ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ನಮ್ಮ ಹೆಮ್ಮೆಯ ಕಲೆಯಾದ ಯಕ್ಷಗಾನಕ್ಕೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಈ ಕಲೆಯಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದ, ಚೆಂಡೆಯ ಏಕಲವ್ಯ ಶ್ರೀಯುತ ಸುಜನ್ ಕುಮಾರ್ ಹಾಲಾಡಿ.
ಶ್ರೀಯುತ ಶಿವರಾಮ್ ಹಾಗೂ ಸರೋಜ ಇವರ ಸುಪುತ್ರನಾಗಿ ದಿನಾಂಕ 20.11.1997 ರಲ್ಲಿ ಇವರ ಜನನ. ದ್ವಿತೀಯ ಪಿ.ಯು.ಸಿ ಇವರ ವಿದ್ಯಾಭ್ಯಾಸ. ಚಿಕ್ಕ ವಯಸ್ಸಿನಲ್ಲಿ ಯಕ್ಷಗಾನದ ಮೇಲೆ ತುಂಬಾನೇ ಆಸಕ್ತಿ ಇದ್ದ ಇವರು ಯಕ್ಷಗಾನದ ಕ್ಯಾಸೆಟ್ ಹಾಗೂ ವಿಡಿಯೋ ನೋಡಿ ಚೆಂಡೆಯ ಬಗ್ಗೆ ಒಲವು ಮೂಡಿ ಸ್ವಂತ ಅಭ್ಯಾಸ ಮಾಡಿ ಬಿದ್ಕಲ್ ಕಟ್ಟೆ ಕೃಷ್ಣಯ್ಯ ಆಚಾರ್ ರೊಂದಿಗೆ ಚೆಂಡೆಯ ಬಗ್ಗೆ ಪೂರ್ವ ತಯಾರಿ ಮಾಡಿಕೊಂಡು ಶಾಲಾ ರಜಾ ದಿನಗಳಲ್ಲಿ ಮಡಾಮಕ್ಕಿ ಮೇಳದಲ್ಲಿ ಸೇವೆ ಸಲ್ಲಿಸುವ ಮೂಲಕ ಯಕ್ಷಗಾನ ಅಭಿಮಾನಿಗಳ ಮನಗೆದ್ದು ಯಕ್ಷಗಾನ ರಂಗದಲ್ಲಿ ಪೂರ್ಣ ಪ್ರಮಾಣದ ಕಲಾವಿದನಾಗಿ ಯಕ್ಷಗಾನ ರಂಗದಲ್ಲಿ ತೊಡಗಿಸಿ ಚೆಂಡೆಯ ಏಕಲವ್ಯ ಎಂದು ಬಿರುದು ಪಡೆದು ಯಕ್ಷಗಾನದಲ್ಲಿ ಮಿಂಚುತ್ತಿರುವ ಪ್ರತಿಭೆ.
ಇವರು ಯಕ್ಷಗಾನ ಕಲಾ ಜೀವನವನ್ನು ಮೊದಲಿಗೆ ಸಿಗಂದೂರು ಮೇಳದಲ್ಲಿ ಪ್ರಾರಂಭಿಸಿದರು. ನಂತರ ಮಾರಣಕಟ್ಟೆ ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಪೆರ್ಡೂರು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ಒಟ್ಟು 6 ವರ್ಷಗಳಿಂದ ತಿರುಗಾಟ ಮಾಡುತ್ತಿದ್ದಾರೆ.
ರತ್ನವತಿ ಕಲ್ಯಾಣ, ಕಾರ್ತ್ಯವೀರ್ಯ, ಗದಾಯುದ್ಧ, ಚಂದ್ರಾವಳಿ ವಿಲಾಸ ಇವರ ನೆಚ್ಚಿನ ಪ್ರಸಂಗಗಳು. ಹೆರಂಜಾಲು ಗೋಪಾಲ್ ಗಾಣಿಗ, ರಾಘವೇಂದ್ರ ಮಯ್ಯ, ನಗರ ಸುಬ್ರಮಣ್ಯ ಆಚಾರ್, ರಾಘವೇಂದ್ರ ಆಚಾರ್ಯ ಜನ್ಸಾಲೆ ಇವರ ನೆಚ್ಚಿನ ಭಾಗವತರು. ಸುನಿಲ್ ಭಂಡಾರಿ, ರಾಕೇಶ್ ಮಲ್ಯ, ಶಿವಾನಂದ ಕೋಟ ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಳೆ ವಾದಕರು.
ಕರ್ನಾಟಕ ಕರಾವಳಿ ಮೈತ್ರಿ ಸಂಘ ಹೈದರಾಬಾದ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಲಾಡಿ ಹಾಗೂ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಹಾಗೂ ಪ್ರಶಸ್ತಿ ಇವರಿಗೆ ಲಭಿಸಿದೆ.
ಯಕ್ಷಗಾನ ರಂಗದಲ್ಲಿ ಮುಂದೆ ಒಬ್ಬ ಒಳ್ಳೆಯ ಕಲಾವಿದನಾಗಿ ಹೆಸರು ಮಾಡಬೇಕು ಎಂಬ ಆಸೆ ಇದೆ. ಮೇಳದ ಯಜಮಾನರು, ಮ್ಯಾನೇಜರ್, ಪವನ್ ಕಿರಣಕೆರೆ, ಪ್ರಕಾಶ್ ಕಿರಡಿ, ಉಮೇಶ್ ಸುವರ್ಣ, ಕೃಷ್ಣ ಆಚಾರ್ ಬಿದ್ಕಲ್ ಕಟ್ಟೆ, ಪ್ರವೀಣ್ ಪೆರ್ಡೂರು, ಸುದರ್ಶನ್ ಮಂದಾರ್ತಿ, ಧೀರಜ್ ಉಡುಪ ಉಪ್ಪಿನಕುದ್ರು, ಹಾಲಾಡಿ ಊರಿನ ಕಲಾ ಪ್ರೋತ್ಸಾಹಕರು, ಯಕ್ಷಗಾನ ಸಂಘಟಕರು ಹಾಗೂ ಮೇಳದ ಸರ್ವ ಕಲಾವಿದರಿಗೂ ಹಾಗೂ ಪ್ರೋತ್ಸಾಹ ನೀಡುತ್ತಿರುವ ಸರ್ವರಿಗೂ ಧನ್ಯವಾದಗಳು.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
ಚಿತ್ರ ಕೃಪೆ:- ಪ್ರವೀಣ್ ಪೆರ್ಡೂರು, ರಾಜ ಭಟ್, ಧೀರಜ್ ಉಡುಪ, ವಿಜಯ್ ಕುಮಾರ್
- ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ