ಬಾಗಿಲನ್ನು ಪ್ರವೇಶಿಸುತ್ತಿದ್ದಂತೆ ಮಗಳು ಬರೆಯುತ್ತಿರುವುದನ್ನು ಕಂಡು ಹೌಹಾರಿದ. ಕುಡಿದು ಮತ್ತಲ್ಲಿದ್ದ ವ್ಯಕ್ತಿಗೆ ಬೈಯ್ಯಲು ವಸ್ತು ವಿಷಯ ಬೇಕೆ? ಸುಖಾಸುಮ್ಮನೆ ಆತ ಮಗಳ ಜುಟ್ಟು ಹಿಡಿದು "ನೋಡು ಶಾಲೆಗೆ ಹೋಗಿ ಮಾಡೋದೇನೂ ಇಲ್ಲ. ಮನೆಯಲ್ಲಿದ್ದು ಅಡುಗೆ ಮಾಡುತ್ತಾ ಕೂತರೆ ಸಾಕು. ಹಾಗೆಯೇ ನಿನ್ನಮ್ಮನ ಸ್ಥಾನನಾ ಹೆಂಡತಿಯಾಗಿ ತುಂಬುತ್ತೀಯಾದರೂ ನಾನು ಸಿದ್ಧ. " ಎಂದು ಹೇಳುತ್ತಾ ಹತ್ತಿರ ಬಂದ. ಕುಡುಕ ತಂದೆ ಕಾಮುಕನಾಗಿ ವರ್ತಿಸುವುದನ್ನು ಕಂಡು ಬಲವಿಲ್ಲದ ಈತ ಬಲಭೀಮನಂತೆ ಮಾತನಾಡುವುದನ್ನೇ ಅಸ್ತ್ರವಾಗಿಸಿಕೊಂಡ ಕುಸುಮ ಲಗುಬಗೆಯಿಂದ ಪುಸ್ತಕವನ್ನು ಬ್ಯಾಗಿಗೆ ತುಂಬಿಸಿ ಆ ಮಧ್ಯರಾತ್ರಿ  ಏದುಸಿರು ಬಿಡುತ್ತಾ ಓಡುತ್ತಾಳೆ.  ನಿರ್ದಿಷ್ಟ ಸ್ಥಳ ತಲುಪಲು ಗೊತ್ತಿಲ್ಲದ ಬಸ್ಸಿನ ಸ್ಥಿತಿಯಂತೆ ಆಕೆಯೂ ಗೊತ್ತು ಪರಿಚಯವಿಲ್ಲದ ಜಾಗದಲ್ಲಿ ತನ್ನ ಬ್ಯಾಗನ್ನು ಹಿಡಿದುಕೊಂಡು ಕಣ್ಣೀರಿಡುತ್ತಾ ಓಡುತ್ತಾಳೆ.  

ಓಡುತ್ತಾ ಸಾಗಿ ಒಂದು ಬ್ರಿಡ್ಜನ್ನು ದಾಟಿ ಮುಂದೆ ನಡೆಯಬೇಕಾದರೆ ಅಲ್ಲಿ ಒಂದು ವೃದ್ಧ ಮಹಿಳೆ ಸಣ್ಣ ಜಾಗದಲ್ಲಿ ಮಲಗಿಕೊಂಡಿರುತ್ತಾಳೆ. ಇವಳೂ ಅಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮುಂಜಾವ ಧರಿಸಿದ್ದ ವಸ್ತ್ರದಲ್ಲಿಯೇ ಶಾಲೆಗೆ ಬರುತ್ತಾಳೆ. ಆಕೆಯನ್ನು ವಿಚಾರಿಸಿದ ಶಾಲಾ ಮುಖ್ಯೋಪಾಧ್ಯಾಯರಿಗೆ ತನ್ನ ನಡೆದ ಘಟನೆಯನ್ನು ವಿವರಿಸುತ್ತಾ "ಸರ್ ನನಗೆ ತಂದೆ ಮನೆ ಏನೂ ಬೇಡ. ಆದರೆ ವಿದ್ಯಾಭ್ಯಾಸ ಮಾತ್ರ ಎಂದೂ ನಿಲ್ಲಿಸಲ್ಲ. ಓದಿ ದೊಡ್ಡ ವ್ಯಕ್ತಿಯಾಗಬೇಕೆಂಬ ನನ್ನ ತಾಯಿ ಆಸೆಗೆ ತಣ್ಣೀರೆರಚಲಾರೆ" ಎಂದು ಹೇಳಿ ಕಣ್ತುಂಬಿಕೊಂಡಳು.

ಓದಿನ ಬಗ್ಗೆ ಇವಳಿಗಿರುವ ಆಸಕ್ತಿಯನ್ನು ನೋಡಿ ಮುಖ್ಯೋಪಾಧ್ಯಾಯರೇ ಅವಳನ್ನು ಬೆಳೆಸಿ ಶಿಕ್ಷಣವನ್ನು ನೀಡುತ್ತಾರೆ. ಮುಂದೆ ಆಕೆ ಪದವೀಧರಳಾಗಿ ಉನ್ನತ ಉದ್ಯೋಗವನ್ನು ದಕ್ಕಿಸಿಕೊಳ್ಳುತ್ತಾಳೆ.  

ಈ ಎಲ್ಲಾ ಆಗಿ ಹೋದ ತನ್ನ ವಾಸ್ತವ ಕಥೆಯನ್ನು ತನ್ನದೇ ಮಾತಲ್ಲಿ ವಿವರಿಸಿದ ಕುಸುಮ ಕೆನ್ನೆ ಮೇಲಿನ ಕಣ್ಣೀರ ಒರೆಸುತ್ತಾ ಹೇಳಿದಿಷ್ಟೆ. "ನಾನು ಕೆಸರಿನಲಿ ಅರಳಿದ ಸುಮ. ಕೆಸರಲ್ಲಿ ಅರಳಿದ ಕುಸುಮ. ಸೌಗಂಧ ಬೀರಬೇಕೆಂಬ ಆಸೆ ನನ್ನದು. ಮಕರಂದ ಹೀರುವ ದುಂಬಿಗಳಿಗೆ, ಸತ್ಪುರುಷನ ಕೊರಳಿಗೆ ಮಾಲೆಯಾಗುವಂತಹ ಸುಂದರ ಪುಷ್ಪವಾದರೆ ಸಾಕು ಎಂಬ ಧ್ಯೇಯದಿಂದಲೇ ಕಷ್ಟ ಪಟ್ಟು ಕಲಿತೆ. ಕೊರತೆಯೇ ಆತ್ಮವಿಶ್ವಾಸಕ್ಕೆ ಮೆಟ್ಟಿಲು ಹಾಕಿತು. ಮಗದೊಮ್ಮೆ ನಾನು ಕೆಸರಲ್ಲಿ ಅರಳಿದ ಸುಂದರ ಸುಮ" ಎನ್ನುತ್ತಾ ತನ್ನ ಮಾತು ಮುಗಿಸಿದಳು.


-ಅರ್ಪಿತಾ ಕುಂದರ್


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top