ಪುತ್ತೂರು: ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಯಕ್ಷಗಾನದ ಮೂಲಕ ರಾಮಾಯಣ ಮನೆಮಾತಾಗಿದೆ. ಆದರೆ ವಾಲ್ಮೀಕಿ ಮಹರ್ಷಿ ಬರೆದ ರಾಮಾಯಣಕ್ಕೂ ಯಕ್ಷಗಾನದ ರಾಮಾಯಣ ಪ್ರಸಂಗಗಳಿಗೂ ಹಲವೆಡೆ ವ್ಯತ್ಯಾಸಗಳು ಕಂಡುಬರುತ್ತವೆ. ಮೂಲ ರಾಮಾಯಣದಲ್ಲಿಲ್ಲದ ಅನೇಕ ಸಂಗತಿಗಳು ಯಕ್ಷಗಾನದಲ್ಲಿ ಅಭಿವ್ಯಕ್ತಗೊಳ್ಳುತ್ತವೆ ಎಂದು ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಹಾಗೂ ತತ್ವಶಾಸ್ತ್ರ ವಿಭಾಗಗಳ ಆಶ್ರಯದಲ್ಲಿ ಆಯೋಜಿಸಲಾದ 'ರಾಮಾಯಣ - ಪಾಕ್ಷಿಕ ಪ್ರವಚನ ಮಾಲಿಕೆ' ಯನ್ನು ಉದ್ಘಾಟಿಸಿ 'ವಾಲ್ಮೀಕಿ ರಾಮಾಯಣ – ಕವಿ-ಕಾವ್ಯ ಪರಿಚಯ' ಎಂಬ ವಿಷಯದ ನೆಲೆಯಲ್ಲಿ ಸೋಮವಾರ ಮಾತನಾಡಿದರು.
ಪ್ರಪಂಚದ ಮೊದಲ ಮಹಾಕಾವ್ಯ ರಾಮಾಯಣ. ಕವಿ-ಕಾವ್ಯದ ಕಲ್ಪನೆಯೇ ಇಲ್ಲದ ಕಾಲದಲ್ಲಿ ವಾಲ್ಮೀಕಿ ಮಹರ್ಷಿಗಳಿಂದ ರಾಮಾಯಣ ಸೃಷ್ಟಿಯಾಯಿತು. ಬೇಡನೊಬ್ಬ ಕ್ರೌಂಚ ಪಕ್ಷಿಗಳಲ್ಲಿ ಒಂದಕ್ಕೆ ಬಾಣವನ್ನು ಹೊಡೆದು ಕೊಂದಾಗ ವಾಲ್ಮೀಕಿಗಳ ಬಾಯಿಯಿಂದ ಹೊರಬಿದ್ದ ವಾಕ್ಯವೊಂದು ರಾಮಾಯಣ ಕಾವ್ಯಕ್ಕೆ ತಳಹದಿಯಾಯಿತು. ಸೃಷ್ಟಿಕರ್ತ ಬ್ರಹ್ಮನ ಆಶಯದಂತೆ ವಾಲ್ಮೀಕಿಗಳ ಮೂಲಕ ರಾಮಾಯಣ ರಚನೆಯಾಯಿತೆಂದು ಉಲ್ಲೇಖಗಳಿವೆ. ಹಾಗಾಗಿ ಜಗತ್ತಿನ ಆದಿಕವಿ ವಾಲ್ಮೀಕಿ ಮಹರ್ಷಿ ಹಾಗೂ ಆದಿಕಾವ್ಯ ರಾಮಾಯಣ ಎಂದು ಹೇಳಿದರು.
ಕನ್ನಡದಲ್ಲಿ ಮಾಸ್ತಿ, ಡಿವಿಜಿ ಹಾಗೂ ಕೆ.ಎಸ್.ನಾರಾಯಣಾಚಾರ್ಯರು ರಾಮಾಯಣದ ಬಗೆಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಆದರೆ ಆಧುನಿಕ ಕಾಲಘಟ್ಟದಲ್ಲಿ ತಾತ್ವಿಕ ವಿಚಾರಗಳ ಬಗೆಗೆ, ಮೂಲಭೂತ ಸಂಗತಿಗಳ ಬಗೆಗೆ ಸಾಕಷ್ಟು ಚರ್ಚೆಗಳಾಗುತ್ತಿಲ್ಲ. ಅಂತಹ ಚರ್ಚೆಗಳಿಗೆ ವೇದಿಕೆಗಳೂ ಕಡಿಮೆಯಾಗುತ್ತಿವೆ. ಇಂದು ಯಾರನ್ನಾದರೂ ತೆಗಳುವಂತಹ ಸಂಗತಿಯಿದ್ದರೆ ಮಾತ್ರ ಅದು ಚರ್ಚೆಗೊಳಗಾಗುತ್ತಿರುವುದು ದುರಂತ ಎಂದರಲ್ಲದೆ ಸುಮಾರು ಎಂಟು ಲಕ್ಷ ವರ್ಷಕ್ಕೂ ಹಿಂದಿನ ಕಾಲದಲ್ಲಿ ಜೀವಿಸಿದ್ದ ರಾಮನ ಬಗೆಗೆ ಇಂದೂ ಜನರಿಗೆ ತಿಳಿದಿದೆ ಎನ್ನುವುದು ರಾಮನ ಶ್ರೇಷ್ಟತೆಯನ್ನು ಸಾರುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಭಾರತದ ವಿಶೇಷತೆಗಳನ್ನು ಅರ್ಥ ಮಾಡಿಕೊಳ್ಳದಿದ್ದರೆ ಅಂತಹವರು ಭಾರತೀಯರೇ ಅಲ್ಲ. ಪ್ರತಿಯೊಬ್ಬರೂ ಈ ದೇಶದ ನಾಡಿಯನ್ನು ಅರ್ಥ ಮಾಡಿಕೊಳ್ಳಬೇಕು. ಶ್ರೀರಾಮನ ಇತಿಹಾಸ ತಲೆಮಾರಿನಿಂದ ತಲೆಮಾರಿಗೆ ಹರಿದುಬರುತ್ತಿದೆ. ಇಂತಹ ಜ್ಞಾನಪ್ರವಾಹದಿಂದ ಮಾತ್ರ ಉತ್ಕೃಷ್ಟ ಭಾರತದ ಸೃಷ್ಟಿ ಸಾಧ್ಯ. ಶಿಕ್ಷಣ ಸಂಸ್ಥೆಗಳು ಯುವ ಸಮುದಾಯಕ್ಕೆ ಭಾರತೀಯತೆಯ ಸತ್ವವನ್ನು ತಿಳಿಸಿಕೊಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಪ್ರಸನ್ನ ಭಟ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ ಗಾಳಿಮನೆ ಪ್ರಸ್ತಾವನೆಗೈದರು. ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿ.ತೇಜಶಂಕರ ಸೋಮಯಾಜಿ ಸ್ವಾಗತಿಸಿ, ವಿದ್ಯಾರ್ಥಿ ಕಾರ್ತಿಕ್ ಕೆದಿಮಾರು ವಂದಿಸಿದರು. ವಿದ್ಯಾರ್ಥಿನಿ ಶ್ರಾವ್ಯ ಕಾರ್ಯಕ್ರಮ ನಿರ್ವಹಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ