ಹೌದು ಸರ್. ಮಧ್ಯಮಾವತಿ ರಾಗವೆಂದರೆ ಹೀಗೆಯೇ. ಅದೊಂದು ಮರೆಯಲಾಗದ ಮಧುರಾನುಭೂತಿ. ಜತೆಜತೆಗೆ ಚಂದದ ಸಂಭ್ರಮಾಚರಣೆ. ಅದಕ್ಕೇ ಅದು ಮಂಗಳರಾಗ. ಹಾಗಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಕಛೇರಿಗಳಲ್ಲಿ ಕಟ್ಟಕಡೆಯ ಕೃತಿಯಾಗಿ ಹಾಡಲಾಗುತ್ತದೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಇಲ್ಲಿನ ಗೀತೆಗೆ ಹಿತಮಿತವಾದ ಹಿನ್ನೆಲೆ ಸಂಗೀತವಿದೆ. ರಾಗದಲೆಗೆ ಭಾವಬೆಸುಗೆಯಿದೆ. ಹಾಗಾಗಿ ಅದು ಸುವ್ವೀ ಸುವ್ವೀ ಸುವ್ವಾಲಮ್ಮ ಆಯಿತು. ನಮ್ಮೂರ ಮಂದಾರ ಹೂವೇ ನನ್ನೊಲುಮೆ ಬಾಂದಳದ ಚೆಲುವೆಯೂ ಆಯಿತು. ಮುನಿಸು ತರವೇ ಮುಗುದೇ ಹಿತವಾಗಿ ನಗಲೂ ಬಾರದೆ ಎಂಬ ರಾಜಿ ಸಂಧಾನದ ಗೀತೆಯಾಯಿತು. ವಾರ ಬಂತಮ್ಮ ಗುರುವಾರ ಬಂತಮ್ಮ ಹೀಗೆ ಏನೇನೆಲ್ಲ ಸಾಧ್ಯವಾಗಿ, ತೆಲುಗಿನಲ್ಲಿ ಮಳ್ಳೀ ಮಳ್ಳೀ ಇದಿ ರಾನಿ ರೋಜಾ ಎಂದೆನಿಸಿಕೊಂಡಿತು. ಇದೇ ಧಾಟಿಯಲ್ಲಿ ಕನ್ನಡದಲ್ಲಿ ಹೃದಯವೇ ನಿನ್ನ ಹೆಸರಿಗೆ ಬರೆದೇ ನನ್ನೆ ನಾನು ಎಂದಾಯಿತು.
ಶ್ರೀರಾಗಕ್ಕೂ ಮಧ್ಯಮಾವತಿಗೂ ಜನ್ಮಜನ್ಮದ ಅನುಬಂಧ! ಮೇಳಕರ್ತ ರಾಗದ ನಂಟು. ಹಾಗಾಗಿ ಭಾಗ್ಯದಾ ಲಕ್ಷ್ಮೀ ಬಾರಮ್ಮ ಎಂದು ಎರಡೂ ರಾಗಗಳಲ್ಲಿ ಹಾಡಬಹುದು. ಭಾಗ್ಯಾದ ಬಳೆಗಾರ ಹೋಗಿ ಬಾ ನನ್ ತವರೀಗೆ ಸಹ ಇದೇ ಮಧ್ಯಮಾವತಿಗೆ ಋಣಿ. ಮೈಯೆಲ್ಲ ಹೂವಾಗುವಂತಹ ಭಾವ. ಎದೆಯು ಕಡಲಾಗುವಂತಹ ಅನುಭಾವ ಇನ್ನೆಲ್ಲಿ ಸಾಧ್ಯ? ಈ ಗೀತೆ ಕೇಳಿ ಹರಿವ ನದಿ ಚಲನೆ ಮರೆತು ಭಾವದ ಬೆಸುಗೆ ಹಾಕಿಸಿಕೊಂಡು ಮತ್ತೆ ತನ್ನ ಪಯಣವನ್ನು ಮುಂದುವರೆಸುವಂತಹ ಮೋಡಿಯುಂಟು. ಮಧ್ಯಮಾವತಿಗೆ ಜಾನಪದೀಯ ನಂಟುಂಟು. ಶಾಸ್ತ್ರೀಯದ ಗುಣವುಂಟು. ಹಾಗಾಗಿ ಅದು ಏಕಕಾಲಕ್ಕೆ ಗಾಂಧೀ ಕ್ಲಾಸೂ ಹೌದು; ಬಾಲ್ಕನಿ ಕ್ಲಾಸೂ ಹೌದು.
ಹಾಗಾಗಿ ಮಧ್ಯಮಾವತಿಗೆ ನಾನೂ ಫಿದಾ ಆಗಿ ಬರೆದದ್ದು:
ಚೆಲಿ ಫಟ ಕೋರಿ, ಚೆಲಿಕೈ ವೇಚಿ
ಚಲಿಗಾಲಿಲೋ ಮೇನು ಅದಿರೆ.
ಆಕಾಶಮಂತಾ, ಆಷಾಢಮಂತಾ
ಚೆಲಿ ಪ್ರೇಮ ಸಂದೇಶಮೇಲೇ.
ಮೆಘಮೈ, ಓಘಮೈ ಮುತ್ಯಾಲ ಫುಲ್ಲೈಪೋವೇ.
ಆ ಹರಿವಿಲ್ಲು ರಂಗೈಪೋವೇ.
ಮಧ್ಯಮಾವತಿ ಮೈಮನ ಪುಳಕಗೊಳಿಸುವಂತಹ ರಾಗ. "ಹೂಬನ ಕುಸುಮಿಸಿ ಪುಳಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸೆಯಿಸಿತು" ಎಂಬ ಬೇಂದ್ರೆ ಸಾಲುಗಳಲ್ಲಿನ ಸಂಭ್ರಮಾಚರಣೆ. ನಿಜಕ್ಕೂ ಮಧ್ಯಮಾವತಿ "ಆಲಾಪದೇರಿಳಿತದಲಿ ನಾ ಕಂಡೆ ಮೋಹನ ಮುರಳಿ!"
- ಕೆ. ರಾಜಕುಮಾರ್, ಬೆಂಗಳೂರು
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ