ದಿವಂಗತ ಸಂತೋಷ್ ಕಟೀಲ್ ಇವರಿಗೆ ಶ್ರದ್ಧಾಂಜಲಿ
ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಇದರ ಮಂಗಳೂರು ಘಟಕದ, ಗೃಹರಕ್ಷಕರಾದ ಸಂತೋಷ್ ಕಟೀಲ್ ಮೆ.ನಂ 30 ಇವರು ದಿನಾಂಕ 17-11-2021ರಂದು ಕಿನ್ನಿಗೋಳಿ ಪರಿಸರದ ಶಾಲೆಯ ಮಕ್ಕಳಿಗೆ ಕಣಜದ ಹುಳುಗಳು ಕಡಿದು ಗಂಭೀರಾವಸ್ಥೆಯಲ್ಲಿದ್ದಾಗ ಆ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿರುತ್ತಾರೆ. ರಕ್ಷಣೆ ಮಾಡುವ ಸಂದರ್ಭದಲ್ಲಿ ಇವರಿಗೆ ಕೂಡ ಕಣಜದ ಹುಳುಗಳು ಕಚ್ಚಿದ್ದು, ಇವರು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯದೆ ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿರುವಾಗ ಅಸ್ವಸ್ಥಗೊಂಡು ಆ ದಿನ ರಾತ್ರಿ ನಿಧನ ಹೊಂದಿರುತ್ತಾರೆ.
ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕೋರಲೆಂದು ದಿನಾಂಕ 19-11-2021 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಜಿಲ್ಲಾ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ, ಸಂತೋಷ್ ಅವರ ಅಕಾಲಿಕ ಮರಣದಿಂದ ಗೃಹರಕ್ಷಕ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ಈ ನೋವನ್ನು ಮರೆಯುವ ಶಕ್ತಿಯನ್ನು ಆ ದೇವರು ಕರುಣಿಸಲೆಂದು ನಾವೆಲ್ಲರೂ ಪ್ರಾರ್ಥಿಸೋಣವೆಂದು ನುಡಿದರು.
ಸಂತೋಷ್ ಅವರು ಬಹಳ ಪ್ರಾಮಾಣಿಕ, ನಿಷ್ಟಾವಂತ ಮತ್ತು ದಕ್ಷ ಗೃಹರಕ್ಷಕರಾಗಿದ್ದರು. ಅವರು ಮಕ್ಕಳ ಜೀವವನ್ನು ರಕ್ಷಿಸಿ ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ ಎಂದು ನುಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪ ಸಮಾದೇಷ್ಟರಾದ ರಮೇಶ್, ಕಛೇರಿ ಅಧೀಕ್ಷಕರು ಶ್ರೀ ರತ್ನಾಕರ್, ಪ್ರಥಮ ದರ್ಜೆ ಸಹಾಯಕಿ ಅನಿತಾ, ದಲಾಯತ್ ಮೀನಾಕ್ಷಿ, ಬಂಟ್ವಾಳ ಘಟಕದ ಘಟಕಾಧಿಕಾರಿ ಐತಪ್ಪ ಹಾಗೂ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ