ಒಂದೇ ತಿಂಗಳಲ್ಲಿ ಮುಜಂಟಿ ಕುಟುಂಬ ವರ್ಗಾವಣೆ!

Upayuktha
0


ಕಾರ್ ಶೆಡ್ಡಿನ ಪೈಪಿನಿಂದ ಮುಜಂಟಿ ಕುಟುಂಬವೊಂದು ಕೇವಲ ಒಂದೇ ತಿಂಗಳಲ್ಲಿ ಗೂಡಿಗೆ ವರ್ಗಾವಣೆಯಾಗಿದೆ! ಇಂದು ಗೂಡನ್ನು ಬೇರ್ಪಡಿಸಿ ಹೊಸ ಕುಟುಂಬ ಪಡೆದೆ.


ಮನೆಯಲ್ಲಿ ಕಾರ್ ಶೆಡ್ಡಿನ ಪೈಪಿನಲ್ಲಿದ್ದ ಮುಜಂಟಿ ಕುಟುಂಬವನ್ನು ಕಳೆದ ವರ್ಷ ಲಾಳಿಕೆ ಪದ್ಧತಿಯಿಂದ ಗೂಡಿಗೆ ವರ್ಗಾಯಿಸಿದ್ದೆ. ಆದರೆ ನಂತರದ ಕೆಲ ದಿನಗಳಲ್ಲಿ ಮೂಲ ಕುಟುಂಬವಿದ್ದ ಪೈಪಿನಿಂದ ಮತ್ತೆ ಮುಜಂಟಿಗಳ ಓಡಾಟ ಶುರುವಾಗಿತ್ತು.


ಮಳೆಗಾಲದ ಬಳಿಕ ಈಗ ಕುಟುಂಬ ಬೆಳವಣಿಗೆಯಾಗುವ ಕಾಲ. ಅದನ್ನು ಸೂಚಿಸುವಂತೆ ಕುಟುಂಬದ ಪ್ರವೇಶದ್ವಾರ ಅಚ್ಚುಕಟ್ಟಾಗಿ ರೂಪುಗೊಂಡಿತ್ತು, ಮಾತ್ರವಲ್ಲ ಸಾಕಷ್ಟು ಸೈನಿಕ ಹುಳಗಳೂ ಠಳಾಯಿಸುತ್ತಿದ್ದವು. ಅಂದರೆ ಪೈಪಿನ ಒಳಗಿರುವ ಕುಟುಂಬ ಸಶಕ್ತವಾಗಿದೆ ಎಂದು ಭಾವಿಸಿ ಸೆಪ್ಟೆಂಬರ್ 20ರಂದು ಖಾಲಿ ಗೂಡೊಂದರ ಒಳಭಾಗ ಮತ್ತು ಪ್ರವೇಶದ್ವಾರಕ್ಕೆ ಮುಜಂಟಿ ಮೇಣ ಲೇಪಿಸಿ, ವಾಟರ್ ಗೇಜ್ ಪ್ಲಾಸ್ಟಿಕ್ ನಾಳ ಅಳವಡಿಸಿ ರಾತ್ರಿಯ ವೇಳೆ ಲಾಳಿಕೆಗೆ ಜೋಡಿಸಿದೆ.


ನಂತರದ ದಿನಗಳಲ್ಲಿ ಪ್ಲಾಸ್ಟಿಕ್ ನಾಳದ ಮೂಲಕ ಮುಜಂಟಿಗಳ ಓಡಾಟ ಗಮನಿಸುತ್ತಿದ್ದೆ. ಸೌಗಂಧಿಕ ಚುಚ್ಚದ ಜೇನು ಕಾರ್ಯಾಗಾರ (ಅ.24) ಜರುಗಿದ ನಂತರದ ದಿನಗಳಲ್ಲಿ ಈ ಓಡಾಟ ಇಳಿಮುಖವಾಗತೊಡಗಿತು. ಜತೆಜತೆಯಲ್ಲೆ ಹೊಸ ಗೂಡಿನ ಪ್ರವೇಶದ್ವಾರದಲ್ಲಿ ಸೈನಿಕ ಹುಳಗಳು ಕಾಣಿಸತೊಡಗಿದವು. ಇದು ಕುಟುಂಬ ವರ್ಗಾವಣೆಯಾಗುತ್ತಿರುವುದರ ಸೂಚನೆ.


ಈಗ ಮೂರ್ನಾಲ್ಕು ದಿನಗಳಿಂದ ನಾಳದಲ್ಲಿ ನೊಣಗಳ ಓಡಾಟ ಪೂರ್ಣ ನಿಂತಿತ್ತು. ಗೂಡಿನಿಂದ ನೊಣಗಳು ಆಹಾರಕ್ಕಾಗಿ ಹೊರಹೋಗುವುದು, ವಾಪಸಾಗುವುದು ನಡೆದೇ ಇತ್ತು. ಆದರೆ ಮೋಡದ ವಾತಾವರಣ, ಮಳೆಯಿಂದಾಗಿ ಆ ಬಗ್ಗೆ ಹೆಚ್ಚಿನ ಲಕ್ಷ್ಯ ವಹಿಸುವುದು ಸಾಧ್ಯವಾಗಲಿಲ್ಲ.


ಇಂದು ಮಧ್ಯಾಹ್ನ ಚೆನ್ನಾಗಿ ಬಿಸಿಲಿದ್ದಾಗ ಕಾರ್ಯಾಚರಣೆಗಿಳಿದೆ. ಮೊದಲಿಗೆ ಹೊಸ ಗೂಡಿನ ಪ್ರವೇಶದ್ವಾರಕ್ಕೆ ಪ್ಲಾಸ್ಟಿಕ್ ಬಾಟಲಿ ಹಿಡಿದು ಗೂಡನ್ನು ಲಘುವಾಗಿ ತಟ್ಟಿದಾಗ ಸೈನಿಕ ಹುಳಗಳು ಧಾವಿಸಿ ಬಂದವು. ಬಾಟಲಿಗೆ ಮುಚ್ಚಳ ಹಾಕಿ ಬದಿಗಿಟ್ಟು ಗೂಡನ್ನು ಕೆಳಗಿಳಿಸಿ ತೆರೆದರೆ, ಏನಾಶ್ಚರ್ಯ! ಹೊಸ ಕುಟುಂಬ ಸೃಷ್ಟಿಯಾಗಿತ್ತು. ಎಳೆಯ ಮೊಟ್ಟೆಗಳು ಸಾಕಷ್ಟು ಕಂಡುಬಂದವು. ರಾಣಿನೊಣ ಮೊಟ್ಟೆಯಿಡಲು ಕಪ್ ಆಕಾರದ ರಚನೆಗಳೂ ಇದ್ದವು. ಕೆಲವು ಪರಾಗ ಕಣಗಳೂ, ಕೆಲವು ಮಧುಕಣಗಳೂ ಇದ್ದವು. ಮುಜಂಟಿಗಳಿಗೆ ಅತ್ಯವಶ್ಯವಾದ ರೆಸಿನ್ ಡಂಪ್ ಕೂಡ ಇತ್ತು.


ಇಷ್ಟು ಬೇಗನೆ ಕುಟುಂಬ ವರ್ಗಾವಣೆಯಾದ ಬಗ್ಗೆ ತುಂಬ ಖುಷಿಯೆನಿಸಿತು. ಪ್ಲಾಸ್ಟಿಕ್ ನಾಳವನ್ನು ಗೂಡು ಮತ್ತು ಲಾಳಿಕೆಯಿಂದ ಬೇರ್ಪಡಿಸಿ ಹೊಸ ಗೂಡನ್ನು ಮೊದಲಿದ್ದಲ್ಲಿಯೇ ತೂಗುಹಾಕಿ, ಬಾಟಲಿಯ ಮುಚ್ಚಳ ತೆರೆದೆ. ನೊಣಗಳೆಲ್ಲ ಗೂಡು ಸೇರಿದವು. ಆಹಾರಕ್ಕಾಗಿ ಹೊರಹೋಗಿ ವಾಪಸಾಗುತ್ತಿದ್ದ ನೊಣಗಳೂ ಗೂಡಿನೊಳಕ್ಕೆ ಹೋಗತೊಡಗಿದವು.


ಇಂದು ರಾತ್ರಿ ಈ ಹೊಸ ಗೂಡನ್ನು ಮನೆಯ ಆವರಣದಲ್ಲಿಯೆ ಬೇರೆಡೆಗೆ ಒಯ್ದು ಸ್ಥಾಪಿಸಿದರೆ ಸರಿ.


ಮೂಲ ಕುಟುಂಬವಿದ್ದ ಪೈಪಿನೊಳಗೆ ಈಗ ಏನೂ ಇಲ್ಲವೇ ಎಂಬ ಪ್ರಶ್ನೆ ಮೂಡಬಹುದು. ಅಲ್ಲಿಯೂ ಕುಟುಂಬ ಇದ್ದೇ ಇರುತ್ತದೆ. ಏಕಂದರೆ ನಾನು ಕಳೆದ ವರ್ಷ ಇದೇ ಪೈಪಿನಿಂದ ಹೊಸ ಕುಟುಂಬ ಪಡೆದಿದ್ದೆನಲ್ಲ!


ಕಳೆದ ಮೂರ್ನಾಲ್ಕು ದಿನಗಳಿಂದ ಪ್ಲಾಸ್ಟಿಕ್ ನಾಳದೊಳಗೆ ನೊಣಗಳ ಓಡಾಟ ಇರಲಿಲ್ಲವೆಂದಾದರೆ ಮೂಲ ಕುಟುಂಬದ ಬಾಗಿಲು ಮುಚ್ಚಲಾಗಿತ್ತು ಎಂದೇ ಅರ್ಥ. ಹಾಗಿದ್ದರೆ ಒಳಗಿರುವ ಕುಟುಂಬದ ನೊಣಗಳು ಏನು ಮಾಡುತ್ತಿದ್ದವು? ಗಾಳಿ ಸಂಚಾರವಿಲ್ಲದೆ ಅವುಗಳಿಗೆ ಸಮಸ್ಯೆಯಾಗುತ್ತಿರಲಿಲ್ಲವೇ? ಹೊಸ ಗೂಡನ್ನು ಬೇರ್ಪಡಿಸುವುದು ತಡವಾದರೆ ಮೂಲ ಕುಟುಂಬದ ಪಾಡೇನಾಗಬಹುದು?


ಮುಜಂಟಿ ಪ್ರಪಂಚವೇ ಹೀಗೆ. ಒಂದು ಉತ್ತರ ಸಿಗುವಾಗ ನಾಲ್ಕಾರು ಪ್ರಶ್ನೆಗಳು ಮೂಡುತ್ತವೆ.

-ಶಿವರಾಂ ಪೈಲೂರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top