||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಾಂಧವ್ಯದ ಸರಪಳಿಯಲ್ಲಿ ಪ್ರಾತಃ ಸ್ಮರಣೀಯರು...

ಬಾಂಧವ್ಯದ ಸರಪಳಿಯಲ್ಲಿ ಪ್ರಾತಃ ಸ್ಮರಣೀಯರು...ಈ ಜಗತ್ತೇ ವಿಚಿತ್ರ. ಆಥವಾ ವಿಚಿತ್ರವಾಗಿದ್ದುದರಿಂದಲೇ ಜಗತ್ತು ಎನಿಸಿಕೊಂಡಿದೆ. ಸಾಮಾನ್ಯವಾಗಿ ನಾವಂದುಕೊಳ್ಳುವುದು ಪ್ರತಿಯೊಬ್ಬರೂ ಸ್ವಾರ್ಥದಿಂದಲೇ ಬದುಕುತ್ತಾರೆ, ಇನ್ನೊಬ್ಬರಿಗೆ ಏನೇ ಆದರೂ ತೊಂದರೆ ಇಲ್ಲ ಎಂದು. ಆದರೆ ನಾವಂದುಕೊಂಡಂತೆ ಜಗತ್ತು ಇರುವುದೇ ಇಲ್ಲ. ಇಲ್ಲಿ ಸರ್ವ ಗುಣಗಳೂ ಕಾಣಸಿಗುತ್ತವೆ. ಹೇಗೆ ತನಗೋಸ್ಕರ ಬದುಕುವವರಿರುತ್ತಾರೋ ಅದೇರೀತಿ ಅನ್ಯರಿಗೋಸ್ಕರ ಬದುಕುವವರೂ ಬಹಳಷ್ಟಿದ್ದಾರೆ. ಪ್ರಚಾರವೇ ಇಲ್ಲದೆ ಪ್ರಪಂಚವನ್ನೇ ಪ್ರೀತಿಸುವವರು ಇರುವುದರಿಂದಲೇ ಇಂದು ಜಗತ್ತಿನಲ್ಲಿ ಮನುಷ್ಯತ್ವವೆಂಬುದು ಉಳಿದುಕೊಂಡಿದೆ. ಇದು ನನಗಂತು ತುಂಬಾನೆ ಅನುಭವವಿರುವಂಥದ್ದು. ನಾನು ನನ್ನ ಕಷ್ಟ ಕಾಲದಲ್ಲಿರುವಾಗ ಪ್ರತಿಯೊಂದು ಕ್ಷಣದಲ್ಲೂ ನನ್ನನ್ನು ಬದುಕಿಸಿದ್ದೇ ಈ ಅನ್ಯರಿಗೋಸ್ಕರ ಬದುಕುವವರ ವಿಶಾಲ ಮನೋಭಾವ. ನಾವು ಯಾವಾಗಲೂ ಮೋಸ ವಂಚನೆ  ಮಾಡುವವರ, ಕದಿಯುವವರ, ಕೊಲೆ ಸುಲಿಗೆ ಮಾಡುವವರ ವಿಚಾರಗಳನ್ನು ವಾರ್ತಾ ಪತ್ರಿಕೆಗಳಲ್ಲೋ, ದೃಶ್ಯ ಮಾಧ್ಯಮಗಳಲ್ಲೋ ಓದಿ, ನೋಡಿ ತಿಳಿದುಕೊಂಡು ಈ ಪ್ರಪಂಚವೇ ಹೀಗೆ ಎಂದು ಜಿಗುಪ್ಸೆ ತಾಳುವುದಿದೆ. ಆದರೆ ಇದೆಲ್ಲ ದೌರ್ಜನ್ಯಗಳ ನಡುವೆ ದೇವತೆಯಂಥ, ಅಥವಾ ಮನುಷ್ಯತ್ವವನ್ನೂ ಮೀರಿದ ಸಜ್ಜನರ ಗಡಣವೇ ಇರುವುದು ಕೂಡ ಅಷ್ಟೇ ಸತ್ಯ. ಇವರು ಯಾವುದೇ ಪ್ರಚಾರ ಬಯಸದಿದ್ದರೂ ಇಂಥವರನ್ನು ನಾವು ಸಮಾಜಕ್ಕೆ ಪರಿಚಯಿಸುವುದರಿಂದ ಒಂದಷ್ಟು ಜನವಾದರೂ ಅಂಥವರನ್ನು ಅನುಕರಿಸಿದರೆ ಖಂಡಿತ ಸಮಾಜಕ್ಕೆ ಒಳ್ಳೆಯದಾದೀತು ಎಂದು ನನ್ನ ಅಭಿಪ್ರಾಯದಿಂದ ಈ ಲೇಖನವನ್ನು ಮಂಡಿಸಿದ್ದೇನೆ.  

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ನನ್ನ ಪ್ರೀತಿಯ ಮಡದಿ ಲಕ್ಷ್ಮಿಯು 2018 ರಲ್ಲಿ ಅನಾರೋಗ್ಯಕ್ಕೆ ತುತ್ತಾದಳು. ಗಂಭೀರ ಖಾಯಿಲೆಯಾದ್ದರಿಂದ ಶಸ್ತ್ರಚಿಕಿತ್ಸೆಗೊಳಪಡಬೇಕಾಯಿತು. ಎಲ್ಲವೂ ದೇವರ ದಯದಿಂದ ಮತ್ತು ನನ್ನ ಹಿತೈಷಿಗಳ ಸಹಕಾರದಿಂದ ಆ ದಿನಗಳಲ್ಲಿ ಕಷ್ಟಗಳು ಕಷ್ಟಗಳಂತೆ ಅನ್ನಿಸಲೇ ಇಲ್ಲ. ಮಾತ್ರವಲ್ಲ ಆ ಒಂದು ಗಂಡಾಂತರದಿಂದ ಆಕೆಯು ಪಾರಾಗಿದ್ದಳು. ನಮಗೆ ಸಹಾಯ ಮಾಡಿದವರನ್ನು ಹೆಸರಿಸಿದರೆ ಒಬ್ಬೊಬ್ಬರದೇ ಒಂದೊಂದು ಲೇಖನ ಬರೆಯಬಹುದು. ನೋಡೋಣ ಸಂದರ್ಭ ಬಂದಾಗ ಒಂದೊಂದೇ ಪರಿಚಯಿಸುವೆ. ಅಂಥ ಮಹನೀಯರಲ್ಲಿ ಒಬ್ಬರನ್ನು ನಾನಿಲ್ಲಿ ಉಲ್ಲೇಖಿಸಬಯಸುತ್ತೇನೆ.  


ಆ ದಿನ ಲಕ್ಷ್ಮಿಗೆ ಶಸ್ತ್ರಚಿಕಿತ್ಸೆಗೆಂದು ಶಸ್ತ್ರಚಿಕಿತ್ಸೆಯ ಕೊಠಡಿಗೆ ಕರೆದುಕೊಂಡು ಹೋದರು. ನಮಗಾದರೋ ಪ್ರತಿಯೊಂದು ಕ್ಷಣವೂ ಯುಗಗಳಂತೇ ಅನಿಸುತ್ತಿತ್ತು. ನಮ್ಮವರು ಅಂದುಕೊಂಡವರು ಜತೆಯಲ್ಲಿದ್ದರೆ ಮನಸ್ಸಿಗೆ ಧೈರ್ಯ. ಆದರೆ ರಕ್ತ ಸಂಬಂಧಗಳ ಹೊರತಾಗಿ ಇರುವ ನಮ್ಮವರು ಎಂದಾಗ ಅದು ಧೈರ್ಯ ಮಾತ್ರವಲ್ಲ ಭದ್ರತೆಯ ಅನುಭವವೂ ಹೌದು. ಅಂತೆಯೇ (ಹೆಸರು ಬದಲಾಯಿಸಿದ್ದೇನೆ) ಕೃಷ್ಣನೆಂಬ ಮಹಾನುಭಾವ ನಮ್ಮೊಡನೆಯೇ ಆಸ್ಪತ್ರೆಯಲ್ಲಿದ್ದದ್ದು ಮಾತ್ರವಲ್ಲದೆ ಶಸ್ತ್ರಚಿಕಿತ್ಸೆ ಪೂರ್ಣವಾಗಿ ಸ್ಮೃತಿ ಬರುವಲ್ಲಿವರೆಗೂ ಇದ್ದು ನನ್ನ ಮಡದಿಯನ್ನು ನೋಡಿಯೇ ವಾಪಸು ಹೋದದ್ದು. ಇದಲ್ಲವೇ ಪ್ರೀತಿ ವಿಶ್ವಾಸ. ಅದಾಗಿ ಮರುದಿವಸದಿಂದ ಲಕ್ಷ್ಮಿ ಊಟ ಮಾಡಲು ಪ್ರಾರಂಭ ಮಾಡುವಾಗ ಇದೇ ಕೃಷ್ಣ ಬೆಳಗ್ಗೆಯೇ ಫೋನಾಯಿಸಿದ. ಭಟ್ರೆ ಊಟಕ್ಕಾಗಿ ಹೋಟೆಲನ್ನು ನೆಚ್ಚಿಕೊಳ್ಳಬೇಡಿ ನಿಮಗೆ ಆಗುವುದಾದರೆ ನಾವೇ ಮನೆಯಲ್ಲಿ ಅಡುಗೆ ಮಾಡಿ ಆಸ್ಪತ್ರೆಗೆ ತಂದುಕೊಡುತ್ತೇವೆ ಎಂದು. ಹಾಗೆ ಕೇಳಲೂ ಒಂದು ಕಾರಣವಿತ್ತು. ನಾವು ತರಕಾರಿ ತಿನ್ನುವವರು, ಜಾತಿ ಎಂಬ ಭಾವದಲ್ಲಿ ಬದುಕುವವರು, ಬ್ರಾಹ್ಮಣರು ಎಂಬಂಥ ಗೊಂದಲಗಳಿಂದ ನಿರ್ಧಾರ ನಮ್ಮದೇ ಎಂಬ ಭಾವ.  


ಆದರೆ ನಾವು ದೇಶಕಾಲಕ್ಕನುಗುಣವಾಗಿ ಅಂಥ ಮೆಟ್ಟಲುಗಳನ್ನು ದಾಟಿ ಬಹಳ ಕಾಲವೇ ಆಗಿತ್ತು ಎಂಬುದೂ ಕೃಷ್ಣನಿಗೆ ಗೊತ್ತಿತ್ತು. ಸರಿ ಆತ ಅಷ್ಟೊಂದು ಆತ್ಮೀಯತೆಯಿಂದ ಕೇಳುವಾಗ ಬೇಡವೆನ್ನುವುದು ಮಾನವೀಯತೆಗೇ ಅವಮಾನ ಮಾಡಿದಂತೆ. ಒಪ್ಪಿಕೊಂಡೆವು. ಆದರೆ ವಾಸ್ತವ ಏನೆಂದರೆ ಆತನ ಕುಟುಂಬದವರು ಮಾಂಸಾಹಾರವನ್ನೂ ಸೇವಿಸುತ್ತಿದ್ದರು. ಅದು ನಮಗೂ ಗೊತ್ತು. ಆದರೆ ನಮಗೆ ಗಂಜಿ ಮತ್ತೊಂದು ಪಲ್ಯ ಮಾತ್ರವೇ ಬೇಕಾಗಿರುವುದರಿಂದ ಮಾಂಸಾಹಾರದ ಪ್ರಶ್ನೆಯೇ ಇಲ್ಲ. ಹಾಗೂ ನಮಗಾಗಿ ಅವರು ಶುದ್ಧತೆಯಿಂದ ಆಹಾರ ತಯಾರಿಸಿ ಕೊಡುತ್ತಾರೆಂಬ ವಿಶ್ವಾಸವೂ ನಮಗಿತ್ತು. ನಂಬಿದರೆ ನಂಬಿ... ವಾಸ್ತವದಲ್ಲಿ ನಡೆದದ್ದೇ ಬೇರೆ. ಕೃಷ್ಣ ನಮಗಾಗಿ ಒಂದು ಹೊಸತಾದ ಕುಕ್ಕರ್, ಟಿಫಿನ್ ಕ್ಯಾರಿಯರ್ ಇತ್ಯಾದಿ ಊಟ ತಯಾರು ಮಾಡಲು ಬೇಕಾದ ಯಾವತ್ತೂ ಪಾತ್ರೆಗಳನ್ನು ಖರೀದಿಸಿ ಅದರಲ್ಲೇ ಊಟ ತಯಾರು ಮಾಡಿ ತಂದು ಕೊಡುತ್ತಿದ್ದ. ಯಾಕೆಂದರೆ ಅವರ ಮನೆಯಲ್ಲಿರುವ ಪಾತ್ರೆಗಳು ಮಾಂಸಾಹಾರದ ಬಳಕೆಗೂ ಉಪಯೋಗವಾಗಿರಬಹುದೆಂಬ ಪ್ರಜ್ಞೆಯಿಂದ. ಅಷ್ಟು ಮಾತ್ರವಲ್ಲ ಸಾಧಾರಣ ಹದಿನೈದು ದಿವಸಗಳವರೇಗೆ ತಪಸ್ಸಿನಂತೆ ಮಧ್ಯಾಹ್ನ ಮತ್ತು ರಾತ್ರಿಗೆ ಇಬ್ಬರಿಗಾಗುವಷ್ಟು ಬಿಸಿಬಿಸಿಯಾದ ಊಟವನ್ನು ತಂದು ಕೊಡುತ್ತಿದ್ದ. ಇಂತಹ ಪ್ರೀತಿಗೆ ಅದು ಯಾವ ಬೆಲೆ ಕಟ್ಟಬಹುದು..? ಆತನ ಶ್ರದ್ಧೆ ಅದೆಷ್ಟಿತ್ತೆಂದರೆ, ನಮಗೆ ಊಟ ತರಲು ಪ್ರಾರಂಭವಾದ ಮೇಲೆ ನಾವು ಡಿಸ್ಚಾರ್ಜ್ ಆಗಿ ಮನೆಗೆ ಹೋಗುವಲ್ಲಿವರೆಗೂ ಆತನ ಮನೆಯವರು ಕೂಡ ಸಸ್ಯಾಹಾರವನ್ನೇ ವೃತದಂತೆ ಸ್ವೀಕರಿಸುತ್ತಿದ್ದರು. ಅದೆಂಥ ಶ್ರದ್ಧೆ.. ಅದೆಂಥ ನಿಸ್ವಾರ್ಥ ಭಾವ... ಅದ್ಯಾವ ಋಣಾನುಬಂಧ..? ಇಂಥವರು ಪ್ರತಿಯೊಂದು ಊರಿನಲ್ಲೂ ಇರುತ್ತಾರೆ ಎಲೆ ಮರೆಯ ಕಾಯಿಯಂತೆ. ಮರವನ್ನು ನೋಡುವಾಗ ಶೂನ್ಯವೇ ಆದರೂ ಮರೆಯಲ್ಲಿರುವ ಕಾಯಿ ಹಣ್ಣಾಗಿ ಅದರಿಂದ ಪುನಃ ಸಸಿಯಾಗಿ ವಂಶ ವೃದ್ಧಿಯಾದಂತೆ.  


ಹಾಗೆಂದು ಈ ಕೃಷ್ಣ ನಮ್ಮ ನೆರೆಕರೆಯವನೂ ಅಲ್ಲ, ಅವನಲ್ಲಿ ನಮ್ಮ ವ್ಯವಹಾರವೂ ಇಲ್ಲ. ಆದರೆ ಸ್ನೇಹ ಬಹಳಷ್ಟು ಇದೆ. ನಮಗೂ ಆತನಿಗೂ ಸಂಪರ್ಕವೆಂದರೆ, ಲಕ್ಷ್ಮಿಯ ವೃತ್ತಿ ಅಡುಗೆ ಮಾಡುವುದಾದ್ದರಿಂದ ವರ್ಷಕ್ಕೊಂದು ಸಲ ಅವನಲ್ಲಿ ಆಗುವ ದೇವತಾ ಕಾರ್ಯಕ್ರಮಕ್ಕೆ ಅಡುಗೆ ಮಾಡುವುದಷ್ಟೆ. ಆ ಒಂದು ಕ್ರಿಯೆಯಲ್ಲಿ ಆಕೆಯ ಪ್ರಾಮಾಣಿಕತೆಗೆ ಸಿಕ್ಕ ಬೆಲೆಯೇ ನಮ್ಮ ಕೃಷ್ಣನ ಪ್ರತಿಕ್ರಿಯೆ. ನಿಷ್ಕಪಟತ್ವಕ್ಕೆ, ಪ್ರಾಮಾಣಿಕತೆಗೆ, ನಿಸ್ವಾರ್ಥಕ್ಕೆ ಅದೆಷ್ಟು ತೂಕವಿದೆ, ಅದೆಷ್ಟು ಮೌಲ್ಯವಿದೆ ಎಂಬುದನ್ನು ನಮಗೆ ಈ ಸಮಾಜದ ಸಜ್ಜನರು ಕಲಿಸಿದ ಪಾಠ ಬಹುಷಃ ಯಾವ ಗುರುಕುಲವೂ ಕೊಡಲು ಸಾಧ್ಯವಾಗದು. ಅಂತಹ ಕೃಷ್ಣನ ಸಂತತಿ ಸಾವಿರವಾಗಲಿ. ಮನ್ಮುಷ್ಯತ್ವದ ಮಹಾತ್ಮೆ ಜಗತ್ತಿಗೇ ಪಸರಿಸಲಿ. ಇಂತಹ ಜೀವನೋತ್ಸಾಹವನ್ನು ಕೊಡುವ ಸೇವೆಯೆಂಬ ಬೆಳಕು ಹೆಚ್ಚಾದಷ್ಟು ದುಷ್ಟತನವೆಂಬ ಕತ್ತಲು ಸಹಜವಾಗಿಯೇ ದೂರವಾಗುತ್ತದೆ. 

ಸರ್ವೇ ಜನಾಃ ಸುಖಿನೋ ಭವಂತು..

***********

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post