ಬಡಗುತಿಟ್ಟು ಯಕ್ಷಗಾನ ರಂಗದ ಯುವ ವೇಷಧಾರಿ ವಿನಯ ಭಟ್ ಬೇರೊಳ್ಳಿ

Upayuktha
0


ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆ ನಮ್ಮ ಹೆಮ್ಮೆಯ ಕಲೆಯಾದ ಯಕ್ಷಗಾನಕ್ಕೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಈ ಕಲೆಯಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದ ವಿನಯ ಭಟ್ ಬೇರೊಳ್ಳಿ.


ದಿನಾಂಕ 14.12.1990 ರಂದು ಸುಬ್ರಾಯ ಭಟ್ ಹಾಗೂ ಸುಶೀಲಾ ಭಟ್ ಇವರ ಮಗನಾಗಿ ಜನನ. ಬಿ.ಕಾಂ ಇವರ ವಿದ್ಯಾಭ್ಯಾಸ. ಹೊಸ್ತೋಟ ಮಂಜುನಾಥ ಭಾಗವತರು ಇವರ ಯಕ್ಷಗಾನ ಗುರುಗಳು.


ರಂಗಕ್ಕೆ ಹೋಗುವ ಮೊದಲು ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತಿರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಹಿರಿಯರಿಂದ ಪ್ರಸಂಗದ ಬಗ್ಗೆ ಕೇಳುವುದು, ಪ್ರಸಂಗಪ್ರತಿ ಓದುವುದು, ಅರ್ಥ ಬರೆದುಕೊಳ್ಳುವುದು ಹಾಗೂ ಇತರ ಕಲಾವಿದರ ಹತ್ತಿರ ಕೇಳಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಬೇರೊಳ್ಳಿ ಅವರು ಹೇಳುತ್ತಾರೆ.

ಸುಧನ್ವ, ಕುಶ, ಕೃಷ್ಣ, ರಾಮ, ಹನುಮಂತ, ಬ್ರಹ್ಮ, ಮಹೋಗ್ರ, ಈಶ್ವರ, ಪರಶುರಾಮ, ಶತ್ರು ಪ್ರಸೂದನ, ರಕ್ತಜಂಗ ಮುಂತಾದವು ಇವರ ನೆಚ್ಚಿನ ವೇಷಗಳು. ಪೌರಾಣಿಕ ಪ್ರಸಂಗಗಳು, ವಿಶೇಷವಾಗಿ ಸುಧನ್ವಾರ್ಜುನ, ಹರಿಶ್ಚಂದ್ರ, ಲವ ಕುಶ, ಪಟ್ಟಾಭಿಷೇಕ ಮುಂತಾದ ಭಾವನಾತ್ಮಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಗುಂಡಬಾಳ ಮೇಳ, ಜಲವಳ್ಳಿ ಮೇಳ, ಸಾಲಿಗ್ರಾಮ ಮೇಳಗಳಲ್ಲಿ ತಿರುಗಾಟ ಮಾಡಿರುವ ಇವರು ಈ ವರ್ಷದಿಂದ ಪೆರ್ಡೂರು ಮೇಳದಲ್ಲಿ ತಿರುಗಾಟವನ್ನು ಮಾಡಲಿದ್ದಾರೆ.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಕೊರೊನ ಸಂಕಷ್ಟದಿಂದ ಹೊರಬಂದು ಎಲ್ಲಾ ಕಲಾವಿದರಿಗೂ ಕ್ಷೇಮವಾಗಲಿ. ಹಾಗೂ ಇದರ ಬಗ್ಗೆ ಹೇಳುವಷ್ಟು ನಾನು ದೊಡ್ಡವ ಅಲ್ಲ. ನಾನು ಇನ್ನು ವಿದ್ಯಾರ್ಥಿ ಎಂದು ಬೇರೊಳ್ಳಿ ಅವರು ಹೇಳುತ್ತಾರೆ.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-

ಪ್ರೇಕ್ಷಕರು ಅಂದ್ರೆ ಕಲಾವಿದನಿಗೆ ದೇವರು. ಅವರಿದ್ದರೇ ಮಾತ್ರ ನಾವು ಹಾಗಾಗಿ ಅಭಿಪ್ರಾಯ ಅಂತ ಬೇರೆ ಹೇಳಲಾರೆ ಎಂದು ಬೇರೊಳ್ಳಿ ಅವರು ಹೇಳುತ್ತಾರೆ.


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನು ಆದರು ಇದೆಯಾ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಬದುಕಿನಲ್ಲಿ ಅತ್ಯುತ್ತಮ ಕಲಾವಿದ ಆಗ್ಬೇಕು, ಮನುಷ್ಯನಾಗಿ ಹುಟ್ಟಿದ ಈ ಜನ್ಮ ಮುಗಿದರೂ ಒಬ್ಬ ಶ್ರೇಷ್ಠ ಕಲಾವಿದ ಆಗಿ ಯಾವತ್ತೂ ಜನರ ಮನಸ್ಸಿನಲ್ಲಿ ಇರಬೇಕು.ಇದುವೇ ನನ್ನ ಆಸೆ ಮತ್ತು ಗುರಿ ಬೇರೊಳ್ಳಿ ಅವರು ಹೇಳುತ್ತಾರೆ.


ಸನ್ಮಾನ ಪಡೆಯುವಷ್ಟು ನಾನಿನ್ನೂ ಬೆಳೆದಿಲ್ಲ ಹಾಗೂ ಯಕ್ಷಗಾನವೇ ನನಗೆ ವೃತ್ತಿ ಮತ್ತು ಹವ್ಯಾಸ ಎಂದು ಹೇಳುತ್ತಾರೆ ಬೇರೊಳ್ಳಿ.


ನನ್ನ ಕಲಾ ಬದುಕಿನಲ್ಲಿ ಯಾವತ್ತೂ ನನ್ನ ಬೆಳವಣಿಗೆಗೆ ಕಾರಣರಾದವರು ಅನೇಕರು ಅವರೆಲ್ಲರಿಗೂ ನಾನು ಋಣಿ.. ಪ್ರಧಾನವಾಗಿ ನಾನು ಯಕ್ಷಗಾನ ಕಲಿಯುವುದಕ್ಕೆ ಕಾರಣವಾದ ಸ್ಥಳ ಬಂಗಾರಮಕ್ಕಿ, ಮೊದಲು ನಾನು ಪ್ರಭಾವಕ್ಕೆ ಒಳಗಾದದ್ದು ಚಿಟ್ಟಾಣಿಯವರು ಮತ್ತು ಕಣ್ಣಿಯವರು.. ಆಮೇಲೆ degree ಮುಗಿಸಿ ಬೆಂಗಳೂರಿನಲ್ಲಿ ಬೇರೆ ಉದ್ಯೋಗದಲ್ಲಿದ್ದು ಹವ್ಯಾಸಿ ಕಲಾವಿದನಾಗಿದ್ದೆ. ಆಮೇಲೆ ಯಕ್ಷಗಾನವೇ ವೃತ್ತಿ ಆದಾಗ ಮೊದಲು ಮೇಳದಲ್ಲಿ ಅವಕಾಶ ಮಾಡಿ ಕೊಟ್ಟವರು ಗುಂಡಬಾಳ ಮೇಳದ ಯಜಮಾನರಾದ ಪ್ರಭಾಕರ ಚಿಟ್ಟಾಣಿ ಯವರು. ಆಮೇಲೆ ನಾನೊಬ್ಬ ಕಲಾವಿದ ಎಂದು ದಕ್ಷಿಣೋತ್ತರ ಕನ್ನಡದಲ್ಲಿ ಗುರುತಿಸುವುದಕ್ಕೆ ಕಾರಣವಾದ ಮೇಳ ಜಲವಳ್ಳಿ ಮೇಳ. ನಾನೊಬ್ಬ ವೃ ಪರನಾಗಿ ಹೊಸಬನಾದರು ಅದೆಷ್ಟೋ ಶ್ರೇಷ್ಠ ವೇಷಗಳನ್ನು ಮಾಡಿಸಿ ಪ್ರೋತ್ಸಾಹಿಸಿದವರು ವಿದ್ಯಾಧರ ರಾವ್, ಜಲವಳ್ಳಿಯವರು. ಆಮೇಲೆ ಶ್ರೇಷ್ಠ ಮೇಳವಾದ ಸಾಲಿಗ್ರಾಮ ಮೇಳದ ಯಜಮಾನರು ಶ್ರೀ ಪಿ. ಕಿಶನ್ ಹೆಗ್ಡೆಯವರು ತಮ್ಮ ಮೇಳದಲ್ಲಿ ಅವಕಾಶ ಕೊಟ್ಟು ಅತ್ಯಂತ ಪ್ರೀತಿಯಿಂದ ಹಾಗೂ ಗೌರವದಿಂದ ಕಂಡಿದ್ದಾರೆ. ಈ ವರ್ಷದಿಂದ ಶ್ರೇಷ್ಠ ಮೇಳವಾದ ಪೆರ್ಡೂರು ಮೇಳದಲ್ಲಿ ಕಲಾವಿದ ಆಗುವುದಕ್ಕೆ ಅವಕಾಶ ಮಾಡಿಕೊಟ್ಟವರು ಶ್ರೀ ಕರುಣಾಕರ ಶೆಟ್ಟಿಯವರು ಇವರೆಲ್ಲ ನನ್ನ ಅನ್ನದಾತರು ಹೌದು. ಇವರಿಗೆಲ್ಲ ನನ್ನ ಬದುಕಿನಲ್ಲಿ ಋಣಿ ಎಂದು ಹೇಳುತ್ತಾರೆ.


ಹಾಗೆಯೇ ಇವರ ಕಲಾ ಬದುಕಿನಲ್ಲಿ ಗುರುವಾಗಿ, ನೊಂದಾಗ ಸಮಾಧಾನ ಹೇಳಿ, ಹೆದರಿದಾಗ ಧೈರ್ಯ ತುಂಬಿ ಅದೆಷ್ಟೋ ವೇಷಗಳನ್ನು ಹೇಳಿಕೊಟ್ಟು ಮಾಡಿಸಿದವರು ಕೃಷ್ಣ ಯಾಜಿ ಬಳ್ಕೂರು ರವರು. ಯಾವ ಪಾತ್ರದ ಕುರಿತು ಕೇಳಿದರು ಪ್ರೀತಿಯಿಂದ ಹೇಳಿಕೊಡುವ ಅದರಲ್ಲಿಯೂ ಮನೆಗೆ ಕರೆದು ಹೇಳಿಕೊಟ್ಟು ಬರೆಸುವವರು ಕೊಂಡದಕುಳಿ ರಾಮಚಂದ್ರ ಹೆಗಡೆಯವರು. ಅಣ್ಣನಾಗಿ ಅದೆಷ್ಟೋ ಕಾಲದಲ್ಲಿ ನನಗೆ ಧೈರ್ಯವಾಗಿ, ನನ್ನ ಕೈ ಹಿಡಿದು ನಡೆಸಿದ ನೀಲ್ಕೋಡು ಶಂಕರ ಹೆಗಡೆಯವರು. ಯಾವ ಪಾತ್ರದ ಬಗ್ಗೆ ಆಗಲಿ ಕೇಳಿದಾಗ ಹೇಳಿಕೊಟ್ಟು ತಪ್ಪನ್ನು ತಿದ್ದುವ ಗುರು ಸಮಾನ ಕಾಸರಕೊಡ್ ಶ್ರೀಧರ್ ಭಟ್. ಹಾಗೆಯೇ ಹಿಲ್ಲೂರು ರಾಮಕೃಷ್ಣ ಹೆಗಡೆ, ಪ್ರಸನ್ನ ಭಟ್ ಬಾಳ್ಕಲ್, ಕಾರ್ತಿಕ್ ಚಿಟ್ಟಾಣಿ, ಮೂರೂರು ಸುಬ್ರಮಣ್ಯ ಹೆಗ್ಡೆ, ಸರ್ವೇಶ್ವರ ಹೆಗಡೆ, ರಾಮಚಂದ್ರ ಭಟ್ ಬಂಗಾರಮಕ್ಕಿ, ಗುರುಪ್ರಸಾದ್ ಮಾಡಗೆರಿ, N.G ಹೆಗಡೆ, ಶ್ರೀಪಾದ ಹೆಗಡೆ  ಹಡಿನಬಾಳ  ಹೀಗೆ ಹೇಳುವುದಕ್ಕೆ ಹೊರಟರೆ ಸಾವಿರವಾದಿತು... ಇವರೆಲ್ಲ ನನ್ನ ತಪ್ಪನ್ನು ತಿದ್ದಿ ನನ್ನ ಕಲಾ ಬದುಕಿಗೆ ಉಪಕಾರ ಮಾಡಿದ ಪುಣ್ಯಾತ್ಮರು. ಇವರೆಲ್ಲರಿಗೂ ನಾನು ಋಣಿ.. ನನ್ನ ಬದುಕಿನ ಪುಟಗಳಲ್ಲಿ ಇವರೆಲ್ಲರಿಗೂ ವಿಶೇಷ ಸ್ಥಾನ ಮತ್ತು ಗೌರವ ಯಾವತ್ತಿಗೂ ಇದೆ ಎಂದು ಬೇರೊಳ್ಳಿ ಅವರು ಹೇಳುತ್ತಾರೆ.


ಒಬ್ಬ ವ್ಯಕ್ತಿ ಒಳ್ಳೆ ಕಲಾವಿದ ಅಂತ ಹೇಳಿಸಿಕೊಳ್ಳುವಲ್ಲಿ ದೇವರ ಅನುಗ್ರಹ, ಹಿರಿಯ ಕಲಾವಿದರ ಪ್ರಭಾವ, ಅನೇಕರ ಸಹಕಾರ ಇದ್ದೆ ಇರುತ್ತದೆ.. ಅವರೆಲ್ಲರಿಗೂ ನಾನು ಋಣಿ ಎಂದು ಬೇರೊಳ್ಳಿ ಅವರು ಹೇಳುತ್ತಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

Photo Click:- Gokula Focus, Shanumkha Clicks.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top