ಸೌಗಂಧಿಕ ಚುಚ್ಚದ ಜೇನು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಆಗಾಗ ‘ಸುರಂಗ’ ಎಂಬ ಪದ ಪ್ರಯೋಗ ಮಾಡುತ್ತಿದ್ದರು. ಅದನ್ನು ಪ್ರತ್ಯಕ್ಷ ನೋಡದ ಹೊರತು ಖಂಡಿತ ಸ್ಪಷ್ಟ ಚಿತ್ರಣ ಸಿಗದು. ನಸರಿ /ಮಿಸ್ರಿ/ ಮುಜಂಟಿ ಲೋಕದ ಇಂತಹ ಅನೇಕ ಸಂಗತಿಗಳನ್ನು ಕಣ್ಣಾರೆ ನೋಡಿದಾಗಲೇ ಮನವರಿಕೆಯಾಗುವುದು.
ಇಂದು ಗೂಡೊಂದನ್ನು ತೆರೆದಾಗ ವ್ಯವಸ್ಥಿತವಾದ ಸುರಂಗ ಕಂಡುಬಂತು. ಇದು 14X4X4 ಇಂಚು ಅಳತೆಯ ಗೂಡು. ಸಂಸಾರವಿರುವ ಭಾಗದ ಮೇಲೆ ಪಾರದರ್ಶಕ ಶೀಟ್ ಅಳವಡಿಸಿದ್ದರಿಂದ ಮುಜಂಟಿ ಸಾಮ್ರಾಜ್ಯ ಗೂಡಿನ ಕೆಳಭಾಗಕ್ಕೆ ಮಾತ್ರ ಸೀಮಿತವಾಗಿತ್ತು. ಇಂದು ಆ ಶೀಟ್ ತೆಗೆಯುವ ಉದ್ದೇಶದಿಂದ ಗೂಡು ತೆರೆದರೆ ಕುಟುಂಬ ನಿರೀಕ್ಷೆಗೂ ಮೀರಿ ಸದೃಢವಾಗಿತ್ತು.
ಇದರಲ್ಲಿ ಅವು ಪ್ರವೇಶದ್ವಾರದ ಬದಿ ಜೇನು ಸಂಗ್ರಹಿಸಿದ್ದರೆ, ನಂತರ ಪರಾಗ ದಾಸ್ತಾನಿಟ್ಟಿದ್ದವು. ಆ ಬಳಿಕ ಮೊಟ್ಟೆಗಳು. ಬಲಿತ ಮೊಟ್ಟೆಗಳು ಮೇಲ್ಭಾಗದಲ್ಲಿದ್ದರೆ, ಎಳೆಯ ಮೊಟ್ಟೆಗಳು ಕೆಳಭಾಗದಲ್ಲಿದ್ದವು. ಈ ಮೊಟ್ಟೆಗಳಿರುವ ಭಾಗದಿಂದ ನೇರ ಗೂಡಿನ ಪ್ರವೇಶದ್ವಾರಕ್ಕೆ ಹೋಗಲು ಅವು ಸುರಂಗಮಾರ್ಗ ನಿರ್ಮಿಸಿದ್ದವು. ಸೆರುಮನ್ ನಿಂದ ಬಹಳ ಗಟ್ಟಿಯಾಗಿ ರೂಪಿಸಿದ್ದ ಮಾರ್ಗವದು. ನಾನು ನಸರಿ ಸುರಂಗವನ್ನು ನೋಡಿದ್ದು ಇದೇ ಮೊದಲು. ಅದನ್ನು ಕೈಯಿಂದ ಮುಟ್ಟಿದರೆ ನುಣುಪಾದ, ಅಚ್ಚುಕಟ್ಟಾದ ರಚನೆ! ಪೆನ್ಸಿಲ್ ಗಾತ್ರಕ್ಕಿಂತ ತುಸು ದೊಡ್ಡದು. ಅವುಗಳ ನಿರ್ಮಾಣ ಕೌಶಲ್ಯಕ್ಕೆ ಬೆರಗಾದೆ.
ಸಾಮಾನ್ಯವಾಗಿ ಗೋಡೆಯೊಳಗಿರುವ ಕುಟುಂಬವನ್ನು ವರ್ಗಾವಣೆ ಮಾಡಲು ಅಲ್ಲಿಗೆ ತೆಂಗಿನ ಗೆರಟೆ ಅಥವಾ ಮಡಕೆಯನ್ನು ಅಳವಡಿಸುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಮುಜಂಟಿಗಳು ಮೂಲ ಗೂಡಿನ ಪ್ರವೇಶದ್ವಾರದಿಂದ ಗೆರಟೆ ಅಥವಾ ಮಡಕೆಯ ಪ್ರವೇಶದ್ವಾರದ ವರೆಗೆ ಅವುಗಳ ಒಳಮೈಗೆ ಅಂಟಿಕೊಂಡಂತೆ ಸುರಂಗ ನಿರ್ಮಿಸುತ್ತವೆ ಮತ್ತು ಅದರ ಮೂಲಕವೇ ಓಡಾಟ ನಡೆಸುತ್ತವೆ. ಬಹುಶಃ ಗೆರಟೆ/ ಮಡಕೆಯೊಳಗಿನ ವಾಸನೆ ಅವುಗಳಿಗೆ ಹಿಡಿಸದಿದ್ದರೆ ಈ ರೀತಿ ಮಾಡುತ್ತವೆಯೇನೊ. ಹೀಗೆ ಸುರಂಗ ನಿರ್ಮಿಸಿದರೆ ಎಷ್ಟು ಸಮಯವಾದರೂ ಕುಟುಂಬ ಗೂಡಿಗೆ ವರ್ಗಾವಣೆ ಆಗುವುದೇ ಇಲ್ಲ.
ಇದನ್ನು ತಪ್ಪಿಸಲು ಮೂಲ ಕುಟುಂಬ ಹಾಗೂ ನಾವು ಇಡುವ ಗೂಡು- ಎರಡರ ಪ್ರವೇಶದ್ವಾರಗಳಿಗೂ 2 ಇಂಚು ಉದ್ದದ ಪ್ಲಾಸ್ಟಿಕ್ ಪೈಪ್ ಅಳವಡಿಸುವುದು ಸೂಕ್ತ. ಆಗ ಮುಜಂಟಿಗಳು ಮೂಲ ಗೂಡಿನ ಪ್ರವೇಶದ್ವಾರದಿಂದ ಹೊರಬಂದು, ಹೊಸ ಗೂಡಿನ ಒಳಗೆ ಸಂಚರಿಸಿಯೆ ಪ್ರವೇಶದ್ವಾರ ತಲುಪಿ ಹೊರಬರಬೇಕಾಗುತ್ತದೆ. ಈ ಪ್ರಯಾಸಕರ ಓಡಾಟವನ್ನು ತಪ್ಪಿಸಲು ಅವು ಹೊಸ ಗೂಡಿನಲ್ಲೇ ಬ್ರೂಡ್ ನಿರ್ಮಿಸುವುದರಿಂದ ಕುಟುಂಬ ವರ್ಗಾವಣೆ (ವಿವರ ‘ಚುಚ್ಚದ ಜೇನು ಎಲ್ಲರಿಗೂ ಅಚ್ಚುಮೆಚ್ಚು’ ಪುಸ್ತಕದಲ್ಲಿದೆ) ಸಲೀಸಾಗುತ್ತದೆ.
ನಸರಿ ಸಾಕಣೆ ಒಂದು ವಿಶಿಷ್ಟ ಹವ್ಯಾಸವೆನಿಸಲು ಸುರಂಗದಂತಹ ಕೌತುಕದ ಸಂಗತಿಗಳು ಹಲವಿವೆ. ಅವುಗಳ ಬಗ್ಗೆ ತಿಳಿದುಕೊಂಡಷ್ಟೂ ಈ ಹವ್ಯಾಸ ಹೆಚ್ಚೆಚ್ಚು ಆಸಕ್ತಿಯುತವಾಗುತ್ತದೆ.
-ಶಿವರಾಂ ಪೈಲೂರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ