ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕು ದಂತಳಿಗೆ ಇವರ ಹುಟ್ಟೂರು. ಶ್ರೀ ವೆಂಕಟ್ರಮಣ ಹೆಗಡೆ ಮತ್ತು ಶ್ರೀಮತಿ ಕಾವೇರಿ ಹೆಗಡೆ ದಂಪತಿಗಳ ಮಗನಾಗಿ ದಿನಾಂಕ 30.06.1976 ರಲ್ಲಿ ಇವರ ಜನನ. ಪಿ.ಯು.ಸಿ ವರೆಗೆ ವಿದ್ಯಾಭ್ಯಾಸ. ಶ್ರೀಮಯ ಯಕ್ಷಗಾನ ರಂಗ ಶಿಕ್ಷಣ ಕೇಂದ್ರದಿಂದ ಯಕ್ಷಗಾನ ತರಬೇತಿಗಾಗಿ ವಿಶೇಷ ವಿದ್ಯಾರ್ಹತೆಯ ಪ್ರಮಾಣ ಪತ್ರ. ಶ್ರೀಮಯ ಯಕ್ಷಗಾನ ಕಲಾ ಕೇಂದ್ರ ಗುಣವಂತೆ ಇದು ಹಲವಾರು ಯುವ ಪ್ರತಿಭೆಗಳನ್ನು ಯಕ್ಷಗಾನಕ್ಕೆ ಕೊಡುಗೆಯಾಗಿ ನೀಡಿದೆ. ಶ್ರೀ ಅನಂತ ಹೆಗಡೆ ದಂತಳಿಗೆ ಅವರು ಇಂತಹ ಪ್ರತಿಭೆಗಳಲ್ಲಿ ಒಬ್ಬರು. ಇವರು ಪ್ರಸ್ತುತ ಶ್ರೀ ಶಿವಾನಂದ ಹೆಗಡೆ ಕೆರೆಮನೆಯವರ ನೇತೃತ್ವದ ಶ್ರೀ ಇಡಗುಂಜಿ ಮೇಳದಲ್ಲಿ ಭಾಗವತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರು ಬಾಲ್ಯದಿಂದಲೂ ಯಕ್ಷಗಾನ ಭಾಗವತರಾಗಬೇಕೆಂಬ ಕನಸು ಕಂಡವರು. ಪ್ರಾರಂಭದಲ್ಲಿ ಶ್ರೀ ಗಜಾನನ ಭಟ್ಟ ಹೊಸ್ತೋಟ ಇವರಲ್ಲಿ ಯಕ್ಷಗಾನದ ಪ್ರಾಥಮಿಕ ತಾಳಾಭ್ಯಾಸವನ್ನ ಮಾಡಿ, ನಂತರ ಭಾಗವತಿಕೆ ಕಲಿಯಲು ಯಕ್ಷಗಾನದ ದಂತಕಥೆಯಾದ ಶ್ರೀ ಶಂಭು ಹೆಗಡೆಯವರು ನಡೆಸುತ್ತಿದ್ದ ಶ್ರೀಮಯ ಯಕ್ಷಗಾನ ಕೇಂದ್ರಕ್ಕೆ ತೆರಳಿದರು. ಅಲ್ಲಿ ಗುರುಗಳಾಗಿದ್ದ ವಿದ್ವಾನ್ ಗಣಪತಿ ಭಟ್ಟ ಯಲ್ಲಾಪುರ, ಶ್ರೀ ಎ.ಪಿ. ಪಾಠಕ್ ಮತ್ತು ಶ್ರೀ ಭಾಸ್ಕರ ದೇವಡಿಗ ಇವರುಗಳ ಶಿಷ್ಯತ್ವವನ್ನು ಸ್ವೀಕರಿಸುವುದರೊಂದಿಗೆ, ಪ್ರಸಿದ್ಧ ಭಾಗವತರೂ, ಗುರುಗಳೂ ಆದ ವಿದ್ವಾನ್ ಗಣಪತಿ ಭಟ್ಟ ಯಲ್ಲಾಪುರ ಇವರಲ್ಲಿ ವಿಶೇಷವಾಗಿ ಭಾಗವತಿಕೆಯನ್ನು ಅಭ್ಯಾಸ ಮಾಡಿದರು.
ಭಾಗವತಿಕೆಯೊಂದಿಗೆ ನೃತ್ಯವನ್ನೂ ಸಹ ಅಭ್ಯಾಸ ಮಾಡಿದ್ದಲ್ಲದೇ, ‘ಧೃವ ಚರಿತ್ರೆ’ಯ ವಿಷ್ಣು, ‘ಗದಾಯುದ್ಧ’ದ ನಕುಲ, ಶ್ರೀ ಶಂಭು ಹೆಗಡೆಯವರೊಂದಿಗೆ ‘ಸತ್ಯ ಹರಿಶ್ಚಂದ್ರ’ದ ರೋಹಿತಾಶ್ವ, ‘ಕಾರ್ತವೀರ್ಯಾರ್ಜುನ’ದ ದತ್ತಾತ್ರೇಯ ಹಾಗೂ ಕೆಲವು ಸ್ತ್ರೀ ಪಾತ್ರಗಳನ್ನೂ ರಂಗದಲ್ಲಿ ಅಭಿನಯಿಸಿದ ಅನುಭವವನ್ನು ಹೊಂದಿದ್ದಾರೆ.
ಮುಂದೆ ಶ್ರೀ ಶಿವಾನಂದ ಹೆಗಡೆಯವರು ನಡೆಸಿದ ಮೂರು ವರ್ಷಗಳ ಕಾಲ ನಡೆದ “ಯಕ್ಷಗಾನ ಭಾಗವತಿಕೆ ಅಧ್ಯಯನ ಮತ್ತು ಸಂಶೋಧನೆ” (ಭಾಸಂ) ಕಾರ್ಯಾಗಾರದಲ್ಲಿ ತರಬೇತಿ ಪಡೆದರು. ಇಲ್ಲಿ ಶ್ರೀ ಹೊಸ್ತೋಟ ಮಂಜುನಾಥ ಭಾಗವತರು, ಶ್ರೀ ನೆಬ್ಬೂರು ನಾರಾಯಣ ಭಾಗವತರು, ಶ್ರೀ ಕಪ್ಪೆಕೆರೆ ಸುಬ್ರಾಯ ಭಾಗವತರು, ಶ್ರೀ ಗುರುರಾಜ ಮಾರ್ಪಳ್ಳಿ, ಶ್ರೀ ಸದಾನಂದ ಐತಾಳ್ ಮತ್ತು ಶ್ರೀ ರವಿಕಿರಣ ಮಣಿಪಾಲ್ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ದೊರಕಿದ್ದು ವಿಶೇಷ.
ಮುಂದೆ ಶ್ರೀ ಶಂಭು ಹೆಗಡೆಯವರ ಪ್ರೋತ್ಸಾಹದಿಂದ ೨೦೦೬ ರಿಂದ ೨೦೦೮ ರ ವರೆಗೆ ಅದೇ ಶ್ರೀಮಯ ಕಲಾ ಕೇಂದ್ರದಲ್ಲಿ ಮೂರು ವರ್ಷಗಳ ಕಾಲ ಭಾಗವತಿಕೆಯ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದರು. ಅಲ್ಲದೇ ಪ್ರಸಿದ್ದ, ಹಿರಿಯ ಭಾಗವತರಾದ ಶ್ರೀ ನೆಬ್ಬೂರು ನಾರಾಯಣ ಭಾಗವತರೊಂದಿಗೆ ಸಹ ಭಾಗವತರಾಗಿ ಇಡಗುಂಜಿ ಮೇಳದಿಂದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಉತ್ತಮ ಅವಕಾಶವನ್ನು ಪಡೆದರು.
ಮನೆಯಲ್ಲಿ ಯಕ್ಷಗಾನ ಕಲೆಗೆ ಪೂರಕವಾದ ವಾತಾವರಣ ಮತ್ತು ಇವರ ಗುರುಗಳಾದ ವಿದ್ವಾನ್ ಗಣಪತಿ ಭಟ್ಟರ ಭಾಗವತಿಕೆ. ಹಾಗೇ ಊರ ಸುತ್ತ ಅಂದು ನಡೆಯುತ್ತಿದ್ದ ಆಟ ಮತ್ತು ಕೂಟಗಳು ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು ಎಂದು ಹೆಗಡೆ ಅವರು ಹೇಳುತ್ತಾರೆ. ಯಕ್ಷಗಾನದಲ್ಲಿ ಕಳೆದ 20 ವರ್ಷಗಳಿಂದ ಸೇವೆಯನ್ನು ಮಾಡುತ್ತಿರುವ ಇವರು ಕಳೆದ 14-15 ವರ್ಷಗಳಿಂದ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮೇಳದಲ್ಲಿ ತಿರುಗಾಟವನ್ನು ಮಾಡುತ್ತಿದ್ದಾರೆ. ನಾಟಿ, ಕಲ್ಯಾಣಿ, ಮೋಹನ, ಆರಭಿ, ಮಧ್ಯಮಾವತಿ, ಸಾವೇರಿ, ಕೇದಾರಗೌಳ, ತೋಡಿ, ಹಿಂದೋಳ, ಶಂಕರಾಭರಣ, (ಯಕ್ಷಗಾನಕ್ಕೆ ಹೊಂದಬಹುದಾದ ಇನ್ನೂ ಅನೇಕ ರಾಗಗಳು.) ಇವರ ನೆಚ್ಚಿನ ರಾಗಗಳು.ಗುರುಗಳಾದ ವಿದ್ವಾನ್ ಗಣಪತಿ ಭಟ್ಟರು,ದಿವಂಗತ ನೆಬ್ಬೂರು ನಾರಾಯಣ ಭಾಗವತರು, ಶ್ರೀ ಗೋಪಾಲ ಗಾಣಿಗ ಹೆರಂಜಾಲು, ಶ್ರೀ ರವೀಂದ್ರ ಭಟ್ ಅಚವೆ ಇವರ ನೆಚ್ಚಿನ ಭಾಗವತರು.
ಗುರುಗಳಾದ ಶ್ರೀ ಎ ಪಿ ಫಾಟಕ್, ಶ್ರೀ ಪ್ರಭಾಕರ ಭಂಡಾರಿ ಕರ್ಕಿ, ಶ್ರೀ ಶಂಕರ ಭಾಗವತ ಯಲ್ಲಾಪುರ, ಶ್ರೀ ಗಣಪತಿ ಭಾಗವತ ಕವಾಳೆ, ಶ್ರೀ ಎನ್ ಜಿ ಹೆಗಡೆ ಯಲ್ಲಾಪುರ,ಶ್ರೀ ನರಸಿಂಹ ಭಟ್ ಹಂಡ್ರಮನೆ (ಹೆಚ್ಚಿನ ಕಾರ್ಯಕ್ರಮಗಳಲ್ಲಿ ಇವರ ಜೊತೆಗೆ ಭಾಗಿಯಾಗುವ ಮದ್ದಲೆವಾದಕರಿವರು), ಶ್ರೀ ರಾಘವೇಂದ್ರ ಹೆಗಡೆ ಮುಂತಾದವರು ಇವರ ನೆಚ್ಚಿನ ಮದ್ದಳೆ ವಾದಕರು.
ದಿವಂಗತ ಕಷ್ಣ ಯಾಜಿ ಇಡಗುಂಜಿ, ಶ್ರೀ ರಾಕೇಶ್ ಮಲ್ಯ, ಶ್ರೀ ಶಿವಾನಂದ ಕೋಟ, ಶ್ರೀ ಗಣೇಶ್ ಗಾಂವ್ಕಾರ, ಶ್ರೀ ಪ್ರಮೋದ ಹೆಗಡೆ ಇವರ ನೆಚ್ಚಿನ ಚೆಂಡೆ ವಾದಕರು. ವೇಷ ಮಾಡುವ ಆಸಕ್ತಿ ಖಂಡಿತಾ ಇದೆ.
ಯಕ್ಷಗಾನ ಕಲಿಯುತ್ತಿದ್ದ ಪ್ರಾರಂಭದಲ್ಲಿ ೮-೧೦ ವೇಷಗಳನ್ನ ಮಾಡಿದ್ದೆ (ಶಂಭು ಹೆಗಡೆಯವರ ಹರಿಶ್ಚಂದ್ರ ಪಾತ್ರಕ್ಕೆ ರೋಹಿತಾಶ್ವ ಮಾಡುವ ಯೋಗ ಸಿಕ್ಕಿತ್ತು.) ಎಂದು ಹೆಗಡೆ ಅವರು ಹೇಳುತ್ತಾರೆ. ಸುಭದ್ರಾ ಕಲ್ಯಾಣ, ಪಂಚವಟಿ, ಕೃಷ್ಣ ಸಂಧಾನ, ನಳದಮಯಂತಿ, ಸುಧನ್ವ ಕಾಳಗ, ಕೃಷ್ಣಾರ್ಜುನರ ಕಾಳಗ ಇತ್ಯಾದಿ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಕಲೆಯಿಂದ ಕಲಾವಿದನಿಗೆ ಒಳ್ಳೆಯದಾಗುತ್ತಿದೆ. ಆದರೆ ಕಲಾವಿದ (ಎಲ್ಲರೂ ಅಲ್ಲ ಕೆಲವರ ಕುರಿತಾಗಿ ಹೇಳಿದ್ದು.) ಕಲೆಗೆ ಒಳ್ಳೆಯದನ್ನು ಮತ್ತು ಕೆಟ್ಟದನ್ನು ಎರಡನ್ನೂ ಕೊಡುತ್ತಿದ್ದಾನೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಪ್ರೇಕ್ಷಕನ ಜವಾಬ್ದಾರಿ ಈ ನೆಲೆಯಲ್ಲಿ ಹೇಳುವುದಾದರೆ ಕಲೆಯ ಸಾಧಕ ಬಾಧಕಗಳಿಗೆ, ನಾವು ಕಲಾವಿದರು, ಸಂಘಟಕರು, ಮತ್ತು ಸದಭಿರುಚಿಯ ಪ್ರೇಕ್ಷಕರು, ಮೂವರೂ ಸಮಾನ ಕಾರಣೀಕರ್ತರು ಅಂತ ನನ್ನ ಭಾವನೆ. ಪ್ರೇಕ್ಷಕ ಕೂಡ ಜವಾಬ್ದಾರಿಯಿಂದ ವರ್ತಿಸಿ ಕಲೆಯ, ಕಲಾವಿದರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದರೆ ಉತ್ತಮ. ಹಾಗೇ ಕಲಾವಿದ ಕಲೆಯ ಉನ್ನತಿಯೆಡೆಗೆ ಪ್ರೇಕ್ಷಕರನ್ನ ಕೊಂಡೊಯ್ದುರೆ ಕಲೆಗೆ ಪೂರಕ ಎಂದು ಹೇಳುತ್ತಾರೆ.
ಯಕ್ಷರಂಗದಲ್ಲಿ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಯೋಜನೆ ಅಂತಲ್ಲ.ಆದರೆ ಹೆಚ್ಚೆಚ್ಚು ಜನ ಕಲೆಯತ್ತ ಆಕರ್ಷಿತರಾಗಿ ಕಲೆಯನ್ನ ಅಭ್ಯಸಿಸಿ ರಂಗ ಪ್ರವೇಶಿಸುವಂತಾಗಲಿ ಅನ್ನುವುದು ಒಂದು ಆಶಯ. ಮತ್ತು ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಈ ಕಲೆಯನ್ನು ಅಭ್ಯಸಿಸಿದರೆ (ಅವರಲ್ಲಿ ಎಲ್ಲರೂ ಕಲಾವಿದರೇ ಅಗಬೇಕೆಂದೇನಿಲ್ಲ) ಸದಭಿರುಚಿಯ ಪ್ರೇಕ್ಷಕರು ಅದರಿಂದ ಕಲೆಗೆ ದೊರೆಯುವಂತಾಗಲಿ ಅನ್ನುವ ದೃಷ್ಟಿಯಲ್ಲಿ, ಯಕ್ಷಗಾನ ಕಲಿಯುವ ಆಸಕ್ತಿ ಉಳ್ಳ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸುವ ಯೋಜನೆ ಇದೆ ಎಂದು ಹೆಗಡೆ ಅವರು ಹೇಳುತ್ತಾರೆ.
ಪ್ರಸ್ತುತ ಕೆರೆಮನೆ ಶಿವಾನಂದ ಹೆಗಡೆಯವರು ಮುನ್ನಡೆಸುತ್ತಿರುವ ಶ್ರೀ ಇಡಗುಂಜಿ ಮೇಳದ ಪ್ರಧಾನ ಭಾಗವತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಆಸ್ಸಾಂನ ‘ಫಲ್ಗು ಉತ್ಸವ’, ‘ಶ್ರೀ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ ‘ಹಂಪಿ ಉತ್ಸವ’, ‘ಕರಾವಳಿ ಉತ್ಸವ’, ‘ಬನವಾಸಿ ಉತ್ಸವ’ ಮುಂತಾದ ರಾಜ್ಯ-ರಾಷ್ಟ್ರ ಮಟ್ಟದ ಪ್ರಸಿದ್ಧ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೇ ಬೆಂಗಳೂರು, ಮಂಗಳೂರು, ಮೈಸೂರು, ಹೆಗ್ಗೋಡು, ದೆಹಲಿ, ವಾಪಿ ಗ್ವಾಲಿಯರ್, ಸಾರಂಗಪುರ, ಫರಿದಬಾದ್, ಮುಂಬೈ, ಚೆನ್ನೆ ಭೋಪಾಲ್, ಅಗರ್ತಲ, ಜೋಧಪುರ, ಪಣಜಿ, ಕೊಯಮತ್ತೂರು, ಎರ್ನಾಕುಲಂ, ಮಧುರೈ, ಹೈದರಾಬಾದ್, ಚಂಡೀಗಡ, ಗುವಾಹಟಿ, ಕ್ಯಾಲಿಕಟ್, ಫಾಲ್‌ಘಾಟ್, ಪುಣೆ ಹೀಗೆ ದೇಶಾದ್ಯಂತ ಕಾರ್ಯಕ್ರಮಗಳನ್ನು ನೀಡಿದ್ದು ಮಾತ್ರವಲ್ಲ ಅಮೇರಿಕಾ, ಕೆನಡಾ ಇಂಡೋನೇಷ್ಯಾ, ಬಾಲಿ, ಸಿಂಗಾಪುರ, ದುಬೈ ಮುಂತಾದ ವಿದೇಶಗಳ ಹಲವು ವೇದಿಕೆಗಳಲ್ಲಿಯೂ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಇವರದ್ದು. ಭಾಗವತ ವೃತ್ತಿಯ ಜೊತೆಗೆ ಸ್ವರ್ಣವಲ್ಲಿ ಮಹಾಸಂಸ್ಥಾನದಲ್ಲಿ ನಡೆದ ‘ಸ್ವರಾನುಸಂಧಾನ ಮತ್ತು ಭಾವಾನುಸಂಧಾನ, ಕಾರ್ಯಾಗಾರ, "ಸ್ಪಿಕ್ ಮೆಕೆ" ಕಾರ್ಯಾಗಾರ ಹೀಗೆ ಹಲವು ಕಾರ್ಯಾಗಾರಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದಾರೆ.
ವೇದಿಕೆ ಕಾರ್ಯಕ್ರಮಗಳಲ್ಲದೇ ಧಾರವಾಡ ಮತ್ತು ಕಾರವಾರ ಆಕಾಶವಾಣಿ ಕೇಂದ್ರಗಳಿಂದಲೂ ಇವರ ಹಾಡುಗಳು, ಮತ್ತು ಸಂದರ್ಶನಗಳು ಪ್ರಸಾರಗೊಂಡಿವೆ. ಮತ್ತು ಕಲರ್ಸ ಕನ್ನಡದ ‘ಬಂದೇ ಬರುತಾವ ಕಾಲ’ ಧಾರಾವಾಹಿಯಲ್ಲಿಯ ಯಕ್ಷಗಾನದ ದೃಶ್ಯದಲ್ಲಿಯೂ ಇವರು ಭಾಗವತರಾಗಿ ಕಾಣಿಸಿಕೊಂಡಿದ್ದಾರೆ.
ಕೃಷಿ ಚಟುವಟಿಕೆಗಳು, ಓದುವುದು, ಬರೆಯುವುದು, ಸಂಗೀತ ಕೇಳುವವುದು ಇವರ ಹವ್ಯಾಸಗಳು.
"ಶ್ರೀರಾಮ ದರ್ಶನ" ಮತ್ತು "ಪುರುಷಮೃಗ" ಎಂಬ ಎರಡು ಯಕ್ಷಗಾನ ಪ್ರಸಂಗವನ್ನು ರಚಿಸಿದ್ದಾರೆ ಹೆಗಡೆ ಅವರು.
ಕೇಂದ್ರ ಸಂಗೀತ ಮತ್ತು ನಾಟಕ ಅಕಾಡಮಿಯಿಂದ "ಬಿಸ್ಮಿಲ್ಲಾ ಖಾನ್ ರಾಷ್ಟ್ರೀಯ ಯುವ ಪುರಸ್ಕಾರ", ಹವ್ಯಕ ವಿಕಾಸ ವೇದಿಕೆಯಿಂದ "ಹವ್ಯಕ ಸಾಧಕ", ಅಣಲಗಾರ್ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗೌರವ ಸಮ್ಮಾನ, ಹುಟ್ಟೂರ ಶಾಲೆ ಹೆಗ್ಗುಂಬಳಿಯಲ್ಲಿ ಗೌರವ ಪುರಸ್ಕಾರ ಇತ್ಯಾದಿ ಪ್ರಶಸ್ತಿ ಹಾಗೂ ಸನ್ಮಾನ ಇವರಿಗೆ ದೊರೆತಿದೆ.
25-05-2005 ರಂದು ಜಯಲಕ್ಷ್ಮಿ ಹೆಗಡೆ ಅವರನ್ನು ವಿವಾಹವಾದ ಅನಂತ ಹೆಗಡೆ ದಂತಳಿಗೆ ಇಬ್ಬರು ಮಕ್ಕಳಾದ ಚಿನ್ಮಯ ಹೆಗಡೆ ಹಾಗೂ ಆರಭಿ ಹೆಗಡೆ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
8971275651
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ