ವಿವೇಕಾನಂದ ಮಹಾವಿದ್ಯಾಲಯದಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಪುತ್ತೂರು: ಹಿಂದೆ ಭಾರತೀಯ ಸಂಸ್ಕೃತಿ, ಸಂಸ್ಕಾರದೊಂದಿಗೆ ಜೀವನಕ್ರಮ ಅವಿನಾಭಾವ ಸಂಬಂಧವನ್ನು ಹೊಂದಿತ್ತು. ಗುರುಕುಲ ಪದ್ಧತಿಯ ಮೂಲಕ ಶಿಕ್ಷಣವು ಎಲ್ಲಾ ವರ್ಗದ ಜನರಿಗೂ ಸಮಾನವಾಗಿ ಲಭ್ಯವಿತ್ತು. ತನ್ನ ಕಾಲಮೇಲೆ ತಾನು ನಿಂತುಕೊಳ್ಳುವಂತಹ ಶಕ್ತಿಯನ್ನು ಈ ಶಿಕ್ಷಣ ಪದ್ಧತಿ ನೀಡುತ್ತಿತ್ತು. ಆದರೆ ಮೆಕಾಲೆ ಶಿಕ್ಷಣ ಎಲ್ಲವನ್ನೂ ಬದಲಾಯಿಸಿತು. ಒಂದು ರೀತಿಯಲ್ಲಿ ಮಾನಸಿಕ ಗುಲಾಮತೆಯನ್ನು ಬೆಳೆಸತೊಡಗಿತು. ಆದರೆ ಈಗ ಪರಿಚಯಸಲಾಗುತ್ತಿರುವ ನೂತನ ಶಿಕ್ಷಣ ನೀತಿಯು ಕೌಶಲ್ಯಾಧಾರಿತ, ರಾಷ್ಟ್ರೀಯತೆ ಮೌಲ್ಯಗಳನ್ನೊಳಗೊಂಡ ಸಮಾಜಮುಖಿ ಭಾರತೀಯ ಶಿಕ್ಷಣವನ್ನು ನೀಡಲಿದೆ ಎಂದು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ನೂತನ ಶಿಕ್ಷಣ ನೀತಿಯೊಂದಿಗೆ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ, ಪ್ರತಿಭಾ ಪುರಸ್ಕಾರ ಮತ್ತು ರ‍್ಯಾಂಕ್ ವಿಜೇತರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು.
ಜನ ಪರದೇಶಗಳ, ಭಾಷೆಗಳ ಮೋಹಕ್ಕೆ ಸಿಲುಕಿ ಮಾತೃಭಾಷೆಯನ್ನು ಮರೆಯುತ್ತಿದ್ದಾರೆ. ನಮ್ಮ ಪಠ್ಯಗಳಲ್ಲಿ ನೀಡಲಾದ ವಿಷಯಗಳೂ ಅದಕ್ಕೆ ಹೊರತಾಗಿಲ್ಲ. ವಿದ್ಯಾರ್ಥಿಗಳಿಗೆ ಯಾವುದೋ ದೂರದ ದೇಶದ ಇತಿಹಾಸದ ಬದಲಾಗಿ, ನಮ್ಮ ದೇಶದ ಇತಿಹಾಸವನ್ನು, ಇತಿಹಾಸ ಪುರುಷರನ್ನು, ಸಾಧಕರನ್ನು ಪರಿಚಯಿಸಬೇಕಾದ ಅಗತ್ಯವಿದೆ. ತನ್ಮೂಲಕ ಭಾರತೀಯ ಪರಂಪರೆಯ ಸಿರಿತನವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಬದಲಾಗುವ, ಬೆಳೆಯುವ ಅವಶ್ಯಕತೆಯಿದೆ. ಭಾರತದ ಶ್ರೇಷ್ಠತೆ, ಅಂತಃಸತ್ವವನ್ನು ಅರಿತುಕೊಳ್ಳುವ ಕಾರ್ಯ ಆಗಬೇಕಿದೆ. ಪಠ್ಯಗಳು ಭಾರತೀಯ ಪರಂಪರೆಯ ಮೌಲ್ಯಗಳನ್ನು ಹೇಳಬೇಕಿವೆ ಎಂದು ಅಭಿಪ್ರಾಯಪಟ್ಟರು.
ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ, ಕಲಿಯುವಿಕೆ ಅನ್ನುವುದು ಕೇವಲ ಶೈಕ್ಷಣಿಕ ವಿಚಾರಕ್ಕೆ ಸೀಮಿತವಾಗಬಾರದು. ನಮ್ಮ ಪ್ರತಿಭೆಯನ್ನುನಾವೇ ಗುರುತಿಸಿ, ನಿರಂತರ ಅಭ್ಯಾಸದ ಮೂಲಕ ಬೆಳೆಸಬೇಕು. ವೈಯಕ್ತಿಕ, ಸಾಮಾಜಿಕ ಅಂತಯೇ ರಾಷ್ಟ್ರೀಯ ಅಭಿವೃದ್ದಿಯತ್ತಲೂ ಗಮನಹರಿಸಬೇಕು ಹಾಗೂ ಯಾಂತ್ರಿಕತೆಗೆ ಒಳಗಾಗದಿರಿ. ವಿವೇಕಾನಂದ ಮಹಾವಿದ್ಯಾಲಯವು, ಶಿಕ್ಷಣ ಸಂಸ್ಥೆಗೆ ಅಗತ್ಯವಿರುವ ಸರ್ವತೋಮುಖ ವ್ಯವಸ್ಥೆಯನ್ನು ಹೊಂದಿದೆ. ವಿದ್ಯಾರ್ಥಿಗಳು ತಮ್ಮ ಪದವಿಯ ಮೂರುವರ್ಷಗಳಲ್ಲಿ ಅದನ್ನು ಗುರುತಿಸಿ, ಸಮರ್ಪಕವಾಗಿ ಬಳಸಿಕೊಂಡು ನಿಜವಾದ ಅರ್ಥದಲ್ಲಿ ಪದವೀಧರರಾಗಬೇಕಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಮಾತನಾಡಿ, ಶಿಕ್ಷಣದ ಜೊತೆಗೆ ಸಾಂಸ್ಕೃತಿಕತೆ ಹಾಗೂ ರಾಷ್ಟ್ರೀಯತೆಯನ್ನೂ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಗುಣ ನಿರ್ಮಾಣ ಮಾಡುವ ವ್ಯವಸ್ಥೆಯನ್ನು ಈ ಕಾಲೇಜು ಧ್ಯೇಯವನ್ನಾಗಿಟ್ಟುಕೊಂಡಿದೆ. ಜೀವನದಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಶಿಕ್ಷಣ ಹಾಗೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನೀಡುವಲ್ಲಿ ಉಪನ್ಯಾಸಕರು ಹಾಗೂ ಸಂಸ್ಥೆ ಶ್ರಮ ವಹಿಸುತ್ತಿದೆ ಈ ಕಾರ್ಯಕ್ರಮದ ಮೂಲಕ ಬೆಳಗಲಾದ ದೀಪ ವಿದ್ಯಾರ್ಥಿಗಳ ಮನಸ್ಸಿನ ಹಣತೆಯನ್ನು ಉರಿಸಿ, ಜ್ಞಾನ, ದೇಶಪ್ರೇಮವನ್ನು ಸ್ಫುರಿಸುವಂತಾಗಲಿ ಎಂದು ಹಾರೈಸಿದರು.
ನೂತನ ವಿದ್ಯಾರ್ಥಿಗಳಿಗೆ ದೀಪ ಬೆಳಗಿ, ತಿಲಕವಿತ್ತು, ವಿವೇಕಾನಂದರ ಸಂದೇಶವನ್ನು ಹೊತ್ತ ಪುಸ್ತಕವನ್ನು ನೀಡುವ ಮೂಲಕ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಆಯೋಜಿಸಿದ ಪರೀಕ್ಷೆಯಲ್ಲಿ ರ‍್ಯಾಂಕ್‌ಗಳಿಸಿದ ವಿದ್ಯಾರ್ಥಿಗಳನ್ನು, ಕ್ರೀಡಾಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಶಿಕ್ಷಣ ಪೋಷಕ ದಾನಿಗಳು ನೀಡಿದ ದತ್ತಿನಿಧಿ ಬಹುಮಾನಗಳನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀನಿವಾಸ್ ಸಾಮಂತ, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಎಂ. ಅನಂತಕೃಷ್ಣ ನಾಯಕ್, ಶಂಕರ್ ಜೋಯಿಸ, ಶುಭ ಅಡಿಗ, ಸುಕುಮಾರ್ ಹಾಗೂ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶಿವರಾಮ್ ಭಟ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಜಾನ್ವಿ ಮತ್ತು ಶ್ರೀರಾಗ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಗೀತಾ ಕುಮಾರಿ ಟಿ. ಹಾಗೂ ಆಂಗ್ಲ ವಿಭಾಗದ ಉಪನ್ಯಾಸಕಿ ಅಂಬಿಕಾ ಎಂ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರದಲ್ಲಿ ಕಾಲೇಜಿನ ಲಲಿತ ಕಲಾ ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ