ಮಂಗಳೂರು/ಉಡುಪಿ: ಕವಿ, ಸಂಘಟಕ ಕಾ.ವೀ. ಕೃಷ್ಣದಾಸ್ ಅವರನ್ನು ಉಡುಪಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಭಾರ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ ಮೈಸೂರಿನ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ರಾಜ್ಯಾಧ್ಯಕ್ಷರಾಗಿರುವ ಕರ್ನಾಟಕ ವಿಧಾನ ಪರಿಷತ್ ನ ಮಾಜಿ ಸದಸ್ಯ ತೋಂಟದಾರ್ಯ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಆಕ್ಟೊಬರ್ 20ರಂದು ಮೈಸೂರಿನಲ್ಲಿ ನಡೆದ ಧರ್ಮದರ್ಶಿಗಳ ಸಭೆಯಲ್ಲಿ ಕೇಂದ್ರ ಸಮಿತಿ ಸಂಚಾಲಕರಾಗಿರುವ ಎಂ.ಜಿ. ಅರಸ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಅಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿಯವರ ಶಿಫಾರಸ್ಸಿನಂತೆ ಕಾ.ವೀ.ಕೃಷ್ಣದಾಸ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಜಿಲ್ಲಾಧ್ಯಕ್ಷರಾಗಿದ್ದ ಶ್ರೀಮತಿ ತಾರಾ ಆಚಾರ್ಯ ಅವರನ್ನು ಜಿಲ್ಲಾ ಗೌರವಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಸದ್ಯ ಕಾ.ವೀ.ಕೃಷ್ಣದಾಸ್ ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಹೆಚ್ಚುವರಿಯಾಗಿ ಉಡುಪಿ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನೀಡಲಾಗಿದೆ. ನಿಯಮಾವಳಿಗನುಸಾರ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳು ಆಯ್ಕೆ ಮಾಡಿಕೊಳ್ಳುವ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ತಾಲೂಕುಗಳಿಗೆ ತಾಲೂಕು ಅಧ್ಯಕ್ಷರುಗಳನ್ನು ಅಧಿಕಾರವನ್ನು ರಾಜ್ಯಾಧ್ಯಕ್ಷರು ನೀಡಿದ್ದಾರೆ.
ಕಾ.ವೀ.ಕೃಷ್ಣದಾಸ್ ಕುರಿತು
*******
ಕಳೆದ 25 ವರ್ಷಗಳಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯಲ್ಲಿ ನಿರಂತರವಾಗಿ ಗುರುತಿಸಿಕೊಂಡಿದ್ದಾರೆ.
1980ರಲ್ಲಿ ಮಂಗಳೂರಿನ ಬೋಂದೆಲ್ ಎಂಬಲ್ಲಿ ಹುಟ್ಟಿದ ಕಾ.ವೀ. ಕೃಷ್ಣದಾಸ್ ಅವರು ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. 10 ವರ್ಷ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ.
1995 ರಿಂದ 'ಯಶುಪ್ರಿಯ ಪಕ್ಷಿಕೆರೆ' ಎಂಬ ಕಾವ್ಯನಾಮದಲ್ಲಿ ಕತೆ, ಕವಿತೆ, ಲೇಖನ, ವಿಮರ್ಶೆ ಮತ್ತು ಬರಹಗಳನ್ನು ಬರೆಯುತ್ತಾ ಬಂದಿರುವ ಶ್ರೀಯುತರು ಪ್ರಪ್ರಥಮ ಗ್ರಾಮೀಣ ಸಾಹಿತ್ಯ ಸಮ್ಮೇಳನ, 9ನೇ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, 11ನೇ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ, 4ನೇ ಚುಟುಕು ಸಾಹಿತ್ಯ ಸಮ್ಮೇಳನಗಳಲ್ಲಿ ಆಹ್ವಾನಿತ ಕವಿಯಾಗಿ ಭಾಗವಹಿಸಿದ್ದಾರೆ.
'ನಾನೊಂದು ಪುಟ್ಟ ಹಣತೆ' 'ಶರಸಂಚಯ' 'ಬಾಗಿಲು ತೆರೆದಿದೆ' ಇವರ ಕನ್ನಡ ಕವನ ಸಂಕಲನಗಳು. 'ನೂರೊಂದು ಕತೆಗಳು' ಇವರ ಸಂಪಾದಿತ ಕಥಾಸಂಕಲನ. ಮೂಕಹಕ್ಕಿ, ಮೋಕೆದ ಮಗಲ್, ಎನ್ನ ಮೋಕೆದ ಇವರು ಸಾಹಿತ್ಯ ನೀಡಿರುವ ಪ್ರಮುಖ ಆಡಿಯೋ ವೀಡಿಯೊ ಆಲ್ಬಂಗಳು. ಉಡುಗೊರೆ, ಕೋರಿರೊಟ್ಟಿ, ಪಮ್ಮಣ್ಣೆ ದಿ ಗ್ರೇಟ್, ಭೋಜರಾಜ್ MBBS, ಇವರು ಸಾಹಿತ್ಯ ನೀಡಿರುವ ಸಿನೆಮಾಗಳು.
ಇವರು ಕಳೆದ 15 ವರ್ಷಗಳಿಂದ ರಿಟೇಲ್ ಆಡಳಿತದಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಷ್ಠಿತ ಸಾಧನಾ ಪ್ರಶಸ್ತಿ, ಹಂಸಕಾವ್ಯ ಪ್ರಶಸ್ತಿಗಳ ಸ್ಥಾಪಕರು. ಕನ್ನಡ ತುಳು ಹಿಂದಿ ಇಂಗ್ಲಿಷ್ ಮತ್ತು ಬ್ಯಾರಿ ಭಾಷೆಯಲ್ಲಿ ಸಾಹಿತ್ಯ ರಚಿಸುವ ಇವರ 'ಬೆಳಕು' ಇವರದೇ ಸ್ವರಚಿತ ನುಡಿಮುತ್ತುಗಳ ಕೃತಿ,'ಗೆಲುವಿನ ಕುದುರೆ' ಕವನ ಸಂಕಲನ, 'ಚಂದ್ರಲೋಕದ ತಾರೆಯರು' (ಕನ್ನಡ ಹಾಯ್ಕುಗಳ ಸಂಕಲನ) ಮುದ್ರಣಕ್ಕೆ ಸಿದ್ಧವಾಗಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ