ಉಜಿರೆ: ಪರಭಾಷೆಯ ಸಿನಿಮಾ, ಧಾರವಾಹಿಗಳು ಕನ್ನಡದಲ್ಲಿ ಕಾಣಿಸಿಕೊಳ್ಳುವುದರಿಂದ ಹಿನ್ನಲೆ ಧ್ವನಿ ಕಲಾವಿದರಿಗೆ ವಿಪುಲ ಅವಕಾಶಗಳು ಲಭ್ಯವಾಗುತ್ತಿವೆ ಎಂದು ಹಿನ್ನಲೆ ಧ್ವನಿ ಕಲಾವಿದ ಅನ್ವಿತ್ ತಿಳಿಸಿದರು.
ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಹಳೆ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಧ್ವನಿ ಕಲಾವಿದರಿಗೆ ಇರುವ ಅವಕಾಶಗಳ ಕುರಿತು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್, ತಮಿಳು, ಹಿಂದಿ, ತೆಲುಗು, ಮಲಯಾಳ, ಸೇರಿದಂತೆ ವಿವಿಧ ಭಾಷೆಯ ಕಾರ್ಯಕ್ರಮಗಳು ಕನ್ನಡದಲ್ಲಿ ಕಾಣಿಸಿಕೊಳ್ಳುವುದರಿಂದ ಕನ್ನಡ ಧ್ವನಿ ಕಲಾವಿದರಿಗೆ ಉತ್ತಮ ಭವಿಷ್ಯ ಇದೆ ಹಾಗೂ ನಿಶ್ಚಿತ ಆದಾಯದೊಂದಿಗೆ ಇಚ್ಚೆಯ ಕೆಲಸವನ್ನು ಮಾಡಲು ಸಹಕಾರಿ ಎಂದು ಅಭಿಪ್ರಾಯಪಟ್ಟರು.
ಮನರಂಜನಾ ಕಾರ್ಯಕ್ರಮಗಳ ವಿವಿಧ ಮಜಲುಗಳ ಕಲಿಕೆಯ ಪ್ರಸ್ತುತತೆಯ ಅರಿವು ಹೊಂದುವುದು ಹಾಗೂ ನೈಜತೆಯೊಂದಿಗೆ ಧ್ವನಿಯನ್ನು ನೀಡಿದಾಗ ಮಾತ್ರ ಪಾತ್ರಗಳಿಗೆ ಜೀವಂತಿಕೆ ತುಂಬಲು ಸಾಧ್ಯ. ಪೂರಕ ಪೂರ್ವ ತಯಾರಿಯ ಜೊತೆಗೆ ಭಾಷಾ ಶುದ್ಧತೆ ಮತ್ತು ಕೌಶಲ್ಯಗಳು ಧ್ವನಿ ಕಲಾವಿದರಿಗೆ ಅವಕಾಶಗಳನ್ನು ಹೆಚ್ಚಿಸುತ್ತದೆ ಎಂದು ಡಬ್ಬಿಂಗ್ ಕುರಿತು ಮಾತನಾಡಿದರು.
ಪ್ರಸ್ತುತ ಕಂಠದಾನ ಕಲಾವಿದರಿಗೆ ಬಹಳಷ್ಟು ಬೇಡಿಕೆ ಇದೆ. ಭವಿಷ್ಯದಲ್ಲಿ ಇದೊಂದು ಯಶಸ್ವೀ ಉದ್ಯಮವಾಗಿ ರೂಪುಗೊಳ್ಳುವ ಸಾಧ್ಯತೆಗಳಿದ್ದು ಉದ್ಯೋಗಾವಕಾಶಗಳನ್ನೂ ಸೃಷ್ಟಿಸಿದೆ. ಹೀಗಾಗಿ ಅವಕಾಶಗಳನ್ನು ಬಳಸಿಕೊಳ್ಳುವ ಧ್ವನಿ ಕಲಾವಿದರಿಗೆ ಮಾಧ್ಯಮಗಳಲ್ಲಿ ಉಜ್ವಲ ಭವಿಷ್ಯವಿದೆ ಎಂದು ಹಿನ್ನಲೆ ಧ್ವನಿ ಕುರಿತು ಭವಿಷ್ಯದ ಸಾಧ್ಯತೆಗಳ ಕುರಿತು ಆಶಾ ಭಾವನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕಿ ಶ್ರುತಿ ಜೈನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.