‘ಚುಚ್ಚದ ಜೇನು ಎಲ್ಲರಿಗೂ ಅಚ್ಚುಮೆಚ್ಚು’ ಪುಸ್ತಕದಲ್ಲಿ ಇಲ್ಲದ ಸಂಗತಿಯಿದು. ಪುಸ್ತಕ ಬರೆಯುವ ವೇಳೆ ನನಗೆ ಗೊತ್ತಿದ್ದ ಸಂಗತಿಯೆಂದರೆ, ಮುಜಂಟಿ ಮೇಣ ಅಂತ ಕರೆಯುವುದು ‘ಸೆರುಮನ್’ (Cerumen) ಅಥವಾ `ಪ್ರೊಪೊಲಿಸ್’ (Propolis) ಎಂಬ ಪಾಕಕ್ಕೆ ಅಂತ.
‘ಮುಜಂಟಿಗಳು ಹಲಸು, ಮಾವು, ಗೇರು, ಕೊಡಂಪುಳಿ ಮುಂತಾದ ಮರಗಳು ಸ್ರವಿಸುವ ಅಂಟನ್ನು (ರೆಸಿನ್) ಸಂಗ್ರಹಿಸುತ್ತವೆ; ಇದರ ಜತೆಗೆ ತಮ್ಮ ಶರೀರದಿಂದ ಸ್ರವಿಸುವ ಮೇಣವನ್ನು (ವ್ಯಾಕ್ಸ್) ಮಿಶ್ರಮಾಡಿ ಸಿದ್ಧಪಡಿಸುವ ಸೆರುಮನ್ ಎಂಬ ಪದಾರ್ಥದಿಂದ ಗೂಡಿನೊಳಗಿನ ಎಲ್ಲ ರಚನೆಗಳನ್ನು ನಿರ್ಮಿಸುತ್ತವೆ’ ಎಂದು ವಿವರಿಸಿದ್ದರು ಹಿರಿಯ ಮುಜಂಟಿ ತಜ್ಞ, ಇಡುಕ್ಕಿ ಜಿಲ್ಲೆ ಕಾಂಜಾರಿನ ರೀಗಲ್ ಬೀ ಗಾರ್ಡನ್ಸ್ ಅಂಡ್ ಬೀಕೀಪಿಂಗ್ ಟ್ರೈನಿಂಗ್ ಸೆಂಟರಿನ ರೂವಾರಿ ಡಾ. ಸಾಜನ್ ಜೋಸ್.
ನಂತರದ ದಿನಗಳಲ್ಲಿ ನಾನು ಕೇರಳ-ಕರ್ನಾಟಕದಲ್ಲಿ ಮುಜಂಟಿ ಅಧ್ಯಯನ ಪ್ರವಾಸ ಕೈಗೊಂಡ ವೇಳೆ ಮುಜಂಟಿ ಮೇಣ ಎಂದು ಪ್ರಸ್ತಾಪವಾದಾಗಲೆಲ್ಲ ಸೆರುಮನ್ ಎಂದು ಹೇಳತೊಡಗಿದೆ. ಅದು ಹೆಚ್ಚಿನವರಿಗೆ ಅರ್ಥವಾಗದೆ ಕೊನೆಕೊನೆಗೆ ನಾನೂ ಮೇಣ ಎಂತಲೇ ಕರೆಯಲಾರಂಭಿಸಿದೆ. ವಿಶಾಲ ಅರ್ಥದಲ್ಲಿ ಅದೂ ಸರಿ.
ಮೊನ್ನೆ ಕುಟುಂಬವೊಂದನ್ನು ವಿಭಜಿಸಿದಾದ ಸ್ವಲ್ಪ ಜೇನು ಕೂಡ ಸಿಕ್ಕಿತು. ಮಧುಕಣಗಳನ್ನು ಪ್ರತ್ಯೇಕಿಸಿ ಸ್ಟೀಲಿನ ದೊಡ್ಡ ಸೋಸಣಿಗೆ/ಅರಿಪ್ಪೆಯಲ್ಲಿ (sieve) ಹಾಕಿ ಅರ್ಧ ಗಂಟೆ ನೆರಳಿನಲ್ಲಿಟ್ಟಾಗ ಜೇನು ಕೆಳಗಿನ ಪಾತ್ರೆಯಲ್ಲಿ ಸಂಗ್ರಹವಾಯಿತು. (ಹಣ್ಣಿನ ಜ್ಯೂಸ್ ತಯಾರಿಸುವಾಗ ಬಳಸುವ ಸೋಸಣಿಗೆ ಸೂಕ್ತ.) ನೇರ ಬಿಸಿಲಲ್ಲಿಟ್ಟರೆ ಮಧುಕಣಗಳಲ್ಲಿರುವ ಮೇಣದ ಅಂಶವೂ ಕರಗಿ ಜೇನಿನೊಂದಿಗೆ ಮಿಶ್ರವಾಗಿ ಕೆಳಗಿಳಿಯುತ್ತದೆ. ತೊಡುವೆ ಮೇಣಕ್ಕಿಂತ ತುಂಬ ನಾಜೂಕಿನದ್ದು ಈ ಮುಜಂಟಿ ಮೇಣ. ವಾತಾವರಣದಲ್ಲಿರುವ ಬಿಸಿಗೆ ಮೆದುವಾಗಿ ಬಿರಿದು ಜೇನಿನಂಶ ಒಸರಿಬಿಡುತ್ತದೆ.
ಸೋಸಣಿಗೆಯಲ್ಲಿರುವ ಮಧುಕಣಗಳಿಂದ ಜೇನೆಲ್ಲ ಒಸರಿ ಕೆಳಗಿಳಿದಾಗ ಉಳಿದ ಮೇಣ ಒಂದು ಮುದ್ದೆಯಂತೆ ರೂಪುಗೊಂಡಿತ್ತು. ಅದನ್ನು ಸಂಗ್ರಹಿಸಿಟ್ಟುಕೊಂಡರೆ ಮುಂದೆ ಸೆರೆಗೂಡು ಸ್ಥಾಪಿಸುವಾಗ ಅದರ ಪ್ರವೇಶದ್ವಾರಕ್ಕೆ ಹಚ್ಚಲು ಸಹಕಾರಿಯಾಗುತ್ತದೆ ಎಂಬ ಯೋಚನೆ ಬಂತು. ಹೀಗೆ ಸಂಗ್ರಹಿಸುವ ಮೊದಲು ಮೇಣವನ್ನು ಸ್ವಚ್ಛಗೊಳಿಸಬೇಕಲ್ಲವೇ? ಏಕೆಂದರೆ ಅದರಲ್ಲಿ ಪರಾಗ ಕಣಗಳೂ, ರೆಸಿನ್ನಿನ ತುಣುಕುಗಳೂ (resin dump) ಇದ್ದವು.
ಸೋಸಣಿಗೆಯಲ್ಲಿದ್ದ ಮೇಣದ ಮುದ್ದೆಯನ್ನು ಕೈಯಲ್ಲಿಟ್ಟು ನಲ್ಲಿ ನೀರಿನ ಕೆಳಗೆ ಹಿಡಿದೆ. ಮುದ್ದೆಯನ್ನು ಸ್ವಲ್ಪಸ್ವಲ್ಪವೇ ಬಿಡಿಸುತ್ತಿದ್ದಂತೆ ಮೇಣದಲ್ಲಿದ್ದ ಪರಾಗದ ಅಂಶವೆಲ್ಲ ತೊಳೆದುಹೋಯಿತು. ಮತ್ತೆ ನಿಧಾನವಾಗಿ ಮೇಣವನ್ನು ಹಿಚುಕಿದರೆ ಗಟ್ಟಿಯಾಗಿದ್ದ ರೆಸಿನ್ನಿನ ಅಂಶಗಳು ಸಿಕ್ಕವು. ಅವನ್ನು ಬೇರ್ಪಡಿಸಿ ಬದಿಗಿಟ್ಟೆ. ಇದು ಕೂಡ ಉಪಯೋಗಕ್ಕೆ ಬರುವಂಥದ್ದೇ. ಸೆರೆಗೂಡಿನ ಒಳಭಾಗ ಅಂಚುಗಳಲ್ಲಿ ಇಟ್ಟರೆ ಮುಜಂಟಿಗಳಿಗೆ ಸಹಕಾರಿಯಾಗುತ್ತದೆ.
ನಲ್ಲಿ ಕೆಳಗಿನ ಕೆಲಸಾವಳಿ ಅರ್ಧ ಗಂಟೆಗೂ ಹೆಚ್ಚು ಕಾಲ ಮುಂದುವರಿಯಿತು. ಅಷ್ಟರಲ್ಲಿ ಮೇಣ ಒಂದು ಹದಕ್ಕೆ ಬಂದಿತ್ತು. ಅದನ್ನು ಸಣ್ಣಸಣ್ಣ ತುಂಡುಗಳಾಗಿ ಮಾಡಿ, ಹೋಮ್ ಮೇಡ್ ಚಾಕಲೇಟಿನಂತೆ ಕಾಣುವ ಆಕಾರಕ್ಕೆ ತಂದೆ. 30ಕ್ಕೂ ಹೆಚ್ಚು ಮೇಣದ ಚಾಕಲೇಟುಗಳು! ಎಲ್ಲವನ್ನೂ ಒಂದು ಸೆರಾಮಿಕ್ ಟೈಲ್ ಮೇಲೆ ಜೋಡಿಸಿಟ್ಟೆ. ವ್ಹಾ ಅಂತನ್ನಿಸಿತು. ತಡವೇಕೆ, ಮೊಬೈಲಲ್ಲಿ ಕ್ಲಿಕ್ಕಿಸಿ ಆಪ್ತರೊಂದಿಗೆ ಹಂಚಿಕೊಂಡೆ. ‘ಅರರೆ, ಇದ್ಯಾವ ತಿನಿಸು ದೊಡ್ಡಪ್ಪ, ಗೋಧಿ ಹಲ್ವವೇ’ ಎಂಬ ಪ್ರಶ್ನೆ ತಮ್ಮನ ಮಗಳು ವಾಸವಿಯಿಂದ. ಯಾರಿಗೂ ಸುಳಿವು ಸಿಗಲಿಲ್ಲ. ಇಂತಹ ಸಂದರ್ಭಗಳಲ್ಲಿ ನಮ್ಮ ಯೋಚನೆ ಸಿದ್ಧ ಚೌಕಟ್ಟಿನೊಳಗೆಯೇ ಗಿರಕಿಹೊಡೆಯುವುದು ಸಹಜ!
ಸಂಭ್ರಮ ಮಾಯ
ಇರಲಿ. ಮುಂದಿನ ಹೆಜ್ಜೆಯಾಗಿ ಮೇಣದ ಚಾಕಲೇಟುಗಳನ್ನು ಜೋಡಿಸಿರುವ ಸೆರಾಮಿಕ್ ಟೈಲನ್ನು ಬಿಸಿಲಿಗಿಟ್ಟೆ. ಅಲ್ಲಿಗೆ ಮೇಣ ಪ್ರಸಂಗಕ್ಕೆ ರೋಚಕ ತಿರುವು. ಸ್ವಲ್ಪ ಹೊತ್ತಿನಲ್ಲೇ ಚಾಕಲೇಟುಗಳು ಮೆತ್ತಗಾಗಿ ಕರಗತೊಡಗಿದವು! ಮೇಣ ಮಾಡಿದ ಸಂಭ್ರಮವೆಲ್ಲ ಮಂಜಿನಂತೆ ಮಾಯ. ಆಗ ನೆನಪಿಗೆ ಬಂತು, ಸೌಗಂಧಿಕ ಚುಚ್ಚದ ಜೇನು ಕಾರ್ಯಾಗಾರದಲ್ಲಿ ಪುದ್ಯೋಡು ರಾಮಚಂದ್ರ ಅವರಿಂದ ನಾನು ಖರೀದಿಸಿದ್ದ ಮುಜಂಟಿ ಮೇಣದುಂಡೆ. ಅಡಿಕೆ ಗಾತ್ರದ ಉಂಡೆಯದು. 50 ರೂ. ಗಟ್ಟಿ ಹಲ್ವದಂತಿತ್ತು.
ನಾನು ಮಾಡಿದ ಮೇಣದ ಚಾಕಲೇಟುಗಳು ಹೀಗೆ ಕರಗತೊಡಗಿದರೆ ಯಾವ ಕಾರಣಕ್ಕೂ ಗಟ್ಟಿಯಾಗುವುದು ಸಾಧ್ಯವಿಲ್ಲ ಎಂದು ಅರಿವಾದದ್ದೇ ತಡ, ಪುದ್ಯೋಡು ಅವರಿಗೆ ವಾಟ್ಸಪ್ ಸಂದೇಶ ಕಳಿಸಿದೆ: ‘ಮುಜಂಟಿ ಮೇಣ ತಯಾರಿಸುವ ವಿಧಾನ ತಿಳಿಸುವಿರಾ?’ ನನ್ನ ತಲೆಬಿಸಿ ಏರುವ ಮುನ್ನವೇ ಅವರಿಂದ ದನಿ ಸಂದೇಶದ ಉತ್ತರ ಬಂತು.
ಪುದ್ಯೋಡು ನೀಡಿದ ವಿವರಣೆ ಹೀಗಿತ್ತು: ‘ಜೇನು ಸಂಗ್ರಹದ ಬಳಿಕ ಉಳಿದ ಅಂಶವನ್ನು ಸ್ಟೀಲಿನ ಸೋಸಣಿಗೆಯಲ್ಲಿಟ್ಟು ಬಿಸಿಲಿಗಿಡಬೇಕು. ಕೆಳಗೊಂದು ಪಾತ್ರೆ. ಸುಡು ಬಿಸಿಲಿಗೆ ಚೆನ್ನಾಗಿ ಫಿಲ್ಟರ್ ಆಗಿ ಮೇಣದಂಶ ಮಾತ್ರ ಮಂದದ್ರವವಾಗಿ ಪಾತ್ರೆಗೆ ಇಳಿಯುತ್ತದೆ. ಅದು ಶುದ್ಧ ಮೇಣ. ಅದನ್ನು ಬಾಟಲಿಯಲ್ಲಿ ಸಂಗ್ರಹಿಸಿಟ್ಟರೆ ವರ್ಷಾನುಗಟ್ಟಲೆ ಹಾಳಾಗುವುದಿಲ್ಲ. ಅದು ಮೃದುವಾಗಿಯೇ ಇರುತ್ತದೆ. ಪರಿಮಳವೂ ತಾಜಾ ಆಗಿಯೆ ಉಳಿಯುತ್ತದೆ. ಯಾವಾಗ ಬೇಕಾದರೂ ಉಪಯೋಗಿಸಬಹುದು.’
ಮುಂದುವರಿದು ಅವರು ಹೇಳಿದರು: ‘ಹೀಗೆ ಮಾಡದೆ ತ್ಯಾಜ್ಯಗಳ ಸಮೇತ ಮೇಣದಂಶವನ್ನು ಸಂಗ್ರಹಿಸಿಟ್ಟರೆ ಅದು ಬಿರುಸಾಗುತ್ತದೆ ಮಾತ್ರವಲ್ಲ, ಒಂದು ವರ್ಷದಲ್ಲಿ ಹಾಳಾಗುತ್ತದೆ.’ ಅವರೆಂದರು: ‘ಬಿಸಿಲಿನ ಬದಲು ಬಿಸಿ ನೀರಿನಲ್ಲಿ ಸಂಸ್ಕರಿಸುವ ವಿಧಾನವೇನಾದರೂ ಇದೆಯೇ ಎಂಬುದು ನನಗೆ ತಿಳಿಯದು. ಮತ್ತು ಹಾಗೆ ಬಿಸಿಮಾಡಿದರೆ ಮೇಣದ ತಾಜಾತನ ಮತ್ತು ಸಹಜ ಪರಿಮಳ ಉಳಿಯುತ್ತದೆಯೇ ಎಂಬುದು ಕೂಡ ಅನುಮಾನ.’
ನಾನು ಎಡವಿದ್ದು ಎಲ್ಲಿ ಎಂಬುದು ಸ್ಪಷ್ಟವಾಗಿತ್ತು. ಸಮಸ್ಯೆಗೆ ಪರಿಹಾರವೂ ದೊರಕಿತ್ತು. ದಡಬಡನೆ ಸ್ಟೀಲಿನ ಚಮಚದಿಂದ ಮೇಣದ ಚಾಕಲೇಟುಗಳನ್ನೆಲ್ಲ ಒಗ್ಗೂಡಿಸಿ ಮತ್ತೆ ಸೋಸಣಿಗೆಗೆ ತುಂಬಿ ಬಿಸಿಲಿಗಿಟ್ಟೆ. ಕೆಳಗೊಂದು ಪಾತ್ರೆ.
ವಾಟ್ಸಪ್ಪಿನಲ್ಲಿ ‘ಹಲ್ವಾ ಊಹೆ’ಗಳು ರೆಕ್ಕೆಬಿಚ್ಚಿ ಹಾರಾಡುತ್ತಿದ್ದವು! ಅವರಿಗೆಲ್ಲ ಬೇಗನೆ ಉತ್ತರ ಕಂಡುಕೊಳ್ಳುವ ಆತುರ. ನನಗೋ, ಎಡವಿದ್ದ ಹೆಜ್ಜೆಯನ್ನು ಸರಿಪಡಿಸಿಕೊಳ್ಳುವ ಧಾವಂತ. ಹತ್ತತ್ತು ನಿಮಿಷಕ್ಕೊಮ್ಮೆ ಸೋಸಣಿಗೆಯನ್ನೆತ್ತಿ ಮೇಣ ಕೆಳಕ್ಕಿಳಿದಿದೆಯೇ ಎಂದು ಪರೀಕ್ಷಿಸುತ್ತಿದ್ದೆ. ಯಾವ ಸೂಚನೆಯೂ ಕಾಣಲಿಲ್ಲ. ಆದರೆ ಮುಜಂಟಿ ಸಾಕಣೆಯಲ್ಲಿ ಪಳಗಿರುವ ಪುದ್ಯೋಡು ಅವರ ಮಾತಿನಲ್ಲಿ ನನಗೆ ಪೂರ್ಣ ವಿಶ್ವಾಸವಿತ್ತು. ಅದು ಸುಳ್ಳಾಗಲಿಲ್ಲ. ಒಂದು ಗಂಟೆ ಕಳೆಯುವಷ್ಟರಲ್ಲಿ ಮೇಣದ ಮಂದ ದ್ರವ ಸೋಸಣಿಗೆಯಿಂದ ಪಾತ್ರೆಗೆ ತೊಟ್ಟಿಕ್ಕಲಾರಂಭಿಸಿತು! ನನ್ನ ಸಂತೋಷಕ್ಕೆ ಪಾರವೇ ಇಲ್ಲ.
ಮತ್ತೂ ಎರಡು ಗಂಟೆ ಹಾಗೆಯೇ ಬಿಟ್ಟೆ. ಮನಮೋಹಕ, ಅಡಿಕೆ ಗಾತ್ರದಷ್ಟು ಮೇಣ ಸಂಗ್ರಹವಾಗಿತ್ತು. ಪುದ್ಯೋಡು ಅವರಿಂದ ಖರೀದಿಸಿದ್ದ ಮುಜಂಟಿ ಮೇಣದ ಬೆಲೆ ಈಗ ಸ್ವಾನುಭವದ ಮೂಲಕ ಅರ್ಥವಾಯಿತು. ಮಾತ್ರವಲ್ಲ, ಅವರಿಂದ ಮೇಣ ಖರೀದಿಸಿದ್ದರಿಂದಲೇ ಅದರ ತಯಾರಿ ವಿಧಾನವನ್ನೂ ಕಲಿಯುವಂತಾಯಿತು. ಥ್ಯಾಂಕ್ಸ್ ಪುದ್ಯೋಡು.
ಅಂದ ಹಾಗೆ, ಈ ಮುಜಂಟಿ ಮೇಣದ ಉಪಯೋಗಗಳ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಬೇಕಿದೆ. ಇದು ತುಂಬ ಔಷಧೀಯ ಗುಣವುಳ್ಳದ್ದು ಎನ್ನುತ್ತಾರೆ. ಈ ಕಾರಣಕ್ಕಾಗಿಯೇ ವಿದೇಶಗಳಲ್ಲಿ ಈ ಮೇಣಕ್ಕೆ ಹೆಚ್ಚು ಬೇಡಿಕೆ ಇದೆ ಎಂದು ಇತ್ತೀಚೆಗೆ ಒಬ್ಬರು ಹೇಳಿದ್ದರು. ನೆಲಮೂಲ ಜ್ಞಾನಭಂಡಾರದಲ್ಲಿ ಏನಾದರೂ ಮಾಹಿತಿ ಸಿಗಲೂಬಹುದು. ಈ ನಿಟ್ಟಿನಲ್ಲಿ ಪ್ರಯತ್ನಿಸೋಣ.
-ಶಿವರಾಂ ಪೈಲೂರು.
#meliponiculture
#stinglessbeewax
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ