ಉಡುಪಿ: ಶ್ರೀ ಕೃಷ್ಣದೇವರ ದರ್ಶನ ಪಡೆಯಲು ಇದೇ ಮೊದಲ ಬಾರಿಗೆ ಉಡುಪಿಗೆ ಆಗಮಿಸಿದ ರಾಜ್ಯಪಾಲ ಶ್ರೀ ತಾವರ್ ಚಂದ್ ಗೆಹ್ಲೋಟ್ ಅವರನ್ನು ಗುರುವಾರ ರಾತ್ರಿ ಪ್ರವಾಸಿ ಬಂಗ್ಲೆಯಲ್ಲಿ ಶ್ರೀ ಪೇಜಾವರ ಮಠದ ಪರವಾಗಿ ಸ್ವಾಗತಿಸಿ ಅಭಿನಂದನೆ ಸಲ್ಲಿಸಲಾಯಿತು.
ಮಠದ ದಿವಾನರಾದ ಎಂ ರಘುರಾಮಾಚಾರ್ಯ, ಸಿಇಒ ಸುಬ್ರಹ್ಮಣ್ಯ ಭಟ್, ವಿದ್ವಾನ್ ವೇಣುಗೋಪಾಲ ಸಾಮಗ ಹಾಗೂ ಸಾಮಾಜಿಕ ಕಾರ್ಯಕರ್ತ, ಶ್ರೀಗಳ ಆಪ್ತ ವಾಸುದೇವ ಭಟ್ ಪೆರಂಪಳ್ಳಿ ಮೊದಲಾದವರಿದ್ದ ನಿಯೋಗವು ರಾಜ್ಯಪಾಲರನ್ನು ಭೇಟಿಯಾಗಿ ಶ್ರೀಕೃಷ್ಣನ ಪಾವನ ಭೂಮಿ ಉಡುಪಿಗೆ ಹಾರ್ದಿಕ ಸ್ವಾಗತ ಕೋರಿ ಝರತಾರಿ ಶಾಲು ಹೂಗುಚ್ಛ, ದಿವಂಗತ ಪಾದೂರು ಗುರುರಾಜ ಭಟ್ಟರ ತುಳುನಾಡು ಸಂಸ್ಕೃತಿ ಮತ್ತು ಇತಿಹಾಸ ಒಂದು ಅಧ್ಯಯನ ಸಂಶೋಧನಾ ಕೃತಿ, ಡಾ ಬನ್ನಂಜೆ ಗೋವಿಂದಾಚಾರ್ಯರ ಕನಕೋಪನಿಷತ್ತು, ಪ್ರಸಿದ್ಧ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರೊಂದಿಗೆ ಒಂದು ದಿನ ಛಾಯಾಚಿತ್ರ ಸಂಚಿಕೆ, ಹಾಗೂ ಫಲವಸ್ತುಗಳನ್ನಿತ್ತು ಅಭಿನಂದಿಸಿದರು. ಶ್ರೀ ಸಾಮಗರು ಮತ್ತು ವಾಸುದೇವ ಭಟ್ಟರು ಈ ಸಂದರ್ಭ ಮಂಗಲಾಷ್ಟಕ ಸ್ತೋತ್ರಗೈದರು.
ರಾಜ್ಯಪಾಲರಿಗೆ ನೀಡಿದ ಗುರುರಾಜ ಭಟ್ಟರ ಕೃತಿಯ ಒಳಪುಟದಲ್ಲಿ ಸಂಸ್ಕೃತ ಕನ್ನಡ ಹಾಗೂ ತುಳು ಲಿಪಿಗಳಲ್ಲಿ ರಾಜ್ಯಪಾಲರ ಹೆಸರುಳ್ಳ ಶ್ರೀ ವಿಶ್ವಪ್ರಸನ್ನತೀರ್ಥರ ಶುಭ ಸಂದೇಶವನ್ನೂ ಲಗತ್ತಿಸಲಾಗಿತ್ತು. ತುಳು ಲಿಪಿಯ ಹೆಸರಿನ ಬಗ್ಗೆ ಕುತೂಹಲದಿಂದ ವಿವರ ಕೇಳಿ ಪಡೆದರು.
ಮಂಗಳವಾರದಂದು ರಾಜಭವನದಲ್ಲಿ ಪದ್ಮಪ್ರಶಸ್ತಿ ಪುರಸ್ಕೃತರಿಗೆ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಶ್ರೀ ಪೇಜಾವರ ಶ್ರೀಗಳು ಪೂರ್ವನಿರ್ಧರಿತ ಕಾರ್ಯ ನಿಮಿತ್ತ ಭಾಗವಹಿಸಲು ಅನಾನುಕೂಲವಾಗಿರುವುದನ್ನು ತಿಳಿಸಲಾಯಿತು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ