|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜೈನ ಧರ್ಮದ ತತ್ವ, ಸಿದ್ಧಾಂತಗಳನ್ನು ಪಠ್ಯದಲ್ಲಿ ಅಳವಡಿಸಬೇಕು: ಚಾರುಕೀರ್ತಿ ಭಟ್ಟಾರಕ

ಜೈನ ಧರ್ಮದ ತತ್ವ, ಸಿದ್ಧಾಂತಗಳನ್ನು ಪಠ್ಯದಲ್ಲಿ ಅಳವಡಿಸಬೇಕು: ಚಾರುಕೀರ್ತಿ ಭಟ್ಟಾರಕ

 

ಉಜಿರೆ: ಜೈನಧರ್ಮ ವಿಶ್ವಧರ್ಮವಾಗಿದ್ದುಅದರ ಮೌಲಿಕತತ್ವ, ಸಂದೇಶಗಳನ್ನು ಪಠ್ಯದಲ್ಲಿ ಅಳವಡಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾತ್ಮಕ ಅಧ್ಯಯನ ನಡೆಸಬೇಕು ಎಂದು ಮೂಡಬಿದ್ರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.


ಗುಮ್ಮೆಗುತ್ತು ಭಗವಾನ್‌ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಭಾನುವಾರ ನಡೆದ ಜಿನಬಿಂಬ ಪುನರ್ ಪ್ರತಿಷ್ಠಾಪನಾ ಸಮಾರಂಭದಲ್ಲಿಅವರು ಆಶೀರ್ವಚನ ನೀಡಿದರು.


ದೇಶ-ವಿದೇಶಗಳ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಜೈನ ಪೀಠವನ್ನು ಪ್ರಾರಂಭಿಸಿ ಸಸ್ಯಾಹಾರ ಸೇವನೆ, ಸ್ಯಾದ್ವಾದ, ಪಂಚಾಣುವೃತಗಳು ಮೊದಲಾದ ವಿಶಿಷ್ಠ ತತ್ವ, ಸಿದ್ದಾಂತಗಳ ಬಗ್ಗೆ ಇಂದು ವಿಶೇಷ ಅಧ್ಯಯನ ನಡೆಸುತ್ತಿದ್ದಾರೆ.


ಭಕ್ತಿ ಇಲ್ಲದೆ ಭವ ಬಂಧನದಿಂದ ಮುಕ್ತಿ ಸಿಗಲಾರದು. ಶ್ರದ್ಧಾ-ಭಕ್ತಿಯಿಂದ, ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಪಂಚಾಣುವೃತಗಳನ್ನು ಮನ, ವಚನ, ಕಾಯದಿಂದ ತ್ರಿಕರಣಪೂರ್ವಕ ಪಾಲನೆ ಮಾಡಿದಾಗ ಸಕಲ ಪಾಪಕರ್ಮಗಳ ಕ್ಷಯವಾಗಿ ಅಕ್ಷಯ ಸುಖವನ್ನೀಯುವ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.


ತುಳುನಾಡಿನಲ್ಲಿ ಜೈನರಗುತ್ತು-ಬೀಡುಗಳು ಮತ್ತು ಅರಮನೆಗಳ ಮೂಲಕ ಜೈನರ ಆಡಳಿತ ವ್ಯವಸ್ಥೆ ಹಾಗೂ ಉಳ್ಳಾಲ ರಾಣಿ ಅಬ್ಬಕ್ಕ ಹಾಗೂ ಗೆರುಸೊಪ್ಪೆಯ ರಾಣಿ ಚೆನ್ನಭೈರಾದೇವಿಯ ದೇಶಪ್ರೇಮ ಹಾಗೂ ಆಡಳಿತ ವ್ಯವಸ್ಥೆಯನ್ನು ಅವರು ಶ್ಲಾಘಿಸಿದರು.


ದಕ್ಷಿಣ ಕನ್ನಡ ಜಿಲ್ಲೆಯ ಯುವಕರು ಜಿಲ್ಲೆಯಲ್ಲಿರುವ ಜಿನ ಮಂದಿರಗಳ ನಕ್ಷೆ ಹಾಗೂ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಮಾಹಿತಿ ಪ್ರಕಟಿಸಬೇಕು ಎಂದು ಅವರು ಸಲಹೆ ನೀಡಿದರು.


ಮಹಾಮಸ್ತಕಾಭಿಷೇಕ


ಕಾರ್ಕಳ ತಾಲ್ಲೂಕಿನ ಬಜಗೊಳಿ ಬಳಿ ಮುಡಾರು ಗ್ರಾಮದಲ್ಲಿ 2022ರ ಫೆಬ್ರವರಿ 17ರಿಂದ 21ರ ವರೆಗೆ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಸ್ವಾಮೀಜಿ ಪ್ರಕಟಿಸಿ ಎಲ್ಲರನ್ನೂ ಆಮಂತ್ರಿಸಿದರು.


ಮಂಗಲ ಪ್ರವಚನ ನೀಡಿದ ಪೂಜ್ಯ ಪ್ರಸಂಗಸಾಗರ ಮುನಿ ಮಹಾರಾಜರು ಎಲ್ಲರೂ ಸದಾ ನಗುಮೊಗದಿಂದ ಸಾಹಸ, ಉತ್ಸಾಹ ಮತ್ತು ಧೈರ್ಯದಿಂದ ದುರ್ಲಭವಾದ ಮನುಷ್ಯ ಜನ್ಮದಲ್ಲಿ ಆತ್ಮಕಲ್ಯಾಣದೊಂದಿಗೆ ಸಮಾಜ ಸೇವಾಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.


ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ನಿತ್ಯವೂ ಬಸದಿಗೆ ಹೋಗಿ ದೇವರ ದರ್ಶನ, ಪೂಜೆ, ಸ್ವಾಧ್ಯಾಯದೊಂದಿಗೆ ಆತ್ಮಕಲ್ಯಾಣ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಅಧ್ಯಕ್ಷತೆ ವಹಿಸಿದ ಭಾರತೀಯ ಜೈನ್ ಮಿಲನ್‌ನ ರಾಷ್ಟ್ರಾಧ್ಯಕ್ಷ ಧರ್ಮಸ್ಥಳದ ಡಿ. ಸುರೇಂದ್ರಕುಮಾರ್ ಮಾತನಾಡಿ, ಧರ್ಮವನ್ನು ನಾವು ಕಾಪಾಡಿದರೆ, ಧರ್ಮ ಸದಾಕಾಲ ನಮ್ಮ ರಕ್ಷಣೆ ಮಾಡುತ್ತದೆ. ಜೈನ್ ಮಿಲನ್ ಮೂಲಕ ಭಜನಾ ಸ್ಪರ್ಧೆ ಆಯೋಜಿಸಿ ಮಕ್ಕಳಲ್ಲಿ ಧರ್ಮಜಾಗೃತಿ ಮತ್ತು ಭಜನಾ ಸಂಸ್ಕೃತಿಯನ್ನು ಮೂಡಿಸಲಾಗಿದೆ ಎಂದರು.


ಮೂಡಬಿದ್ರೆ ಜೈನ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಮಾತನಾಡಿ ಬಸದಿಗಳ ಮೂಲಕ ಆತ್ಮಕಲ್ಯಾಣದೊಂದಿಗೆ, ಸಮಾಜದ ಸಂಘಟನೆ ಹಾಗೂ ಧರ್ಮ ಪ್ರಭಾವನೆಯಾಗುತ್ತದೆ ಎಂದು ಹೇಳಿದರು.


ಸಮಿತಿಯ ಅಧ್ಯಕ್ಷಎನ್. ಪ್ರೇಮ್‌ ಕುಮಾರ್‌ಎನ್. ಹೊಸ್ಮಾರು ಮತ್ತು ದಾನಿಗಳನ್ನು ಗೌರವಿಸಲಾಯಿತು. ಮಂಗಳೂರಿನ ಡಾ.ಸಿ.ಕೆ.ಬಳ್ಳಾಲ್ ಮತ್ತು ಬಾರಾಡಿ ಬೀಡು ಯುವರಾಜ ಬಳ್ಳಾಲ್ ಉಪಸ್ಥಿತರಿದ್ದರು. ಎನ್. ವಿಜಯಕುಮಾರ್ ಸ್ವಾಗತಿಸಿದರು. ದಿಶಾ ಬಳ್ಳಾಲ್ ಧನ್ಯವಾದವಿತ್ತರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post