ಮಂಗಳೂರು: 'ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿನ ದಿಗ್ಗಜರುಗಳ ಪ್ರೇರಣೆಯಿಂದ ಈ ಹೊತ್ತಿನ ನೂತನ ಕವಿಗಳು ಮತ್ತು ಸಂಗೀತ ಕಲಾವಿದರಲ್ಲೂ ಗಂಧರ್ವ ಲೋಕ ಸೃಷ್ಟಿಸುವ ಪ್ರತಿಭಾವಂತರಿದ್ದಾರೆ' ಎಂದು ಆಕಾಶವಾಣಿ ವಿಶ್ರಾಂತ ಪ್ರಸಾರಕರಾದ ಮುದ್ದು ಮೂಡುಬೆಳ್ಳೆ ಅಭಿಪ್ರಾಯಪಟ್ಟರು.
ತೋನ್ಸೆ ಸಾಂಸ್ಕೃತಿಕ ತರಬೇತಿ ಕೇಂದ್ರ ಕೊಲ್ಯ, ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು ಜಂಟಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಇತ್ತೀಚೆಗೆ ನಗರದ ಶಾರದಾ ಕಾಲೇಜು ಸಭಾಂಗಣದಲ್ಲಿ ಭಾರತ ಸ್ವಾತಂತ್ರ್ಯ ಅಮೃತ ವರ್ಷಾಚರಣೆ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಿದ 'ಕನ್ನಡ ಕಾವ್ಯಾಂಜಲಿ ಹಾಗೂ ಅಮೃತ ಗೀತೋತ್ಸವ' ಕಾರ್ಯಕ್ರಮದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ಭಾಷಾಭಿಮಾನ ಉಳಿಸುವ ಬೆಳೆಸುವ ಚಿಂತನೆಗನುಗುಣವಾಗಿ ಸರಕಾರದ ಆಶಯದಂತೆ ನಮ್ಮ ಜಿಲ್ಲೆಯಲ್ಲೂ ಇಂಥ ಕಾರ್ಯಕ್ರಮ ಆಯೋಜಿಸಿದ ಸಂಘಟಕರನ್ನು ಅಭಿನಂದಿಸಿದರು.
ಕವಿಗೋಷ್ಠಿ - ಕಾವ್ಯಗಾಯನ:
ಕವಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ವಿರಚಿತ 'ಭಾರತ ಅಮೃತವರ್ಷ' ಗೀತೆಯ ಗಾಯನದೊಂದಿಗೆ ಕವಿಗೋಷ್ಠಿ ಆರಂಭಗೊಂಡಿತು. ಕವಿಗಳಾದ ರಘು ಇಡ್ಕಿದು, ಡಾ. ಅರುಣ್ ಉಳ್ಳಾಲ್, ಮಹೇಂದ್ರನಾಥ್ ಸಾಲೆತ್ತೂರು, ರಮೇಶ್ ಆಳ್ವ ತಲಪಾಡಿ, ಸುಧಾ ನಾಗೇಶ್, ವಿಜಯಲಕ್ಷ್ಮಿ ಕಟೀಲ್, ಡಾ. ಶೋಭಾರಾಣಿ ವಿನೋದ್, ಡಾ. ಮಾಲತಿ ಶೆಟ್ಟಿ ಮಾಣೂರು, ವಸಂತಿ ಟಿ. ನಿಡ್ಲೆ ಸ್ವರಚಿತ ಕವನಗಳನ್ನು ವಾಚಿಸಿದರು.
ಗಾಯಕರಾದ ತೋನ್ಸೆ ಪುಷ್ಕಳಕುಮಾರ್ ಮತ್ತು ಮಾಲಿನಿ ಕೇಶವಪ್ರಸಾದ್ ಕವಿಗಳ ಗೀತೆಗಳಿಗೆ ಸ್ವರ ಸಂಯೋಜಿಸಿ ಹಾಡಿದರು. ಶಾರದಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಮೂಹ ಗಾಯನ ನೆರವೇರಿತು.
ಹಿನ್ನೆಲೆಯಲ್ಲಿ ಸತೀಶ್ ಸುರತ್ಕಲ್, ದೀಪಕ್ ರಾಜ್ ಉಳ್ಳಾಲ್, ನವಗಿರಿ ಗಣೇಶ್, ಅಭಿಷೇಕ್ ಎಂ. ಬಿ. ಸಹಕರಿಸಿದರು. ಶಾರದಾ ಶಾಲೆಯ ಪ್ರಾಂಶುಪಾಲ ದಯಾನಂದ ಕಟೀಲ್ ಸ್ವಾಗತಿಸಿ, ನಿರೂಪಿಸಿದರು. ಟ್ರಸ್ಟಿ ಸುಧಾಕರ ರಾವ್ ಪೇಜಾವರ ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ