|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಳೆ ಸ್ನೇಹಿತೆಯೊಂದಿಗೆ ಹೊಸ ವರ್ಷದ ಸಂಭ್ರಮ

ಹಳೆ ಸ್ನೇಹಿತೆಯೊಂದಿಗೆ ಹೊಸ ವರ್ಷದ ಸಂಭ್ರಮ

ವರ್ಷಗಳು ಉರುಳುತ್ತಾ ಮುಂದೆ ಸಾಗಿದಂತೆ ಪ್ರತಿಯೊಬ್ಬರು ಹೊಸತನವನ್ನು ಹೊಸ ಹರುಷವನ್ನು ಹುಡುಕುತ್ತಾ ಸಾಗುತ್ತಾರೆ. ಪ್ರತಿಯೊಂದರಲ್ಲೂ ಬದಲಾವಣೆಯನ್ನು ಹೊಂದಲು ಬಯಸುತ್ತಾರೆ. 

ಕೆಲವೊಮ್ಮೆ ತಮ್ಮ ಜೀವನದ ಪ್ರತಿ ಕ್ಷಣವನ್ನು ಹೊಸದಾಗಿ ಪ್ರಾರಂಭಿಸಲು ಇಷ್ಟ ಪಡುವ ಜನರು ತಮ್ಮೊಂದಿಗಿದ್ದ ಅನೇಕ ಒಳ್ಳೆಯ ವಸ್ತುಗಳನ್ನು ನಿರ್ಲಕ್ಷಿಸುತ್ತಾರೆ. ಇಷ್ಟೆಲ್ಲ ಜನ ಹೊಸತನವನ್ನು ಬಯಸುವಾಗ ನನಗ್ಯಾಕೋ ನನ್ನ ಹಳೆ ಸ್ನೇಹಿತೆಯ ಜೊತೆಗೆ ಹೊಸ ವರ್ಷವನ್ನು ಆಚರಿಸಬೇಕೆಂಬ ಆಸೆ. 

ವರ್ಷಗಳಷ್ಟೇ ಕಳೆದರೂ ನಾನು ಅವಳಲ್ಲಿ ಯಾವುದೇ ಹೊಸತನವನ್ನು ಬಯಸುವುದಿಲ್ಲ ಯಾಕೆಂದರೆ ನನಗೆ ಆಕೆ ಪ್ರತಿದಿನವೂ ಹೊಸದಾಗಿಯೇ ಕಾಣುತ್ತಾಳೆ. ವರ್ಷಪೂರ್ತಿ ನನ್ನೆಲ್ಲಾ ದುಃಖ ಖುಷಿ ಪ್ರತಿಯೊಂದರಲ್ಲೂ ಜೊತೆಯಾಗುವ ಏಕೈಕ ವ್ಯಕ್ತಿ ಅವಳು. ನನ್ನಲ್ಲಿ ಆತ್ಮವಿಶ್ವಾಸವನ್ನು ತುಂಬಿಸಿ ಇನ್ನಷ್ಟು ಸಾಧಿಸಲು ಸ್ಥೈರ್ಯ ತುಂಬುವ ಆಕೆ ನಾನು ಇಷ್ಟಪಡುವವರ ಸಾಲಿನಲ್ಲಿ ಮೊದಲ ಸಾಲಿನಲ್ಲಿ ಇದ್ದಾಳೆ.  

ಎಲ್ಲರೂ ಹಳ್ಳಿ ಸ್ನೇಹಿತೆಯರನ್ನು ಬದಲಾಯಿಸಬೇಕು, ಹೊಸಬರನ್ನು ಪರಿಚಯಿಸಿಕೊಳ್ಳಬೇಕು ಎಂಬ ಕಾತುರತೆಯಿಂದ ಇರುವಾಗ ನನಗ್ಯಾಕೋ ಅವಳು ಪ್ರತಿಕ್ಷಣವೂ ನನ್ನೊಂದಿಗೆ ನನ್ನ ಆತ್ಮೀಯಳಾಗಿ ಮುಂದುವರಿಯಬೇಕೆಂಬ ಆಸೆ. ಅದೇಕೋ ಗೊತ್ತಿಲ್ಲ ಅವಳು ಎಷ್ಟು ಬೈದರೂ ನನಗಿಂದು ಅವಳ ಮೇಲೆ ಕೋಪ ಬಂದೇ ಇಲ್ಲ, ಒಂದು ವೇಳೆ ಬಂದರೂ ಅದನ್ನು ಆಕೆಯ ನಗು ಒಮ್ಮೆಗೆ ಮಾಯ ಮಾಡುತ್ತಿತ್ತು.

 ಪ್ರತಿಯೊಬ್ಬರು ನೋವು ಮಾಡಿ ದೂರ ಸಾಗುತ್ತಿದ್ದಾಗ ಆಕೆಯೊಬ್ಬಳೇ ನಿನ್ನ ಜೊತೆ ನಾನಿದ್ದೇನೆ ಎಂಬ ಧೈರ್ಯ ನೀಡಿದವಳು. ನಮ್ಮದೇನು ಬಾಲ್ಯದ ಸ್ನೇಹವಲ್ಲ. ನಾವು ಸ್ನೇಹಿತರಾಗಿ ಹೆಚ್ಚೇನು ಸಮಯವಾಗಿಲ್ಲ. ಐದಾರು ವರ್ಷಗಳ ನಮ್ಮ ಸ್ನೇಹ ನನಗಂತೂ ನನ್ನ ಜೀವನದಲ್ಲಿ ಸಿಕ್ಕ ಅಮೂಲ್ಯವಾದ ಉಡುಗೊರೆಯೇ ಸರಿ.

 ನಮ್ಮ ಸ್ನೇಹ ಚಿರಕಾಲ ಹೀಗೆ ಮುಂದುವರಿಯಬೇಕು, ಇನ್ನಷ್ಟು ವರ್ಷಗಳು ನಾವು ಹೀಗೆ ಆತ್ಮೀಯರ ಆಗಿರಬೇಕೆಂಬುದು ನಮ್ಮಿಬ್ಬರದ್ದು ಆಶಯ. ಹೊಸ ವರ್ಷಗಳು ಅದೆಷ್ಟೇ ಬರಲಿ, ಹೊಸತನ ಅದೆಷ್ಟೇ ಇರಲಿ, ನನ್ನ ಹಳೆಯ ಗೆಳತಿ ಎಂದೆಂದಿಗೂ ನನ್ನ ನಿತ್ಯನೂತನ.....

-ದೀಕ್ಷಿತ, ಜೇಡರ ಕೊಡಿ
ವಿವೇಕಾನಂದ ಕಾಲೇಜು ಪುತ್ತೂರು.

0 Comments

Post a Comment

Post a Comment (0)

Previous Post Next Post