ಗಣಿತವಿಲ್ಲದ ಬದುಕನ್ನು ಊಹಿಸುವುದಕ್ಕೆ ಸಾಧ್ಯವಿಲ್ಲ: ಮಾಲತಿ ಡಿ
ಪುತ್ತೂರು: ಗಣಿತವನ್ನು ನೋಡುವ ದೃಷ್ಟಿಯನ್ನು ನಾವು ಬದಲಾಯಿಸಿಕೊಳ್ಳಬೇಕಿದೆ. ಫಾರ್ಮುಲದ ಚಿಂತೆಯನ್ನು ಬಿಟ್ಟು ಗಣಿತವನ್ನು ಅರ್ಥಮಾಡಿಕೊಳ್ಳಲು ಹೊರಟರೆ ಅದು ಆಪ್ತವಾಗುತ್ತಾ ಸಾಗುತ್ತದೆ. ಗಣಿತದ ಹೊರತಾಗಿ ನಮ್ಮ ಬದುಕನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಜೀವನದ ಪ್ರತಿಯೊಂದು ಹೆಜ್ಜೆ ಹೆಜ್ಜೆಯಲ್ಲೂ ಲೆಕ್ಕಾಚಾರಗಳಿವೆ. ಇದನ್ನು ಅರ್ಥಮಾಡಿಕೊಂಡಾಗ ಗಣಿತ ಪ್ರಿಯವಾಗುತ್ತದೆ ಎಂದು ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ (ಸಿಬಿಎಸ್‌ಇ) ಪ್ರಾಂಶುಪಾಲೆ ಮಾಲತಿ ಡಿ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಲಾದ ರಾಷ್ಟ್ರೀಯ ಗಣಿತ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬದುಕಿನಲ್ಲಿ ನಾವು ಎದುರಿಸುವ ಯಾವುದೇ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಗಣಿತದ ಅವಶ್ಯಕತೆ ಇದೆ. ಗಣಿತದ ಜ್ಞಾನ ಸೃಜನಶೀಲ ಆಲೋಚನೆಗಳಿಗೆ, ವಿಶ್ಲೇಷಣಾ ಮನೋಭಾವಕ್ಕೆ, ನಿರ್ಣಯ ತೆಗೆದುಕೊಳ್ಳುವ ಗುಣಕ್ಕೆ ಸಹಕಾರಿಯೆನಿಸುತ್ತದೆ. ಗಣಿತದಲ್ಲಿ ಅಡಗಿರುವ ಧ್ವನಿಯನ್ನು ಅರ್ಥಮಾಡಿಕೊಂಡರೆ ಅದನ್ನು ಪ್ರೀತಿಸದಿರಲು ಸಾಧ್ಯವಿಲ್ಲ. ಗಣಿತ ಅನ್ನುವುದು ಒಂದು ಹೊಸ ದೃಷ್ಟಿ ಹಾಗೂ ಕೌಶಲ್ಯ. ಕಾಣುವ ಗುಣವಿರುವವನಿಗೆ ಗಣಿತವಿಲ್ಲದ ಜಾಗವನ್ನು ಗುರುತಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ಯಾವುದೇ ಒಂದು ಸಮಸ್ಯೆಯನ್ನು ಗಣಿತ ಕಲಿತವನು ಬಗೆಹರಿಸುವುದಕ್ಕೂ ಗಣಿತ ತಿಳಿಯದವನು ಬಗೆಹರಿಸುವುದಕ್ಕೂ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದು. ಈಗಿನ ತಲೆಮಾರಿನವರು ಪ್ರತಿಯೊಂದು ಸಣ್ಣ ಪುಟ್ಟ ಲೆಕ್ಕಾಚಾರಕ್ಕೂ ಕ್ಯಾಲ್ಯುಕ್ಯುಲೇಟರ್ ಅನ್ನು ಅವಲಂಭಿಸಿರುವುದು ಕಂಡುಬರುತ್ತಿದೆ. ಇದು ಅತ್ಯಂತ ವಿಷಾದಕರ. ಭಾರತೀಯ ವೇದಗಣಿತ ಕ್ಯಾಲ್ಯುಕ್ಯುಲೇಟರ್‌ಗಿಂತಲೂ ಮೂರು ಪಟ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಅದನ್ನು ಮಕ್ಕಳಿಗೆ ಕಲಿಸುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.
ಪ್ರಸ್ತಾವನೆಗೈದ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಅಕ್ಷಯ್ ಹೆಗಡೆ ಮಾತನಾಡಿ ಶ್ರೀನಿವಾಸ ರಾಮಾನುಜನ್ ಅವರಿಂದಾಗಿ ಜಗತ್ತು ಗಣಿತದ ವಿಷಯದಲ್ಲಿ ಭಾರತದೆಡೆಗೆ ತಿರುಗಿ ನೋಡುವಂತಾಗಿದೆ. ರಾಮಾನುಜನ್ ಅವರ ಬುದ್ಧಿಮತ್ತೆ ಉನ್ನತಮಟ್ಟದ್ದಾಗಿತ್ತು. ಗಣಿತ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರ. ಹಾಗಾಗಿಯೇ ಅವರ ಜನ್ಮದಿನವನ್ನು ರಾಷ್ಟ್ರೀಯ ಗಣಿತ ದಿನಾಚರಣೆ ಎಂದು ಗುರುತಿಸಲಾಗುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಮೀಕ್ಷಾ ಸ್ವಾಗತಿಸಿ, ವಿದ್ಯಾರ್ಥಿ ಕೃಷ್ಣ ಕಿಶೋರ್ ವಂದಿಸಿದರು. ವಿದ್ಯಾರ್ಥಿ ಕಾರ್ತಿಕ್ ಕೆದಿಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ