ಕವನ: ಅಕ್ಷರದೊಳಡಗಿದಕ್ಷಯ ನೆನಪು

Upayuktha
0


ಅವಿತುಕೊಂಡು ಕಾಡುತಿಹುದು 

ಆಳಕಿಳಿದು ಉಳಿದ ನೆನಪು 

ಇರುಳು ಹಗಲು ಏಕವಾಗಿ 

ಈಡು ಮಾಡುತಿಹುದು ಮನವ.


ಉಗಿಯಲಾರೆ ನುಂಗಲಾರೆ 

ಊರು ಬಿಟ್ಟು ಹೋಗಲಾರೆ 

ಋಣವು ಭಾಧೆ ಕೊಡುವ ತೆರದಿ 

ಎಲ್ಲೆ ಮೀರಿ ಕ್ರಮಿಸುತಿಹುದು.


ಏಕೊ ಏನೊ ತಡೆಯಲಾರೆ 

ಐಕ್ಯವಾಗಿ ಹೇಳುತಿಹುದು

ಒಳಿತು ಕೆಡುಕು ಏನೆ ಬರಲಿ

ಓಡಿ ಹೋಗ ಬೇಡವೆಂದು.


ಔಚಿತ್ಯವ ಅರಿತೆನಿಂದು 

ಅಂತರಂಗ ನುಡಿಯಿತಿಂದು 

ಅಃ ಅದುವೆ ಸಹಜವೆಂದು  

ಅರಿತು ಬಾಳಬೇಕು ಮುಂದು.


ಕಳೆದ ಬಾಲ್ಯ ಮರೆಯಲುಂಟೆ

ಖಚಿತವಾದ ಅರಿವೆನಗಿದೆ.

ಗರ್ವ ಪಟ್ಟುಕೊಳ್ಳಲುಂಟೆ

ಘನತೆ ಇರದ ಬದುಕಿದ್ದಿತು 

ಙಕಾರ ಶಬ್ದವಿರದಂತೆ. 


ಚಡ್ಡಿ ಹರಕು ಅಳುಕೆ ಇರದು

ಛಲದ ನಡೆಗೆ ಸಾಟಿ ಇರದು

ಜಲವು ಧುಮುಕಿ ಗಿರಿಯಲಿಳಿವ

ಝರಿಯ ಒಳಗು ಆಟವಿತ್ತು

ಞಕಾರವಲ್ಲಿ ಕೇಳುತಿತ್ತು.


ಟವೆಲು ಮಾತ್ರ ಮನೆಯುಡುಗೆ 

ಠಕ್ಕತನವು ತಿಳಿಯದೆಮಗೆ

ಡರಕಿ ಬರುವ ತಿನಿಸಿರದೆಯು (ತೇಗು)

ಢವಗುಟ್ಟುವ ಎದೆಯ ಒಳಗ

ಣದೊಳಗಷ್ಟು ಕಸುವು ಇತ್ತು. 


ತನ್ನತನವ ಬಿಡದಂತಹ 

ಥಳಕು ಬಳಕು ಇರದಂತಹ

ದನಕರುಗಳ ಸಾಕಿಕೊಂಡು

ಧನದ ಮೋಹ ತಿಳಿಯದಂಥ

ನಮ್ಮ ಬಾಳು ಚಂದಕಿತ್ತು.


ಪಟ್ಟ ಕಷ್ಟ ಎಷ್ಟೊ ಏನೊ 

ಫಲದ ಬಯಕೆ ಇತ್ತೊ ಏನೊ 

ಬಯಸಿದೆಲ್ಲ ಸಿಗುವುದೆಂಬ 

ಭ್ರಮೆಗು ಜಾಗವಿಲ್ಲದಿತ್ತು

ಮತ್ತೆ ಸುಖಕೆ ಸ್ಥಾನವೆಲ್ಲಿ?


ಯಕ್ಷಗಾನ ಆಡುವಾಗ

ರಕ್ಕಸನದೆ ವೇಷ ಧರಿಸಿ

ಲಗ್ಗೆ ಇಟ್ಟು ಹೆದರಿಸಿದ್ದ

ವರಸೆಯನ್ನು ಮರೆಯಲುಂಟೆ 

ಶತಮಾನವು ಕಳೆದರೂ 


ಷಡ್ಜದಿಂದ ಆರಂಭಿಸಿ 

ಸರಿಗಮವನು ಕಲಿತಿದ್ದೆನು

ಹರಿಯ ಚಿತ್ತದಂತೇ ಸರ

ಳವರಸೆಗೇ ಮುಗಿದು ಹೋಯ್ತು 

ಕ್ಷಮಿಸದಿರನೆ ಮಹಾದೇವ. 

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




Tags

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top