|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧರೆಗಿಳಿದ ಸ್ವರ್ಗ ಈ ಗೋಸ್ವರ್ಗ

ಧರೆಗಿಳಿದ ಸ್ವರ್ಗ ಈ ಗೋಸ್ವರ್ಗ



ಮೊತ್ತ ಮೊದಲಿಗೆ ಶಿವಮೊಗ್ಗ ಜಿಲ್ಲೆಯ ಹೊಸ ನಗರ ತಾಲೂಕಿನ "ಕಾರಣಗಿರಿ" ಎಂಬಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದೆವು. ಮುಖ್ಯ ರಸ್ತೆಯ ಬದಿಯಲ್ಲಿಯೇ ಇರುವ ಈ ಬೃಹತ್ ದೇವಾಲಯ ಬಹಳ ಪ್ರಸಿದ್ಧವೂ ಆಗಿದೆ. ಪುಟ್ಟ ಗಣಪನ ವಿಗ್ರಹ ನೋಡಲು ನಯನ ಮನೋಹರ, ನನಗೆ ಇಲ್ಲಿ ತುಂಬಾ ಇಷ್ಟವಾದ ಇನ್ನೊಂದು ವಿಷಯ ಎಂದರೆ, ಒಂದಕ್ಕಿಂತ ಒಂದು ಸುಂದರ ನುಡಿಮುತ್ತುಗಳ ಹಲವಾರು ಫಲಕಗಳನ್ನು ದೇವಳದ ಪ್ರಾಂಗಣದೊಳಗೆ ಇಟ್ಟಿರುವುದು. ಓದಿದಷ್ಟು ಸಾಕಾಗದ ಈ ನುಡಿ ಮುತ್ತುಗಳನ್ನು ಹಲವಾರು ಬಾರಿ ಓದಿದರೂ ಸಮಾಧಾನವಾಗದೇ ಫೋಟೊ ಕ್ಲಿಕ್ಕಿಸಿ ತಂದಿರುವೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಈ ಸ್ಥಳಕ್ಕೆ "ಕಾರಣಗಿರಿ" ಎಂಬ ಹೆಸರು ಬರಲು ಒಂದು ಐತಿಹ್ಯವಿದೆ, ಅಗಸ್ತ್ಯ ಮುನಿಗಳು ಈ ಸ್ಥಳದಲ್ಲಿ ಗಣಪತಿಯನ್ನು ಪೂಜಿಸುತ್ತಿದ್ದರಂತೆ, ರಾವಣನು ಕದ್ದೊಯ್ದ ಸೀತೆಯನ್ನು ಕರೆತರಲು ಲಕ್ಷಣನೊಡನೆ ಹೊರಟ ರಾಮನು ಈ ದಾರಿಯಲ್ಲಿ ಹೋಗುವಾಗ, ಈ ಸ್ಥಳವನ್ನು ಸಂದರ್ಶಿಸಿದನಂತೆ, ಹಿಂತಿರುಗುವಾಗ ಮತ್ತೆ ಭೇಟಿಯಾಗುವ ಸೂಚನೆಯನ್ನಿತ್ತ ಅಗಸ್ತ್ಯ ಮುನಿಗಳಿಗೆ ವಾಗ್ದಾನವನ್ನಿತ್ತು ಹೊರಟರಂತೆ. ಸೀತೆಯನ್ನು ಕರೆದುಕೊಂಡು ಪುಷ್ಪಕ ವಿಮಾನದಲ್ಲಿ ಹಿಂತಿರುಗುವಾಗ ಸಂತೋಷದ ಭರದಲ್ಲಿ ಮುನಿಗಳಿಗಿತ್ತ ಮಾತನ್ನು ಮರೆತರಂತೆ, ಬೆಟ್ಟವೊಂದು ಅವರ ಪುಷ್ಪಕ ವಿಮಾನವನ್ನು ತಡೆದಾಗ, ರಾಮನು "ಕಿಂ ಕಾರಣಂ ಗಿರಿಃ"  ಎಂದು ಪ್ರಶ್ನಿಸಿದನಂತೆ, ಆಗ ಲಕ್ಷ್ಮಣನು ಅಗಸ್ತ್ಯ ಮುನಿಗಳ ಮಾತನ್ನು ಜ್ಞಾಪಿಸಿದಾಗ, ಅಲ್ಲಿ ಇಳಿದು ವಿನಾಯಕನನ್ನು ಪೂಜಿಸಿ, ತುಸು ಮುಂದೆ ಹೋಗಿ (ಎರಡು ಕಿ.ಮೀ. ದೂರ) ಅಲ್ಲಿ ವಿಶ್ರಾಂತಿ ಪಡೆದು ಹಿಂತಿರುಗಿದರಂತೆ. ಈ ತಾಣವೇ ಮುಂದೆ ಶ್ರೀರಾಮಚಂದ್ರಾಪುರವೆಂದು ಖ್ಯಾತಿ ಪಡೆಯಿತು. "ಕಿಂ ಕಾರಣಂ ಗಿರಿಃ" ಎಂದ ರಾಮನ ಮಾತೇ ಈ ಸ್ಥಳಕ್ಕೆ ಕಾರಣಗಿರಿ ಎಂಬ ಹೆಸರನ್ನು ನೀಡಿತು.


ಮಧ್ಯಾಹ್ನದ ಪೂಜೆಗೆ ಇನ್ನೂ ಸಮಯವಿದ್ದ ಕಾರಣ ನಾವು ಅಲ್ಲಿ ಪೂಜೆಗೆ ನಿಲ್ಲದೇ, ಪಕ್ಕದಲ್ಲಿಯೇ ಇದ್ದ ಶ್ರೀರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಲು ನಮ್ಮ ಪಯಣ ಮುಂದುವರೆಸಿದೆವು. ರಾಮಚಂದ್ರಾಪುರ ಮಠದಲ್ಲಿ ಪೂಜೆ ಮುಗಿದು ಅನ್ನ ಪ್ರಸಾದ ತಯಾರಾಗಿತ್ತು, ಅಲ್ಲಿಯ ಅರ್ಚಕರು ನಮಗಾಗಿ ಮತ್ತೆ ಬಾಗಿಲು ತೆರೆದು ದೇವರ ದರ್ಶನ ಭಾಗ್ಯ ನಮಗೊದಗಿಸಿದರಲ್ಲದೇ, ಆ ಸ್ಥಳದ ಬಗ್ಗೆ, ರಾಮಚಂದ್ರಾಪುರ ಮಠದ ಬಗ್ಗೆ ಬಹಳಷ್ಟು ವಿಷಯಗಳನ್ನು ವಿವರಿಸಿದರು. ಮಹಡಿ ಮೇಲಿರುವ ಶ್ರೀಗುರುಗಳ ಪೀಠವನ್ನು ವೀಕ್ಷಿಸಲು ಅನುವು ಮಾಡಿಕೊಟ್ಟರು. ಭೋಜನ ತಯಾರಿದೆ ಪ್ರಸಾದ ಸ್ವೀಕರಿಸಿ ಎಂದು ಆಗ್ರಹಿಸಿದರು, ಕಾರಣಗಿರಿಯಲ್ಲಿ ತಡವಾಗುತ್ತದೆ, ಎಂದು ಊಟ ಮಾಡದೇ ಬಂದಿದ್ದೇವೆ, ಮತ್ತೆ ಇಲ್ಲಿ ಊಟ ತಿರಸ್ಕರಿಸುವುದು ಬೇಡ ಎಂದು ತಡವಾಗಿ ಬೆಳಗ್ಗಿನ ಉಪಹಾರ ಮಾಡಿದ ನಮಗೆ ಇನ್ನೂ ಹಸಿವಾಗಿರದಿದ್ದರೂ, ಅಲ್ಲಿಯೇ ಅನ್ನ ಪ್ರಸಾದ ಸ್ವೀಕರಿಸಿದೆವು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ರಾಮಚಂದ್ರಾಪುರ ಮಠದಲ್ಲಿ ದೊಡ್ಡ ಗೋಶಾಲೆ ಇದೆ, ಸುಮಾರು ನಾಲ್ಕು ನೂರು ವಿವಿಧ ತಳಿಯ ಗೋವುಗಳು ಅಲ್ಲಿವೆ, ಗೋಶಾಲೆಯ ಪಕ್ಕದಲ್ಲಿ ಗೋಪಾಲಕೃಷ್ಣ ದೇವಸ್ಥಾನವಿದೆ. ಪೂಜೆ ಮುಗಿದ ಕಾರಣ ನಮಗೆ ದರ್ಶನ ಸಿಗಲಿಲ್ಲ. ಅಲ್ಲೇ ಅರ್ಧ ಕಿ.ಮೀ ದೂರದಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿರುವ ಚಂದ್ರ ಮೌಳೀಶ್ವರ ದೇವಾಲಯವಿದೆ, ಕೇರಳದ ವಾಸ್ತುಶಿಲ್ಪ ಕಲಾ ಮಾದರಿಯಲ್ಲಿ ಕಟ್ಟಿಸುತ್ತಿರುವ ಈ ದೇವಾಲಯದ ಗರ್ಭಗುಡಿಯ ಹಿಂಭಾಗ ಗಜಪೃಷ್ಟ ಆಕೃತಿಯಲ್ಲಿದೆ, ದೂರದಿಂದಲೇ ಇದನ್ನು ವೀಕ್ಷಿಸಿ ಕೈ ಮುಗಿದು ಬಂದೆವು.


ಸ್ವರ್ಗ ಎಲ್ಲಿದೆ?

ಯಾರಾದರೂ ನನ್ನನ್ನು ಸ್ವರ್ಗ ಎಲ್ಲಿದೆ? ಎಂದು ಕೇಳಿದರೆ, ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ  ಬಾನ್ಕುಳಿಯಲ್ಲಿ ಎಂದು ಹೇಳುತ್ತೇನೆ. ಹೆಸರಿಗೆ ತಕ್ಕಂತೆ ಸ್ವರ್ಗವೇ ಅದು ಗೋವುಗಳ ಸ್ವರ್ಗ, ಗೋವುಗಳು ಸ್ವಚ್ಛಂದವಾಗಿ ತಿರುಗಾಡುವ ಧರೆಗಿಳಿದು ಬಂದ ಸ್ವರ್ಗ.


ಸಾಗರದಿಂದ ಸಿದ್ಧಾಪುರಕ್ಕೆ ಬಂದು ಕುಮಟಾ ರಸ್ತೆಗೆ ತಿರುಗಿದರೆ, ಮುಖ್ಯ ರಸ್ತೆಯಲ್ಲಿ ಬಲಬದಿಗೆ ಗೋಸ್ವರ್ಗ ಎಂಬ ಫಲಕ ಕಾಣಿಸುತ್ತದೆ, ಅಲ್ಲಿ ಹೊರಳಿದರೆ ಸುಸಜ್ಜಿತವಾದ ರಸ್ತೆ, ಆ ರಸ್ತೆಯಲ್ಲಿ ಒಂದೂವರೆ ಕಿ.ಮೀ ಕ್ರಮಿಸಿದರೆ ಸಿಗುವುದೇ ಬಾನ್ಕುಳಿಯ  ಗೋಸ್ವರ್ಗ.


ಶ್ರೀರಾಮಚಂದ್ರಾಪುರ ಮಠಕ್ಕೆ ಸೇರಿದ ಈ ಗೋಸ್ವರ್ಗ ಎಂಬ ಸ್ಥಳದಲ್ಲಿ, ವಿಶಾಲವಾದ ವಾಹನ ನಿಲುಗಡೆ ಇದೆ. ಒಂದು ಕಲ್ಯಾಣ ಮಂಟಪ, ಮಠ ಇದೆ, ರಾಮ ಮಂದಿರ ಇದೆ. ರಾಮ ದೇವರ ದರ್ಶನ ಪಡೆದು ಎಡಕ್ಕೆ ತಿರುಗಿದರೆ ಸುತ್ತ ಮುತ್ತ ಗಿಡಗಳಿಂದಾವೃತವಾದ ಕಾಲುದಾರಿ ಸೀದಾ ಗೋಸ್ವರ್ಗಕ್ಕೆ ಹೋಗುತ್ತದೆ. ಮುಖ್ಯ ದ್ವಾರ ಕಣ್ಣಿಗೆ ಗೋಚರಿಸುವಾಗಲೇ ಕಾಲುದಾರಿಯ ಎಡ ಬಲ ಎರಡೂ ಬದಿಗಳಲ್ಲಿ ಕಣ್ಸೆಳೆಯುವುದೇ ಬಣ್ಣದ ಬಣ್ಣದ ಗಿಡಗಳಲ್ಲಿ ಅರಳಿಸಿದ "ಗೋಸ್ವರ್ಗ" ಮತ್ತು "ಹರೇ ರಾಂ"ಎಂಬ ನುಡಿಗಳು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಮುಖ್ಯ ದ್ವಾರದಿಂದ ಒಳಗೆ ಪ್ರವೇಶಿಸಿದೊಡನೆ ನಾನು ಹಾಕಿದ ಮುಖಗವಸು ತೆಗೆದೆ, ತಕ್ಷಣ ಇವರು "ಮಾಸ್ಕ್ ಧರಿಸುವುದು ಕಡ್ಡಾಯ" ಎಂಬ ಫಲಕ ತೋರಿಸಿದರು. "ಇಲ್ಲ ರೀ ನನಗೆ ಗೋಮೂತ್ರ ಗೋಮಯದ ಸುವಾಸನೆ ಆಘ್ರಾಣಿಸಬೇಕು, ನಾನು ಮುಖಗವಸು ಹಾಕುವುದಿಲ್ಲ" ಎಂದೆ. ಒಳಗೆ ಬಂದ ತಕ್ಷಣ ನಮ್ಮನೆಯವರ ಕೈ ತನ್ನಿಂದ ತಾನೇ ಮಾಸ್ಕ್ ಇಳಿಸಲು ಮುಂದಾಯಿತು.


ಮುಖ್ಯದ್ವಾರದ ಎದುರಿಗೆ ನಡುವೆ ಒಂದು ಪುಷ್ಕರಣಿ, ಅದರ ನಡುವೆ ಒಂದು ಮಂಟಪ, ಅದಕ್ಕೆ ನಾಲ್ಕು ಕಡೆಯಿಂದ ಹೋಗುವ ದಾರಿ. ಈ ಪುಷ್ಕರಣಿಯ ಸುತ್ತಲು ಚೌಕಟ್ಟು ಹಾಕಿದ ಕಾಲುದಾರಿಯಾದರೆ, ಅದರ ಹೊರ ಭಾಗದಲ್ಲಿ ಗೋವುಗಳಿಗೆ ಸ್ವಚ್ಛಂದವಾಗಿ ತಿರುಗುವ ಅಂಗಳ. ಈ ಗೋಶಾಲೆಯಲ್ಲಿ ಸುಮಾರು 700 ಗೋವುಗಳಿವೆ.


ಇಲ್ಲಿ ಗೋವುಗಳಿಗೆ ಮೇವು ಹಾಕುವ ವ್ಯವಸ್ಥೆ ಇದೆ, ನೂರು ರೂಪಾಯಿ ಕೊಟ್ಟರೆ ಒಂದು ಟ್ರೇಯಲ್ಲಿ ಹಿಂಡಿ ಮತ್ತು ಹುಲ್ಲು ಮಿಶ್ರ ಮಾಡಿದ ಗೋ ಆಹಾರ ಕೊಡ್ತಾರೆ. ಅದನ್ನು ಹಾಕಲು  ಗೋವುಗಳ ಮತ್ತು ನಮ್ಮ ನಡುವೆ ಬಾನಿ ಇದೆ, ಅದರಲ್ಲೂ ಹಾಕಬಹುದು, ಟ್ರೇಯನ್ನೇ ಗೋವುಗಳ ಬಾಯಿಯ ಸಮೀಪ ಹಿಡಿದು ತಿನ್ನಿಸಲೂ ಬಹುದು, ಅಥವಾ ಗೋವುಗಳ ಒಡನಾಟದ ರೂಢಿ ಇದ್ದರೆ, ಅವುಗಳ ಬಾಯಿಗೆ ಆಹಾರ ಕೊಡಬಹುದು.


ನಾವು ಮೊದಲು ಮೂರು ಟ್ರೇ ತೆಗೆದುಕೊಂಡೆವು, ಗೋವುಗಳ ಒಡನಾಟದ ಅಭ್ಯಾಸ ಇಲ್ಲದ ನಾನು ಟ್ರೇಯನ್ನು ಗೋವುಗಳ ಬಾಯಿಯ ಬಳಿ ಹಿಡಿದರೆ, ಹೆದರಿದ ಮಗಳು ಬಾನಿ ಗೆ ಆಹಾರ ಹಾಕಿ ದೂರ ಸರಿದು ಫೋಟೊ ತೆಗೆಯುವುದರಲ್ಲಿ ಮಗ್ನಳಾದಳು. ಒಡನಾಟ ಇಲ್ಲದಿದ್ದರೂ, ಇವರು ಪ್ರತಿಯೊಂದು ಗೋವುಗಳ ಬಾಯಿಗೆ ಸ್ವತಃ ಕೈಯಿಂದ ಆಹಾರ ತಿನ್ನಿಸಿದರು. ಸಬಲರು ದುರ್ಬಲರ ಮೇಲೆ ಅಧಿಕಾರ ನಡೆಸುತ್ತಾರೆ ಎಂಬುದು ಇಲ್ಲೂ ಸಾಬೀತಾಯಿತು, ಬಲಿಷ್ಟವಾದ ಎತ್ತುಗಳು, ಪಾಪದ ಹಸುಗಳನ್ನು, ಕರುಗಳನ್ನು ಕೊಂಬಿನಿಂದ ತಿವಿದು, ದೂಡಿ ಆಹಾರ ತಿನ್ನಲು ಧಾವಿಸಿ ಬರುತ್ತವೆ.‌ ಅದನ್ನು ನೋಡಿದ ಇವರಿಗೆ ಆಹಾರ ತಿನ್ನಿಸಿದ ಸಮಾಧಾನ ಸಿಗದೇ, ಮತ್ತೆರಡು ತಗೊಂಡು ಬಾ ಎಂದು ಕಳುಹಿಸಿದರು.


ಅಲ್ಲಿ ಕುತ್ತಿಗೆಗೆ ಗಂಟೆ ಕಟ್ಟಿದ ಎತ್ತು ಇತ್ತು, ಅದು ಅಲ್ಲಿಯ ಮುಖ್ಯ ಗೋವು ಅಂತೆ ಅದರ ಹೆಸರು "ಸಾಮ್ರಾಟ", ಮೇವು ಕೊಡುವಾಗ ಮೊದಲು ಅದಕ್ಕೆ ಕೊಡಬೇಕಂತೆ, ಇಲ್ಲ ಅದು ಬೇರೆ ಗೋವುಗಳಿಗೆ ತಿನ್ನಲೇ ಬಿಡುವುದಿಲ್ಲವಂತೆ. ಅಲ್ಲಿ ಇದ್ದ ಒಬ್ಬ ಹುಡುಗ ಹೇಳಿದ, ಪ್ರಾಣಿ ಪಕ್ಷಿಗಳತ್ರ ಮಾತನಾಡುವ ನಾನು ಅದರ ಬಳಿ ಕೇಳಿದೆ, "ಏಯ್ ಸಾಮ್ರಾಟ, ಎಲ್ಲಿಯೋ ನಿನ್ನ ಸಾಮ್ರಾಜ್ಞಿ" ಅಂತ. ನನಗೆ ಅವನಿಗೂ ಒಬ್ಬ ಸಾಮ್ರಾಜ್ಞಿ ಇದ್ದಾಳೆ ಎಂಬ ಅರಿವಿರಲಿಲ್ಲ, ಸಹಜವಾಗಿಯೇ ಕೇಳಿದ್ದೆ, ಆದರೆ ನಿಜವಾಗಿಯೂ ಅವನಿಗೊಬ್ಬ ಸಾಮ್ರಾಜ್ಞಿ ಇದ್ದಾಳಂತೆ, ಅವಳ ಹೆಸರು "ಕಲ್ಯಾಣಿ" ಅಂತ, ಅವಳು ಪ್ರಸವ ವಿಭಾಗದಲ್ಲಿದ್ದಾಳೆ ಎಂಬ ಮಾಹಿತಿ ದೊರೆತು ಅವಳನ್ನು ನೋಡಲು ಹೋದೆವು. ಕಲ್ಯಾಣಿ ಕಪ್ಪು ಬಣ್ಣದ ಸ್ವಲ್ಪ ದೊಡ್ಡ ಗಾತ್ರದ ಹಸು.‌(ತಳಿಯ ಬಗ್ಗೆ ನನಗೆ ಹೆಚ್ಚಿನ ಜ್ಞಾನ ಇಲ್ಲ)


ಸಾಮ್ರಾಟನಿಗೆ ಪ್ರತಿದಿನ ಮಧ್ಯಾಹ್ನ ಅಭಿಷೇಕ ಪೂಜೆ ಮಾಡುವುದಿದೆಯಂತೆ, ಅದರ ಜೊತೆ ಪೂಜೆ ಮಾಡುವ ಒಂದು ಹಸುವೂ ಇದೆ, ಅದು ವಾರದ ಹಿಂದೆಯಷ್ಟೇ ಕರುವಿಗೆ ಜನ್ಮ ನೀಡಿದ ಕಾರಣ ಪ್ರಸವ ಶಾಲೆಯ (ವಿಭಾಗದ) ಬಳಿ ಇತ್ತು. ಅದು ಬಹಳ ಸಾಧು ಸ್ವಭಾವದ ಹಸು ಅಂತೆ, ಅದನ್ನು ನಾವು ಓಡಾಡುವ ಜಾಗದಲ್ಲೇ ಬಿಟ್ಟಿದ್ದಾರೆ, ಯಾರಿಗೂ ಹಾಯುವುದಾಗಲಿ, ಓಡುವುದಾಗಲಿ ಮಾಡದ ತುಂಬಾ ಪಾಪದ ಹಸು ಅದು. ಅದಕ್ಕೆ ಅಪ್ಪಿ ತಪ್ಪಿ ಯಾರಾದರೂ ಜೋರು ಮಾಡಿದರೆ, ಅದು ತುಂಬಾ ಸೂಕ್ಷ್ಮ, ಕಣ್ಣಲ್ಲಿ ನೀರೇ ಬಂದು ಬಿಡ್ತದಂತೆ.


ಹಬ್ಬ ಅಥವಾ ಯಾವುದಾದರೂ ವಿಶೇಷ ಸಂದರ್ಭಗಳಲ್ಲಿ ಈ ಸಾಧು ಸ್ವಭಾವದ ಹಸುವಿಗೆ ಎಲ್ಲಾ ಬಂಗಾರ ಹಾಕ್ತಾರಂತೆ, ಬೆಳಿಗ್ಗೆಯಿಂದ ಸಂಜೆ ತನಕ ಅಲ್ಲಾಡದೇ ನಿಂತ ಕಡೆಯೇ ನಿಲ್ಲುತ್ತದಂತೆ. ಅದರ ಒಂದು ವಾರದ ಪುಟ್ಟ ಕರು, ತಿರು ತಿರುಗಿ ನಮ್ಮತ್ರ ಬರುತ್ತಿತ್ತು ಪ್ರೀತಿ ಮಾಡು ಅಂತ, ಅದರ ತಲೆ ಸವರಿದರೆ, ಸುಮ್ಮನೆ ತಲೆ ಹೀಗೆ ಕೊಟ್ಟು ನಿಲ್ಲುತ್ತಿತ್ತು, ತುಂಬಾ ಚಂದದ ಕರು ಅದು.


ಪ್ರಸವ ಶಾಲೆಯ ಬಳಿಯೇ ಕರುಗಳ ವಿಭಾಗ ಇದೆ, ಅಲ್ಲಿ ಸಣ್ಣ ಪುಟ್ಟ ಎಲ್ಲಾ ಕರುಗಳನ್ನು ಬಿಟ್ಟಿದ್ದಾರೆ, ಅವು ಛಂಗನೇ ನೆಗೆದು, ಪುಟ ಪುಟನೆ ಓಡಾಡುವುದನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ.‌ ಸಾಮ್ರಾಟನಿಗೆ ಮೇವು ತಿನ್ನಿಸಿದ ಮೇಲೆ ಸಾಮ್ರಾಜ್ಞಿಗೆ ತಿನ್ನಿಸಬೇಡವೇ, ಹಸಿ ಬಾಣಂತಿಗಳಿಗೆ ಬೇಡವೇ, ಎಂದು ನಾನು ಪುನಃ ಹೋಗಿ ಎರಡು ಟ್ರೇ ಮೇವು ತಂದೆ. ಇವರು ತಮ್ಮ ಕೈಯಾರೆ ಸಾಮ್ರಾಜ್ಞಿಗೂ, ಆ ಸಾಧು ಹಸುವಿಗೂ ಇನ್ನೆರಡು ಬಾಣಂತಿ ಹಸುಗಳಿಗೂ ತಮ್ಮ ಕೈಯಾರ ಮೇವು ತಿನ್ನಿಸಿದರು.


ನಮ್ಮ ಮನೆಯಲ್ಲಿ ವರ್ಷಕ್ಕೆರಡು ಸಲ ನಡೆಯುವ ಶ್ರಾದ್ಧದ (ಅತ್ತೆ, ಮಾವ) ದಿನಗಳಲ್ಲಿ, ಶುಭ ಕಾರ್ಯಗಳ ಸಂದರ್ಭದಲ್ಲಿ ಪದ್ಧತಿಯಂತೆ ಇಟ್ಟ ಗೋಗ್ರಾಸವನ್ನು ತಿನ್ನಿಸಲು ಹಸುಗಳನ್ನು ಹುಡುಕಿ ಸಾಕಾಗ್ತದೆ, ಬಾಕಿ ದಿನಗಳಲ್ಲಿ ಅಪರೂಪಕ್ಕಾದರೂ ಕಣ್ಣಿಗೆ ಬೀಳುವ ಹಸುಗಳು ಆ ದಿನಗಳಲ್ಲಿ ಬಿಲ್ಕುಲ್ ಸಿಗುವುದಿಲ್ಲ. ರಾತ್ರಿ ತನಕ ಕಾದು, ಹುಡುಕಿ ಸಾಕಾಗಿ ಅದನ್ನು ಕಸದ ತೊಟ್ಟಿ ಅಥವಾ ಗಿಡಗಳ ಬುಡಕ್ಕೆ ಹಾಕುವಾಗ ಹೊಟ್ಟೆ ಚುರ್ ಅನ್ನುವುದು. ಹಸುವಿಗೆ ವರ್ಷಕ್ಕೆರಡು ಸಲವಾದರೂ ಆಹಾರ ಹಾಕುವ ಭಾಗ್ಯ ಇಲ್ಲವೆ ನಮಗೆ ಎಂದು. ಗೋಸ್ವರ್ಗದಲ್ಲಿ ಗೋವುಗಳಿಗೆ ಎಷ್ಟು ಮೇವು ಹಾಕಿದರೂ ನಮಗೆ ಸಮಾಧಾನವೇ ಇಲ್ಲ ಇನ್ನಷ್ಟು ಹಾಕುವ ಇನ್ನಷ್ಟು ಹಾಕುವ ಅನಿಸುತ್ತಿತ್ತು. ಮತ್ತೆ ನಮ್ಮ ಶಕ್ತ್ಯಾನುಸಾರ ವಂತಿಗೆ ಕೊಟ್ಟು, ಮುಂದೆ ಹಣ ಕಳುಹಿಸಲು ಅಕೌಂಟ್ ನಂಬರ್ ತಗೊಂಡು ಬಂದೆವು. (ಗಮನಿಸಿ ಈ ವಂತಿಗೆಗೆ ಆಯಕರ ವಿನಾಯಿತಿ ಸಿಗುತ್ತದೆ,(income tax rebate).


ನನಗೊಂದು ಅಭ್ಯಾಸ ತಿಂಗಳ ಆರಂಭದಲ್ಲಿ ಇವರು ಮನೆ ಖರ್ಚಿಗೆಂದು ಕೊಟ್ಟ ಹಣದಲ್ಲಿ ನಿಗದಿತ ಮೊತ್ತವನ್ನು ಕುಲದೇವರಿಗೆ, ಇಷ್ಟ ದೇವರಿಗೆ ಮತ್ತು ಗಣಪತಿಗೆ ಪ್ರತ್ಯೇಕವಾಗಿ ಮೂರು ಪಾಲು ತೆಗೆದಿಡುವುದು. ಅದನ್ನು   ದೇವರ ಸನ್ನಿದಾನಕ್ಕೆ ಹೋದಾಗ ಅಲ್ಲಿ ಪಾವತಿಸಿ ಬರುವುದು. ಗೋಸ್ವರ್ಗದಿಂದ ನಿರ್ಗಮಿಸುವಾಗ ಮುಂದಿನ ತಿಂಗಳಿನಿಂದ ಗೋವುಗಳಿಗೂ ಒಂದು ಪಾಲು ತೆಗೆದಿಡುವ ತೀರ್ಮಾನ ತೆಗೆದುಕೊಂಡೇ ಬಂದೆ.


ಹೋಟೆಲ್‌ಗೆ ಹೋಗಿ ಇಷ್ಟದ ತಿಂಡಿ ತಿಂದು ಬಂದದಕ್ಕಿಂತಲೂ, ಇಷ್ಟದ ಉಡುಪು ಖರೀದಿಸಿ ಧರಿಸಿದಕ್ಕಿಂತಲೂ, ಸಾವಿರಾರು ಹಣ ಖರ್ಚು ಮಾಡಿ ಒಂದು ಸಿನೆಮಾ ನೋಡಿದಕ್ಕಿಂತಲೂ ಹೆಚ್ಚಿನ ಸಂತೃಪ್ತಿ, ಖುಷಿ ಈ ಗೋವುಗಳಿಗೆ ಮೇವು ತಿನ್ನಿಸುವುದರಿಂದ ಲಭಿಸುತ್ತದೆ, ಇದು ನನ್ನ ಅನುಭವ.


ಇಲ್ಲಿ ಇರುವ ಗೋವುಗಳಲ್ಲಿ ಸ್ವಲ್ಪ ಹಸುಗಳಷ್ಟೇ ಹಾಲು ಕರೆಯುತ್ತವಂತೆ, ಆ ಹಾಲು ಮಾರಾಟ ಮಾಡುವ ಕ್ರಮ ಇಲ್ಲಿಲ್ಲ. ಕಾಯಿಸಿ, ಬೆಣ್ಣೆ ತುಪ್ಪ ಮಾಡಿ, ತುಪ್ಪ ಮಾರುತ್ತಾರೆ. ಹೆಚ್ಚಿನ ಪ್ರಮಾಣದ ಹಾಲನ್ನು ಕರುಗಳಿಗೆ ಬಿಟ್ಟು, ಕರೆದ ಸ್ವಲ್ಪ ಪ್ರಮಾಣದ ಹಾಲು ಮಠದಲ್ಲಿ ನಡೆಯುವ ದಿನನಿತ್ಯದ ಅನ್ನ ಸಂತರ್ಪಣೆಗೆ ಸರಿ ಹೋಗುತ್ತದಂತೆ. ದೇಸಿ ಹಸುವಿನ ತುಪ್ಪ, ಮಠದ ಬಳಿ ಇರುವ ಅಂಗಡಿಯಲ್ಲಿ ಸಿಗುತ್ತದೆ, ಗೋಮಯ ಮತ್ತು ಕೆಲವು ಗಿಡ ಮೂಲಿಕೆಗಳಿಂದ ತಯಾರಿಸಿದ ಶಾಂಪು, ಬಾಮ್ (ಅಮೃತಾಂಜನದ ಹಾಗೆ), ಕುಂಕುಮ ಇನ್ನೂ ಹಲವಾರು ಸಾಮಾಗ್ರಿಗಳು ಇಲ್ಲಿ ಲಭ್ಯವಿವೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಪ್ರತಿ ವರ್ಷ ಜನವರಿಯಲ್ಲಿ  ಇಲ್ಲಿ 'ಗೋವುಗಳ ಜೊತೆ ಅಲೆ ಮನೆ' ಎಂಬ ಮೂರು ದಿನಗಳ ಕಾರ್ಯಕ್ರಮ ನಡೆಯುತ್ತದೆ. ಈ ಸಂದರ್ಭದಲ್ಲಿ ಮಠಕ್ಕೆ ಸೇರಿದ ಜಾಗದಲ್ಲಿ ಬೆಳೆಸಿದ ಕಬ್ಬುಗಳಿಂದ ಬೆಲ್ಲ ತಯಾರಿಸುತ್ತಾರೆ. ತಯಾರಿಸಿದ ಬೆಲ್ಲದಲ್ಲಿ ಅರ್ಧದಷ್ಟು ಪ್ರಮಾಣದ ಬೆಲ್ಲ, ಆ ಮೂರು ದಿನಗಳಲ್ಲೇ ಮಾರಾಟವಾಗುತ್ತದೆ. ಉಳಿದ ಬೆಲ್ಲ ಏಪ್ರಿಲ್, ಮೇ ತನಕ ಲಭ್ಯವಿರುತ್ತದಂತೆ, ನಮಗೆ ಬೆಲ್ಲ ಸಿಗಲಿಲ್ಲ, ಅಲೆಮನೆ ಕಾರ್ಯಕ್ರಮದ ನಂತರ ಫೋನ್ ಮಾಡಿದರೆ ಪೋಸ್ಟ್‌ನಲ್ಲಿ ಕಳುಹಿಸಿ ಕೊಡುವ ವ್ಯವಸ್ಥೆಯೂ ಇದೆಯಂತೆ.


ನಿಮಗೆ ಹೇಳಬೇಕಾದ ಇನ್ನೊಂದು ವಿಷಯ ಅಂದ್ರೆ, ಸಾಧು ಸ್ವಭಾವದ ಬಾಣಂತಿ ಹಸುವಿನ ಆರೈಕೆ ಮಾಡುತ್ತಾ ಇದ್ದ ಸುಮಾರು ಇಪ್ಪತ್ತೈದರ ಹರೆಯದ ಹುಡುಗನ ಜೊತೆ ಮಾತಿಗಿಳಿದ ನಾವು ತಿಳಿದುಕೊಂಡ ವಿಷಯ ಏನೆಂದರೆ, ಆ ಹುಡುಗ ಸಾಫ್ಟವೇರ್ ಇಂಜಿನಿಯರ್, ಕೊರೋನಾ ಲಾಕ್ ಡೌನ್‌ನಿಂದ ವರ್ಕ್ ಫ್ರಂ ಹೋಮ್ ಶುರುವಾದಾಗಿನಿಂದ ಈ ಹುಡುಗ ಇಲ್ಲಿ ಬಂದು ನೆಲಸಿದ್ದಾನೆ. ಮೂಲತಃ ಕುಮಟಾ ಸಮೀಪದ ಊರಿನ ಇವನು ದಿನದ ಸಮಯ ಹಸುಗಳ ಆರೈಕೆ ಮಾಡಿ, ಸಾಯಂಕಾಲದ ನಂತರ ತನ್ನ ಕಚೇರಿ ಕೆಲಸ ಮಾಡುತ್ತಾನಂತೆ. ನಗರ ಸೇರಿದ ಹಳ್ಳಿಯ ಮಕ್ಕಳು ಮತ್ತೆ ಊರತ್ತ ಮುಖ ತಿರುವಿ ನಿಲ್ಲುವ ಇಂದಿನ ದಿನಗಳಲ್ಲಿ, ಈ ಹುಡುಗನ ಸೇವಾ ಮನೋಭಾವ ನನಗಿಷ್ಟವಾಯ್ತು. ನಗರದಲ್ಲಿ ಹುಟ್ಟಿ ಬೆಳೆದ ನಾವಂತೂ ಇದೆಲ್ಲದರಿಂದ ವಂಚಿತರು, ಹಳ್ಳಿಯಲ್ಲಿ ಹುಟ್ಟಿ, ಬೆಳೆದು ಗೋವುಗಳ ಸಾನಿಧ್ಯ ಅನುಭವಿಸುವ ಇವರೇ ಪುಣ್ಯವಂತರು.


ಬಾನ್ಕುಳಿಯ ಗೋಸ್ವರ್ಗದ ಬಗ್ಗೆ ಬರೆದಷ್ಟೂ ಮುಗಿಯುವುದಿಲ್ಲ, ಯಾವುದು ಬರೆಯುವುದು ಯಾವುದು ಬಿಡುವುದು ತಿಳಿಯುವುದಿಲ್ಲ.  ಹೊಸನಗರದ ರಾಮಚಂದ್ರಾಪುರ ಮಠದ ಗೋಶಾಲೆಯಿಂದ ಗೋವುಗಳ ವಿವಿಧ ತಳಿಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಅಲ್ಲಿ ಗೋವುಗಳನ್ನು ತಳಿಗಳ ಆಧಾರದಲ್ಲಿ ಪ್ರತ್ಯೇಕ ಕೋಣೆ(ಹಟ್ಟಿ)ಯಲ್ಲಿ ವ್ಯವಸ್ಥಿತವಾಗಿ ಇರಿಸಿದ್ದಾರೆ. ಬಾನ್ಕುಳಿಯ ಗೋಸ್ವರ್ಗದಲ್ಲಿ ತಳಿಗಳ ಬೇಧವಿಲ್ಲ, ಬಾಣಂತಿ ಮತ್ತು ಪುಟ್ಟ ಕರುಗಳನ್ನು ಮಾತ್ರ ಪ್ರತ್ಯೇಕವಾಗಿ ಇರಿಸಿದ್ದಾರೆ, ಉಳಿದ ಗೋವುಗಳು ಸ್ವಚ್ಛಂದವಾಗಿ ತಿರುಗುತ್ತಿರುತ್ತವೆ. ಅವುಗಳ ಸ್ವಚ್ಛಂದ ಓಡಾಟ ಕಣ್ಣಿಗೆ ಮುದ ನೀಡುತ್ತದೆ, ಮನಸ್ಸನ್ನು ಆಹ್ಲಾದಕರವಾಗಿಸುತ್ತದೆ.‌ 

ನಾನಂತೂ ನಮ್ಮನೆಯವರ ಬಳಿ ಹೇಳಿದ್ದೇನೆ ಮುಂದಿನ ಸಲ ಒಂದು ದಿನ ಪೂರ್ತಿ ಇಲ್ಲಿ ಇರುವ ಹಾಗೇ ಬರೋಣ ಎಂದು. ಒಂಬತ್ತು ಗಂಟೆಗೆ ಗೋಸ್ವರ್ಗ ತಲುಪಿದ ನಾವು ಸುಮಾರು ಹನ್ನೆರಡು ಗಂಟೆಗೆ ಅಲ್ಲಿಂದ ನಿರ್ಗಮಿಸಿದೆವು.

-ಅನಿತಾ ಪೈ, ಮಂಗಳೂರು


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم