ರಾಜ್ಯೋತ್ಸವದ ಅಂಗವಾಗಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸುರತ್ಕಲ್‌ನಲ್ಲಿ ಆಯೋಜಿಸಿದ ವಿಚಾರ ಮಂಥನ ಉದ್ಘಾಟಿಸಿದ ಮಂಗಳೂರು ವಿವಿ ಕುಲಪತಿ ಅಭಿಪ್ರಾಯ
ಮಂಗಳೂರು: ಕನ್ನಡ ಭಾಷೆಯನ್ನು ನಾವು ಮೊದಲ ಆದ್ಯತೆಯ ಭಾಷೆ ಎಂದು ಪರಿಗಣಿಸಬೇಕು. ಅದು ನಮ್ಮ ಹೃದಯದ ಭಾಷೆ ಆಗಬೇಕು. ಆಗ ಮಾತ್ರ ಆಪ್ತತೆಯಿಂದ ಅದು ನಮ್ಮನ್ನು ಆವರಿಸಿಕೊಂಡು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಡಾ. ಪಿ.ಎಸ್. ಎಡಪಡಿತ್ತಾಯ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮಂಗಳೂರು ತಾಲೂಕು ಸಮಿತಿಯು ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿನ ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ‘ನಿತ್ಯ ಬಳಕೆಯಲ್ಲಿ ನನ್ನ ಕನ್ನಡ’ ಎಂಬ ಚಿಂತನ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಾಡಿದರು.
ವಿಷಯ ಪ್ರವೇಶ ಮಾಡಿ ಮಾತಾಡಿದ ಕವಿ, ಸಾಹಿತಿ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷ ಡಾ. ವಸಂತಕುಮಾರ ಪೆರ್ಲ ಅವರು ಭಾಷೆಯ ಬೆಳವಣಿಗೆಯಲ್ಲಿ ನಮಗೆಲ್ಲರಿಗೂ ಅಗಾಧವಾದ ವೈಯಕ್ತಿಕ ಜವಾಬ್ದಾರಿ ಇದೆ. ನಾವು ಭಾಷೆಯನ್ನು ಪ್ರತಿನಿತ್ಯ ಶುದ್ಧ ರೂಪದಲ್ಲಿ ಬಳಸುತ್ತ ಬಂದಾಗ ಅದು ತನ್ನಿಂದ ತಾನೇ ಬೆಳೆಯುತ್ತದೆ. ಬೇರೆಯವರು ನಮ್ಮ ಭಾಷೆಯನ್ನು ಕಲಿಯುವ ವಾತಾವರಣವನ್ನು ನಾವು ನಿರ್ಮಿಸಬೇಕು ಎಂದರು.
ಚಿಂತನ ಮಂಥನ ಕಾರ್ಯಕ್ರಮದಲ್ಲಿ ಬೇರೆ ಬೇರೆ ರಂಗಗಳ ವೃತ್ತಿಕ್ಷೇತ್ರಗಳಿಗೆ ಸಂಬಂಧಿಸಿದ ಕೆ. ರತ್ನಾಕರ ಕುಳಾಯಿ, ಬದ್ರುದ್ದೀನ್ ಕೂಳೂರು, ವಿಭಾ ಕೃಷ್ಣಪ್ರಕಾಶ ಉಳಿತ್ತಾಯ, ಪ್ರವೀಣಕುಮಾರ್ ಪಿ., ನವೀನ್ ಕುಲಾಲ್ ಚಿಪ್ಪಾರು, ವೇಣುವಿನೋದ ಕೆ. ಎಸ್. ಮತ್ತು ವಿದ್ಯಾರ್ಥಿಗಳಾದ ಸಂದೇಶ ಪ್ರಭು, ದೀಪಾ ಬಾಳಿಗ, ವರ್ಷಿತಾ, ವಿಶಾಲ್, ಸನ್ನಿಧಿ, ಚೈತ್ರಾ ಮತ್ತು ಸುಪ್ರೀತಾ ಮೊದಲಾದವರು ವಿಚಾರ ಮಂಡನೆ ಮಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಕೆ. ಪ್ರಕಾಶನಾರಾಯಣ ಚಾರ್ಮಾಡಿ ಮಾತಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿಂದೂ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಇಡ್ಯ ಜನಾರ್ದನ ಅವರು ಇದೊಂದು ಅಪರೂಪದ ವಿಶಿಷ್ಟ ಕಾರ್ಯಕ್ರಮ. ಯುವ ಜನತೆಯನ್ನು ಕನ್ನಡ ಭಾಷೆಯ ಕಡೆಗೆ ಕರೆದು ತರಲು ಎಲ್ಲ ಕಡೆ ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದರು.
ಉಪಪ್ರಾಂಶುಪಾಲ ಪ್ರೊ. ರಮೇಶ ಭಟ್ ಎಸ್. ಜಿ., ಕನ್ನಡ ವಿಭಾಗದ ಮುಖ್ಯಸ್ಥೆ ದೀಪಾ ಶೆಟ್ಟಿ, ಆಡಳಿತ ಮಂಡಳಿಯ ಉಪಾಧ್ಯಕ್ಷ ಪ್ರೊ. ರತ್ನಾಕರ ರಾವ್ ವೈ. ಎ., ಆಡಳಿತಾತ್ಮಕ ನಿರ್ದೇಶಕ ರಮೇಶ್ ಕುಳಾಯಿ, ಪ್ರೊ. ಮೀನಾಕ್ಷಿ ರಾಮಚಂದ್ರ ಮತ್ತು ಅಂಡಾಲ ಗಂಗಾಧರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಅಭಾಸಾಪ ಉಪಾಧ್ಯಕ್ಷೆ ರತ್ನಾವತಿ ಜೆ. ಬೈಕಾಡಿ ಕನ್ನಡ ಗೀತೆಗಳನ್ನು ಹಾಡಿದರು.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಅಕ್ಷತಾ ಶೆಟ್ಟಿ ನಿರೂಪಿಸಿದರು. ಅಭಾಸಾಪ ಮಂಗಳೂರು ತಾಲೂಕು ಸಮಿತಿ ಕಾರ್ಯದರ್ಶಿ ಹರೀಶ್ ಅಮೈ ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ