ವಂದೇ ಮಾತರಂ ಗೀತೆಯನ್ನು ಪ್ರತಿಯೊಬ್ಬರೂ ತಿಳಿದಿರಬೇಕು : ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು: ವಂದೇ ಮಾತರಂ ಈ ದೇಶದ ಅತ್ಯಂತ ಗೌರವಯುತವಾದ ಹಾಡು. ಭಾರತೀಯರನ್ನು ಒಗ್ಗೂಡಿಸಿದ ಈ ಗೀತೆಗೆ ರಾಷ್ಟ್ರಗೀತೆಗೆ ಸಮಾನಾದ ಮನ್ನಣೆಯನ್ನು ಸಂವಿಧಾನದಲ್ಲೇ ಕೊಡಮಾಡಲಾಗಿದೆ. ಪ್ರತಿಯೊಬ್ಬ ನಾಗರಿಕನೂ ವಂದೇ ಮಾತರಂ ಅನ್ನು ಕಂಠಪಾಠ ಮಾಡಿಕೊಂಡಿರಬೇಕಾದದ್ದು ಆದ್ಯ ಕರ್ತವ್ಯ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ವಿದ್ಯಾರ್ಥಿಗಳನ್ನುದ್ದೇಶಿಸಿ ವಂದೇ ಮಾತರಂ ಗೀತೆಯ ಮಹತ್ವವನ್ನು ವಿವರಿಸಿದರು.
ಇಂದು ಅತ್ಯಂತ ಕಳಪೆ ಸಾಹಿತ್ಯಗಳುಳ್ಳ ಗೀತೆಗಳು ನಮ್ಮ ಮಕ್ಕಳ ಬಾಯಿಯಲ್ಲಿ ನಲಿದಾಡುತ್ತಿವೆ. ಕೆಲವೊಂದು ಸಿನೆಮಾ ಹಾಡುಗಳಂತೂ ಸಹಿಸಲಸಾಧ್ಯ. ಆದಾಗ್ಯೂ ಅಂತಹ ಹಾಡುಗಳು ಯುವ ಮನಸ್ಸುಗಳನ್ನಾವರಿಸಿಕೊಳ್ಳುತ್ತಿವೆ. ಆದರೆ ದೇಶದ ಗೌರವದ ಪ್ರತೀಕವಾದ ವಂದೇ ಮಾತರಂ ಹಾಡು ಅನೇಕರಿಗೆ ತಿಳಿದೇ ಇಲ್ಲದಿರುವುದು ದುರಂತ. ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ವಂದೇ ಮಾತರಂನಂತಹ ಸಾಹಿತ್ಯ ಅತ್ಯಂತ ಅಗತ್ಯ. ಆದರೆ ಅನೇಕ ಶಿಕ್ಷಣ ಸಂಸ್ಥೆಗಳಲ್ಲೇ ಈ ಗೀತೆಯನ್ನು ಹಾಡಿಸದಿರುವುದು ವಿಷಾದಕರ ಎಂದು ಅಭಿಪ್ರಾಯಪಟ್ಟರು.
ಅಂಬಿಕಾ ಪದವಿ ಮಹಾವಿದ್ಯಾಲಯ ಸಂಸ್ಕೃತಿ, ಆಚರಣೆ, ದೇಶಪ್ರೇಮವೇ ಮೊದಲಾದ ವಿಚಾರಗಳ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅತ್ಯಂತ ಉತ್ಕೃಷ್ಟ ಬೋಧಕವೃಂದ ಈ ಸಂಸ್ಥೆಯಲ್ಲಿ ಇಲ್ಲಿರುವುದು ಹೆಮ್ಮೆಯ ವಿಚಾರ. ಆದ್ದರಿಂದ ಈ ಸಂಸ್ಥೆಯಿಂದ ಹೊರಹೋಗುವ ವಿದ್ಯಾರ್ಥಿಗಳ ಗುಣಮಟ್ಟವೂ ಅತ್ಯಂತ ಎತ್ತರದಲ್ಲಿರಬೇಕೆಂದು ಸಂಸ್ಥೆ ಸದಾ ಬಯಸುತ್ತದೆ. ದೇಶದ ಬಗೆಗೆ, ನೆಲ, ಜಲದ ಬಗೆಗೆ, ಸಂಸ್ಕೃತಿ ಸಂಸ್ಕಾರಗಳ ಬಗೆಗೆ ಅಭಿಮಾನ ಇರುವ ಯುವ ಸಮುದಾಯದ ಸೃಷ್ಟಿಗೆ ಅಂಬಿಕಾ ಸಮೂಹ ಸಂಸ್ಥೆಗಳು ಆದ್ಯತೆ ನೀಡುತ್ತಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ, ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾತ ಗೋರೆ, ಇಂಗ್ಲಿಷ್ ವಿಭಾಗ ಮುಖ್ಯಸ್ಥ ಗಣೇಶ್ ಪ್ರಸಾದ್ ಎ, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ ವಿ, ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಅಭಿಷೇಕ್ ಎನ್, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಅಕ್ಷಯ್ ಹೆಗಡೆ, ಕನ್ನಡ ವಿಭಾಗದ ಮುಖ್ಯಸ್ಥೆ ಜಯಂತಿ, ಹಿರಿಯ ಉಪನ್ಯಾಸಕಿ ಪುಷ್ಪಲತಾ, ಕಛೇರಿ ಮುಖ್ಯಸ್ಥೆ ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ