'ತುಳು ಮತ್ತು ಕನ್ನಡ ಅನುವಾದ ಲೋಕ' ಕುರಿತು ಉಪನ್ಯಾಸ
ಮೂಡುಬಿದಿರೆ: ಅನ್ಯಭಾಷೆಗಳಿಂದ ಸಾಹಿತ್ಯ-ಸಂಸ್ಕೃತಿಯ ಕೊಡುಕೊಳ್ಳುವಿಕೆ ಭಾಷಾ ಬೆಳವಣಿಗೆಗೆ ಅಗತ್ಯವೆಂದು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಭಾಷಾ ಪ್ರಾಧ್ಯಾಪಕಿ ಡಾ. ಸುಧಾರಾಣಿ ಹೇಳಿದರು.
ಆಳ್ವಾಸ್ ಪದವಿ ಕಾಲೇಜಿನ ಕನ್ನಡ ಹಾಗೂ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ವತಿಯಿಂದ ನಡೆಯುತ್ತಿರುವ ಗೇನದ ತುಡರ್ ಉಪನ್ಯಾಸ ಮಾಲಿಕೆಯಲ್ಲಿ 'ತುಳು ಮತ್ತು ಕನ್ನಡ ಅನುವಾದ ಲೋಕ' ವಿಷಯದ ಕುರಿತು ಮಾತನಾಡಿದ ಅವರು, ತುಳು ಭಾಷೆಯಲ್ಲಿ ಲಿಖಿತ ಸಾಹಿತ್ಯದ ಕೊರತೆಯಿದೆ. ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಹಾಗೂ ಜಾಗತಿಕ ಮನ್ನಣೆ ಸಿಗಬೇಕಾದರೆ ಲಿಖಿತ ಸಾಹಿತ್ಯಗಳ ಅಗತ್ಯವಿದೆ. ಅನ್ಯ ಭಾಷೆಗಳಿಂದ ಅನುವಾದದ ಮೂಲಕ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಕೊಡುಕೊಳ್ಳುವುದರಿಂದ ಒಂದು ಭಾಷೆ ಸಾಹಿತ್ಯಿಕ ಭಾಷೆಯಾಗಿ ಬೆಳೆಯುತ್ತದೆ. ಈ ರೀತಿಯ ಪ್ರಯತ್ನದಲ್ಲಿ ಅನುವಾದಕನಿಗೆ ಭಾಷಾ ನಿಘಂಟು, ಛಂದಸ್ಸು ಹಾಗೂ ಅನುವಾದದ ಉದ್ದೇಶ ಸ್ಪಷ್ಟವಾಗಿ ತಿಳಿದಿರಬೇಕು ಎಂದರು.
ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಯೋಜಕ ಹಾಗೂ ಕನ್ನಡ ವಿಭಾಗ ಮುಖ್ಯಸ್ಥ ಡಾ. ಯೋಗಿಶ್ ಕೈರೋಡಿ ಮಾತನಾಡಿ, ಮಾತುಗಳನ್ನು ಕೇಳುವುದು ಓದುವುದು ಮತ್ತು ಅಭಿವ್ಯಕ್ತಿಯಿಂದ ಅಧ್ಯಯನ ಪ್ರಕ್ರಿಯೆ ಸಂಪೂರ್ಣವಾಗುತ್ತದೆ. ಮಾತನ್ನು ಮಾಪನ ಮಾಡಲು ಸಾಧ್ಯವಿಲ್ಲ ಆದರೆ ಸದ್ಬಳಕೆ ಮಾಡಬಹುದೆಂದು ಹೇಳಿದರು.
ಕನ್ನಡ ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಕೃಷ್ಣರಾಜ ಕರಬ, ಕಾಮರ್ಸ್ ವಿಭಾಗದ ಮುಖ್ಯಸ್ಥೆ ಶರ್ಮಿಳಾ ಕುಂದರ್ ಉಪಸ್ಥಿತರಿದ್ದರು. ಕನ್ನಡ ಹಾಗೂ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದರು. ವಿದ್ಯಾರ್ಥಿನಿಯರಾದ ಯಶಿತಾ ಸ್ವಾಗತಿಸಿ, ತುಳಸಿ ವಂದಿಸಿದರು, ವೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ