ಗೃಹಿಣಿಯರೇ ಗೃಹಕ್ಕೆ ಶೋಭೆಯಲ್ಲವೇ

Arpitha
0


ಸಾಮಾನ್ಯವಾಗಿ ಮನೆಯಲ್ಲಿ ಗಂಡ ಯಜಮಾನನಾಗಿರುತ್ತಾನೆ‌. ಗಂಡ ಹೆಂಡತಿ ಮತ್ತು ಮಕ್ಕಳು ಇರುವ ಸಂಸಾರದ ಬಂಡಿಯನ್ನು ದಂಪತಿಗಳೇ ದೂಡಬೇಕಲ್ಲವೇ? ಹೀಗಿರುವಾಗ ಅಪ್ಪ ಮತ್ತು ಅಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಬದುಕು ದೂಡುತ್ತಾರೆ.


ತಂದೆ ಜವಾಬ್ದಾರಿಯುತ ಮನುಷ್ಯವಾಗಿದ್ದರೆ ದಿನವಿಡೀ ದುಡಿದು ಬಂದ ಸಂಪಾದನೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತ, ಮನೆಯ ಖರ್ಚು ನಿಭಾಯಿಸುತ್ತಾ ಸಾಗುತ್ತಾನೆ. ಅದೇ ಕುಡುಕ ತಂದೆಯಾದರೆ ಬಿಡಿ. ಕುಡಿಯಲೂ ಅಮ್ಮನ ಹಣವೇ ಬೇಕು. ಇನ್ನೆಲ್ಲಿಂದ ಬಂತು ದುಡಿಮೆ, ಜವಾಬ್ದಾರಿ ಎಲ್ಲ.....


ಈ ವ್ಯವಸ್ಥೆ- ಅವಸ್ಥೆಗಳ ನಡುವೆ ಅಮ್ಮನ ಪಾತ್ರವೂ ಬಹುಮುಖ್ಯವಾದದ್ದು. ಏಕೆಂದರೆ ಕೆಲಸಕ್ಕೆ ಹೋಗುವ ತಾಯಿಯಾದರೆ ಉದ್ಯೋಗಿಯಾಗಿ, ಮನೆಯಲ್ಲಿ ಮಕ್ಕಳಿಗೆ ತಾಯಾಗಿ, ಗಂಡನಿಗೆ ಹೆಂಡತಿಯಾಗಿ , ಪ್ರತಿಯೊಂದು ಹೊಣೆಯನ್ನು ಹೊರಲೂ ಸಿದ್ಧಳಿರುತ್ತಾಳೆ.


ಗೃಹಿಣಿಯಾದರೆ ಬಿಡಿ. ಮನೆಯಲ್ಲಿ ಮಾಡಿದಷ್ಟು ಮುಗಿಯದ ಕೆಲಸಗಳು. ' ಮನೆಯಲ್ಲೇ ಇರುತ್ತಾಳೆ, ಏನಿದೆ ಕೆಲಸ' ಅನ್ನೋರೆಲ್ಲ ಜೀವನದಲ್ಲಿ ಒಮ್ಮೆಯಾದರೂ ಅವಳ ಪಾತ್ರವನ್ನು ನಿರ್ವಹಿಸಲೇಬೇಕು. ಹಣದ ಆಸೆಯಿಲ್ಲದೆ, ಸಂಬಳದ ಪರಿಕಲ್ಪನೆಯೇ ಇಲ್ಲದೆ ದುಡಿಯುವ ಏಕಮಾತ್ರ ಜೀವ ಅದೇ ಆಗ ಗೃಹಿಣೆ ಅಂದೆಯಲ್ವಾ ನಮ್ಮ ಮನೆಯ ಭಾಗ್ಯ ಲಕ್ಷ್ಮಿ. ತನ್ನ ಮನೆ, ತನ್ನ ಸಂಸಾರ, ತನ್ನವರು ಎಂದಷ್ಟೇ ಆಕೆ ದುಡಿಯುತ್ತಾಳೆ, ತನ್ನವರಿಗಾಗಿ ಯಾವ ತ್ಯಾಗಕ್ಕೂ ರೆಡಿಯಿರುತ್ತಾಳೆ.


ಮನೆಯಲ್ಲಿ ಅಮ್ಮನಿಗೆ ಒಂದು ದಿನ ಅನಾರೋಗ್ಯವಾದರೆ ಬಿಡಿ, ಮನೆಯ ಸ್ಥಿತಿ ಫಜೀತಿ. ಪ್ರತೀ ಕರ್ತವ್ಯಕ್ಕೆ ಮೊದಲಿರುವ ಅಮ್ಮ, ಅಡುಗೆಯಿಂದ ಹಿಡಿದು ಎಲ್ಲಾ ಕೆಲ್ಸನಾ ಶಿಸ್ತಿನಲ್ಲಿ ಮಾಡಿ ಮುಗಿಸೋ ಅಮ್ಮ ಒಂದು ದಿನ ಹಾಸಿಗೆ ಹಿಡಿದರೆ ಮನೆಯಲ್ಲಿ ಮಾತ್ರ ನೀರವ ಮೌನ, ಕಳೆಗುಂದಿದ ವಾತಾವರಣ.


"ಗೃಹಿಣಿ" ಗಿರುವ ಶಕ್ತಿ ಅಂತಹುದೇ. ತನ್ನ ಮುಟ್ಟಿನ ಸಮಯದಲ್ಲೂ ಆಕೆ ಮಲಗಿದರೆ ಎಲ್ಲಿ ಮಕ್ಕಳು ಹಸಿದಿರುತ್ತಾರೋ, ಗಂಡನಿಗೆ ಎಲ್ಲಿ ಕಷ್ಟವಾಗುತ್ತೋ ಎಂದಷ್ಟೇ ಯೋಚಿಸಿ ಹೊಟ್ಟೆಗೊಂದು ಗಟ್ಟಿಯಾಗಿ ಬಟ್ಟೆ ಕಟ್ಟಿ ಮತ್ತೆ ತನ್ನ ದಿನನಿತ್ಯದ ಕೆಲಸಕ್ಕೆ ಹಾಜರಾಗುತ್ತಾಳೆ. ಅಮ್ಮ ಇದ್ದರೆ ಮನೆಯೂ ಮನವೂ ಅವಳಷ್ಟೇ ನಿರ್ಮಲ.


ಅದಕ್ಕೆ ಗೃಹಿಣಿ ಎಂದರೆ ತಾತ್ಸಾರ ಬೇಡ. ಅವಳು ಮನೆಯ ಬೆಳಕು, ನಮ್ಮ ಮನದ ಹಸಿರು. ಗೃಹಿಣಿಯೇ ನಿಜವಾದ ಮನೆಯ ಶೋಭೆ.......ಏನಂತೀರಾ..?


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top