ಅಬ್ರಾಹಮ್ ಬೆಂಜಮಿನ್ ಡಿವಿಲಿಯರ್ಸ್ ಈ ಹೆಸರು ಈ ಶತಮಾನದ ಕ್ರಿಕೆಟ್ ಲೋಕದಲ್ಲಿ ಚಿರಪರಿಚಿತ. ದಕ್ಷಿಣ ಆಫ್ರಿಕಾದ ಪ್ರೀಟೋರಿಯಸ್ ಮೈದಾನದಲ್ಲಿ ಕ್ರಿಕೆಟ್ ಕಲಿತು ಇಡೀ ಜಗತ್ತಿನ ಬಹುತೇಕ ಕ್ರಿಕೆಟ್ ಅಂಗಳದಲ್ಲಿ ಆಟದ ಸಾಮರ್ಥ್ಯದ ಮೂಲಕ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯ ಮನದಲ್ಲಿ ತನ್ನ ಹೆಸರನ್ನು ಅಳಿಸಲಾಗದಷ್ಟು ಆಳವಾಗಿ ಬೇರೂರಿದವರು. ತನ್ನ ಕ್ರಿಕೆಟ್ ವೃತ್ತಿಯ ಆರಂಭಿಕ ವರ್ಷಗಳಲ್ಲಿ ಅಷ್ಟೇನೂ ಭರವಸೆ ಮೂಡಿಸದೆ ಹೋದರೂ ಬರಬರುತ್ತಾ ತನ್ನ ಹೆಜ್ಜೆ ಗುರುತನ್ನು ಶಾಶ್ವತವಾಗಿ ಇಡುವಂತಹ ಆಟವನ್ನು ಆಡುವುದರ ಮೂಲಕ ಬೆಳವಣಿಗೆ ಕಂಡವರು. ಇದರಲ್ಲಿ 2008 ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಪರ್ತ್ ಅಂಗಳದಲ್ಲಿ ನಾಲ್ಕನೆಯ ಇನ್ನಿಂಗ್ಸಿನಲ್ಲಿ 400ಕ್ಕೂ ಅಧಿಕ ರನಗಳ ಗುರಿಯನ್ನು ತಲುಪಲು ಶತಕ ಬಾರಿಸುವುದರ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಅಂದು ಅತ್ಯಂತ ಶ್ರೇಷ್ಠ ಹಾಗೂ ಕಠಿಣ ತಂಡವಾಗಿದ್ದ ಆಸ್ಟ್ರೇಲಿಯಾವನ್ನು ಅವರದೇ ನೆಲದಲ್ಲಿ ಸೋಲು ಕಾಣುವಂತೆ ಮಾಡುವುದರಲ್ಲಿ ಎ ಬಿ ಡಿವಿಲಿಯರ್ಸ್ ಮಹತ್ವದ ಪಾತ್ರವನ್ನು ಆ ಸಮಯದಲ್ಲೇ ವಹಿಸಿದ್ದರು.
ಅಲ್ಲಿಂದ ಡಿವಿಲಿಯರ್ಸ್ ಅವರ ಆಟದ ವೈಖರಿ ಪ್ರತಿ ಹಂತದಲ್ಲೂ ಬೆಳವಣಿಗೆ ಕಂಡು 2010-11 ರ ಹೊತ್ತಿಗೆ ಜಗತ್ತಿನ ಶ್ರೇಷ್ಠ ಬ್ಯಾಟ್ಸ್ ಮ್ಯಾನ್ ಗಳ ಸಾಲಿನಲ್ಲಿ ಬಂದು ನಿಂತಿದ್ದರು. ಮೊದಮೊದಲು ಟೆಸ್ಟ್ ಕ್ರಿಕೆಟನ ಆಟದಲ್ಲಿ ಶಾಸ್ತ್ರಬದ್ದ ಆಟವನ್ನು ಆಡಿ ನಂತರ ಟಿ 20 ಕ್ರಿಕೆಟನ 360 ಡಿಗ್ರಿ ಆಟಗಾರನಾಗುವವರೆಗೆ ಅವರ ಪ್ರಯತ್ನ ಹಾಗೂ ಕೆಲಸದೆಡೆಗೆ ಇದ್ದ ಶ್ರದ್ದೆ ಇಂದಿನ ಪೀಳಿಗೆಯವರಾದ ನಾವು ಅವರಿಂದ ಕಲಿಯಬೇಕಾದ ಮಹತ್ವದ ಪಾಠ. 2013ರಿಂದ 2016ರ ವರೆಗೆ ಮೊದಲ ಶ್ರೇಯಾಂಕಿತ ಆಟಗಾರನಾಗಿ ಕ್ರಿಕೆಟ್ ಲೋಕದಲ್ಲಿ ಅತಿಹೆಚ್ಚು ದಿನಗಳ ಕಾಲ ಮೊದಲ ಶ್ರೇಯಾಂಕಿತ ಸ್ಥಾನವನ್ನು ಅಲಂಕರಿಸಿದ ಆಟಗಾರನಾಗಿ ಮೆರೆದವರು ಎ ಬಿ ಡಿವಿಲಿಯರ್ಸ್.
ಆತ ಎಂದು ತನ್ನ ಸ್ವ ಹಿತಾಸಕ್ತಿಗಾಗಿ ಆಟವನ್ನು ಆಡಿದವರೇ ಅಲ್ಲ. ಅದಕ್ಕೆ ಪೂರಕವಾದ ಸನ್ನಿವೇಶ ಏನೆಂದರೆ 2015 ಪ್ರಾರಂಭದಲ್ಲಿ ವೆಸ್ಟ್ಇಂಡೀಸ್ ದಕ್ಷಿಣ ಆಫ್ರಿಕಾ ಪ್ರವಾಸ ತೆರಳಿದ್ದಾಗ ಪಿಂಕ್ ಡೇ ಪಂದ್ಯದಲ್ಲಿ ಡಿವಿಲಿಯರ್ಸ್ 43 ಎಸೆತಗಳಲ್ಲಿ 149 ರನ್ ಗಳಿಸಿ ಕ್ರೀಸ್ ನಲ್ಲಿ ಆಡುವ ವೇಳೆ ವಿಶ್ವದ ಯಾವುದೇ ಆಟಗಾರನಾಗಿದ್ದರೂ ಒಂದು ರನ್ ಪಡೆದು 150 ರನ್ ಗಳಿಸಿ ಅತಿವೇಗದ 150 ರನ್ ಗಳಿಸಿದ ಆಟಗಾರನೆಂಬ ಪಟ್ಟ ಏರುವ ಆಲೋಚನೆ ಮಾಡುತ್ತಿದ್ದರೇನೋ. ಆದರೆ ಡಿವಿಲಿಯರ್ಸ್ ಅಲ್ಲಿಯತನಕ ಆಡಿದ್ದ ಬಿರುಸಿನ ಆಟವನ್ನು ಆಡಿ ತಂಡದ ಮೊತ್ತ ಜಾಸ್ತಿ ಆಗಬೇಕು ಎನ್ನುವಂತೆ ಆಡಿ ಕೇವಲ ಒಂದು ರನ್ ಅಂತರದಲ್ಲಿ 150 ಗಳಿಸಲು ವಂಚಿತರಾದರು. ಡಿವಿಲಿಯರ್ಸ್ ಆರಂಭಿಕ ನಿಂದ ಹಿಡಿದು ಏಳನೇ ಆಟಗಾರನ ಸ್ಥಾನದವರೆಗೂ ಎಲ್ಲ ಸ್ಥಾನದಲ್ಲು ಆಡುವುದರ ಮೂಲಕ ತಾನೊಬ್ಬ ತಂಡಕ್ಕಾಗಿ ಆಡುವ ವ್ಯಕ್ತಿಯೆಂದು ಕ್ರಿಕೆಟ್ ಜಗತ್ತಿಗೆ ತೋರಿಸಿದ್ದರು.
ಆತ ಒಬ್ಬ ಅತ್ಯುತ್ತಮ ಆಟಗಾರನಷ್ಟೇ ಅಲ್ಲದೆ ಜಗತ್ತಿನ ಶ್ರೇಷ್ಠ ಕ್ಷೇತ್ರ ರಕ್ಷಕರ ಸಾಲಿನಲ್ಲಿ ನಿಲ್ಲುವಂತ ಕ್ರೀಡಾಪಟು. ಕ್ರಿಕೆಟ್ ಅಂಗಳದ ಯಾವ ಮೂಲೆಯಲ್ಲಿ ಆದರೂ ಚೆಂಡನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇದ್ದ ಒಬ್ಬ ಆಟಗಾರರಾಗಿದ್ದರು.
ಜಗತ್ತಿನ ಕ್ರಿಕೆಟ್ ಇತಿಹಾಸದಲ್ಲಿ ಅತಿವೇಗವಾಗಿ 50, 100, 150 ಬಾರಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆ ಇರುವವರು. ಏಕ ದಿನ ಪಂದ್ಯದಲ್ಲಿ ನೂರಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಒಬ್ಬನೆ ಒಬ್ಬ ಆಟಗಾರ ಡಿವಿಲಿಯರ್ಸ್. ಟೆಸ್ಟ್ ಮತ್ತು ಏಕದಿನ ಪಂದ್ಯದಲ್ಲಿ ಐವತ್ತಕ್ಕೂ ಹೆಚ್ಚು ಸರಾಸರಿ ಹೊಂದಿರುವ ಕೆಲವೇ ಕೆಲವು ಆಟಗಾರರಲ್ಲಿ ಇವರು ಒಬ್ಬರು. ಒಂದು ಲೆಕ್ಕದಲ್ಲಿ ಡಿವಿಲಿಯರ್ಸ್ ಅವರ ಕ್ರಿಕೆಟ್ ಅಂಗಳದ ಸಾಮರ್ಥ್ಯವನ್ನು ಅವರ ಅಂಕಿ ಅಂಶಗಳಿಂದ ಅಳೆಯುವುದೆ ತಪ್ಪು ಏಕೆಂದರೆ ಅತ ಅಂಕಿ ಅಂಶಗಳಿಗಿಂತ ಎತ್ತರಕ್ಕೆ ಬೆಳೆದು ನಿಂತಿರುವ ದೈತ್ಯ ಆಟಗಾರ. ಈ ಶತಮಾನದಲ್ಲಿ ಕ್ರಿಕೆಟ್ ಅಂಗಳದಲ್ಲಿ ಹೊಸ ಹೊಡೆತಗಳ ಸೃಷ್ಟಿಕರ್ತ ಡಿವಿಲಿಯರ್ಸ್ ಎಂದರೆ ತಪ್ಪಾಗಲಾರದು. 140, 150 ಕೀ ಮೀ ವೇಗದ ಎಸೆತವನ್ನು ಸಲಿಸಾಗಿ ತನಗೆ ಬೇಕಾದ ಸ್ಥಳಕ್ಕೆ ಆಡುವ ಶಕ್ತಿಯಿದ್ದ ಆಟಗಾರ ಡಿವಿಲಿಯರ್ಸ್.
ಡಿವಿಲಿಯರ್ಸ್ ಅವರೇ ಹೇಳಿರುವ ಹಾಗೆ ಐಪಿಎಲ್ ಅವರ ವೃತ್ತಿಜೀವನದಲ್ಲಿ ಒಂದು ಪ್ರಮುಖ ಭಾಗವಾಗಿದೆ ಏಕೆಂದರೆ ಭಾರತೀಯರು ಒಬ್ಬ ಕ್ರಿಕೆಟ್ ಆಟಗಾರರನ್ನು ಮೆಚ್ಚಿಕೊಂಡರೆ ಆತನನ್ನು ತಮ್ಮ ಹೃದಯ ದೇಗುಲದಲ್ಲಿ ದೇವರಂತೆ ಪೂಜಿಸುವವರು ಹೀಗಿರಬೇಕಾದರೆ ಒಬ್ಬ ವಿದೇಶಿ ಆಟಗಾರನನ್ನು ತಮ್ಮ ದೇಶದ ಆಟಗಾರರಿಗಿಂತ ಹೆಚ್ಚು ಪ್ರೀತಿ, ಗೌರವ ಕೊಡುವುದೆಂದರೆ ಆ ವ್ಯಕ್ತಿಯಲ್ಲಿ ಅದೇನೋ ವಿಶೇಷ ಇರಲೇಬೇಕು ಅಲ್ಲವೆ? ಆ ಸಾಲಿನಲ್ಲಿ ಡಿವಿಲಿಯರ್ಸ್ ಮೊದಲಿಗರಾಗಿ ನಿಲ್ಲುವರು.
ಡಿವಿಲಿಯರ್ಸ್ ಕ್ರಿಕೆಟಿಗರಾಗಿ ಮೈದಾನದಲ್ಲಿ ಎಷ್ಟು ರಂಜಿಸಿದ್ದಾರೊ ಹಾಗೆ ಕ್ರಿಕೆಟ್ ಹೊರತು ವೈಯಕ್ತಿಕ ಬದುಕಿನಲ್ಲಿ ಅಪರೂಪದ ವ್ಯಕ್ತಿಯಾಗಿದ್ದರು. ಅವರು ವೃತ್ತಿ ಜೀವನದ ಉತ್ತುಂಗಕ್ಕೆ ಏರಿದರೂ ಕೂಡ ಅಹಂಕಾರ ಎನ್ನುವುದು ಆ ವ್ಯಕ್ತಿಯ ತಲೆಗೆ ಹತ್ತಿರಲಿಲ್ಲ. ತುಂಬಿದ ಕೊಡ ತುಳುಕುವುದಿಲ್ಲ ಎನ್ನುವ ನಾಣ್ಣುಡಿಯಂತೆ ಕ್ರಿಕೆಟ್ ಅಂಗಳದಲ್ಲಿ ಆಗಲಿ ಸಾಮಾಜಿಕ ಜೀವನದಲ್ಲಿ ಆಗಲಿ ಎಂದು ಕೆಟ್ಟ ನಡತೆಯ ಪ್ರದರ್ಶನ ಅವರ ಇಷ್ಟು ವರ್ಷಗಳ ವೃತ್ತಿ ಬದುಕಿನಲ್ಲಿ ಯಾವ ಸಹ ಆಟಗಾರರಾಗಲಿ, ಅಭಿಮಾನಿಗಳಾಗಲಿ ನೋಡಿರಲಿಲ್ಲ. ಹಾಗಾಗಿ ಕ್ರಿಕೆಟ್ ಜಗತ್ತಿನಲ್ಲಿ ಅಜಾತಶತ್ರು ಎಂದು ಕರೆಯಲ್ಪಡುವ ಕೆಲವೇ ಕೆಲವು ಆಟಗಾರರಲ್ಲಿ ಡಿವಿಲಿಯರ್ಸ್ ಕೂಡ ಒಬ್ಬರು. ನೀವು ಕ್ರಿಕೆಟ್ ಅಂಗಳದಿಂದ ದೂರ ಸರಿಯಬಹುದು ಆದರೆ ಕ್ರಿಕೆಟ್ ಪ್ರೇಮಿಗಳ ಮನಸ್ಸಿನಲ್ಲಿ ಎಂದಿಗೂ ನೀವು ರಂಜಿಸಿದ ಕ್ಷಣಗಳು ಅಜರಾಮರ. ಕ್ರಿಕೆಟ್ ಜಗತ್ತು ಶ್ರೇಷ್ಠ ಆಟಗಾರರಲ್ಲಿ ನಿಮ್ಮ ಹೆಸರು ಎಂದಿಗೂ ಚಿರಸ್ಥಾಯಿಯಾಗಿರುತ್ತದೆ.
-ಪ್ರದೀಪ ಶೆಟ್ಟಿ ಬೇಳೂರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ