ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಶ್ರದ್ಧಾಂಜಲಿ ಕಾರ್ಯಕ್ರಮ

Upayuktha
0

ಯೋಧರಿಗೆ ಗೌರವ ಸಲ್ಲಿಸದವರು ಆತ್ಮಾವಲೋಕನ ಮಾಡಿಕೊಳ್ಳಬೇಕು: ಸುಬ್ರಹ್ಮಣ್ಯ ನಟ್ಟೋಜ


ಪುತ್ತೂರು: ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಅವರ ಸಂಗಡಿಗರ ಅಕಾಲಿಕ ಮರಣ ದೇಶಕ್ಕೇ ಆಘಾತವನ್ನುಂಟುಮಾಡಿದೆ. ನಾಗರಿಕ ಸಮಾಜವನ್ನು ಕಾಪಾಡುವುದಕ್ಕೆ ತಮ್ಮ ವೈಯಕ್ತಿಕ ಬದುಕನ್ನು ತ್ಯಾಗಮಾಡುವ ವೀರಯೋಧರಿಗೆ ಗೌರವ ಸಮರ್ಪಿಸುವುದು ಪ್ರತಿಯೊಬ್ಬನ ಆದ್ಯ ಕರ್ತವ್ಯ. ಭಾರತದ ಅನ್ನ ತಿಂದು ದೇಶದ ಯೋಧರಿಗೆ ಗೌರವ ಸಲ್ಲಿಸದವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.


ಅವರು ನಗರದ ಕಿಲ್ಲೆ ಮೈದಾನದ ಬಳಿಯಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಸ್ಮಾರಕದ ಸಂರಕ್ಷಣಾ ಸಮಿತಿ ಹಾಗೂ ಅಂಬಿಕಾ ಪದವಿ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾದ ಜ.ಬಿಪಿನ್ ರಾವತ್ ಹಾಗೂ ಸಂಗಡಿಗರ ಬಗೆಗಿನ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಗುರುವಾರ ಮಾತನಾಡಿದರು.


ಮಾಜಿ ಸೈನಿಕರ ಸಂಘದ ಪರವಾಗಿ ಮಾತನಾಡಿದ ನಿವೃತ್ತ ವಾರಂಟ್ ಆಫೀಸರ್ ವಸಂತ ಮಾತನಾಡಿ ಜ.ರಾವತ್ ಅವರು ರಾಷ್ಟ್ರೀಯ ಚಿಂತನೆಯನ್ನು ಪ್ರಖರವಾಗಿ ಹೊಂದಿದ್ದ ವ್ಯಕ್ತಿ. ಸರ್ಜಿಕಲ್ ಸ್ಟ್ರೈಕ್ ನಂತಹ ಅನೇಕ ಯುದ್ಧತಂತ್ರಗಳ ನೇತೃತ್ವ ವಹಿಸಿದವರು. ಮಿಲಿಟರಿ ವ್ಯವಸ್ಥೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಸಾಕಷ್ಟು ಯೋಜನೆ ರೂಪಿಸಿದವರು. ದೇಶದ ಮೊತ್ತಮೊದಲ ಸಿಡಿಎಸ್ ಹುದ್ದೆಯನ್ನು ಅಲಂಕರಿಸಿದ ವ್ಯಕ್ತಿ ಎಂದು ನುಡಿದರು.


ಕಾರ್ಯಕ್ರಮದಲ್ಲಿ ನಗರಸಭಾ ಆಯುಕ್ತ ಮಧು ಎಸ್ ಮನೋಹರ್ ಶ್ರದ್ಧಾಂಜಲಿಯ ಮಾತುಗಳನ್ನಾಡಿದರು. ಪುತ್ತೂರಿನ ಸಹಾಯಕ ಆಯುಕ್ತ ಡಾ.ಯತೀಶ್ ಕುಮಾರ್ ಉಳ್ಳಾಲ್, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಸದಸ್ಯರುಗಳಾದ ಕೆ.ಸುರೇಶ ಶೆಟ್ಟಿ, ಡಾ.ಎಚ್.ಮಾಧವ ಭಟ್, ಪ್ರಸನ್ನ ಭಟ್, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ, ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಶಂಕರನಾರಾಯಣ ಭಟ್, ನೆಲ್ಲಿಕಟ್ಟೆ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯ ಪ್ರಾಂಶುಪಾಲೆ ಮಾಲತಿ ಡಿ, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ಅಂಬಿಕಾ ಪರಿವಾರದ ಬೋಧಕ ಹಾಗೂ ಬೋಧಕೇತರ ವೃಂದ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿ ಪುಷ್ಪನಮನ ಸಲ್ಲಿಸಿದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top