ನಾನು ನಾನೆಂಬೆನೆ ನಾನೆಂಬುದೇನಿಹುದು
ನನ್ನೊಳಗೆ ನನ್ನನ್ನು ನೂಕಿ ಬಿಟ್ಟೆಯ ನೀನು
ನೀನಿಲ್ಲದೇ ಜಗದಿ ನಾನಿರಲುಬಲ್ಲೆನೆ
ನನ್ನನ್ನು ನಿನ್ನೊಳಗೆ ಸೆಳೆದುಕೊಳ್ಳೋ..
ಪಾದ ನೀ ಕರುಣಿಸೆ ಪಾದುಕೆಯು ಸಿಗಬಹುದು
ಬೆರಳುಗಳ ನೀಡಿದರೆ ಧರಿಸಬಹುದುಂಗುರವ
ಕರವ ನೀ ನೀಡಿದರೆ ಕಡಗ ಧರಿಸಲುಬಹುದು
ನೀಡಿದರೆ ನೀ ಶಿರವ ಇಡಬಹುದು ಕಿರೀಟವ
ಕಣ್ಣೆರಡು ನಮಗಿರಲು ತೆರೆದು ನೋಡಲುಬಹುದು
ನೋಟ ಕರುಣಿಸಿದವನು ನೀನಲ್ಲವೇ ಶಿವನೆ
ಮತ್ತೆರಡು ಕಿವಿಗಳೂ ಪಕ್ಕದಲಿ ಇರಬಹುದು
ಕೇಳಲದಕೆ ಶಕ್ತಿಯನು ನೀನಿತ್ತೆಯಲ್ಲವೇ.
ತಗಲಿಕೊಂಡಿರಬಹುದು ಕಾಯಕ್ಕೆ ಬಿಳಿ ತೊಗಲು
ಸ್ಪರ್ಶದಾನುಭವವ ನೀ ತಾನೆ ಕೊಡಬೇಕು
ಬಾಯಿಯಿದೆ ಮಾತಿಗೂ ಮತ್ತೆ ತಿನ್ನುವುದಕೂ
ಮಾತನ್ನು ರುಚಿಯನ್ನು ನೀ ಕೊಟ್ಟರೇ ಸಾಕು.
ಬಾಯೊಳಗೆ ಅನ್ನವನು ಇಟ್ಟು ಜಗಿಯಲುಬಹುದು
ಗಂಟಲೊಳಗಿಳಿಯಲದು ನೀ ತಾನೆ ಪ್ರೇರಣೆಯು.
ಒಡಲೊಳಗೆ ಆಹಾರ ಜೀರ್ಣಿಸುವವನು ನೀನು
ಅದರೊಡನೆ ಶಕ್ತಿಯನು ನೀ ತಾನೆ ಕೊಟ್ಟವನು
ಮನಸು ಬುದ್ಧಿಯ ಜತೆಗೆ ಕೊಟ್ಟಿರುವೆ ವಿವೇಕವ
ಪಂಚೇಂದ್ರಿಯದ ಒಳಗೆ ಪ್ರಾಣ ಶಕ್ತಿಯನಿಟ್ಟು
ಪಂಚಭೂತಗಳಿಂದ ಈ ಕಾಯವನು ಮಾಡಿ
ನೀಡಿದವನು ನೀನೆ ನಾನೆಂಬುದೆಲ್ಲಿದೆ..
ನಾನೆಂಬ ಅರಿವದುವೆ ಮಿಥ್ಯೆಯಾದರೆ ಇಲ್ಲಿ
ನೀನೆಂಬ ತಿಳಿವೆಮಗೆ ನಿತ್ಯ ಸತ್ಯವೆ ತಾನೆ
ನೀ ಬಿಂಬವಾದರೆ ನಾ ತಾನೆ ಪ್ರತಿಬಿಂಬ
ಬಿಂಬವೇ ನೀ ಸರ್ವ ನಾ ಬರಿದೆ ದರ್ಪಣವು.
************
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ