ಟಿ.ಎಸ್. ನಾಗರಾಜ ಶೆಟ್ಟಿ ಅವರಿಗೆ ಕುವೆಂಪು ಭಾಷಾ ಭಾರತಿಯ ಪ್ರತಿಷ್ಠಿತ ಅನುವಾದ ಪ್ರಶಸ್ತಿ

Upayuktha
0


ಬೆಂಗಳೂರು: ಕುವೆಂಪು ಭಾಷಾ ಭಾರತಿಯ ಪ್ರತಿಷ್ಠಿತ ಅನುವಾದ ಪ್ರಶಸ್ತಿ ಟಿ.ಎಸ್. ನಾಗರಾಜ ಶೆಟ್ಟಿ ಅವರಿಗೆ ದೊರೆತಿದೆ. ಅವರು ತೆಲುಗು ಭಾಷೆಯಿಂದ ಕನ್ನಡಕ್ಕೆ ತಂದಿರುವ "ವಿಶ್ವನಾಥ ಸತ್ಯನಾರಾಯಣ" ಕೃತಿಗೆ ಇದು ಲಭಿಸಿದೆ. ಕವಿ ಸಾಮ್ರಾಟ್ ಸತ್ಯನಾರಾಯಣರ (ಶ್ರೀಮದ್ರಾಮಾಯಣ ಕಲ್ಪವೃಕ್ಷಮು ಮಹಾಕಾವ್ಯಕ್ಕೆ ಅವರಿಗೆ ಜ್ಞಾನ ಪೀಠ ಪ್ರಶಸ್ತಿ ದೊರೆತಿದೆ) ಬದುಕು ಬರೆಹಗಳನ್ನು ಈ ಪುಸ್ತಕ ವಿಶ್ಲೇಷಿಸಿದೆ.


ಪ್ರಶಸ್ತಿಯು 25 ಸಾವಿರ ರೂ ನಗದು ಬಹುಮಾನ ಮತ್ತು ಫಲಕವನ್ನು ಒಳಗೊಂಡಿದೆ. ಪ್ರಾಧಿಕಾರದ ಅಧ್ಯಕ್ಷ ಅಜಕ್ಕಳ ಗಿರೀಶ್ ಭಟ್ ನೇತೃತ್ವದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆದಿದೆ.




2021ನೇ ಸಾಲಿನ 'ಗೌರವ ಪ್ರಶಸ್ತಿ'ಗೆ ವಿಜ್ಞಾನ ಲೇಖಕ ಪ್ರೊ. ಟಿ.ಆರ್‌ ಅನಂತರಾಮು, ಲೇಖಕಿ ಡಾ. ಗೀತಾ ಶೆಣೈ, ಡಾ. ಟಿ.ಜಿ ಪ್ರಭುಶಂಕರ ಪ್ರೇಮಿ, ಅನುವಾದಕ ಈಶ್ವರಚಂದ್ರ ಹಾಗೂ ಲೇಖಕ ಡಾ. ರಾಜಾರಾಮ್‌ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ ತಲಾ 50 ಸಾವಿರ ರೂ ನಗದು ಮತ್ತು ಫಲಕ ಒಳಗೊಂಡಿರುತ್ತದೆ.


ಅನುವಾದ ಪ್ರಶಸ್ತಿಗೆ ಆಯ್ಕೆಯಾದ ಇತರ ಲೇಖಕರು: ಡಾ. ಕೆ.ಎಂ ಶ್ರೀನಿವಾಸ ಗೌಡ ಮತ್ತು ಜಿ.ಕೆ ಶ್ರೀಕಂಠ ಗೌಡ (ಕನ್ನಡದಿಂದ ಇಂಗ್ಲಿಷಿಗೆ- ದ ಬ್ರೈಡ್‌ ಇನ್ ದ ರೈನಿ ಮೌಂಟೆನ್ಸ್- ಮಲೆಗಳಲ್ಲಿ ಮದುಮಗಳು ಕಾದಂಬರಿಯ ಅನುವಾದ),  ಶ್ರುತಿ ಬಿ.ಎಸ್ (ನನ್ನ ಬದುಕಿನ ಕಥೆ- ಇಂಗ್ಲಿಷ್‌ನಿಂದ ಕನ್ನಡಕ್ಕೆ), ಡಾ. ನಾಗಾ ಎಚ್. ಹುಬ್ಳಿ (ಭೂತನಾಥ- ಇಂಗ್ಲಿಷ್ ಹೊರತಾದ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ), ಡಾ. ನಾಗರತ್ನಾ ಹೆಗಡೆ (ರುಚಿರಾ- ಬಾಲಕಥಾ- ಕನ್ನಡದಿಂದ ಬೇರೆ ಭಾರತೀಯ ಭಾಷೆಗಳಿಗೆ ಅನುವಾದ).


******

ಕರ್ನಾಟಕ ಅನುವಾದ ಅಕಾಡೆಮಿ ಕೆಲ ವರ್ಷಗಳ ಹಿಂದೆ ಕುವೆಂಪು ಭಾಷಾಭಾರತಿಯಾಗಿ ಮಾರ್ಪಟ್ಟಿತು. 

ಭಾರತದಲ್ಲಿ ಕೆಲವೆಡೆಯಲ್ಲಿ ಮಾತ್ರ ಅನುವಾದ ಸಾಹಿತ್ಯಕ್ಕೆಂದು ಒಂದು ವ್ಯವಸ್ಥೆ ಇದೆ. ಅಂಥ ಪ್ರತಿಷ್ಠಿತ ಸಂಸ್ಥೆಯಿಂದ ಪುಸ್ತಕ ಅನುವಾದ ಪ್ರಶಸ್ತಿಗೆ ಭಾಜನರಾಗಿರುವ ನಮ್ಮ ಹೆಮ್ಮೆಯ ಮಕ್ಕಳ ಸಾಹಿತಿ ಪ್ರೊ. ಟಿ.ಎಸ್. ನಾಗರಾಜ ಶೆಟ್ಟಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 

ಆಧುನಿಕ ತೆಲುಗು ಸಾಹಿತ್ಯದ  ಮೇರು ಕವಿ ವಿಶ್ವನಾಥ ಸತ್ಯನಾರಾಯಣ ಅವರಿಗೆ ತಮ್ಮ 'ರಾಮಾಯಣ ಕಲ್ಪವೃಕ್ಷಮು' ಎಂಬ ಕೃತಿಗೆ ಭಾರದದ ಅತ್ಯುನ್ನತ ಸಾಹಿತ್ಯ  ಪುರಸ್ಕಾರವಾದ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಅಂಥ ಮಹನೀಯರ ಸಾಧನೆಯ ಬಗೆಗಿನ ಕೃತಿಯನ್ನು ತೆಲುಗಿನಿಂದ ಕನ್ನಡ ಲೋಕಕ್ಕೆ ಪರಿಚಯ ಮಾಡಿಕೊಡುತ್ತಿರುವ ಕೀರ್ತಿಗೆ ಶ್ರೀಯುತರು ಭಾಜನರಾಗುತ್ತಿದ್ದಾರೆ. ಇನ್ನಷ್ಟು ಶ್ರೇಷ್ಠ ಸಾಹಿತ್ಯಾನುವಾದ ಕೃತಿಗಳು ಅವರಿಂದ ಹೊರಬರಲಿ ಎಂಬ ಆಶಯ, ಹಾರೈಕೆ ನನ್ನದು.

-ಸಿವಿವಿ ಗುಪ್ತ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top