ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ
ಮಂಗಳೂರು: ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆರಂಭಿಸಿದ್ದ 'ಅಬ್ಬಕ್ಕ ಉತ್ಸವ'ವು ಕಳೆದ ಕೆಲವು ವರ್ಷಗಳಿಂದ ಸರಕಾರದ ವತಿಯಿಂದ ದ.ಕ. ಜಿಲ್ಲಾಡಳಿತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಸಮಿತಿಯ ಮೂಲಕ ನಡೆಯುತ್ತಿತ್ತು. ಆದರೆ ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಉತ್ಸವ ಸ್ಥಗಿತಗೊಂಡಿದೆ.
ಇದೀಗ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸ್ಥಾಪಕ ಸದಸ್ಯರಾಗಿದ್ದು, ಜಿಲ್ಲಾಡಳಿತ ಸಮಿತಿಯೊಂದಿಗೂ ಸಕ್ರಿಯವಾಗಿರುವ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ (ರಿ.) ಮಂಗಳೂರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.
ಪ್ರತಿಷ್ಠಾನವು 'ನಮ್ಮ ಅಬ್ಬಕ್ಕ' ಎಂಬ ವಿಶಿಷ್ಠ ಕಾರ್ಯಕ್ರಮದ ಮೂಲಕ ಅಬ್ಬಕ್ಕ ಉತ್ಸವದ ಪರಂಪರೆಯನ್ನು ಮುಂದುವರಿಸುತ್ತಿದೆ. ಅದರಂತೆ 'ನಮ್ಮ ಅಬ್ಬಕ್ಕ- 2022' ಸಾಹಿತ್ಯ- ಸಾಂಸ್ಕೃತಿಕ ಸಮಾವೇಶವನ್ನು ಮುಂದಿನ ಜನವರಿ ಮೂರನೇ ವಾರದಲ್ಲಿ ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ. ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ದೇಶಭಕ್ತಿ ಗೀತೆ ಸ್ಪರ್ಧೆ, ಅಬ್ಬಕ್ಕ ರಾಣಿ ಕುರಿತ ಪ್ರಚಾರೋಪನ್ಯಾಸ, ವಿಚಾರ ಸಂಕಿರಣ ಹಾಗೂ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಅವಿಭಜಿತ ಜಿಲ್ಲೆಯ ಶ್ರೇಷ್ಠ ಸಾಧಕರೊಬ್ಬರಿಗೆ 'ರಾಣಿ ಅಬ್ಬಕ್ಕ ಸೇವಾ ಪ್ರಶಸ್ತಿ' ನೀಡಿ ಗೌರವಿಸಲಾಗುವುದು ಎಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಹರಿಕೃಷ್ಣ ಪುನರೂರು, ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ